ಶಿವಮೊಗ್ಗ; ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಒಬ್ಬ ರಾಷ್ಟ್ರದ್ರೋಹಿ, ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಜೊತೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆಶಿ ವಿರುದ್ಧವೂ ಆಕ್ರೋಶ ಹೊರಹಾಕಿದ್ದಾರೆ.
ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆ.ಎಸ್. ಈಶ್ವರಪ್ಪ ಅವರು, ಬೆಂಗಳೂರಿನ ಗಲಭೆಯಂತಹ ಸಂದರ್ಭ ಬಳಸಿಕೊಂಡು, ಜಮೀರ್ ಮುಸಲ್ಮಾನರ ನಾಯಕನಾಗಲು ಸ್ಪರ್ಧೆಯಲ್ಲಿದ್ದಾರೆ. ಪೊಲೀಸರನ್ನು ಕೊಲ್ಲಿ ಎನ್ನುವ, ದಾಂಧಲೆ ನಡೆಸುವವರ ಬೆಂಬಲಕ್ಕೆ ನಿಲ್ಲುತ್ತಾರೆ. ಇಂತಹವರನ್ನು ರಾಷ್ಟ್ರದ್ರೋಹಿ ಎನ್ನದೇ ಮತ್ತೇನಂತಾ ಕರೆಯೋಕಾಗುತ್ತೆ ಎಂದು ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ನಡೆದುಕೊಳ್ಳುತ್ತಿರುವ ರೀತಿ ನೋವು ತರುತ್ತಿದೆ. ಕಾಂಗ್ರೆಸ್ ರಾಷ್ಟ್ರೀಯ ಮೌಲ್ಯದ ರಾಜಕಾರಣ ಮಾಡಲಿ. ಶಂಕರಚಾರ್ಯರ ಪ್ರತಿಮೆ ಮೇಲೆ ಎಸ್.ಡಿ.ಪಿ.ಐ. ಧ್ವಜ ಹಾಕಿದರೆ ಈ ನಿಮಿಷದವರೆಗೂ ಯಾರು ಪ್ರತಿಕ್ರಿಯಿಸಿಲ್ಲ. ಮಾಧ್ಯಮಗಳ ಮೇಲೆ ಹಲ್ಲೆ ನಡೆಸಿದರೂ ಕಾಂಗ್ರೆಸ್ ನವರು ಸುಮ್ಮನೆ ಕೂತಿದ್ದಾರೆ. ಪೊಲೀಸ್ ಠಾಣೆ ಮತ್ತು ವಾಹನಗಳನ್ನು ಹಾಗೂ ಎಂ.ಎಲ್.ಎ. ಮನೆ ಸುಟ್ಟು ಹಾಕಿದ್ದಾರೆ. ಇಷ್ಟೆಲ್ಲ ಆದರೂ ಈ ಬಗ್ಗೆ ಕಾಂಗ್ರೆಸ್ ಖಂಡನೆ ವ್ಯಕ್ತಪಡಿಸಿಲ್ಲ ಎಂದು ದೂರಿದ್ದಾರೆ.
ನಾನು ಹೇಳಿಕೆ ನೀಡಿದ ಹತ್ತು ನಿಮಿಷಕ್ಕೆ ಪ್ರತಿಕ್ರಿಯೆ ನೀಡುವ ಇವರು, ಈ ಘಟನೆ ನಡೆದು ಹತ್ತು ಗಂಟೆಯಾದರೂ ಪ್ರತಿಕ್ರಿಯೆ ನೀಡಿಲ್ಲ. ಡಿ.ಕೆ. ಶಿವಕುಮಾರ್ ಮತ್ತು ಕಾಂಗ್ರೆಸ್ನ ಕೆಟ್ಟ ರಾಜಕಾರಣ ನನಗೆ ನೋವು ತರಿಸಿದೆ. ಈವರೆಗೂ ಶ್ರೀನಿವಾಸ್ ಮನೆಗೆ ಹೋಗಿ ಸಾಂತ್ವನ ಹೇಳಿಲ್ಲ. ಶಾಸಕ ಶ್ರೀನಿವಾಸ್ ಮೂರ್ತಿಯವರ ಕುಟುಂಬ ಘಟನೆಯಿಂದ ನಲುಗಿ ಹೋಗಿದೆ. ಕುಟುಂಬ ಸದಸ್ಯರು ಕಣ್ಣೀರು ಹಾಕುತ್ತಿದ್ದಾರೆ. ಡಿಕೆಶಿ ಮತ್ತು ಸಿದ್ಧರಾಮಯ್ಯಗೆ ಮನವಿ ಮಾಡುತ್ತೇನೆ. ಈ ರೀತಿಯ ಕೆಟ್ಟ ರಾಜಕಾರಣ ಮಾಡಬೇಡಿ. ಸಿದ್ದರಾಮಯ್ಯ ಈ ಘಟನೆಯನ್ನು ಕೋಮು ಗಲಭೆ ಎನ್ನುತ್ತಾರೆ. ಕೋಮು ಗಲಭೆ ಅಂದರೆ ಏನು ಅಂತಾ ಸಿದ್ಧರಾಮಯ್ಯರಿಗೆ ಗೊತ್ತಿಲ್ವಾ. ಹಿಂದೂ ಸಂಘಟನೆ ವ್ಯಕ್ತಿಗಳು ಈ ರೀತಿ ಮಾಡಿದ್ದರೆ, ಆಗಲೂ ಈ ಹೇಳಿಕೆ ಕೊಡುತ್ತಿದ್ದರಾ ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನು ಓದಿ: ಡಿಜೆ ಹಳ್ಳಿ ಗಲಭೆ: ‘ಮಾಜಿ ಮೇಯರ್ ಸಂಪತ್ ರಾಜ್ ಕೈವಾಡ ಇಲ್ಲ‘ - ಜಮೀರ್ ಅಹಮದ್ ಸ್ಪಷ್ಟನೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ