HOME » NEWS » District » THIS DEEPAVALI NOT ENLIGHTEN BHIMA RIVER FLOOD VICTIMS LIFE RH MVSV

ಭೀಮಾ ಪ್ರವಾಹ ಸಂತ್ರಸ್ತರಿಗೆ ಬೆಳಕಾಗದ ದೀಪಾವಳಿ; ಹಬ್ಬದ ಸಿಹಿ ಬದಲು ಖಾರ ರೊಟ್ಟಿ ಸೇವನೆ, ಬಿದ್ದ ಮನೆಗೆ ಪೂಜೆ ಸಲ್ಲಿಸಿದ ಸಂತ್ರಸ್ತರು

ವಿಜಯಪುರ ಜಿಲ್ಲೆಯಲ್ಲಿ 6087 ಮನೆಗಳು ಪ್ರವಾಹ ಮತ್ತು ಅತೀವೃಷ್ಟಿಯಿಂದಾಗಿ ಹಾನಿಗೀಡಾಗಿದ್ದು, ಈವರೆಗೆ ಕೇವಲ 1100 ಮನೆಗಳ ಮಾಹಿತಿಯನ್ನು ಡಾಟಾ ಎಂಟ್ರಿ ಮಾಡಲಾಗಿದೆ. ಕೇವಲ ಶೇ. 50 ಜನರಿಗೆ ಮಾತ್ರ ಮನೆ ಹಾನಿ ಪರಿಹಾರ ನೀಡಲಾಗಿದೆ. 1 ಲಕ್ಷ 63 ಸಾವಿರದ 336 ಜನ ರೈತರ ಬೆಳೆ ಹಾನಿಯಾಗಿದ್ದು, ಇವರಲ್ಲಿ ಈವರೆಗೆ ಕೇವಲ 6419 ಜನ ರೈತರಿಗೆ ಅಂದರೆ ಶೇ. 3.90 ರಷ್ಟು ಜನರಿಗೆ ಮಾತ್ರ ಪರಿಹಾರ ನೀಡಲಾಗಿದೆ. ಯಡಿಯೂರಪ್ಪನವರೇ ನಮ್ಮ ಕಡೆ ದೃಷ್ಟಿ ಹಾಕಿ.  ಇಲ್ಲದಿದ್ದರೆ ಆತ್ಮಹತ್ಯೆ ದಾರಿ ತುಳಿಯಬೇಕಾಗುತ್ತದೆ ಎಂದು ಪ್ರವಾಹ ಸಂತ್ರಸ್ತರು ನ್ಯೂಸ್ 18 ಕನ್ನಡದ ಎದುರು ಗೋಳು ತೋಡಿಕೊಂಡಿದ್ದಾರೆ.

news18-kannada
Updated:November 16, 2020, 10:44 PM IST
ಭೀಮಾ ಪ್ರವಾಹ ಸಂತ್ರಸ್ತರಿಗೆ ಬೆಳಕಾಗದ ದೀಪಾವಳಿ; ಹಬ್ಬದ ಸಿಹಿ ಬದಲು ಖಾರ ರೊಟ್ಟಿ ಸೇವನೆ, ಬಿದ್ದ ಮನೆಗೆ ಪೂಜೆ ಸಲ್ಲಿಸಿದ ಸಂತ್ರಸ್ತರು
ಪ್ರವಾಹದಿಂದ ಕುಸಿದ ಮನೆಯಲ್ಲಿ ಮಕ್ಕಳು, ಮೊಮ್ಮಕ್ಕಳಿಗೆ ಅಡುಗೆ ತಯಾರಿಸುತ್ತಿರುವ ಅಜ್ಜಿ.
  • Share this:
ವಿಜಯಪುರ (ನ. 16); ದೇಶಾದ್ಯಂತ ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲಾಗಿದೆ. ಆದರೆ, ಇದೇ ಸಂತೋಷ, ಉಲ್ಲಾಸ ಭೀಮಾ ತೀರದ ಜನರಲ್ಲಿ ಮಾಯವಾಗಿದೆ. ಕಳೆದ ತಿಂಗಳು ಉಕ್ಕಿ ಹರಿದ ಭೀಮಾ ನದಿ ಹೊಳೆ ತೀರದ ಜನರ ಕನಸುಗಳನ್ನು ತನ್ನ ಒಡಲಿನಲ್ಲಿ ಕೊಚ್ಚಿಕೊಂಡು ಹೋಗಿದೆ.

ಜನರ ಪಾಲಿಗೆ ಬೆಳಕಾಗಬೇಕಾದ ದೀಪಾವಳಿ ವಿಜಯಪುರ ಜಿಲ್ಲೆಯ ಭೀಮಾ ತೀರದ ಗ್ರಾಮಸ್ಥರ ಪಾಲಿಗೆ ಕತ್ತಲೆಯ ಅನುಭವ ನೀಡುತ್ತಿದೆ. ಅದರಲ್ಲಿಯೂ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಭುಯ್ಯಾರ ಗ್ರಾಮ ಭೀಮಾ ಪ್ರವಾಹದಿಂದಾಗಿ ಸಂಪೂರ್ಣ ಮುಳುಗಡೆಯಾಗಿತ್ತು. ಜಾತ್ರೆಯಲ್ಲಿ ಆಹಾರ ತಯಾರಿಸಲು ಬಳಸುವ ಕಬ್ಬಿಣದ ಬೃಹತ್ ಗಾತ್ರದ ಕಡಾಯಿಗಳಲ್ಲಿ ಇಲ್ಲಿನ ಜನರನ್ನು ಸ್ಥಳೀಯರು ಪ್ರವಾಹದಿಂದ ಸಂರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಸಾಗಿಸಿದ್ದರು.

ಈಗ ಈ ರೈತರು ದೀಪಾವಳಿಯನ್ನು ಮರೆತಿದ್ದಾರೆ. ಪ್ರವಾಹದಿಂದ ಕುಸಿದು ಬಿದ್ದ ಮನೆಯಲ್ಲಿಗೆ ತೆರಳಿ ಮಹಿಳೆಯರು ಹೊಸ್ತಿಲ ಬದಲು ಬಾಗಿಲಗೆ ಪೂಜೆ ಸಲ್ಲಿಸುತ್ತಿದ್ದಾರೆ.  ಮನೆಯ ದೇವರ ಬೆರಿಕಿ ಅದಾವು. ಅಂದರೆ ಪೂಜೆ ಮಾಡದಿದ್ದರೆ ಕಾಡುತ್ತವೆ ಎಂಬುದು ಇಲ್ಲಿನ ಮಹಿಳೆ ಭಾಗೀರಥಿ ತಳವಾರ ನಂಬಿಕೆ.

ಭುಯ್ಯಾರ ಗ್ರಾಮದಲ್ಲಿ ಒಂದೊಂದು ಕುಟುಂಬದ್ದೂ ಒಂದೊಂದು ಗೋಳಿನ ಕಥೆಯಾಗಿವೆ. ಇವರ ವ್ಯಥೆ ಎಂಥವರನ್ನೂ ಆಘಾತಕ್ಕೆ ದೂಡುವಂತಿವೆ. ದೀಪಾವಳಿಗೆ ಮಕ್ಕಳೊಂದಿಗೆ ತವರು ಮನೆಗೆ ಬಂದ ಹೆಣ್ಣು ಮಕ್ಕಳು ಜಯಶ್ರೀ ತಮ್ಮ ಪುಟಾಣಿಗಳಿಗೆ ಹೊಸ ಬಟ್ಟೆ ಇರಲಿ, ಪಟಾಕಿ ಕೂಡ ಕೊಡಿಸಲಾಗದೆ ಕೈಕಟ್ಟಿ ಕುಳಿತುಕೊಳ್ಳುವಂತಾಗಿದೆ.  ಇಲ್ಲಿನ ಹಲವಾರು ಕುಟುಂಬಗಳಿಗೆ ಭೂಮಿಯೇ ಹಾಸಿಗೆ, ಗಗನವೇ ಹೊದಿಕೆ ಎಂಬ ಪರಿಸ್ಥಿತಿ ಇದೆ. ದೀಪಾವಳಿಯ ದಿನವೂ ಇಲ್ಲಿನ ಬಂಗಾರೆಮ್ಮ ಎಂಬ ಮಹಿಳೆ ಹೆರಿಗೆಗೆ ಮನೆಗೆ ಬಂದಿದ್ದ ಮಗಳನ್ನು ಮನೆಯಲ್ಲಿಟ್ಟುಕೊಳ್ಳಲು ಆಗದೆ, ಹಸಿ ಬಾಣಂತಿಯನ್ನು ಮಗುವಿನೊಂದಿಗೆ ಗಂಡನ ಮನೆಗೆ ಕಳುಹಿಸಿಕೊಟ್ಟಿದ್ದಾರೆ. ತಮ್ಮ ಮಗನಿಗೆ ರೊಟ್ಟಿಯ ಜೊತೆ ಪಲ್ಲೆಯ ಬದಲು ಖಾರ ಮತ್ತು ಎಣ್ಣಿ ಊಟ ನೀಡಿದ ದೃಶ್ಯ ಇಲ್ಲಿನ ವಾಸ್ತವಿಕ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿತ್ತು.

ಮಹಾದೇವಿ ತಳವಾರ ಎಂಬ ಮಹಿಳೆಯ ಗೋಳು ಹೇಳತೀರದು. ಈ ವೃದ್ಧೆಗೆ ಒಂಬತ್ತು ಜನ ಮೊಮ್ಮಕ್ಕಳಿದ್ದಾರೆ. ಮನೆಯಲ್ಲಿ ತುಂಬು ಗರ್ಭಿಣಿ ಸೊಸೆಯಿದ್ದಾಳೆ. ಮಗಳು ಮಕ್ಕಳೊಂದಿಗೆ ದೀಪಾವಳಿ ಆಚರಣೆಗೆ ತವರು ಮನೆಗೆ ಬಂದಿದ್ದಾಳೆ. ಈಕೆ ವಾಸಿಸುತ್ತಿದ್ದ ಮನೆ ಭೀಮಾ ಪ್ರವಾಹದಿಂದಾಗಿ ಆರ್ದಂಬರ್ಧ ಬಿದ್ದು ಹೋಗಿದೆ. ಒಂದು ಕೊಣೆಯಲ್ಲಿ ಅರ್ಧ ಮೇಲ್ಛಾವಣಿ ಕುಸಿದಿದ್ದು, ಅದರ ಕೆಳಗಡೆಯೇ ಒಲೆ ಹಚ್ಚಿ ಮೊಮ್ಮಕ್ಕಳಿಗೆ ಅಡುಗೆ ಮಾಡಿ ಹಾಕುವ ದುಸ್ಥಿತಿ ಇದೆ. ಹಬ್ಬಕ್ಕೆ ಮಗಳು ತನ್ನ ಮಕ್ಕಳೊಂದಿಗೆ ಬಂದಿದ್ದಾಳೆ.  ಅವರಿಗೆ ಖುಷಿ ಪಡಿಸಲು ಒಂದು ರೂಪಾಯಿ ಕೂಡ ಇಲ್ಲ.  ಊಟಕ್ಕೆ ಕುಳಿತರೆ ಶಿಥಿಲಗೊಂಡಿರುವ ಮೇಲ್ಛಾವಣಿಯಿಂದ ಮಣ್ಣು ಇವರ ತಟ್ಟೆಯಲ್ಲಿ ಬೀಳುತ್ತದೆ. ಊಟಕ್ಕೆ ಹೊರತುಪಡಿಸಿ ಮೊಮ್ಮಕ್ಕಳೊಂದಿಗೆ ದೇವಸ್ಥಾನದ ಆವರಣದಲ್ಲಿ ಕಾಲ ಕಳೆಯುತ್ತಿದ್ದೇನೆ ಎಂದು ನ್ಯೂಸ್ 18 ಕನ್ನಡದ ಎದುರು ಅಳಲು ತೋಡಿಕೊಂಡಿದ್ದಾಳೆ.

ಇದನ್ನು ಓದಿ: ಕಿರ್ಲೋಸ್ಕರ್ ಕಾರ್ಖಾನೆ, ನೌಕರರ ನಡುವಿನ ಸಮಸ್ಯೆ ಪರಿಹಾರಕ್ಕೆ ನಾಳೆ ಸಂಧಾನ ಸಭೆ ಕರೆದ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್

ಇನ್ನು ಈ ಗ್ರಾಮದ ಶಕ್ಕು ಗೊಳಸಾರ, ಮಹಾನಂದಾ, ಸಂಗೀತಾ ಗಿರಿಮಲ ತಳವಾರ ಗೋಳೂ ಹೇಳತೀರದು. ಪ್ರವಾಹ ಬಂದರೆ ಮೊದಲಿಗೆ ನೀರು ಮೊದಲು ಇವರ ಮನೆಗಳಿಗೆ ನುಗ್ಗುತ್ತದೆ. ಪ್ರವಾಹ ಇವರ ಮನೆ, ಬೆಳೆಗಳ ಜೊತೆ ಇಡೀ ಕನಸುಗಳನ್ನು ಕೊಚ್ಚಿಕೊಂಡು ಹೋಗಿದೆ. ಇಲ್ಲಿನ ಯುವಕ ಅಮೋಘ ತಳವಾರ ಮತ್ತು ಹುಚ್ಚಪ್ಪ ತಳವಾರ ಗೋಳು ಬೇರೇಯದೇ ಆಗಿದೆ. ಹೊಲದಲ್ಲಿ ಬೆಳೆಯಿಲ್ಲ. ಊರಲ್ಲಿ ಮನೆಯಿಲ್ಲ. ಇಲ್ಲಿನ ಜನರ ಗೋಳು ಕೇಳೋರಿಲ್ಲ. ದೆಹಲಿ, ಬೆಂಗಳೂರಿನಲ್ಲಿ ಕುಳಿತುಕೊಂಡು ಅಧಿಕಾರ ನಡೆಸುವ ರಾಜಕಾರಣಿಗಳು ನಮ್ಮೂರನ್ನು ಶಾಶ್ವತವಾಗಿ ಸ್ಥಳಾಂತರ ಮಾಡಿ. ಪ್ರತಿವರ್ಷ ಉಂಟಾಗುವ ಮುಳುಗಡೆ ಭೀತಿಯಿಂದ ಪಾರು ಮಾಡಿ ಎಂದು ನ್ಯೂಸ್ 18 ಕನ್ನಡದ ಎದುರು ಅಲವತ್ತುಕೊಂಡಿದ್ದಾರೆ.


ವಿಜಯಪುರ ಜಿಲ್ಲೆಯಲ್ಲಿ 6087 ಮನೆಗಳು ಪ್ರವಾಹ ಮತ್ತು ಅತೀವೃಷ್ಟಿಯಿಂದಾಗಿ ಹಾನಿಗೀಡಾಗಿದ್ದು, ಈವರೆಗೆ ಕೇವಲ 1100 ಮನೆಗಳ ಮಾಹಿತಿಯನ್ನು ಡಾಟಾ ಎಂಟ್ರಿ ಮಾಡಲಾಗಿದೆ. ಕೇವಲ ಶೇ. 50 ಜನರಿಗೆ ಮಾತ್ರ ಮನೆ ಹಾನಿ ಪರಿಹಾರ ನೀಡಲಾಗಿದೆ. 1 ಲಕ್ಷ 63 ಸಾವಿರದ 336 ಜನ ರೈತರ ಬೆಳೆ ಹಾನಿಯಾಗಿದ್ದು, ಇವರಲ್ಲಿ ಈವರೆಗೆ ಕೇವಲ 6419 ಜನ ರೈತರಿಗೆ ಅಂದರೆ ಶೇ. 3.90 ರಷ್ಟು ಜನರಿಗೆ ಮಾತ್ರ ಪರಿಹಾರ ನೀಡಲಾಗಿದೆ. ಯಡಿಯೂರಪ್ಪನವರೇ ನಮ್ಮ ಕಡೆ ದೃಷ್ಟಿ ಹಾಕಿ.  ಇಲ್ಲದಿದ್ದರೆ ಆತ್ಮಹತ್ಯೆ ದಾರಿ ತುಳಿಯಬೇಕಾಗುತ್ತದೆ ಎಂದು ಪ್ರವಾಹ ಸಂತ್ರಸ್ತರು ನ್ಯೂಸ್ 18 ಕನ್ನಡದ ಎದುರು ಗೋಳು ತೋಡಿಕೊಂಡಿದ್ದಾರೆ.
Published by: HR Ramesh
First published: November 16, 2020, 9:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories