ಕೋಲಾರ; ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನಾಪ್ ಪ್ರಕರಣ ಕೋಲಾರ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದೆ. ವರ್ತೂರು ಪ್ರಕಾಶ್ ಅವರ ಕಿಡ್ನಾಪ್ ಕುರಿತಂತೆ ಹಲವು ಅಂತೆಕಂತೆಗಳು ಓಡಾಡುತ್ತಿವೆ. ಈ ನಡುವೆ ಕೋಲಾರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಸಚಿವ ವರ್ತೂರು ಪ್ರಕಾಶ್ ತಮ್ಮ ಕಿಡ್ನಾಪ್ ಹಿನ್ನೆಲೆಯ ಮಾಹಿತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಕೋಲಾರದ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವರ್ತೂರು ಪ್ರಕಾಶ್, ಅಪಹರಣಕಾರರು ಪಕ್ಕಾ ವೃತ್ತಿಪರ ಕಿಡ್ನಾಪರ್ಸ್ ಆಗಿದ್ದರು. ನನ್ನ ಹತ್ತಿರ ಹಣ ಪಡೆಯಲು ಕಿಡ್ನಾಪ್ ಮಾಡಿದ್ದಾರೆ. ಕೋಲಾರ ತಾಲೂಕಿನ ಬೆಗ್ಲಿ ಹೊಸಹಳ್ಳಿ ಗ್ರಾಮದ ಸಮೀಪವಿರುವ ತಮ್ಮ ತೋಟದ ಬಳಿ ಬುಧವಾರ ಸಂಜೆ ನಾನು, ಫಾರ್ಮ್ ಹೌಸ್ ನಿಂದ ಹೊರಬರುತ್ತಿದ್ದ ವೇಳೆ ಎರಡು ಕಾರುಗಳಲ್ಲಿ ಬಂದ ಎಂಟು ಮಂದಿ ಅಪರಿಚಿತರು ಅಡ್ಡಗಟ್ಟಿ ನನ್ನ ಹಾಗೂ ಚಾಲಕನನ್ನು ಅಪಹರಣ ಮಾಡಿ ಲಾಂಗ್ ಮಚ್ಚು, ಗನ್ ಗಳಿಂದ ಅಟ್ಯಾಕ್ ಮಾಡಿದ್ದರು.
ಇನ್ನು ರಾತ್ರಿಯಿಡಿ ನನ್ನನ್ನು ಕಾರಿನಲ್ಲಿ ಸುತ್ತಾಡಿಸಿ ಹಣ ಎಲ್ಲಿ ಇಟ್ಟಿದ್ದಿರಾ, ಒಡವೆ ಎಲ್ಲಿಟ್ಟಿದ್ದಿರಾ ಅಂತ 30 ಕೋಟಿ ಹಣಕ್ಕೆ ಬೇಡಿಕೆ ಇಟ್ಟು ರಾತ್ರಿಯಿಡಿ ಹಲ್ಲೆ ಮಾಡಿದ್ದರು. ಗುರುವಾರ ಬೆಳಗ್ಗೆ ಸಹ ನನ್ನ ಮೇಲೆ ನಿರಂತರವಾಗಿ ಹಲ್ಲೆ ನಡೆಸಿದರು. ನಂತರ ಗುರುವಾರ ಸಂಜೆ ನನ್ನ ಸ್ನೇಹಿತನ ಬಳಿಯಿಂದ 50 ಲಕ್ಷ ಹಣ ಕೊಡಿಸಿದ್ದೆ. ಕೋಲಾರದ ಕಾಫಿ ಡೇ ಬಳಿ ಬಂದು ಅವರ ಕಡೆಯವರು ಹಣ ಪಡೆದುಕೊಂಡು ಹೋದರು, ಮತ್ತೆ ಶುಕ್ರವಾರ ರಾತ್ರಿ ಸಹ ಟಾರ್ಚರ್ ಕೊಡಲು ಆರಂಭಿಸಿದರು ಎಂದು ತಿಳಿಸಿದ್ದಾರೆ.
ಅವರೆಲ್ಲ ಕುಡಿತದ ಅಮಲಿನಲ್ಲಿದ್ದ ವೇಳೆ ನನ್ನ ಕಾರು ಚಾಲಕನನಿಗೆ ಪ್ರಜ್ಞೆ ಬಂದು ಪೊದೆ ಒಳಗೆ ಸೇರಿಕೊಂಡು ತಪ್ಪಿಸಿಕೊಂಡಿದ್ದಾರೆ. ಶುಕ್ರವಾರ ಬೆಳಗ್ಗೆ 4 ಗಂಟೆಗೆ ಅಪಹರಣಾಕಾರರು ಬಿಟ್ಟಿದ್ದಾಗಿ ತಿಳಿಸಿದ ವರ್ತೂರು ಪ್ರಕಾಶ್, ದಾರಿಹೋಕ ಕಾರಿನವರ ಸಹಾಯದಿಂದ ಕೆ ಆರ್ ಪುರದ ಸತ್ಯಸಾಯಿ ಆಸ್ಪತ್ರೆಗೆ ಬಂದೆ. ಅಲ್ಲಿಂದ ನನ್ನ ಮಗ ಬಂದು ನನ್ನ ಕರೆದುಕೊಂಡು ಮನೆಗೆ ಹೋದ. ಇನ್ನು ನಾನು ಕಾರ್ನಲ್ಲಿದ್ದಾಗ ಖಾರದಪುಡಿ, ಮಹಿಳೆಯರ ಬಟ್ಟೆ ಸೇರಿದಂತೆ ಯಾವುದೇ ವಸ್ತುಗಳು ಇರಲಿಲ್ಲ. ಈಗ ಬಟ್ಟೆ ಪತ್ತೆಯಾಗಿರುವುದು ಗೊತ್ತಿಲ್ಲ. ನನ್ನ ಕಾರಿನಲ್ಲಿ ಬೇರೆ ಕೃತ್ಯಗಳು ಎಸಗಿದ್ದಾರೆ. ಎಲ್ಲದರ ಬಗ್ಗೆ ತನಿಖೆ ಮಾಡಲು ನಾನು ಕಮಿಷನರ್ ಬಳಿ ಹೇಳಿದ್ದೇನೆ. ಶನಿವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಕೋಲಾರದ ಎಸ್ಪಿ ಕಾರ್ತಿಕ್ ರೆಡ್ಡಿ ಅವರಿಗೆ ಮಾಹಿತಿ ಕೊಟ್ಟಿದ್ದೇನೆ ಎಂದರು.
ಇನ್ನು ವರ್ತೂರ್ ಪ್ರಕಾಶ್ ಬಳಿ ದುಡ್ಡಿದೆ ಅಂತ ದಾಳಿ ಮಾಡಿದ್ದಾರೆ. ನಾನು ಯಾರಿಗೂ ಹತ್ತು ಲಕ್ಷ ಹಣ ಕೊಡಬೇಕಾಗಿಲ್ಲ. ನಾನು ಎಂಎಲ್ಎ ಆದ ಮೇಲೆ ಸೈಟ್ ವ್ಯಾಪಾರ ಮಾಡೋದು ಬಿಟ್ಟೆ. ಎಂಎಲ್ಎ ಆಗುವ ಮೊದ್ಲು ಸೈಟ್ ವ್ಯಾಪಾರ ಮಾಡುತ್ತಿದ್ದೆ. ಯಾರಾದರೂ ನನ್ನ ಕೊಲೆಗೆ ಸುಪಾರಿ ಕೊಟ್ಟಿದ್ರೆ 5 ನಿಮಿಷಕ್ಕೆ ಮುಗಿಸಿ ಬಿಡುತ್ತಿದ್ದರು. ಆದ್ರೆ ಇವರು ಹಣಕ್ಕಾಗಿ ಬಂದವರು ಎಂದು ನನಗೆ ಅನಿಸುತ್ತಿದೆ. ಅಪರಿಚಿತರು ಆದರು ಕನ್ನಡ, ತಮಿಳು ಭಾಷೆ ಮಾತನಾಡುತ್ತಿದ್ದರು. ನಾನು ಅವರ ಜೊತೆ ಇದ್ದ ವೇಳೆ ಅನುಮಾನ ಬಾರದ ರೀತಿಯಲ್ಲಿ ವರ್ತಿಸುತ್ತಿದ್ದರು. ಇನ್ನು ಮೂರು ದಿನಗಳಲ್ಲಿ ಕಿಡ್ನಾಪ್ ಮಾಡಿದವರು ಸಿಕ್ಕೆ ಸಿಗುತ್ತಾರೆ. ಇದು ಏಕಾಏಕಿ ಪ್ಲಾನ್ ಮಾಡಿರೋದು ಅಲ್ಲ. ಒಂದು ತಿಂಗಳಿನಿಂದ ನಡೆದಿದೆ ಎಂದು ಅನುಮಾನಿಸಿದರು.
ಇನ್ನು ಕೋಲಾರಕ್ಕೆ ಪ್ರಕರಣ ಶಿಫ್ಟ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ತಕ್ಷಣ ತನಿಖೆ ಆರಂಭಿಸಿದ್ದಾರೆ. ಹೆಚ್ಚುವರಿ ಎಸ್ಪಿ ಜಾಹ್ನವಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೋಲಾರ ತಾಲೂಕಿನ ಜಂಗಾಲಹಳ್ಳಿ ರಸ್ತೆಯಲ್ಲಿ ಪರಿಶೀಲನೆ ನಡೆಸಿದ ಪೊಲೀಸರು, ನಂತರ ವರ್ತೂರು ಪ್ರಕಾಶ್ ತೋಟದ ಮನೆಗೆ ಭೇಟಿ ನೀಡಿ ಘಟನೆ ನಡೆದ ದಿನದ ಮಾಹಿತಿ ಪಡೆದಿದ್ದಾರೆ. ಇನ್ನು ಮಾಜಿ ಸಚಿವ ವರ್ತೂರ್ ಪ್ರಕಾಶ್ಗೆ ಪ್ರಾಣ ಬೆದರಿಕೆ ಆರೋಪದ ಹಿನ್ನೆಲೆಯಲ್ಲಿ, ಗೃಹ ಸಚಿವರ ಸೂಚನೆ ಮೇರೆಗೆ ಇಂದಿನಿಂದಲೇ ಗನ್ ಮ್ಯಾನ್ ಕೂಡ ನೇಮಕ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ