ಹಾವೇರಿಯಲ್ಲೊಂದು ಮನಕಲಕುವ ಘಟನೆ; ಹಬ್ಬಕ್ಕೆಂದು ಊರಿಗೆ ಬಂದಿದ್ದ ಇಬ್ಬರು ಯುವತಿಯರು ತುಂಗೆಯ ಪಾಲು
ವರ ಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಮಾವನ ಮನೆಗೆ ಬಂದಿದ್ದ ಯುವತಿಯರು ತನ್ನ ಮಾವನ ಜೊತೆ ಕಾರು ತೊಳೆಯಲೆಂದು ಮನೆಯಿಂದ ಕೂಗಳತೆ ದೂರದಲ್ಲಿರೋ ತುಂಗ ಭದ್ರಾ ನದಿಗೆ ತೆರಳಿದ್ದಾರೆ. ಸೋದರ ಸಂಬಂಧಿಗಳಾದ ಕೀರ್ತಿ ಹಾಗೂ ಅಭಿಲಾಷಾ ಮಾವ ಕಾರು ತೊಳೆಯುವ ಸಂದರ್ಭದಲ್ಲಿ ನೀರಿನಲ್ಲಿ ಆಟವಾಡುತ್ತಾ ತುಂಬಿದ ನದಿಗೆ ಜಾರಿದ ಪರಿಣಾಮ ಇಬ್ಬರು ಯುವತಿಯರ ಪ್ರಾಣ ಪಕ್ಷಿ ಹಾರಿ ಹೋಗಿದೆ.
ಹಾವೇರಿ (ಆಗಸ್ಟ್ 02); ತಾನೊಂದು ಬಗೆದರೇ ದೈವವೊಂದು ಬಗೆಯಿತು ಎಂಬಂತೆ ವರಮಹಾಲಕ್ಷ್ಮಿ ಹಬ್ಬಕ್ಕೆಂದು ತಾಯಿಯ ತವರು ಮನೆಗೆ ಬಂದಿದ್ದ ಯುವತಿಯರಿಬ್ಬರೂ ಮಸಣ ಸೇರಿದ್ದಾರೆ. ನೂರಾರು ಕನಸ್ಸನ್ನ ಹೊತ್ತಿದ್ದ ಯುವತಿಯರ ಕನಸೇ ಇಂದು ನೀರು ಪಾಲಾಗಿದೆ. ಕಾರು ತೊಳೆಯಲೆಂದು ಮಾವನ ಜೊತೆಗೆ ತುಂಗಭದ್ರ ನದಿಗೆ ತೆರಳಿದ್ದ ಯುವತಿಯರನ್ನು ಜವರಾಯ ಬಿಗಿದಪ್ಪಿಕೊಂಡಿದ್ದಾನೆ. ಯುವತಿಯರ ಕನಸುಗಳು ತುಂಗಭದ್ರಾ ನದಿಯಲ್ಲಿ ಕಮರಿ ಹೋಗಿವೆ.
ಹೌದು ಹಾವೇರಿ ಜಿಲ್ಲೆ ರಾಣೇಬೆನ್ನೂರಿನಲ್ಲಿಂದು ಮನಕಲುಕುವ ಘಟನೆಯೊಂದು ನಡೆದಿದೆ. ಹಬ್ಬಕ್ಕೆಂದು ಊರಿಗೆ ಬಂದಿದ್ದ ಇಬ್ಬರು ಯುವತಿಯರು ತುಂಗೆಯ ಪಾಲಾಗಿದ್ದಾರೆ. ಹಿರೆಕೇರೂರು ತಾಲೂಕಿನ ಅಬಲೂರು ಗ್ರಾಮದ 17 ವರ್ಷದ ಕೀರ್ತಿ ನಿಜಲಿಂಗಪ್ಪ ಇಂಗಳಗೊಂದಿ ಹಾಗೂ ಬ್ಯಾಡಗಿ ತಾಲೂಕಿನ ಕಾಟೇನಹಳ್ಳಿ ಗ್ರಾಮದ 19 ವರ್ಷದ ಅಭಿಲಾಷ ಚಂದ್ರಪ್ಪ ಹಲಗೇರಿ ಸಾವನ್ನಪ್ಪಿದ್ದಾರೆ.
ವರ ಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಮಾವನ ಮನೆಗೆ ಬಂದಿದ್ದ ಯುವತಿಯರು ತನ್ನ ಮಾವನ ಜೊತೆ ಕಾರು ತೊಳೆಯಲೆಂದು ಮನೆಯಿಂದ ಕೂಗಳತೆ ದೂರದಲ್ಲಿರೋ ತುಂಗ ಭದ್ರಾ ನದಿಗೆ ತೆರಳಿದ್ದಾರೆ. ಸೋದರ ಸಂಬಂಧಿಗಳಾದ ಕೀರ್ತಿ ಹಾಗೂ ಅಭಿಲಾಷಾ ಮಾವ ಕಾರು ತೊಳೆಯುವ ಸಂದರ್ಭದಲ್ಲಿ ನೀರಿನಲ್ಲಿ ಆಟವಾಡುತ್ತಾ ತುಂಬಿದ ನದಿಗೆ ಜಾರಿದ ಪರಿಣಾಮ ಇಬ್ಬರು ಯುವತಿಯರ ಪ್ರಾಣ ಪಕ್ಷಿ ಹಾರಿ ಹೋಗಿದೆ.
ಇಬ್ಬರು ಸೊಸೆಯಂದಿರು ನೀರಿನ ರಭಸಕ್ಕೆ ಕೊಚ್ಚಿ ಹೋಗುವುದನ್ನು ಕೊಂಚ ದೂರದಲ್ಲಿದ್ದ ಮಾವ ನೋಡಿ ಗಾಬರಿಯಿಂದ ನೀರಿಗೆ ಜಿಗಿದು ಇಬ್ಬರು ಯುವತಿಯರನ್ನು ಕಾಪಾಡಲು ಹೋಗಿ ಆತನೂ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ನಂತರ ದಡದಲ್ಲಿದ್ದ ಕೆಲವು ಸ್ಥಳೀಯರ ಸಹಾಯದಿಂದ ನೀರಿಗಿಳಿದು ಆತನನ್ನು ಕಾಪಾಡಿ, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇನ್ನೂ ರಭಸವಾಗಿ ಹರಿಯುತ್ತಿರುವ ನದಿಗೆ ಸಿಲುಕಿರುವ ಯುವತಿಯರ ಪೈಕಿ ಅಭಿಲಾಷಾ ಮೃತದೇಹ ನಿನ್ನೆ ರಾತ್ರಿಯೇ ಸಿಕ್ಕಿದ್ದು ಇಂದು ಬೆಳಗ್ಗೆ ಕೀರ್ತಿಯ ಮೃತದೇಹ ಪತ್ತೆಯಾಗಿದೆ.
ಒಟ್ನಲ್ಲಿ ಜೀವನದಲ್ಲಿ ನೂರಾರು ಕನಸು ಕಟ್ಟಿಕೊಂಡಿದ್ದ ಇಬ್ಬರು ಯುವತಿಯರ ಕನಸು ನೀರುಪಾಲಾಗಿದೆ. ಹಬ್ಬಕ್ಕೆ ಮಾವನ ಮನೆಗೆ ಬಂದಿದ್ದ ಯುವತಿಯರು ಮಸಣ ಸೇರಿದ್ದಾರೆ. ಇನ್ನು ಬಾಳಿ ಬದುಕಬೇಕಿದ್ದ ಯುವತಿಯರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತಂತೆ ರಾಣೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ