HOME » NEWS » District » THE WORSHIP OF EMPEROR BALENDRA IN DIWALI IT IS COASTAL SPECIAL RH AKP

ದೀಪಾವಳಿಯಲ್ಲಿ ಬಲೀಂದ್ರ ಚಕ್ರವರ್ತಿಯ ಆರಾಧನೆ; ಇದು ಕರಾವಳಿಯ ವಿಶೇಷ!

ದೀಪಾವಳಿಯಂದು ತುಳಸೀಕಟ್ಟೆಯ ಬಳಿಯಲ್ಲಿ ಪಾಲಸ ಮರದ ಕೊಂಬೆಯನ್ನು ನೆಟ್ಟು, ಅದಕ್ಕೆ ಕಾಡಿನಲ್ಲಿ ಸಿಗುವ ಹೂಗಳಿಂದ ಶೃಂಗಾರ ಮಾಡಿ ಬಲೀಂದ್ರ ಹೂ ಎಂದು ಕರೆಯುತ್ತಾರೆ. ದೀಪಾವಳಿ ಹಬ್ಬದಲ್ಲೂ ಕೃಷಿಯನ್ನು ಜೋಡಿಸಿಕೊಂಡಿರುವ ತುಳುವರು ಭೂಮಿ ಪೂಜೆಯ ಜೊತೆಗೆ ತಾವು ಬೆಳೆದ ಧವಸ-ಧಾನ್ಯಗಳಿಗೂ ಪೂಜೆ ನೆರವೇರಿಸುವುದು ಇಲ್ಲಿನ ವಿಶೇಷತೆಯಾಗಿದೆ.

news18-kannada
Updated:November 16, 2020, 2:49 PM IST
ದೀಪಾವಳಿಯಲ್ಲಿ ಬಲೀಂದ್ರ ಚಕ್ರವರ್ತಿಯ ಆರಾಧನೆ; ಇದು ಕರಾವಳಿಯ ವಿಶೇಷ!
ದೀಪಾವಳಿ ಹಬ್ಬದಂದು ಕರಾವಳಿಯಲ್ಲಿ ಮಾಡಲಾಗುವ ಬಲೀಂದ್ರ ಚಕ್ರವರ್ತಿ ಪೂಜೆ.
  • Share this:
ಪುತ್ತೂರು; ನಾಡಿನೆಲ್ಲೆಡೆ ದೀಪಾವಳಿಯ ಸಂಭ್ರಮ ಮನೆ ಮಾಡಿದ್ದು, ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ದೀಪಾವಳಿ ಆಚರಿಸಲಾಗುತ್ತಿದೆ. ವಿಭಿನ್ನ ಸಂಸ್ಕೃತಿಯನ್ನು ಹೊಂದಿರುವ ತುಳುನಾಡಿನಲ್ಲಿ ದೀಪಾವಳಿಯನ್ನು ತುಳುನಾಡನ್ನು ಆಳಿದ ಬಲಿ ಚಕ್ರವರ್ತಿಯನ್ನು ಆಹ್ವಾನಿಸುವ ಹಬ್ಬವಾಗಿ ಆಚರಿಸಲಾತ್ತದೆ. ಬಲೀಂದ್ರನಿಗಾಗಿ ಮನೆ ಬಾಗಿಲಿಗೆ ಹಾಗೂ ದಾರಿಯುದ್ದಕ್ಕೂ ದೀಪಗಳನ್ನು ಜೋಡಿಸುವ ತುಳುವರು ದೀಪಾವಳಿಯಂದು ಬಲೀಂದ್ರ ಮರವನ್ನು ನೆಡುವುದು ಇಲ್ಲಿ ಬೆಳೆದುಬಂದ ಸಂಪ್ರದಾಯವೂ ಆಗಿದೆ.

ದೀಪಾವಳಿಯನ್ನು ನಾಡಿನೆಲ್ಲೆಡೆ ಮೂರು ದಿನಗಳ ಕಾಲ ಸಂಭ್ರಮದಿಂದ ಆಚರಿಸಲಾಗುತ್ತದೆ. ಉತ್ತರ ಭಾರತ ಹಾಗೂ ಕರ್ನಾಟಕದ ಹಲವು ಭಾಗಗಳಲ್ಲಿ ದೀಪಾವಳಿಯನ್ನು ತಮ್ಮದೇ ಆದ ರೀತಿಯಲ್ಲಿ ಆಚರಿಸಿಕೊಂಡು ಬರುತ್ತಿದ್ದಾರೆ. ಆದರೆ ಅತ್ಯಂತ ವಿಭಿನ್ನ ಸಂಸ್ಕೃತಿ -ಸಂಪ್ರದಾಯಗಳನ್ನು ಹೊಂದಿರುವ ತುಳುನಾಡಿನಲ್ಲಿ ತುಳುನಾಡನ್ನು ಆಳಿದ ರಾಜನನ್ನು ಆಹ್ವಾನಿಸುವ ಉದ್ಧೇಶದಿಂದ ಆಚರಿಸಲಾಗುತ್ತದೆ.

ರಾಕ್ಷಸ ವಂಶಕ್ಕೆ ಸೇರಿದಂತಹ ಬಲಿ ಚಕ್ರವರ್ತಿ ತುಳುನಾಡಿನಲ್ಲಿ ಆಳುತ್ತಿದ್ದ ಸಂದರ್ಭದಲ್ಲಿ ಪ್ರಜೆಗಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಿದ್ದ. ಇದೇ ಸಂದರ್ಭದಲ್ಲಿ ದೇವಲೋಕದಲ್ಲಿ ದೇವೇಂದ್ರನ ಸ್ಥಾನವನ್ನು ಪಡೆಯುವ ಮಾರ್ಗವಾಗಿ 99 ಯಜ್ಞಗಳನ್ನೂ ಪೂರೈಸಿದ್ದ. ಇದರಿಂದ ಅಸೂಯೆಗೊಂಡ ದೇವೇಂದ್ರ ವಿಷ್ಣುವಿನಲ್ಲಿ ತನ್ನ ಕಷ್ಟವನ್ನು ಅರುಹಿದಾಗ ಸಮಸ್ಯೆಗೆ ಪರಿಹಾರವನ್ನು ನೀಡುವುದಾಗಿ ವಿಷ್ಣು ದೇವೇಂದ್ರನಿಗೆ ಭರವಸೆಯನ್ನು ನೀಡುತ್ತಾರೆ. ಅದೇ ಪ್ರಕಾರ 100 ನೇ ಯಜ್ಞಕ್ಕೆ ಸಿದ್ಧವಾಗುತ್ತಿದ್ದ ಬಲಿ ಚಕ್ರವರ್ತಿಯಲ್ಲಿ ವಾಮನಾವತಾರದಲ್ಲಿ ಹೋಗಿ ತನಗೆ ಮೂರು ಬೇಡಿಕೆಯನ್ನು ಈಡೇರಿಸುವಂತೆ ಬೇಡಿಕೊಳ್ಳುತ್ತಾನೆ. ಬ್ರಾಹ್ಮಣನ ಅವತಾರದಲ್ಲಿರುವ ವಿಷ್ಣುವಿನ ಮೂರು ಪಾದದ ಜಾಗದ ಬೇಡಿಕೆಯನ್ನು ಬಲಿ ಚಕ್ರವರ್ತಿ ಒಪ್ಪಿಕೊಳ್ಳುತ್ತಾನೆ. ಈ ಸಂದರ್ಭದಲ್ಲಿ ವಾಮನಾವತಾರದಲ್ಲಿದ್ದ ವಿಷ್ಣು ಬೃಹದಾಕಾರವಾಗಿ ಬೆಳೆದು ತನ್ನ ಒಂದು ಪಾದವನ್ನು ಭೂಮಿಯಲ್ಲಿಟ್ಟಾಗ ಇಡೀ ಭೂಮಿಯೇ ಪಾದದಡಿಗೆ ಬರುತ್ತದೆ. ಅದೇ ಪ್ರಕಾರ ಇನ್ನೊಂದು ಹೆಜ್ಜೆಯನ್ನು ಆಕಾಶಕ್ಕಿಟ್ಟಾಗ ಇಡೀ ಆಕಾಶ ಪಾದದಡಿ ಬರುತ್ತದೆ. ಇನ್ನೊಂದು ಹೆಜ್ಜೆಯಿಡಲು ಜಾಗವಿಲ್ಲದಾಗ ಬಲಿ ತನ್ನ ತಲೆ ಮೇಲೆ ಪಾದವಿಡುವಂತೆ ಕೇಳಿಕೊಳ್ಳುತ್ತಾನೆ. ಅದರಂತೆ ವಿಷ್ಣುವು ಬಲಿಯ ತಲೆ ಮೇಲೆ ಪಾದವಿಟ್ಟು ಆತನನ್ನು ಪಾತಾಳಕ್ಕೆ ನೂಕುತ್ತಾನೆ.

ಇದನ್ನು ಓದಿ: ಬಸ್ ಪ್ರಯಾಣಿಕರಿಗೆ ಟಿಕೆಟ್ ದರ ಏರಿಕೆಯ ಶಾಕ್ ನೀಡುತ್ತಾ ಯಡಿಯೂರಪ್ಪ ಸರ್ಕಾರ?

ಬಲೀಂದ್ರನ ಭಕ್ತಿಗೆ ಹಾಗೂ ನಿಷ್ಟೆಗೆ ಒಲಿದ ವಿಷ್ಣುವು ಬಲಿ ಚಕ್ರವರ್ತಿಯಲ್ಲಿ ವರವನ್ನು ಕೇಳೆಂದಾಗ ಬಲಿಯು ತನಗೆ ತನ್ನ ಪ್ರಜೆಗಳನ್ನು ನೋಡುವ ಆಸೆಯಿದೆ ಎನ್ನುತ್ತಾನೆ. ಇದಕ್ಕೆ ಸಂತುಷ್ಟನಾದ ವಿಷ್ಣು ವರ್ಷದಲ್ಲಿ ಮೂರು ದಿನ ಭೂಮಿಗೆ ಬಂದು ಪ್ರಜೆಗಳನ್ನು ನೋಡುವ ಅವಕಾಶವನ್ನು ನೀಡುತ್ತಾನೆ. ಅದೇ ಪ್ರಕಾರ ದೀಪಾವಳಿಯ ಮೂರು ದಿನ ಬಲಿ ಚಕ್ರವರ್ತಿಯು ಭೂಮಿಯ ಮೇಲೆ ಬರುತ್ತಾನೆ ಎನ್ನುವ ನಂಬಿಕೆ ತುಳುನಾಡಿನ ಜನರದ್ದಾಗಿದೆ.
Youtube Video

ಈ ಕಾರಣಕ್ಕಾಗಿಯೇ ದೀಪಾವಳಿಯಂದು ತುಳಸೀಕಟ್ಟೆಯ ಬಳಿಯಲ್ಲಿ ಪಾಲಸ ಮರದ ಕೊಂಬೆಯನ್ನು ನೆಟ್ಟು, ಅದಕ್ಕೆ ಕಾಡಿನಲ್ಲಿ ಸಿಗುವ ಹೂಗಳಿಂದ ಶೃಂಗಾರ ಮಾಡಿ ಬಲೀಂದ್ರ ಹೂ ಎಂದು ಕರೆಯುತ್ತಾರೆ. ದೀಪಾವಳಿ ಹಬ್ಬದಲ್ಲೂ ಕೃಷಿಯನ್ನು ಜೋಡಿಸಿಕೊಂಡಿರುವ ತುಳುವರು ಭೂಮಿ ಪೂಜೆಯ ಜೊತೆಗೆ ತಾವು ಬೆಳೆದ ಧವಸ-ಧಾನ್ಯಗಳಿಗೂ ಪೂಜೆ ನೆರವೇರಿಸುವುದು ಇಲ್ಲಿನ ವಿಶೇಷತೆಯಾಗಿದೆ.
Published by: HR Ramesh
First published: November 16, 2020, 2:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories