ಚಾಮರಾಜನಗರ: ಕುಂತರು ನೊಣ, ನಿಂತರೂ ನೊಣ (House Fly). ಎಲ್ಲಿ ನೋಡಿದರು ನೊಣ, ನೊಣ, ನೊಣ. ಹೌದು, ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಐದಕ್ಕೂ ಹೆಚ್ವು ಗ್ರಾಮಗಳಲ್ಲಿ ನೊಣಗಳ ಕಾಟದಿಂದ ಜನ ಬೇಸತ್ತು ಹೋಗಿದ್ದಾರೆ. ಕರಕಲಮಾದಳ್ಳಿ, ವಡ್ಡಗೆರೆ, ಹೆಗ್ಗವಾಡಿ, ದಾರಿಬೇಗೂರು ಯರಿಯೂರು ಗ್ರಾಮಗಳಲ್ಲಿ (Villagers) ನೊಣಗಳ ಜಾತ್ರೆಯೇ ಕಂಡು ಬರುತ್ತಿದ್ದು ಜನಗಳಷ್ಟೇ ಅಲ್ಲ ದನಕರುಗಳು ಹಿಂಸೆ ಅನುಭವಿಸುತ್ತಿವೆ. ಅಡುಗೆ ಮಾಡುವಾಗ, ಊಟ ತಿಂಡಿ ಮಾಡುವಾಗ, ನಿದ್ದೆ ಮಾಡುವಾಗ, ಹೀಗೆ ದಿನದ 24 ಗಂಟೆ ಕಾಲ ನೊಣಗಳದ್ದೇ ಕಾರುಬಾರಾಗಿದ್ದು ಸಾಂಕ್ರಮಿಕ ರೋಗ (Epidemic diseases) ಹರಡುವ ಭೀತಿ ಎದುರಾಗಿದೆ. ಜನರಿಗೆ ಅನಾರೋಗ್ಯ ಕಾಡುವ ಆತಂಕ ಉಂಟಾಗಿದೆ. ಜಾನುವಾರುಗಳಂತು ನೊಣಗಳ ಕಾಟದಿಂದ ಮೂಕವೇದನೆ ಅನುಭವಿಸುತ್ತಿವೆ
"ನೊಣಗಳ ಕಾಟ ತಾಳಲಾರದೆ ನನ್ನ ಎರಡು ವರ್ಷದ ಮಗುವನ್ನು ನೆಂಟರ ಮನೆಗೆ ಕರೆದೊಯ್ದು ಬಿಟ್ಟಿದ್ದೇನೆ" ಎನ್ನುತ್ತಾರೆ ವಡ್ಡಗೆರೆ
ಗ್ರಾಮದ ಲೋಕೇಶ್. "ಮನೆಯಲ್ಲಿ ಮಗು ಹಾಗು ಬಾಣಂತಿ ಇದ್ದಾರೆ, ಮನೆಯ ಬಾಗಿಲು ತೆಗೆದರೆ ಸಾಕು ನೊಣಗಳು ಬಂದು ಮಗುವಿಗೆ ಮುತ್ತಿಕೊಳ್ಳುತ್ತವೆ. ಹಾಗಾಗಿ ಮನೆಯ ಬಾಗಿಲು ಹಾಗು ಕಿಟಕಿಯನ್ನು ಯಾವಾಗಲು ಮುಚ್ಚಿರುತ್ತೇವೆ. ಅಡುಗೆ ಮಾಡುವಾಗ, ಊಟ ತಿಂಡಿ ಮಾಡುವಾಗ ಪಾತ್ರೆ ತೊಳೆಯುವಾಗ ಈ ನೊಣಗಳ ಕಾಟ ಸಾಕಾಗಿ ಹೋಗಿದೆ ಎಂಬುದು ಕರಕಲಮಾದಳ್ಳಿ ಜಾನಕಮ್ಮ ಅವರ ಅಳಲು.
ಕೋಳಿಗಳಿಂದಲೇ ನೊಣಗಳ ಕಾಟ ಶುರುವಾಗಿದ್ದು
ನೊಣಗಳ ಕಾಟಕ್ಕೆ ಹೆಗ್ಗವಾಡಿ ಗ್ರಾಮದ ಜಮೀನೊಂದರಲ್ಲಿ ಇರುವ ಇರುವ ಪೌಲ್ಟ್ರಿ ಫಾರಂ ಕಾರಣವಾಗಿದೆ. ಕೇರಳ ಮೂಲದ ವ್ಯಕ್ತಿಗೆ ಸೇರಿದ ಈ ಪೌಲ್ಟ್ರಿ ಫಾರಂನಲ್ಲಿ 20 ಸಾವಿರ ಕೋಳಿ ಸಾಕಾಣಿಕೆ ಮಾಡಲಾಗಿದ್ದು ಪ್ರತಿದಿನ 20 ಸಾವಿರ ಕೋಳಿಮೊಟ್ಟೆ ಉತ್ಪಾದಿಸಲಾಗುತ್ತಿದೆ. ಕೋಳಿ ಮೊಟ್ಟೆಗಳನ್ನು ಅಲ್ಲಿಯೇ ಪ್ಯಾಕ್ ಮಾಡಿ ಪಟ್ಟಣ ಪ್ರದೇಶಗಳಿಗೆ ಕಳುಹಿಸಲಾಗುತ್ತಿದೆ. ಮಾಲೀಕರು ಯಾವುದೇ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಇರುವುದರಿಂದ ನೊಣಗಳ ಸಂಖ್ಯೆ ಉಲ್ಬಣಗೊಂಡು ಸುತ್ತಮುತ್ತಲಿನ ಗ್ರಾಮಗಳಿಗೆ ದಾಳಿ ಇಟ್ಟಿವೆ ಈ ಬಗ್ಗೆ ಗುಂಡ್ಲುಪೇಟೆ ತಹಸೀಲ್ದಾರರಿಗೆ ದೂರು ನೀಡಿದ್ದೇವೆ, ಯಾವುದೇ ಪ್ರಯೋಜನವು ಆಗಿಲ್ಲ, ಕಳೆದ ಎರಡು ತಿಂಗಳಿಂದ ನೊಣಗಳ ಸಂಖ್ಯೆ ವಿಪರೀತವಾಗಿದ್ದು ರೋಗ ಹರಡುವ ಸಾಧ್ಯತೆ ಗಳಿವೆ ಎಂದು ಕರಕಲಮಾದಳ್ಳಿ
ಗ್ರಾಮದ ಗಿರೀಶ್ ಆತಂಕ ವ್ಯಕ್ತಪಡಿಸಿದ್ದಾರೆ.
ಗ್ರಾಮ ಪಂಚಾಯ್ತಿ ಮಧ್ಯಸ್ಥಿಕೆ
ಪೌಲ್ಟ್ರಿ ಫಾರಂ ಮಾಲೀಕರು ಗ್ರಾಮ ಪಂಚಾಯತಿಯಿಂದ ಯಾವುದೇ ನಿರಾಪೇಕ್ಷಣಾ ಪತ್ರ ಪಡೆದಿಲ್ಲ, ನೊಣಗಳು ಉಲ್ಬಣಗೊಂಡು ಸಾಂಕ್ರಾಮಿಕ ರೋಗ ಹರಡು ಸಾಧ್ಯತೆಗಳು ಇರುವುದರಿಂದ ಈ ವಿಷಯ ಚರ್ಚಿಸುವ ಸಲುವಾಗಿಯೇ ವಿಶೇಷ ಸಭೆ ನಡೆಸಿದ್ದೇವೆ, ಜೊತೆಗೆ ಪೌಲ್ಟ್ರಿ ಫಾರಂ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ನೊಣಗಳ ನಿಯಂತ್ರಣಕ್ಕೆ 15 ದಿನಗಳ ಒಳಗೆ ಕಾಲಾವಾಕಾಶ ನೀಡಿದ್ದೇವೆ. ಪೌಲ್ಟ್ರಿ ಫಾರಂ ಮಾಲೀಕರಿಗೆ ನೊಟೀಸ್ ನೀಡಲು ಸಹ ಕ್ರಮ ವಹಿಸಿದ್ದೇವೆ ಎಂದು ವಡ್ಡಗೆರೆ ಗ್ರಾಮ ಪಂಚಾಯತಿ ಸದಸ್ಯ ಲೋಕೇಶ್ ನ್ಯೂಸ್ 18 ಗೆ ಮಾಹಿತಿ ನೀಡಿದರು.
(ಎಸ್.ಎಂ.ನಂದೀಶ್, ಚಾಮರಾಜನಗರ) ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ