ಚಿತ್ರದುರ್ಗದಲ್ಲಿ ಸಚಿವ ಶ್ರೀರಾಮುಲು ಎದುರೇ ಆತ್ಮಹತ್ಯೆಗೆ ಯತ್ನಿಸಿದ ಸ್ವಾಮೀಜಿ
ಚಿತ್ರದುರ್ಗದ ಬಿಜೆಪಿ ಕಚೇರಿ ಮುಂಭಾಗ ಯೋಗವನ ಬೆಟ್ಟದ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಅಹವಾಲು ಸಲ್ಲಿಸಲು ಬಂದಿದ್ದ ಸ್ವಾಮೀಜಿಯೊಬ್ಬರು ಸಚಿವ ಶ್ರೀರಾಮುಲು ಅವರ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ತಿಪ್ಪೇರುದ್ರ ಸ್ವಾಮಿ ಅವರನ್ನ ಆಂಬುಲೆನ್ಸ್ನಲ್ಲಿ ಸಾಗಿಸಲಾಗಿದ್ದು
ಚಿತ್ರದುರ್ಗ: ಇಲ್ಲಿಯ ಯೋಗವನ ಬೆಟ್ಟಗಳ ಅಧ್ಯಕ್ಷ ಸ್ಥಾನದ ಆಯ್ಕೆ ವಿಚಾರದಲ್ಲಿ ತಮಗೆ ಭಾರೀ ಅನ್ಯಾಯವಾಗಿದೆ ಎಂದು ಆರೋಪಿಸಿ ಸ್ವಾಮೀಜಿಯೊಬ್ಬರು ಸಚಿವ ಶ್ರೀರಾಮುಲು ಅವರ ಸಮ್ಮುಖದಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಿನ್ನೆ ನಡೆದಿದೆ. ಇತ್ತೀಚೆಗಷ್ಟೇ ಚಿತ್ರದುರ್ಗ ಯೋಗವನ ಬೆಟ್ಟಗಳ ಅಧ್ಯಕ್ಷರಾಗಿದ್ದ ಶ್ರೀ ಸಿದ್ದಲಿಂಗ ಸ್ವಾಮೀಜಿ ಲಿಂಕೈಕ್ಯರಾಗಿದ್ದರು. ಶ್ರೀಗಳ ನಿಧನದ ಬಳಿಕ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಭಾರಿ ಪೈಪೋಟಿ ನಡೆದಿತ್ತು. ಅಧ್ಯಕ್ಷ ಸ್ಥಾನದ ವಿಚಾರದಲ್ಲಿ ಅನ್ಯಾಯವಾಗಿದೆ ಎಂದು ತಿಪ್ಪೇರುದ್ರ ಸ್ವಾಮೀಜಿ ನಿನ್ನೆ ಸಮಾಜ ಕಲ್ಯಾಣ ಸಚಿವರಿಗೆ ಮನವಿ ನೀಡಲು ಬಂದಿದ್ದರು. ಸಚಿವರಿಗೆ ಮನವಿ ಪತ್ರ ನೀಡ್ತಿದ್ದಂತೆ ಏಕಾಏಕಿ ಸಚಿವ ಎದುರಲ್ಲೇ ವಿಷ ಸೇವಿಸಿದರು. ಸ್ವಾಮೀಜಿಗಳ ಸ್ಥಿತಿ ಗಂಭೀರವಾಗಿದೆ. ನೋಡು ನೋಡುತ್ತಿದ್ದಂತೆ ಸಚಿವರ ಎದುರಲ್ಲೇ ವಿಷ ಸೇವಿಸಿದ ಹೈಡ್ರಾಮ ನಡೆದಿದ್ದು ಚಿತ್ರದುರ್ಗದ ಬಿಜೆಪಿ ಕಚೇರಿ ಮುಂಭಾಗದಲ್ಲೇ.
ಚಿತ್ರದುರ್ಗದ ಬಿಜೆಪಿ ಕಚೇರಿಯಲ್ಲಿ ಶನಿವಾರ ಪಕ್ಷದ ಕಾರ್ಯಕಾರಣಿ ಸಭೆ ನಡೆಯುತ್ತಿತ್ತು. ಸಭೆ ಮುಗಿಯುತ್ತಿದ್ದಂತೆ ಸಚಿವ ಬಿ. ಶ್ರೀರಾಮುಲು ಸಾರ್ವಜನಿಕರ ಅಹವಾಲು ಸ್ವೀಕರಿಸಲು ಆಗಮಿಸಿದ್ರು. ಇದೇ ಸಂದರ್ಭದಲ್ಲಿ ಮನವಿ ಪತ್ರ ನೀಡಲು ಚಿತ್ರದುರ್ಗದ ತಿಪ್ಪೇರುದ್ರ ಸ್ವಾಮಿ ಆಗಮಿಸಿದರು. ಸಚಿವರಿಗೆ ಮನವಿ ಪತ್ರ ನೀಡುತ್ತಿದ್ದಂತೆ ಜೇಬಿನಲ್ಲಿದ್ದ ವಿಷದ ಬಾಟಲಿ ತೆಗೆದು ಸಚಿವರ ಎದುರಲ್ಲೇ ವಿಷ ಸೇವಿಸಿದ್ರು. ಇನ್ನೂ ವಿಷ ಕುಡಿಯುತ್ತಿದ್ದಂತೆ ಸ್ಥಳದಲ್ಲೇ ಇದ್ದ ಶ್ರೀರಾಮುಲು ಬಿಡಿಸಲು ಮುಂದಾದರು. ಘಟನಾ ಸ್ಥಳಕ್ಕೆ ಆಗಮಿಸಿದ ಬಡಾವಣೆ ಠಾಣೆ ಪೊಲೀಸರು ಸ್ವಾಮೀಜಿಗಳನ್ನ ಕೂಡಲೇ ಪೊಲೀಸ್ ವಾಹನದಲ್ಲಿ ಆಸ್ಪತ್ರೆಗೆ ರವಾನಿಸಿ, ಚಿಕಿತ್ಸೆ ಕೊಡಿಸಿದ್ರು.
ಸ್ವಾಮೀಜಿ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆ ವೈದ್ಯ ರಂಗೇಗೌಡ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಈ ಹೈಡ್ರಾಮದ ಬಳಿಕ ತಿಪ್ಪೇರುದ್ರಸ್ವಾಮೀಜಿ ಬಳಿ ಇದ್ದ ಡೆತ್ ನೋಟ್ ಪತ್ತೆಯಾಗಿದೆ. ಯೋಗವನ ಬೆಟ್ಟದ ಸಿದ್ದಲಿಂಗ ಸ್ವಾಮೀಜಿ ಕಳೆದ ಜನವರಿಯಲ್ಲಿ ಲಿಂಗೈಕ್ಯರಾಗಿದ್ರು. ಸಿದ್ದಲಿಂಗ ಶ್ರೀ ಲಿಂಗೈಕ್ಯರಾದ ಬಳಿಕ ಅಧ್ಯಕ್ಷ ಸ್ಥಾನದ ವಿಚಾರದಕ್ಕೆ ಭಾರಿ ಪೈಪೋಟಿ ನಡೆದಿತ್ತು. ಆದ್ರೆ ರಾಜ್ಯದ ನಾಲ್ಕು ಯೋಗವನ ಬೆಟ್ಟಗಳಿಗೆ ಅಧ್ಯಕ್ಷರಾಗಿ ಬಸವಕುಮಾರ ಸ್ವಾಮೀಜಿ ಆಯ್ಕೆಯಾಗಿದ್ದರು. ಇದರಿಂದ ಅನ್ಯಾಯವಾಗಿದೆ ಎಂದು ತಿಪ್ಪೇರುದ್ರಸ್ವಾಮಿ ಸ್ವಾಮೀಜಿ ತಮ್ಮ ಡೆತ್ ನೋಟ್ನಲ್ಲಿ ಆರೋಪಿಸಿದ್ದಾರೆ. ಹಾಲಿ ಅಧ್ಯಕ್ಷ ಬಸವಕುಮಾರ ಸ್ವಾಮೀಜಿ ಹಾಗೂ ಮಾಜಿ ಶಾಸಕ, ಟ್ರಸ್ಟಿ ಖಜಾಂಚಿ ಎಸ್ ಕೆ ಬಸವರಾಜನ್ ಅವರು ಅಧ್ಯಕ್ಷ ಸ್ಥಾನದಲ್ಲಿ ವಂಚನೆ ಮಾಡಿದ್ದಾರೆ ಎಂದು ತಿಪ್ಪೇರುದ್ರ ಸ್ವಾಮಿ ತಿಳಿಸಿದ್ದಾರೆ. ತಾನು ಇದೇ ವಿಚಾರಕ್ಕೆ ಆತ್ಮಹತ್ಯೆಗೆ ಯತ್ನಿಸುತ್ತಿದ್ದು, ನನ್ನ ಸಾವಿಗೆ ನ್ಯಾಯ ಒದಗಿಸುವಂತೆ ಸ್ವಾಮೀಜಿಗಳು ಡೆತ್ ನೋಟ್ನಲ್ಲಿ ಬರೆದಿದ್ದಾರೆ.
ಈ ಸಂಬಂಧ ಮಾತನಾಡಿರುವ ಮಾಜಿ ಶಾಸಕ ಎಸ್ ಕೆ ಬಸವರಾಜನ್, ಈ ಪ್ರಕರಣದಲ್ಲಿ ತಮ್ಮದು ಯಾವುದೇ ಪಾತ್ರ ಇಲ್ಲ. ಅವರು ಯಾಕೆ ಹೀಗೆ ಮಾಡಿದ್ದಾರೆಂದು ಗೊತ್ತಿಲ್ಲ ಎಂದು ಹೇಳಿ ತಮ್ಮ ಮೇಲಿನ ಆರೋಪ ತಳ್ಳಿಹಾಕಿದ್ದಾರೆ. ಹಾಗೆಯೇ, ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ತಿಪ್ಪೇರುದ್ರಸ್ವಾಮಿ ಬೇಗ ಗುಣಮುಖರಾಗಿ ಉಳಿಯಲಿ ಎಂದೂ ಬಸವರಾಜನ್ ಹಾರೈಸಿದ್ದಾರೆ.
ಒಟ್ಟಾರೆ ವನಮೂಲಿಕೆ ಔಷಧಿಗಳ ಕೇಂದ್ರ ಸ್ಥಾನವಾಗಿರುವ ಯೋಗವನ ಬೆಟ್ಟಗಳ ಅಧ್ಯಕ್ಷ ಸ್ಥಾನದ ವಿಚಾರ ಬೀದಿಗೆ ಬಂದಂತಾಗಿದೆ. ಅಲ್ಲದೆ, ವಿಷ ಸೇವಿಸಿದ ತಿಪ್ಪೇರುದ್ರ ಸ್ವಾಮೀಜಿಗಳು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಈ ಸಂಬಂಧ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆ ಬಳಿಕ ಈ ಹೈಡ್ರಾಮದ ಸತ್ಯಾಸತ್ಯತೆ ಹೊರಬರಬೇಕಿದೆ.
ವರದಿ: ವಿನಾಯಕ ತೊಡರನಾಳ್
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ