ಹಾಸನಾಂಬೆ ದೇವಿ ದರ್ಶನಕ್ಕೆ ಸಾರ್ವಜನಿಕರಿಗಿಲ್ಲ ಅವಕಾಶ : ಜನಪ್ರತಿನಿಧಿಗಳ ಇಬ್ಬಗೆಯ ನೀತಿಗೆ ಸಾರ್ವಜನಿಕರ ಆಕ್ರೋಶ

ನವೆಂಬರ್ 5 ರಿಂದ 16 ರವರೆಗೆ ಹಾಸನಾಂಬೆ ದೇವಾಲಯದ ಬಾಗಿಲು ತೆರೆಯಲಾಗುತ್ತೆ. ಆದರೆ, ಈ ವರ್ಷ ಕೊರೋನಾ ಕಾರಣದಿಂದ ದೇವಾಲಯಕ್ಕೆ ಸಾರ್ವಜನಿಕ ಪ್ರವೇಶ ಸಂಪೂರ್ಣ ನಿಷೇಧಿಸಲಾಗಿದೆ

ಹಾಸನಾಂಬೆ

ಹಾಸನಾಂಬೆ

  • Share this:
ಹಾಸನ (ಅಕ್ಟೋಬರ್​. 13): ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನಾಂಬೆ ದೇವಿಯ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆಯುತ್ತಿದ್ದರು. ಆದರೆ, ಕೊರೋನಾದಿಂದಾಗಿ ಈ ವರ್ಷ ಹಾಸನಾಂಬೆ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡಿಲ್ಲ.‌ ಆದರೆ, ಈ ವಿಷಯದಲ್ಲಿ ಜನ ಪ್ರತಿನಿಧಿಗಳ ಇಬ್ಬಗೆ ನೀತಿ ಹಾಸನ ಜನರ ಕೋಪಕ್ಕೆ ಕಾರಣವಾಗಿದೆ. ಹಾಸನ ನಗರದ ಹೊಸ ಲೈನ್ ರಸ್ತೆಯಲ್ಲಿರುವ ಹಾಸನಾಂಬ ದೇವಾಲಯದ ಬಾಗಿಲನ್ನು ವರ್ಷಕ್ಕೊಮ್ಮೆ ಮಾತ್ರ ತೆರೆಯುತ್ತದೆ. ಆ ವೇಳೆ ಭಕ್ತಾದಿಗಳ ದರ್ಶನಕ್ಕೆ ಅವಕಾಶ ಮಾಡಿಕೊಡುವುದು ಬಹಳ ಹಿಂದಿನಿಂದಲೂ ನಡೆದು ಬಂದ ಪದ್ದತಿ.‌ ಹಲವು ಪವಾಡಗಳಿಗೆ ಪ್ರಸಿದ್ದಿಯಾದ ಹಾಸನನಾಂಬೆ ದೇವಿಯ ದರ್ಶನವನ್ನ ಪಡೆದರೆ ಇಷ್ಟಾರ್ಥ ಸಿದ್ದಿಸುತ್ತೆ ಎಂಬುದು ಭಕ್ತರ ನಂಬಿಕೆ. ಹೀಗಾಗಿ ವರ್ಷಕ್ಕೊಮ್ಮೆ ಹಾಸನಾಂಬೆ ದೇವಸ್ಥಾನದ ಬಾಗಿಲು ತೆರೆದಾಗ ಲಕ್ಷಾಂತರ ಜನ ದೇವಾಲಯಕ್ಕೆ ಆಗಮಿಸಿ, ಕಿಲೋ ಮಿಟರ್‌ಗಟ್ಟಲೆ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದು ಕೃತಾರ್ಥರಾಗುತ್ತಿದ್ದರು.

ಈ ವರ್ಷವೂ ಕೂಡ ನವೆಂಬರ್ 5 ರಿಂದ 16 ರವರೆಗೆ ಹಾಸನಾಂಬೆ ದೇವಾಲಯದ ಬಾಗಿಲು ತೆರೆಯಲಾಗುತ್ತೆ. ಆದರೆ, ಈ ವರ್ಷ ಕೊರೋನಾ ಕಾರಣದಿಂದ ದೇವಾಲಯಕ್ಕೆ ಸಾರ್ವಜನಿಕ ಪ್ರವೇಶ ಸಂಪೂರ್ಣ ನಿಷೇಧಿಸಲಾಗಿದೆ.

ಹಾಸನದ ಸುಮಾರು 12 ಕಡೆ ಎಲ್‌ಇಡಿ ಪರದೆ ಹಾಕಿ, ನೇರ ಪ್ರಸಾರದ ಮೂಲಕ ಭಕ್ತರು ಹಾಸನಾಂಬ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿದೆ. ಮೊದಲ ದಿನ ಬಾಗಿಲು ತೆಗೆಯುವ ವೇಳೆ ಉದ್ಘಾಟನೆಗೆ ಬರುವಂತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಕರೆಯುತ್ತೇವೆ. ಮೊದಲ ಹಾಗೂ ಕೊನೆಯ ದಿನ ಆಹ್ವಾನಿತರಿಗೆ ಮಾತ್ರ ನೇರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಮಾಹಿತಿ ನೀಡಿದ್ದಾರೆ.

ಆದರೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಇಬ್ಬಗೆ ನೀತಿ ಹಾಸನ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಹಾಸನಾಂಬೆ ದೇವಾಲಯದ ಬಾಗಿಲು ತೆರೆದ ಮೊದಲನೇ ಮತ್ತು ಕೊನೆಯ ದಿನ ಆಹ್ವಾನಿತ ಗಣ್ಯರಿಗೆ ಹಾಸನಾಂಬೆ ನೇರ ದರ್ಶನಕ್ಕೆ ಅವಕಾಶ ಎನ್ನುತ್ತಿದ್ದಾರೆ ಇದು ಎಷ್ಟರ ಮಟ್ಟಿಗೆ ಸರಿ.

ಇದನ್ನೂ ಓದಿ : ಸಿಎಂ ತವರು ಶಿವಮೊಗ್ಗ ನಗರದಲ್ಲಿ ಗುಂಡಿ ಬಿದ್ದ ರಸ್ತೆಗಳು ; ವಾಹನ ಸವಾರರ ಪರದಾಟ

ತಮಗೆ ಬೇಕಾದ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ, ಶ್ರೀಮಂತರಿಗೆ ಇವರು ದರ್ಶನ ಭಾಗ್ಯ ಕೊಡಲು ಆಹ್ವಾನಿತರಿಗಷ್ಟೇ ನೇರ ದರ್ಶನಕ್ಕೆ ಅವಕಾಶ ಅಂತಿದ್ದಾರೆ. ಹಾಗಾದ್ರೆ ಅವರಿಂದ ಯಾರಿಗೂ ಕೊರೋನಾ ಹರಡುವುದಿಲ್ಲವೇ. ಈ ದೇಶಕ್ಕೆ ಕೊರೋನಾ ಹರಡಿದ್ದೆ ವಿಐಪಿಗಳಿಂದ. ಈಗ ಆ ವಿಐಪಿಗಳು ಇಲ್ಲಿಗೆ ಬಂದು ಕೊರೋನಾ ಹರಡುವುದು ಬೇಡ. ಸಾಮಾನ್ಯ ಭಕ್ತರಿಗೆ ನೇರ ದರ್ಶನ ವ್ಯವಸ್ಥೆ ಇಲ್ಲ ಎಂದ ಮೇಲೆ ಯಾರಿಗೂ ನೇರ ದರ್ಶನದ ವ್ಯವಸ್ಥೆ ಕಲ್ಪಿಸದೆ, ಎಲ್ಲರಿಗೂ ಒಂದೇ ಕಾನೂನು ಪಾಲಿಸಲಿ. ದೇವರ ದರ್ಶನ ವಿಷ್ಯವಾಗಿ ತಾರತಮ್ಯ ಮಾಡಬೇಡಿ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.

ಒಟ್ಟಾರೆ ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನಾಂಬೆ ದೇವರ ದರ್ಶನದ ವಿಷಯವಾಗಿ ರಾಜಕಾರಣಿಗಳು, ಅಧಿಕಾರಿಗಳು ತೆಗೆದುಕೊಂಡ ಇಬ್ಬಗೆ ನೀತಿ ಹಾಸನದ ಸಾಮಾನ್ಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.  ಜನಸಾಮಾನ್ಯರ ಆಕ್ರೋಶಕ್ಕೆ ಮಣಿದು, ಆಹ್ವಾನಿತರಿಗಷ್ಟೇ ಹಾಸನಾಂಬೆ ನೇರ ದರ್ಶನಕ್ಕೆ ಅವಕಾಶ ಎಂಬ ನಿಯಮವನ್ನು ಜಿಲ್ಲಾಡಳಿತ ತೆಗೆದು ಹಾಕಿ, ಎಲ್ಲರಿಗೂ ಒಂದೇ ನಿಯಮ‌ ಎಂಬ ತೀರ್ಮಾನಕ್ಕೆ ಬರುತ್ತಾ ಕಾದು ನೋಡಬೇಕಿದೆ.
Published by:G Hareeshkumar
First published: