ಉಸಿರಿನ ಜೊತೆಗೆ ಕಾಯಿಲೆಯ ದೌರ್ಭಾಗ್ಯ ಕರುಣಿಸಿದ ಎಂಡೋಸಲ್ಫಾನ್ ; ಚಿಕಿತ್ಸೆಗೆ ಹಣವಿಲ್ಲದೆ ಮರುಗುತ್ತಿದೆ ಕುಟುಂಬ

ಆರೋಗ್ಯ ಇಲಾಖೆ ಈತನನ್ನು ಎಂಡೋ ಸಲ್ಪಾನ್​​ ಸಂತ್ರಸ್ತರ ಪಟ್ಟಿಗೆ ಸೇರಿಸಿಕೊಂಡಿದ್ದು, ಇಲಾಖೆಯಿಂದ ವಿತರಣೆಯಾಗುವ ನೀಲಿ ಕಾರ್ಡನ್ನು ಕೂಡಾ ನೀಡಿದೆ. ಆದರೆ, ಕಾರ್ಡ್ ಮೂಲಕ ನೀಡಬೇಕಾದ ಯಾವುದೇ ಸೌಲಭ್ಯವನ್ನು ಇಲಾಖೆ ಈವರೆಗೂ ನೀಡಿಲ್ಲ

ಬಾಲಕ ಗಗನ್​​

ಬಾಲಕ ಗಗನ್​​

  • Share this:
ಮಂಗಳೂರು(ಆಗಸ್ಟ್​​. 21): ಎಂಡೋಸಲ್ಫಾನ್ ಎನ್ನುವ ಮಹಾ ಮಾರಿಯ ತುಳಿತಕ್ಕೆ ಸಿಲುಕಿದ ಪ್ರತಿಯೊಂದು ಕುಟುಂಬದ ನೋವು ಕರುಳು ಕಿತ್ತು ಬರುವಂತಹುದು. ಉಸಿರು ಆರಂಭದ ಜೊತೆಗೆ ಗಂಭೀರ ಕಾಯಿಲೆಗಳನ್ನ ಜೊತೆಗೆ ತಂದಿರುವ ಹಸುಳೆಗಳ ಸಂಖ್ಯೆ ನೂರಾರಿದೆ. ಇಂತಹುದೇ ಒಂದು ಮಗುವಿನ ನೋವಿನ ಕಥೆ. 

ತನ್ನ ವಯಸ್ಸಿನ ಮಕ್ಕಳೊಂದಿದೆ ಬಾಲ್ಯದ ಸವಿ ಸವಿಯಬೇಕಾದ ಈ ಬಾಲಕನಿಗೆ ಆ ಭಾಗ್ಯವಿಲ್ಲ. ತಲೆ ತಿರುಗಿ ಬೀಳದೆ, ಕೋಮಾಕ್ಕೆ ಜಾರದೆ ಸುರಕ್ಷಿತವಾಗಿ ಇರುತ್ತೇನೆ ಎನ್ನುವ ನಂಬಿಕೆ ಇಲ್ಲ. ಇದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬಲ್ನಾಡು ನಿವಾಸಿ ಕೃಷ್ಣಪ್ಪ ಗೌಡರ ಮಗ ಗಗನ್ ನ ಸದ್ಯದ ಪರಿಸ್ಥಿತಿ. ಗೇರು ತೋಪುಗಳಿಗೆ ಕಾಡುತ್ತಿರುವ ಟಿ ಸೊಳ್ಳೆಗಳನ್ನು ನಿಯಂತ್ರಿಸಲು ಹೆಲಿಕಾಪ್ಟರ್‌ ಮೂಲಕ ಎಗ್ಗಿಲ್ಲದೆ ಸಿಂಪಡಿಸಿದ ಎಂಡೋಸಲ್ಫಾನ್ ಎನ್ನುವ ವಿಷದ ದುಷ್ಪರಿಣಾಮ ಇದೀಗ ಈ ಬಾಲಕ ಆರೋಗ್ಯದ ಮೇಲೆ ಕಾಣಿಸಿಕೊಂಡಿದೆ.

ಬಲ್ನಾಡು ಪರಿಸರದಲ್ಲಿ ಸುಮಾರು 20 ವರ್ಷಗಳ ಹಿಂದೆ ಇದೇ ರೀತಿಯಲ್ಲಿ ಹೆಲಿಕಾಪ್ಟರ್ ಮೂಲಕ ವಿಷವನ್ನು ಸಿಂಪಡಿಸಲಾಗಿತ್ತು. ಇದರ ದುಷ್ಪರಿಣಾಮ ಇದೀಗ 9 ವರ್ಷ ಪ್ರಾಯದ ಗಗನ್ ನಲ್ಲಿ ಕಾಣಿಸಿಕೊಂಡಿದೆ. ಹುಟ್ಟಿ 49 ದಿನವಾಗುತ್ತಲೇ ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದ ಗಗನ್ ಗೆ ಸೂಕ್ತ ಚಿಕಿತ್ಸೆ ನೀಡಲಾಗಿತ್ತು. ಆ ಬಳಿಕ ಗಗನ್ ಮಧುಮೇಹ ಕಾಯಿಲೆಗೂ ತುತ್ತಾಗಿದ್ದಾನೆ. ಇದರಿಂದಾಗಿ‌ ಈ ಎಳೆಯ‌ ಪ್ರಾಯದಲ್ಲೇ ದಿನಕ್ಕೆ ಮೂರು ಬಾರಿ ಇನ್ಸುಲಿನ್ ತೆಗೆದುಕೊಳ್ಳಬೇಕಾದ ಸ್ಥಿತಿಯಲ್ಲಿದ್ದಾನೆ.

ಆರೋಗ್ಯ ಇಲಾಖೆ ಈತನನ್ನು ಎಂಡೋಸಲ್ಪಾನ್​​ ಸಂತ್ರಸ್ತರ ಪಟ್ಟಿಗೆ ಸೇರಿಸಿಕೊಂಡಿದ್ದು, ಇಲಾಖೆಯಿಂದ ವಿತರಣೆಯಾಗುವ ನೀಲಿ ಕಾರ್ಡನ್ನು ಕೂಡ ನೀಡಿದೆ. ಆದರೆ, ಕಾರ್ಡ್ ಮೂಲಕ ನೀಡಬೇಕಾದ ಯಾವುದೇ ಸೌಲಭ್ಯವನ್ನು ಇಲಾಖೆ ಈವರೆಗೂ ನೀಡಿಲ್ಲ. ಕೂಲಿ ಕಾರ್ಮಿಕನಾಗಿ ದುಡಿಯುತ್ತಿರುವ ಗಗನ್ ತಂದೆ ಕೃಷ್ಣಪ್ಪ ಗೌಡ ಮಗನ ಆರೋಗ್ಯ ಕಾಪಾಡಿಕೊಳ್ಳಲು ಸಾಲ ಸುಳಿಗೆ ಸಿಲುಕಿದ್ದಾರೆ.

ಇದನ್ನೂ ಓದಿ : ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ವರುಣನ ಅಬ್ಬರ ; ಗೋಕಾಕ್ ಫಾಲ್ಸ್, ಗೋಡಚನಮಲ್ಕಿ ಜಲಾಶಯಕ್ಕೆ ಜೀವ ಕಳೆ..!

ಕಾರ್ಡ್ ತೋರಿಸಿ ಉಚಿತ ಚಿಕಿತ್ಸೆ ನೀಡುವಂತೆ ಆಗ್ರಹಿಸಿದರೂ, ಗಗನ್ ಗೆ ಉಚಿತ ಚಿಕಿತ್ಸೆ ದೊರೆತಿಲ್ಲ. ಎಂಡೋ ಸಲ್ಫಾನ್ ಸಂತ್ರಸ್ತರ ಪಟ್ಟಿಯಲ್ಲಿ 25 ಶೇಕಡಾ ಸಂತ್ರಸ್ತನಾಗಿರುವ ಗಗನ್ ಗೂ ಉಚಿತ ಚಿಕಿತ್ಸೆ ಪಡೆಯುವ ಅವಕಾಶವಿದ್ದರೂ, ಈ ಅವಕಾಶವನ್ನು ನಿರಾಕರಿಸಲಾಗಿದೆ. ಇದು ಕೇವಲ ಗಗನ್ ಕುಟುಂಬದ ಸಮಸ್ಯೆಯಲ್ಲ, ಜಿಲ್ಲೆಯಲ್ಲಿ ಹಲವಾರು ಕುಟುಂಬಗಳು ಉಚಿತ ಚಿಕಿತ್ಸೆ ಹಾಗೂ ಸರಕಾರದ ಸೌಲಭ್ಯಗಳಿಂದ ವಂಚಿತವಾಗಿದ್ದಾರೆ. ಆರೋಗ್ಯ ಇಲಾಖೆಯ ಈ ರೀತಿಯ ಬೇಜವಾಬ್ದಾರಿಯ ಬಗ್ಗೆ ಮತ್ತೆ ನ್ಯಾಯಾಲಯದ ಕದ ತಟ್ಟಲು ಚಿಂತಿಸಲಾಗಿದೆ ಎಂದು ಎಂಡೋಸಲ್ಫಾನ್​​ ವಿರೋಧಿ  ಹೋರಾಟಗಾರ ಸಂಜೀವ ಕಬಕ ಹೇಳುತ್ತಾರೆ.

ಶಾಲೆಯಲ್ಲಿ ಎಲ್ಲರೊಂದಿಗೂ ಸೇರಿ ಕಲಿಯಬೇಕೆಂದು ಹಾತೊರೆಯುತ್ತಿರುವ ಗಗನ್ ಪ್ರತಿದಿನ ಶಾಲೆಗೆ ಹೋಗುವ ಸ್ಥಿತಿಯಲ್ಲಿಲ್ಲ. ವಾರಕ್ಕೆ ಒಂದು ದಿನ ಶಾಲೆಗೆ ಹೋಗಲಷ್ಟೇ ಶಕ್ತನಾಗಿರುವ ಗಗನ್ ಗೆ ಸೂಕ್ತ ಚಿಕಿತ್ಸೆಯ ಅಗತ್ಯವಿದೆ. ಸರಕಾರ ಈ ಬಗ್ಗೆ ಸ್ಪಂದಿಸಿ ಗಗನ್ ಚಿಕಿತ್ಸೆಗೆ ನೆರವಾಗಬೇಕಿದೆ.
Published by:G Hareeshkumar
First published: