ಕೋವಿಡ್ ಲಸಿಕೆಯಿಂದ ಯಾವುದೇ ಅಡ್ಡಪರಿಣಾಮವಿಲ್ಲ, ವದಂತಿಗಳಿಗೆ ಕಿವಿಗೊಡಬೇಡಿ: ಸಚಿವೆ ಶಶಿಕಲಾ ಜೊಲ್ಲೆ ಮನವಿ

ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳು ದೇಶಿಯ ಲಸಿಕೆಗಳಾಗಿರುವುದರಿಂದ ಎಲ್ಲರೂ ಅಭಿಮಾನ ಪಡುವಂತಹ ವಿಷಯವಾಗಿದ್ದು, ಯಾವುದೇ ವದಂತಿಗಳಿಗೆ ಗಮನ ನೀಡದೆ ತಮ್ಮ ಸುರಕ್ಷತೆಗಾಗಿ ಈ ಲಸಿಕೆಗಳನ್ನು ಪಡೆಯುವಂತೆ ಸಚಿವೆ ಶಶಿಕಲಾ ಜೊಲ್ಲೆ ಅವರು ಸಲಹೆ ನೀಡಿದರು.

ಸಚಿವೆ ಶಶಿಕಲಾ ಜೊಲ್ಲೆ ವಿಜಯಪುರ ಜಿಲ್ಲಾ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು.

ಸಚಿವೆ ಶಶಿಕಲಾ ಜೊಲ್ಲೆ ವಿಜಯಪುರ ಜಿಲ್ಲಾ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು.

 • Share this:
  ವಿಜಯಪುರ (ಏ. 22): ಕೋವಿಡ್ ಎರಡನೇ ಅಲೆಯ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ನಿಗದಿತ ಪ್ರಮಾಣದ ಆಕ್ಸಿಜನ್ ಇರುವಂತೆ ನೋಡಿಕೊಳ್ಳುವ ಜೊತೆಗೆ ಕೋವಿಡ್ ಸೋಂಕಿತರಿಗೆ ಬೆಡ್‍ಗಳ ಕೊರತೆ ಮತ್ತು ನಿಗದಿತ ಲಸಿಕೆಯ ಕೊರತೆಯಾಗದಂತೆ ನೋಡಿಕೊಳ್ಳಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಹಿರಿಯ ನಾಗರಿಕರ ಸಬಲೀಕರಣ ಹಾಗೂ ವಿಕಲಚೇತನರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಜೊಲ್ಲೆ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

  ಜಿಲ್ಲಾಧಿಕಾರಿಗಳ ಕಾರ್ಯಾಲಯದ ವಿಡಿಯೋ ಸಭಾಂಗಣದಲ್ಲಿ ಜಿಲ್ಲೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ವಿಡಿಯೋ ಸಂವಾದ ಸಭೆ ನಡೆಸಿದ ಅವರು ಕೋವಿಡ್ ಎರಡನೆ ಅಲೆ ಹಿನ್ನೆಲೆಯಲ್ಲಿ ಎಲ್ಲರೂ ಅವಶ್ಯಕ ಮುನ್ನೆಚ್ಚರಿಕೆ ಕೈಗೊಳ್ಳಬೇಕು. ರೂಪಾಂತರ ಕೊರೋನಾ ವೈರಸ್ ಇದಾಗಿದ್ದು, ಯುವ ಜನತೆಗೂ ಅಪಾಯ ಒಡ್ಡುತ್ತಿದೆ. ಕಾರಣ ಮುಂದಿನ ದಿನಗಳಲ್ಲಿ ಬರಬಹುದಾದಂತಹ ಸಮಸ್ಯೆ ಮತ್ತು ಸವಾಲುಗಳನ್ನು ಎದುರಿಸಲು ಈಗಿನಿಂದಲೇ ಸಕಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ನಿಗದಿತ ಪ್ರಮಾಣದ ಆಕ್ಸಿಜನ್ ಇರುವಂತೆ ಮತ್ತು ಬೆಡ್ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.

  ಜಿಲ್ಲೆಯಲ್ಲಿ ಇಂದಿನಿಂದ 6 ಕೋವಿಡ್ ಕೇರ್ ಸೆಂಟರ್​ಗಳನ್ನು ಆರಂಭಿಸಲಾಗುತ್ತಿದೆ. ವಿಜಯಪುರ ನಗರದಲ್ಲಿ 2, ಪ್ರತಿ ತಾಲೂಕಿಗೆ ಒಂದರಂತೆ ಕೋವಿಡ್ ಕೇರ್ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಜಿಲ್ಲೆಯಲ್ಲಿ ಕೋವಿಡ್ ಸೋಂಕಿತ ರೋಗಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಲು ತಿಳಿಸಿದ ಅವರು ಖಾಸಗಿ ಆಸ್ಪತ್ರೆಗಳ ವ್ಯಾಪ್ತಿಯಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ದರ ತೆಗೆದುಕೊಂಡರೆ ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಹೇಳಿದರು.

  ಜಿಲ್ಲೆಯ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ಸೋಂಕಿತರು ಅಲ್ಪೋಪಹಾರ, ಉಪಹಾರಕ್ಕಾಗಿ ರೋಗಿಗಳು ಹೊರಗೆ ಬಂದು ಹೋಗುತ್ತಿರುವ ಬಗ್ಗೆ ಹಾಗೂ ಹೊರಗಿನ ಅಡುಗೆ ಮೂಲಕ ಆಹಾರ ಪಡೆಯುತ್ತಿರುವ ಬಗ್ಗೆ ಶಾಸಕ ಅರುಣ ಶಹಾಪೂರ ಅವರು ಗಮನಕ್ಕೆ ತಂದಿದ್ದು, ಈ ಕುರಿತು ವಿಶೇಷ ಗಮನ ನೀಡಬೇಕು. ಮಹಾರಾಷ್ಟ್ರದಿಂದ ಬಂದಿರುವ ಮತ್ತು ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಕೋವಿಡ್ ರೋಗಿಗಳ ಬಗ್ಗೆಯೂ ತೀವ್ರ ನಿಗಾ ಇಡುವಂತೆ ಅವರು ಸೂಚನೆ ನೀಡಿದರು.

  ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು ಮತ್ತು ತಾಂತ್ರಿಕ ಸಿಬ್ಬಂದಿಗಳ ಕೊರೆತಯಾಗದಂತೆ ನೋಡಿಕೊಳ್ಳಬೇಕು. ಅವಶ್ಯಕತೆಯಿದ್ದಲ್ಲಿ ಪಾರದರ್ಶಕವಾಗಿ ಮೆರಿಟ್ ಆಧಾರದ ಮೇಲೆ ನೇಮಿಸಿಕೊಳ್ಳಬೇಕು. ತಾಲೂಕಾ ಆಸ್ಪತ್ರೆಗಳಲ್ಲಿ ವೆಂಟಿಲೇಟರ್​ಗಳ ಸೌಲಭ್ಯವಿದ್ದರೂ ಕೂಡ ತಾಂತ್ರಿಕ ಸಿಬ್ಬಂದಿಗಳ ಕೊರತೆ ಇರುವ ಬಗ್ಗೆ ಗಮನಕ್ಕೆ ಬಂದಿದ್ದು, ಐಎಮ್‍ಎ ಸಂಸ್ಥೆಯಿಂದ ಅಥವಾ ಖಾಸಗಿ ಆಸ್ಪತ್ರೆಗಳ ಮೂಲಕ ವೆಂಟಿಲೇಟರ್​ಗಳ ನಿರ್ವಹಣಾ ಸಿಬ್ಬಂದಿ ಪೂರೈಸಲು ಸಾಧ್ಯವಿದೆಯೇ ಎಂಬುದರ ಬಗ್ಗೆ ಅವಶ್ಯಕ ಕ್ರಮಕೈಗೊಳ್ಳಲು ಅವರು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.

  ಸಭೆಯಲ್ಲಿ ಶಾಸಕ ಎಂ.ಬಿ ಪಾಟೀಲ ಅವರು ಜಿಂದಾಲ್ ಮೂಲಕ ಶೇ.50 ರಷ್ಟು ಆಕ್ಸಿಜನ್ ಮಹಾರಾಷ್ಟ್ರಕ್ಕೆ ಪೂರೈಕೆಯಾಗುತ್ತಿರುವ ಬಗ್ಗೆ ಗಮನಕ್ಕೆ ತಂದಿದ್ದು, ಇಲ್ಲಿನ ವಿಶೇಷವಾಗಿ ಕರ್ನಾಟಕ ರಾಜ್ಯ ಹಾಗೂ ವಿಜಯಪುರಕ್ಕೆ ಬೇಡಿಕೆಗೆ ಅನುಗುಣವಾಗಿ ಆಕ್ಸಿಜನ್ ಮೊದಲು ಪೂರೈಕೆಯಾಗುವಂತೆ ಕೋರಿದ್ದು, ಈ ಕುರಿತು ಅವಶ್ಯಕ ಕ್ರಮಕೈಗೊಳ್ಳುವುದಾಗಿ ಸಚಿವರು ಸಭೆಗೆ ತಿಳಿಸಿದರು. ಅದರಂತೆ ಶಾಸಕ ಶಿವಾನಂದ ಪಾಟೀಲ ಅವರು ನಗರದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಸದ್ಭಳಕೆಗೆ ಸೂಚಿಸಿದ್ದು, ಈ ಕುರಿತು ಗಮನ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.

  ಇದನ್ನು ಓದಿ: ಕಲ್ಯಾಣ ಮಂಟಪದಿಂದ ಅತಿಥಿಗಳನ್ನು ಹೊರಕಳಿಸಿದ ಅಧಿಕಾರಿಗಳು; ಕಂಗಾಲಾದ ಮದುವೆ ಮನೆಯವರು!

  ಲಸಿಕೆಯಿಂದ ಯಾವುದೇ ಅಡ್ಡಪರಿಣಾಮವಿಲ್ಲ: ಸಚಿವೆ ಜೊಲ್ಲೆ

  ಕೋವಿಡ್-19 ಲಸಿಕೆ ಪಡೆಯುವುದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮ ಇರುವುದಿಲ್ಲ ಈ ಕುರಿತು ಸುಳ್ಳು ವದಂತಿಗಳಿಗೆ ಕಿವಿಗೊಡದಿರಲು ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಜೊಲ್ಲೆ ಅವರು ಕರೆ ನೀಡಿದ್ದಾರೆ.

  ನಗರದ ಗಾಂಧಿಚೌಕ್ ಹತ್ತಿರದ ಸರ್ಕಾರಿ ಬಾಲಕಿಯರ ಕಾಲೇಜು ಆವರಣದಲ್ಲಿಂದು ಶಿಕ್ಷಣ ಇಲಾಖೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ಕೋವಿಡ್-19 ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳು ದೇಶಿಯ ಲಸಿಕೆಗಳಾಗಿರುವುದರಿಂದ ಎಲ್ಲರೂ ಅಭಿಮಾನ ಪಡುವಂತಹ ವಿಷಯವಾಗಿದ್ದು, ಯಾವುದೇ ವದಂತಿಗಳಿಗೆ ಗಮನ ನೀಡದೆ ತಮ್ಮ ಸುರಕ್ಷತೆಗಾಗಿ ಈ ಲಸಿಕೆಗಳನ್ನು ಪಡೆಯುವಂತೆ ಅವರು ಸಲಹೆ ನೀಡಿದರು. ಈಗಾಗಲೇ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರು ಈ ಲಸಿಕೆಗಳನ್ನು ಪಡೆದಿದ್ದು, ಶಿಕ್ಷಕರಿಗೂ ಸಾಮೂಹಿಕ ಲಸಿಕಾ ಕಾರ್ಯಕ್ರಮ ಆಯೋಜಿಸುವ ಮೂಲಕ ಕರ್ತವ್ಯ ಪ್ರಜ್ಞೆ ನಿಭಾಯಿಸಿದ್ದಾರೆ. ಇದಕ್ಕಾಗಿ ಮತ್ತು ಈ ಶಿಬಿರ ಏರ್ಪಡಿಸಲು ಕಾರಣೀಭೂತರಾದ ಶಾಸಕ ಅರುಣ ಶಹಾಪೂರ ಅವರಿಗೆ ಅಭಿನಂದನೆ ಸಲ್ಲಿಸಿದರು.
  Published by:HR Ramesh
  First published: