news18-kannada Updated:February 25, 2021, 7:25 AM IST
ಆನೇಕಲ್ ಸ್ಮಶಾನ.
ಆನೇಕಲ್: ಸರ್ಕಾರ ಸ್ಮಶಾನ, ಕೆರೆ, ಆಟದ ಮೈದಾನ ಹೀಗೆ ಹತ್ತು ಹಲವು ಸಾರ್ವಜನಿಕರ ಉದ್ದೇಶಗಳಿಗಾಗಿ ಸರ್ಕಾರಿ ಜಮೀನುಗಳನ್ನು ಮೀಸಲಿಟ್ಟಿದೆ . ಆದ್ರೆ ರಾಜ್ಯ ರಾಜಧಾನಿ ಬೆಂಗಳೂರು ನಗರಕ್ಕೆ ಆಣತಿ ದೂರದಲ್ಲಿರುವ ಆನೇಕಲ್ ಪಟ್ಟಣ ವಾಸಿಗಳಿಗೆ ಮೃತರ ಅಂತ್ಯ ಸಂಸ್ಕಾರಕ್ಕೆ ಸ್ಮಶಾನದಲ್ಲಿ ಜಾಗವಿಲ್ಲದೆ ಅಂತ್ಯ ಸಂಸ್ಕಾರಕ್ಕೆ ಪರದಾಡುವಂತಾಗಿದೆ. ಹೌದು ಹೀಗೆ ಕಾಡಿನಂತೆ ಬೆಳೆದು ನಿಂತಿರುವ ಗಿಡ ಮರಗಳು. ಸಮಾಧಿಗಳ ನಡುವಿನ ಪುಟ್ಟ ಪುಟ್ಟ ಜಾಗಗಳಲ್ಲಿ ಅಂತ್ಯ ಸಂಸ್ಕಾರ ಮಾಡಿರುವ ಕುರುಹುಗಳು. ಈ ಎಲ್ಲಾ ದೃಶ್ಯಗಳು ಕಂಡು ಬಂದದ್ದು ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣಕ್ಕೆ ಮೀಸಲಿಟ್ಟಿರುವ ಸ್ಮಶಾನದಲ್ಲಿ. ಆನೇಕಲ್ ಸರ್ವೆ ನಂ 553 ರಲ್ಲಿ ಎರಡು ಎಕರೆ ಪ್ರದೇಶದ ಸ್ಮಶಾನದಲ್ಲಿ ಹತ್ತಾರು ವರ್ಷಗಳಿಂದ ಆನೇಕಲ್ ವಾಸಿಗಳು ಶವ ಸಂಸ್ಕಾರ ಮಾಡಿಕೊಂಡು ಬರುತ್ತಿದ್ದು , ಸದ್ಯ ಶವ ಸಂಸ್ಕಾರ ಮಾಡಲು ಸ್ಥಳವೇ ಇಲ್ಲದಂತಾಗಿದೆ.
ಹಾಗಾಗಿ ಈಗಾಗಲೇ ಅಂತ್ಯ ಸಂಸ್ಕಾರ ಮಾಡಿರುವ ಸ್ಥಳದಲ್ಲಿಯೇ ಮತ್ತೆ ಮತ್ತೆ ಗುಂಡಿ ತೆಗೆದು ಶವ ಸಂಸ್ಕಾರ ಮಾಡಲಾಗುತ್ತಿದೆ. ಹಾಗಾಗಿ ಪುರಸಭೆ ಅಧಿಕಾರಿಗಳು ಸ್ಮಶಾನಕ್ಕೆ ಪರ್ಯಾಯ ಜಾಗ ನೀಡಬೇಕು ಮತ್ತು ವಿದ್ಯುತ್ ಚಿತಾಗಾರ ನಿರ್ಮಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಇನ್ನೂ ಆನೇಕಲ್ ಪಟ್ಟಣ ವಾಸಿಗಳಿಗೆ ಮೀಸಲಿರುವ ಸ್ಮಶಾನದಲ್ಲಿ ಶವಸಂಸ್ಕಾರ ಮಾಡಲು ಸ್ಥಳವಿಲ್ಲದೆ ಜನ ಪರದಾಡುತ್ತಿರುವ ಸತ್ಯ. ಸತ್ಯ ಆನೇಕಲ್ ಸುತ್ತಮುತ್ತ ಸರ್ಕಾರಿ ಜಮೀನುಗಳು ಮಾತ್ರ ಯಾವುದು ಇಲ್ಲ ಹಾಗಾಗಿ ಪುರಸಭೆ ವತಿಯಿಂದ ಅನಿಲ ಚಿತಾಗಾರ ನಿರ್ಮಿಸುವಂತೆ ಈಗಾಗಲೇ ಸಭೆಯಲ್ಲಿ ಒತ್ತಾಯಿಸಲಾಗಿದೆ.
ವಿದ್ಯುತ್ ಚಿತಾಗಾರ ಮತ್ತು ಸ್ಮಶಾನದಲ್ಲಿ ಶವ ಸಂಸ್ಕಾರಕ್ಕೆ ಹೆಚ್ಚು ವೆಚ್ಚವಾಗುತ್ತದೆ. ಬಡ ಜನರು ಶವಸಂಸ್ಕಾರ ಮಾಡುವುದು ಕಷ್ಟವಾಗಲಿದೆ. ಜೊತೆಗೆ ಕಳೆದ ಎರಡು ವರ್ಷಗಳಿಂದ ಸ್ಮಶಾನ ಸ್ವಚ್ಚಗೊಳಿಸಿಲ್ಲ. ಯಾವುದೇ ಮೂಲಭೂತ ಸೌಕರ್ಯಗಳು ಸಹ ಇಲ್ಲವಾಗಿದ್ದು, ಪುರಸಭೆ ಅಧಿಕಾರಿಗಳ ಬಳಿ ಒತ್ತಾಯಿಸಲಾಗುವುದು ಎಂದು ಪುರಸಭೆ ಸದಸ್ಯ ಬಿ ನಾಗರಾಜ್ ತಿಳಿಸಿದ್ದಾರೆ. ಆನೇಕಲ್ ಪಟ್ಟಣ ಜನತೆ ಶವಸಂಸ್ಕಾರಕ್ಕೆ ಸ್ಮಶಾನವಿಲ್ಲದೆ ಪರದಾಟ ನಡೆಸುತ್ತಿರುವುದು ಗಮನಕ್ಕೆ ಬಂದಿದೆ.
ಇದನ್ನೂ ಓದಿ: ಟಿ.ದಾಸರಹಳ್ಳಿ ಬಳಿ ಹೆದ್ದಾರಿ ದಾಟಲು ಸಾರ್ವಜನಿಕರ ಪರದಾಟ: ಸ್ಕೈವಾಕ್ ನಿರ್ಮಾಣಕ್ಕೆ ಸ್ಥಳೀಯರ ಒತ್ತಾಯ
ಈ ಹಿಂದೆಯೇ ಸ್ಮಶಾನಕ್ಕಾಗಿ ಜಾಗ ಮೀಸಲಿಡಬೇಕಿತ್ತು. ಆದ್ರೆ ಈಗ ಎಲ್ಲಿಯು ಜಾಗ ದೊರೆಯುತ್ತಿಲ್ಲ. ಹಾಗಾಗಿ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಕಟ್ಟಿಗೆ ಚಿತಾಗಾರ ಮಂಜೂರು ಮಾಡಲು ಮನವಿ ಮಾಡಲಾಗಿದೆ. ಜೊತೆಗೆ ಕಟ್ಟಿಗೆ ಚಿತಾಗಾರ ನಿರ್ಮಿಸಲು 29 ಲಕ್ಷ ಹಣವನ್ನು ಮೀಸಲಿಡಲಾಗಿದ್ದು, ಇನ್ನೂ ಮೂರು ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ, ವರ್ಕ್ ಅರ್ಡರ್ ನೀಡಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಆನೇಕಲ್ ಪುರಸಭೆ ಅಧ್ಯಕ್ಷ ಪದ್ಮನಾಭ್ ತಿಳಿಸಿದ್ದಾರೆ.
ಒಟ್ನಲ್ಲಿ ಹಿಂದೂ ಸಂಪ್ರದಾಯದಲ್ಲಿ ಶವಸಂಸ್ಕಾರಕ್ಕೆ ತನ್ನದೆ ಆದ ಪಾವಿತ್ರ್ಯತೆ ಇದೆ. ಹಾಗಾಗಿ ಸ್ಥಳೀಯ ಪುರಸಭೆ ಅಧಿಕಾರಿಗಳು ಅತಿ ಶೀಘ್ರವಾಗಿ ಶವಸಂಸ್ಕಾರಕ್ಕೆ ಅಗತ್ಯ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿದೆ. ಆದೂರು ಚಂದ್ರು
Published by:
MAshok Kumar
First published:
February 25, 2021, 7:25 AM IST