Green Heroes: ರಜೆಯಲ್ಲಿ ಮಜಾ ಮಾಡೋ ಬದ್ಲು ಈ ಮಕ್ಕಳು ಇದೇನು ಮಾಡ್ತಿದ್ದಾರೆ ನೋಡಿ, ಎಲ್ರೂ ಹೀಗೆ ಮಾಡಿದ್ರೆ ಎಷ್ಟು ಚೆನ್ನ!

Students are Green Heroes: ಕಾಡು ಬರಡಾದಂತೆ ಆಹಾರವಿಲ್ಲದೆ ಆನೆಯಷ್ಟೇ ಅಲ್ಲದೆ ಕಾಡಿನ ಬೇರೆ ಬೇರೆ ಪ್ರಾಣಿಗಳು ಊರುಗಳತ್ತ ದಾಳಿ ಮಾಡುತ್ತಿರುವುದು ದಿನೇ ದಿನೇ ಹೆಚ್ಚುತ್ತಿದೆ. ಇದನ್ನು ಮನಗಂಡಿರುವ ಈ ಶಾಲೆಯ ಮಕ್ಕಳು ಕಾಡಿನಲ್ಲಿ ವೃಕ್ಷ ಕ್ರಾಂತಿ (Save Forest) ಮಾಡಲು ಮುಂದಾಗಿದ್ದಾರೆ.

ಶಿಕ್ಷಕರ ಮಾರ್ಗದರ್ಶನ: ಬೀಜದ ಉಂಡೆಗಳನ್ನು ಮಾಡುತ್ತಿರುವ ಮಕ್ಕಳು

ಶಿಕ್ಷಕರ ಮಾರ್ಗದರ್ಶನ: ಬೀಜದ ಉಂಡೆಗಳನ್ನು ಮಾಡುತ್ತಿರುವ ಮಕ್ಕಳು

  • Share this:
ಕೊಡಗು : ಶಾಲೆ ಮುಗಿದು ರಜೆ ಬಂತು ಅಂದ್ರೆ ವಿದ್ಯಾರ್ಥಿಗಳು ತಮ್ಮ ಅಜ್ಜ ಅಜ್ಜಿ ಮನೆಗೋ ಇಲ್ಲ ಸಂಬಂಧಿಕರ ಮನೆಗೋ ಹೋಗಿ ಕಾಲ ಕಳೆಯುತ್ತಾರೆ. ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಮುಳ್ಳೂರಿನ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು (School Students) ಮಾತ್ರ ರಜೆ ದಿನಗಳನ್ನು ಅರಣ್ಯ ಅಭಿವೃದ್ಧಿಯ ಮಹತ್ವದ ಕೆಲಸ ಮಾಡುವುದಕ್ಕಾಗಿಯೇ ಮೀಸಲಿಡುತ್ತಾರೆ. ಹೌದು ಕೊಡಗು ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಆನೆ ಮತ್ತು ಮಾನವ (Elephant Attack) ಸಂಘರ್ಷ ದಿನದಿಂದ ದಿನಕ್ಕೆ ಮಿತಿಮೀರುತ್ತಲೇ ಇದೆ. ಕಾಡು ಬರಡಾದಂತೆ ಆಹಾರವಿಲ್ಲದೆ ಆನೆಯಷ್ಟೇ ಅಲ್ಲದೆ ಕಾಡಿನ ಬೇರೆ ಬೇರೆ ಪ್ರಾಣಿಗಳು ಊರುಗಳತ್ತ ದಾಳಿ ಮಾಡುತ್ತಿರುವುದು ದಿನೇ ದಿನೇ ಹೆಚ್ಚುತ್ತಿದೆ. ಇದನ್ನು ಮನಗಂಡಿರುವ ಈ ಶಾಲೆಯ ಮಕ್ಕಳು ಕಾಡಿನಲ್ಲಿ ವೃಕ್ಷ ಕ್ರಾಂತಿ (Save Forest) ಮಾಡಲು ಮುಂದಾಗಿದ್ದಾರೆ. ಅರಣ್ಯವನ್ನು ಇನ್ನಷ್ಟು ಹಸಿರೀಕರಣ ಮಾಡಿ ಆ ಮೂಲಕ ಕಾಡು ಪ್ರಾಣಿಗಳಿಗೆ ಎಥೇಚ್ಛ ಆಹಾರ ದೊರಕುವಂತೆ ವಿವಿಧ ಕಾಡು ಜಾತಿಯ ಹಣ್ಣುಗಳ ಗಿಡಗಳನ್ನು ಬೆಳೆಸಲು ಯತ್ನಿಸುತ್ತಿದ್ದಾರೆ.

ಅದಕ್ಕಾಗಿ ಕಾಡು ಜಾತಿಯ ಹಣ್ಣಿನ ಬೀಜಗಳನ್ನು ಸಂಗ್ರಹಿಸಿ, ಅವುಗಳನ್ನು ಒಣಗಿಸಿ ಬಳಿಕ ಸಗಣಿಯ ಉಂಡೆಗಳನ್ನು ಮಾಡಿ ಅದರೊಳಗೆ ಒಂದೊಂದೇ ಬೀಜವನ್ನು ಹುದುಗಿಸಿಡುತ್ತಿದ್ದಾರೆ. ಬಳಿಕ ಆ ಬೀಜದ ಉಂಡೆಗಳನ್ನು ತಮ್ಮ ಶಿಕ್ಷಕರೊಡಗೂಡಿ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳ ಸಹಾಯದೊಂದಿಗೆ ಜೂನ್ ತಿಂಗಳ ಮೂರು ಅಥವಾ ನಾಲ್ಕನೇ ವಾರದಲ್ಲಿ ಉತ್ತಮ ಮಳೆಯಾಗುವುದರಿಂದ ಆ ಸಮಯದಲ್ಲೇ ಅರಣ್ಯದಲ್ಲಿ ಬಿತ್ತನೆ ಮಾಡುತ್ತಾರೆ. ಕಾಡಿನಲ್ಲಿ ಹಣ್ಣುಗಳನ್ನು ತಿಂದು ಬದುಕುತ್ತಿದ್ದ ಎಷ್ಟೋ ಪಕ್ಷಿ ಸಂಕುಲುಗಳಲ್ಲಿ ಕೆಲವು ನಶಿಸಿಯೇ ಹೋಗಿವೆ. ಇನ್ನು ಕೆಲವು ಅಳಿವಿನಂಚಿಗೆ ಬಂದು ನಿಂತಿವೆ.

ಈ ಉದ್ದೇಶದಿಂದಲೇ ಈ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕ ಸತೀಶ್ ಅವರ ಸಹಕಾರದಿಂದ ಸತತ ಮೂರು ತಿಂಗಳ ಕಾಲ ವಿವಿಧ ಕಾಡು ಹಣ್ಣುಗಳ ಬೀಜಗಳನ್ನು ಸಂಗ್ರಹಿಸಿ ಅವುಗಳನ್ನು ಬೀಜದ ಉಂಡೆಗಳಾಗಿ ಪರಿವರ್ತಿಸಿ ಅರಣ್ಯ ಪ್ರದೇಶದಲ್ಲಿ ಬಿತ್ತನೆ ಮಾಡುವ ಮಹತ್ವದ ಕೆಲಸ ಮಾಡುತ್ತಿದ್ದಾರೆ. ಮುಖ್ಯವಾಗಿ ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಇಕೋ ಕ್ಲಬ್ 'ವೃಕ್ಷ ಕ್ರಾಂತಿ' ಎಂಬ ಯೋಜನೆ ಅಡಿಯಲ್ಲಿ ಅಳಿವಿನ ಅಂಚಿನಲ್ಲಿರುವ ಕಾಡು ಮರಗಳ ಹಣ್ಣಿನ ಬೀಜಗಳನ್ನು ಸಂಗ್ರಹಿಸಿ ಬಿತ್ತುವ ಮೂಲಕ ಹಣ್ಣಿನ ಮರಗಳ ಅರಣ್ಯ ಸೃಷ್ಟಿಸುವ ಮಹತ್ವದ ಕೆಲಸಕ್ಕೆ ಮುಂದಾಗಿದ್ದಾರೆ.

ಇದನ್ನೂ ಓದಿ: ಬಾಲ್ಯದಿಂದಲೇ ಪರಿಸರ ಸಂರಕ್ಷಣೆಯಲ್ಲಿ ತೊಡಗಿರುವ ವಿದ್ಯಾರ್ಥಿ, ನೂರಾರು ಗಿಡಗಳನ್ನು ನೆಟ್ಟು ಪೋಷಿಸುತ್ತಿರುವ ಹಾಸನದ ಹುಡುಗ

ಇದಕ್ಕಾಗಿ ಶಾಲೆಯಲ್ಲಿ ಬೀಜ ಭಂಡಾರ ಮತ್ತು ಸಸ್ಯ ದಾಸೋಹ ಕೇಂದ್ರವನ್ನು ಸ್ಥಾಪಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ ಬೆಂಕಿಗೆ ಆಹುತಿ ಆಗುವ ಅರಣ್ಯ ಪ್ರದೇಶಗಳಿಗೆ ಹೆಚ್ಚಿನ ಆದ್ಯತೆ ನೀಡಿ ಅಂತಹ ಸ್ಥಳಗಳಲ್ಲಿ ತಾವು ಮಾಡಿರುವ ಬೀಜದ ಉಂಡೆಗಳನ್ನು ಬಿತ್ತನೆ ಮಾಡುತ್ತಿದ್ದಾರೆ.  ಕಾಡಿನಲ್ಲಿ ಆಹಾರವಿಲ್ಲದ ಕಾರಣ ಕಾಡು ಪ್ರಾಣಿಗಳು ನಾಡು ಪ್ರವೇಶಿಸುತ್ತಿವೆ. ಇದನ್ನರಿತ ಇಕೋ ಕ್ಲಬ್ ಕಾಡಿನಲ್ಲಿ ಆನೆಗಳಿಗೆ ಆಹಾರಕ್ಕೆ ಬೇಕಾದ ಬೈನೆ, ಅಡಿಕೆ, ಹಲಸು ಮತ್ತು ಈಚಲು ಬೀಜದ ಉಂಡೆಗಳನ್ನು ತಯಾರಿಸಿ ಅವುಗಳನ್ನು ಬಿತ್ತನೆ ಮಾಡುತ್ತಿದೆ.

ಬಾಳೆ ಮತ್ತು ಬಿದಿರಿನ ಸಸ್ಯಗಳನ್ನು ಕಾಡಿನಲ್ಲಿ ಹೆಚ್ಚು ಬೆಳೆಯುವ ಉದ್ದೇಶವಿದ್ದು ಇದಕ್ಕಾಗಿ ಅರಣ್ಯ ಇಲಾಖೆಯ ಸಹಕಾರ ಕೇಳಲಾಗುತ್ತಿದೆ. ಸ್ವಾಭಾವಿಕ ಹಣ್ಣಿನ ಗಿಡಗಳಾದ ಚೊಟ್ಟೆ, ಬಕ್ಲ ಮತ್ತು ಉಬ್ಲ, ಕಾಡುನೇರಳೆ, ಆಲೇ, ಗೇರುಹಣ್ಣು ಹೀಗೆ ವಿವಿಧ ಹಣ್ಣಿನ ಗಿಡಗಳನ್ನು ಬೆಳೆಸಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇದಕ್ಕೆಲ್ಲ ಸಂಪೂರ್ಣ ಬೆನ್ನೆಲುಬಾಗಿ ನಿಂತಿರುವುದು ಶಿಕ್ಷಕ ಸತೀಶ್.
Published by:Soumya KN
First published: