ರಸ್ತೆ ಸಂಪರ್ಕದಿಂದ ಎಲ್ಲ ಸಮಸ್ಯೆ ನಿವಾರಣೆ ಎಂದುಕೊಂಡ ಗ್ರಾಮಸ್ಥರು - ಗ್ರಾಮಕ್ಕೆ ಮುಳುವಾದ ರಸ್ತೆ ಅಭಿವೃದ್ದಿ ಕಾಮಗಾರಿ

ಇದೀಗ ಮಳೆಗಾಲ ಆರಂಭಗೊಂಡಿದ್ದು, ಅಗೆದ ರಸ್ತೆಯೆಲ್ಲಾ ಕೆಸರಾಗಿದೆ ರಸ್ತೆಯಲ್ಲಿ ವಾಹನ ಸಂಚರಿಸುವುದು ಬಿಡಿ ಜನ ನಡೆದುಕೊಂಡು ಹೋಗಲಾರದಂತಹ ಸ್ಥಿತಿ ನಿರ್ಮಾಣಗೊಂಡಿದೆ

ಕೆಸರಾಗಿರುವ ರಸ್ತೆಯಲ್ಲಿ ಹೋಗುತ್ತಿರುವ ವಾಹನಗಳು

ಕೆಸರಾಗಿರುವ ರಸ್ತೆಯಲ್ಲಿ ಹೋಗುತ್ತಿರುವ ವಾಹನಗಳು

  • Share this:
ಪುತ್ತೂರು(ಜೂ.16): ರಸ್ತೆ ಸಂಪರ್ಕವೊಂದು ಸರಿಯಾಗಿದ್ದಲ್ಲಿ ಬಹುತೇಕ ಸಮಸ್ಯೆಗಳು ಬಗೆಹರಿದಂತೆ ಎನ್ನುವ ಭರವಸೆಯಲ್ಲಿದ್ದ ಗ್ರಾಮದ ಜನರಿಗೆ ರಸ್ತೆಯ ಅಭಿವೃದ್ಧಿ ಕಾಮಗಾರಿಯೇ ಕಂಟಕವಾಗಿ ಪರಿಣಮಿಸಿದೆ.

ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯ ದಿಂದ ಮಲೆಯಾಳ, ಐನಕಿದು, ಹರಿಹರ ಪಲ್ಲತ್ತಡ್ಕ ಸಂಪರ್ಕಿಸುವ ರಸ್ತೆಯ ಅವ್ಯವಸ್ಥೆಯಿಂದ ಕೂಡಿದ್ದು, ಈ ರಸ್ತೆಯ ಮಲೆಯಾಳ ಎಂಬಲ್ಲಿ ರಸ್ತೆಯು ಸಂಪೂರ್ಣ ಹದಗೆಟ್ಟಿದೆ. ಹಿನ್ನಲೆಯಲ್ಲಿ ಈ ರಸ್ತೆಯನ್ನು ಅಗೆದು ಕಾಂಕ್ರೀಟ್ ರಸ್ತೆ ನಿರ್ಮಿಸಲು ತೀರ್ಮಾನಿಸಲಾಗಿತ್ತು. ಈ ಸಂಬಂಧ ಜನವರಿ ತಿಂಗಳಿನಲ್ಲೇ 50 ಮೀಟರ್ ವ್ಯಾಪ್ತಿಯ ರಸ್ತೆಯನ್ನು ಅಗೆದು ಸಮತಟ್ಟುಗೊಳಿಸಿ , ಕಾಂಕ್ರೀಟ್ ಹಾಕುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು.

ರಸ್ತೆಯ ಅಕ್ಕಪಕ್ಕದ ಪ್ರದೇಶವನ್ನು ಸಮತಟ್ಟುಗೊಳಿಸಿ ಕಾಂಕ್ರೀಟ್ ರಸ್ತೆಯ ಕಾಮಗಾರಿ ಪೂರ್ಣಗೊಳ್ಳುವ ತನಕ ರಸ್ತೆಯ ಪಕ್ಕದಲ್ಲೇ  ಪರ್ಯಾಯ ರಸ್ತೆಯನ್ನೂ ನಿರ್ಮಿಸಲಾಗಿತ್ತು. ಕಾಮಗಾರಿಯನ್ನು ಕೈಗೆತ್ತಿಕೊಳ್ಳುವ ಮೊದಲೇ ರಸ್ತೆಯನ್ನು ಮಳೆಗಾಲದ ಮೊದಲು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಮನವಿಯನ್ನೂ ಮಾಡಿದ್ದರು. ಕಾಮಗಾರಿ ಆರಂಭಗೊಂಡು ಇನ್ನೇನು ಕಾಂಕ್ರೀಟ್ ಹಾಕುವ ಹಂತಕ್ಕೆ ತಲುಪಿದ ಸಮಯದಲ್ಲಿ ದೇಶದೆಲ್ಲೆಡೆ ಕೊರೋನಾ ಲಾಕ್ ಡೌನ್ ಘೋಷಣೆ ಮಾಡಲಾಗಿತ್ತು. ಇದರಿಂದಾಗಿ ರಸ್ತೆಯ ಕಾಮಗಾರಿ ಅರ್ಧಕ್ಕೆ ಮೊಟಕುಗೊಂಡಿದೆ.

ಇದೀಗ ಮಳೆಗಾಲ ಆರಂಭಗೊಂಡಿದ್ದು, ಅಗೆದ ರಸ್ತೆಯೆಲ್ಲಾ ಕೆಸರಾಗಿದೆ. ರಸ್ತೆಯಲ್ಲಿ ವಾಹನ ಸಂಚರಿಸುವುದು ಬಿಡಿ ಜನ ನಡೆದುಕೊಂಡು ಹೋಗಲಾರದಂತಹ ಸ್ಥಿತಿ ನಿರ್ಮಾಣಗೊಂಡಿದೆ. 50 ಮೀಟರ್ ವ್ಯಾಪ್ತಿಯಲ್ಲಿ ನಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟ ಕಾರಣ, ಈ ಭಾಗದಿಂದ ಕೇವಲ 100 ಮೀಟರ್ ನಷ್ಟು ದೂರ ಕ್ರಮಿಸಲು ಇಲ್ಲಿನ ಜನ ನಡುಗಲ್ಲು- ಹರಿಹರ- ಬಾಳುಗೋಡು ರಸ್ತೆಯ ಮೂಲಕ ಸುಮಾರು 15 ಕಿಲೋಮೀಟರ್ ಸುತ್ತುಬಳಸಿ ಪ್ರಯಾಣಿಸಬೇಕಾದ ಪರಿಸ್ಥಿತಿಯಿದೆ.

ಇದನ್ನೂ ಓದಿ : ಮಲೆನಾಡಿನಲ್ಲಿ ಮಳೆ ಚುರುಕು, ಆಗುಂಬೆ ಘಾಟಿಯಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ

ಸುಬ್ರಹ್ಮಣ್ಯ ಪೇಟೆಗೆ ತಮ್ಮ ಪ್ರತಿದಿನ ಕೆಲಸಕ್ಕಾಗಿ ಸುಮಾರು 400 ಕ್ಕೂ ಮಿಕ್ಕಿದ ಜನ ಇದೇ ರಸ್ತೆಯನ್ನು ಬಳಸಬೇಕಿದೆ. ಠಾಣಾ ಕೆಲಸಕ್ಕಾಗಿ ಐನಕಿದು ಪ್ರದೇಶಕ್ಕೆ ತೆರಳಿದ್ದ ಸುಬ್ರಹ್ಮಣ್ಯ ಪೋಲೀಸರಿಗೂ ಈ ರಸ್ತೆ ಕೈಕೊಟ್ಟಿದೆ. ಠಾಣೆಯ ಜೀಪ್ ಅರ್ಧ ದಾರಿಯನ್ನಷ್ಟೇ ತಲುಪಲು ಸಾಧ್ಯವಾಗಿದ್ದು, ಮುಂದೆ ಸಾಗಲಾರದೆ ಅರ್ಧದಲ್ಲೇ ಸಿಲುಕಿಕೊಂಡ ಘಟನೆಯೂ ಈ ರಸ್ತೆಯಲ್ಲಿ ನಡೆದಿದೆ‌. ಅಲ್ಲದೆ ದ್ವಿಚಕ್ರದ ಮೂಲಕ ರಸ್ತೆಯಲ್ಲಿ ಸಾಗುವ ಪ್ರಯತ್ನ ನಡೆಸಿದ ಸವಾರರು ಕೆಸರಿನಲ್ಲಿ ಜಾರಿ ಬಿದ್ದ ಘಟನೆಗಳು ಪ್ರತೀ ದಿನ ಈ ರಸ್ತೆಯಲ್ಲಿ ನಡೆಯುತ್ತಿದೆ.

ಕೇವಲ 50 ಕಿಲೋಮೀಟರ್ ರಸ್ತೆ ನಿರ್ಮಿಸಲು ನಿಧಾನಗತಿ ಅನುಸರಿಸಿದ ಪರಿಣಾಮ ಇದೀಗ ಈ ಭಾಗದ ಜನ ಅನುಭವಿಸುವಂತಾಗಿದೆ. ಇನ್ನು ಏನಿದ್ದರೂ ಮಳೆಗಾಲ ಮುಗಿದ ಬಳಿಕವೇ ಈ ರಸ್ತೆಯ ಕಾಮಾಗಾರಿಯನ್ನು ಕೈಗೆತ್ತಿಕೊಳ್ಳಬೇಕಾದ ಅನಿವಾರ್ಯತೆಯಲ್ಲೂ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರನದ್ದಾಗಿದ್ದು, ಅಲ್ಲಿಯ ತನಕ ಈ ಭಾಗದ ಜನತೆಗೆ ಸುತ್ತುಬಳಸಿ ಪ್ರಯಾಣಿಸಬೇಕಾದ ದೌರ್ಭಾಗ್ಯದಲ್ಲಿದ್ದಾರೆ.
First published: