Students Letter: ‘ನಿಮ್ಮ ಮಗಳೆಂದು ಭಾವಿಸಿ ಶೌಚಾಲಯ ಕಟ್ಟಿಸಿಕೊಡಿ’ ಸಿಎಂಗೆ ಪತ್ರ ಬರೆದ ವಿದ್ಯಾರ್ಥಿನಿಯರು

ರಾಜ್ಯದಲ್ಲಿ ಹೆಣ್ಣುಮಕ್ಕಳು ಶಾಲೆ ಬಿಡಲು ಇರುವ  ಕಾರಣಗಳ ಪೈಕಿ ಶೌಚಾಲಯ ವ್ಯವಸ್ಥೆ ಸರಿಯಾಗಿ ಇಲ್ಲದಿರುವುದು ಸಹ ಒಂದಾಗಿದೆ. ನಾನು ಶಾಲೆ ಬಿಡಲು ಶೌಚಾಲಯವೇ  ಕಾರಣ" ವಿದ್ಯಾರ್ಥಿನಿ ಮುಖ್ಯ ಮಂತ್ರಿಗಳಿಗೆ ಬರೆದಿದ್ದಾರೆ.

ಶೌಚಾಲಯಕ್ಕಾಗಿ ಪತ್ರ

ಶೌಚಾಲಯಕ್ಕಾಗಿ ಪತ್ರ

  • Share this:
ಚಾಮರಾಜನಗರ (ಫೆ.25): ಸರ್ಕಾರಿ ಪ್ರೌಢಶಾಲೆಯಲ್ಲಿ (Government high school)  132 ಮಕ್ಕಳಿದ್ದಾರೆ. ಆದರೆ ಶಾಲೆಯಲ್ಲಿ ಗಂಡು ಹಾಗೂ ಹೆಣ್ಣು ಮಕ್ಕಳಿಗೆ ಕೇವಲ ಎರಡು ಶೌಚಾಲಯ (toilet) ಮಾತ್ರ ಇವೆ.  ಸಮರ್ಪಕ ವ್ಯವಸ್ಥೆ ಇಲ್ಲದ ಕಾರಣ ಶೌಚಾಲಯಕ್ಕಾಗಿ ಗಂಡು ಮಕ್ಕಳು ಬಯಲಿಗೆ ಹೋದರೆ ಹೆಣ್ಣುಮಕ್ಕಳು ಇರುವ ಒಂದೇ ಶೌಚಾಲಯದ ಮುಂದೆ ಸರದಿ ಸಾಲಿನಲ್ಲಿ ನಿಲ್ಲಬೇಕು. ಇಂತಹ ದುಸ್ಥಿತಿ ಇರುವುದು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ (Gundlupete) ತಾಲೂಕಿನ ಅಣ್ಣೂರುಕೇರಿ ಸರ್ಕಾರಿ ಪ್ರೌಢಶಾಲೆಯಲ್ಲಿ. ಬಹಿರ್ದೆಸೆಗೆ ಸರಿಯಾದ ವ್ಯವಸ್ಥೆ ಇಲ್ಲದೆ ಬೇಸತ್ತ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಶೌಚಾಲಯ ಕಟ್ಟಿಸಿಕೊಡುವಂತೆ ರಾಜ್ಯದ ಮುಖ್ಯಮಂತ್ರಿಗಳ (Chief Minister) ಮೊರೆ ಹೋಗಿದ್ದಾರೆ.  ತಮ್ಮ ಶಾಲೆಯಲ್ಲಿ ಶೌಚಾಲಯ ಇಲ್ಲದೆ ತಾವು ಅನುಭವಿಸುತ್ತಿರುವ ಮುಜುಗರದ ಬಗ್ಗೆಯೂ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಅಲವತ್ತು ತೋಡಿಕೊಂಡಿದ್ದಾರೆ. 

ಶೌಚಾಲಯವಿಲ್ಲದೆ ವಿದ್ಯಾರ್ಥಿನಿಯರ ಪರದಾಟ

‘ನಮ್ಮ ಶಾಲೆಯಲ್ಲಿ ಒಟ್ಟು 132 ವಿದ್ಯಾರ್ಥಿಗಳಿದ್ದೇವೆ,  ನಮಗೆ ಒಂದು ಶೌಚಾಲಯ ಇದೆ. ವಿರಾಮದ ವೇಳೆಯಲ್ಲಿ ನಾವು ಶೌಚಾಲಯಕ್ಕೆ ಹೋಗಲು ಸರದಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಇದೆ ( ಕನಿಷ್ಟ 30 ನಿಮಿಷ) ಇದು ನನಗೆ ತುಂಬಾ ಮುಜುಗರವನ್ನು ಉಂಟುಮಾಡುತ್ತಿದೆ. ದಯಾಮಯಿಗಳಾದ ತಾವು ನನ್ನನ್ನು ನಿಮ್ಮ ಮಗಳೆಂದು ಭಾವಿಸಿ ಒಂದು ಶೌಚಾಲಯ ಕಟ್ಟಿಸಿಕೊಡುವಂತೆ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ (ಈ ಶೌಚಾಲಯ ಕಟ್ಟಿಸಲು ನಾನು ಕೂಡಿಟ್ಟ ಹಣ 25 ರೂಪಾಯಿಗಳನ್ನು ಕೊಡಲು ಸಿದ್ದಳಿದ್ದೇನೆ) ಎಲ್ಲಿದೆ ಬಯಲು ಶೌಚಮುಕ್ತ ಭಾರತ, ನಾನು ಶಾಲೆ ಬಿಡಲು ಶೌಚಾಲಯ ಇಲ್ಲದಿರುವುದೇ ಕಾರಣ"

ಇದನ್ನೂ ಓದಿ: Hijab ವಿವಾದ ಬಗೆಹರಿಯುವ ಮುನ್ನವೇ ಖಾಸಗಿ ಶಾಲೆಗಳಿಂದ ಪೋಷಕರಿಗೆ ಡ್ರೆಸ್ ಕೋಡ್

9ನೇ ತರಗತಿ ವಿದ್ಯಾರ್ಥಿನಿಯಿಂದ ಪತ್ರ

ಹೀಗೆ 9 ನೇ ತರಗತಿಯ ಒಬ್ಬ ವಿದ್ಯಾರ್ಥಿನಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾಳೆ. ಇದೇ ರೀತಿ ಉಳಿದ ವಿದ್ಯಾರ್ಥಿಗಳು ಸಹ ಮುಖ್ಯಮಂತ್ರಿಗಳಿಗೆ, ಶಿಕ್ಷಣ ಸಚಿವರಿಗೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಪತ್ರ ಬರೆದು ಶೌಚಾಲಯ ಕಟ್ಟಿಸಿಕೊಡುವಂತೆ ಮನವಿ ಮಾಡಿದ್ದಾರೆ‌. ಶೌಚಾಲಯ ನಿರ್ಮಾಣಕ್ಕೆ ತಾವು ಕೂಡಿಟ್ಟಿರುವ 10 ರಿಂದ 50 ರೂಗಳವರೆಗೆ  ಹಣ ನೀಡುವುದಾಗಿಯು ವಿದ್ಯಾರ್ಥಿಗಳು ತಿಳಿಸಿದ್ದಾರೆ

ಜಿಲ್ಲಾ ಪಂಚಾಯತ್  ಸಿಇಒ ಭೇಟಿ

ಆದರೆ ಮುಖ್ಯಮಂತ್ರಿಗಳಿಂದ ಈ ಬಗ್ಗೆ ಯಾವುದೇ  ರೀತಿಯ ಉತ್ತರವಾಗಲಿ ಪ್ರತಿಕ್ರಿಯೆಯಾಗಲಿ ವ್ಯಕ್ತವಾಗಿಲ್ಲ. ಜಿಲ್ಲಾ ಪಂಚಾಯತ್  ಸಿಇಒ ಅವರಿಗೂ ವಿದ್ಯಾರ್ಥಿಗಳು ಪತ್ರ ಬರೆದಿರುವುದರಿಂದ  ಸಿಇಒ ಕೆ.ಎಂ ಗಾಯತ್ರಿ ಅವರು ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ,  ನರೇಗಾ  ಒಗ್ಗೂಡುವಿಕೆಯಿಂದ ಈ ಪ್ರೌಢಶಾಲೆಯಲ್ಲಿ ಅಗತ್ಯ ಪ್ರಮಾಣದ ಶೌಚಾಲಯ ನಿರ್ಮಿಸಲು ಭರವಸೆ ನೀಡಿದ್ದಾರೆ ಎಂದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಎನ್ ಮಂಜುನಾಥ್ ನ್ಯೂಸ್ 18 ಗೆ ಪ್ರತಿಕ್ರಿಯಿಸಿದ್ದಾರೆ

ಸ್ಥಳೀಯ ಶಾಸಕರು ದತ್ತು ತೆಗೆದುಕೊಂಡಿರುವ ಶಾಲೆ

ವಿಪರ್ಯಾಸವೆಂದರೆ ಇದು ಸ್ಥಳೀಯ ಶಾಸಕರು ದತ್ತು ತೆಗೆದುಕೊಂಡಿರುವ ಶಾಲೆ. ಈ ಶಾಲೆಯಲ್ಲಿ ಶೌಚಾಲಯ ಸಮಸ್ಯೆ ಇರುವುದು ತಮ್ಮ ಗಮನಕ್ಕೆ ಬಂದಿಲ್ಲ,  ಜಿಲ್ಲಾ ಪಂಚಾಯತ್ ಸಿಇಒ ಹಾಗೂ ಡಿಡಿಪಿಐ ಅವರೊಡನೆ ಮಾತನಾಡಿ  ಐದು ಶೌಚಾಲಯ ನಿರ್ಮಾಣಕ್ಕೆ ಕೂಡಲೇ ಕ್ರಮ ವಹಿಸುವುದಾಗಿ ಶಾಸಕ ಸಿ.ಎಸ್.ನಿರಂಜನ ಕುಮಾರ್ ತಿಳಿಸಿದ್ದಾರೆ‌, ಇದಲ್ಲದೆ ಗುಂಡ್ಲುಪೇಟೆ ತಾಲೂಕಿನಲ್ಲಿರುವ ಎಲ್ಲಾ ಶಾಲೆಗಳ ಮಾಹಿತಿ ತರಿಸಿಕೊಂಡು ಅಗತ್ಯ ಇರುವ ಕಡೆ ಶೌಚಾಲಯ ನಿರ್ಮಾಣ ಮಾಡಲು ಸೂಚನೆ ನೀಡುವುದಾಗಿ  ಅವರು ತಿಳಿಸಿದ್ದಾರೆ

ಇದನ್ನೂ ಓದಿ: Teachers Recruitment: ರಾಜ್ಯದಲ್ಲಿ 15 ಸಾವಿರ ಶಿಕ್ಷಕರ ನೇಮಕಕ್ಕೆ ಸಿದ್ಧತೆ, ತೃತೀಯಲಿಂಗಿಗಳಿಗೂ ಅವಕಾಶ

ಶೌಚಾಲಯವಿಲ್ಲದೇ ಶಾಲೆ ಬಿಡ್ತಿದ್ದಾರೆ ಮಕ್ಕಳು

ರಾಜ್ಯದಲ್ಲಿ ಹೆಣ್ಣುಮಕ್ಕಳು ಶಾಲೆ ಬಿಡಲು ಇರುವ  ಕಾರಣಗಳ ಪೈಕಿ ಶೌಚಾಲಯ ವ್ಯವಸ್ಥೆ ಸರಿಯಾಗಿ ಇಲ್ಲದಿರುವುದು ಸಹ ಒಂದಾಗಿದೆ ಎಂಬುದು ಈಗಾಗಲೇ  ಸಮೀಕ್ಷೆಗಳಿಂದ ತಿಳಿದಿದೆ.  ನಾನು ಶಾಲೆ ಬಿಡಲು ಶೌಚಾಲಯವೇ  ಕಾರಣ ಎಂದು ಅಣ್ಣೂರು ಕೇರಿ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿಯು ಸಹ  ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ನೇರವಾಗಿಯೇ ತಿಳಿಸಿದ್ದಾಳೆ.  ಶಾಲೆಯಲ್ಲಿ ಶೌಚಾಲಯ ಇಲ್ಲ ಎಂಬ  ಕಾರಣಕ್ಕಾಗಿ ಹೆಣ್ಣು ಮಕ್ಕಳು ಶಾಲೆ ಬಿಡುವುದು ಮಾತ್ರ  ಆಡಳಿತ  ವ್ಯವಸ್ಥೆಯನ್ನೇ ಅಣಕಿಸುವಂತಿದ್ದು ಗಂಭೀರವಾಗಿ ಆಲೋಚಿಸಬೇಕಿದೆ.
Published by:Pavana HS
First published: