ಬಾಗಲಕೋಟೆ: ನಾನು ಈಗಾಗಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದವನು, ಬರುವ ದಿನಗಳಲ್ಲಿ ಯಾವುದೇ ಸ್ಥಾನಮಾನ ಅಪೇಕ್ಷೆ ಪಡಿಯದೆ ರಾಜ್ಯದ ಉದ್ದಗಲಕ್ಕೂ ಪಕ್ಷವನ್ನು ಬಲಪಡಿಸಲು ಓಡಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ (Former CM BS Yediyurappa) ಹೇಳಿದ್ದಾರೆ. ವಿಧಾನ ಪರಿಷತ್ ಚುನಾವಣೆ ಹಿನ್ನಲೆ ಜನಸ್ವರಾಜ್ ಸಮಾವೇಶದ (Jana Swaraj Conference) ನೇತೃತ್ವ ವಹಿಸಿರುವ ಬಿಎಸ್ ಯಡಿಯೂರಪ್ಪ ಶನಿವಾರ ಬಾಗಲಕೋಟೆಯಲ್ಲಿ (Bhagalakote) ನಡೆಯುವ ಸಮಾವೇಶಕ್ಕೆ ಆಗಮಿಸಿದರು. ಸಮಾವೇಶಕ್ಕೂ ಮುನ್ನ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರವೂ ರಾಜ್ಯದ ಜನ ನನ್ನ ಮೇಲೆ ಅಷ್ಟೇ ಪ್ರೀತಿ, ವಿಶ್ವಾಸ ಇಟ್ಟಿದ್ದಾರೆ. ದಾರಿಯಲ್ಲಿ ಹೋಗುವ ಸಾಮಾನ್ಯ ಹೆಣ್ಣುಮಗಳು ಸಹ ನಮ್ಮ ಯಡಿಯೂರಪ್ಪ ಅಂತಾ ಹೇಳ್ತಾರೆ. ಅದಕ್ಕೆ ಯಾವುದೇ ಬೆಲೆ ಕಟ್ಟಲು ಸಾಧ್ಯವಿಲ್ಲ. ಇದರಿಂದ ನನಗೆ ಯಾವುದೇ ಸ್ಥಾನಮಾನದ ಅಗತ್ಯತೆ ಇಲ್ಲ ಎಂದರು.
ಮುಂದಿನ ಚುನಾವಣೆಗೆ ಹೈಕಮಾಂಡ್ ನಿರ್ಧಾರ..!
ಇನ್ನು ಇದೇ ವೇಳೆ ಮುಂದಿನ ಚುನಾವಣೆಯಲ್ಲಿ ತಾವು ಅಖಾಡದಲ್ಲಿ ಇರ್ತಿರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಮುಂದಿನ ಚುನಾವಣೆಗೆ ನಾನು ನಿಲ್ಲಬೇಕೋ, ಬೇಡವೋ ಅನ್ನೋದನ್ನ ಹೈಕಮಾಂಡ್ ತೀರ್ಮಾನ ಮಾಡುತ್ತದೆ, ನಾನಲ್ಲ ಎಂದರು. ಇದೇ ಸಮಯದಲ್ಲಿ ಬಿಜೆಪಿಗೆ ಯಡಿಯೂರಪ್ಪ ಅನಿವಾಯ೯ವೇ ಎಂಬ ಪ್ರಶ್ನೆ ವಿಚಾರವಾಗಿ ಮಾತನಾಡಿ, ನಾನೆಲ್ಲಿ ಹೋಗಿದ್ದೇನೆ? ಪಕ್ಷವನ್ನು ಕಟ್ಟುವ ಸಲುವಾಗಿ ರಾಜ್ಯಾದ್ಯಂತ ಓಡಾಡಿ ಕೆಲಸ ಮಾಡುತ್ತಿದ್ದೇನೆ. ಆ ಬಗ್ಗೆ ಎರಡು ಮಾತಿಲ್ಲ. ಅನಿವಾರ್ಯ ಅನ್ನುವ ಮಾತಿಲ್ಲ. ಸಾಮೂಹಿಕ ನೇತೃತ್ವದಲ್ಲಿ ನಾನು ಕೂಡ ಓಡಾಡಿ ಕೆಲಸ ಮಾಡುತ್ತೇನೆ. ನಾನು ಮನೆಗೆ ಹೋಗುವ ಪ್ರಶ್ನೆಯೇ ಇಲ್ಲ. ನಮ್ಮದು ಸ್ಪಷ್ಟವಾದ ಸಂಕಲ್ಪ ಏನಂದ್ರೆ ಮುಂದಿನ ಎಲೆಕ್ಷನ್ ನಲ್ಲಿ 140ಕ್ಕೂ ಸ್ಥಾನ ಗೆಲ್ಲೋದು. ಮತ್ತೊಮ್ಮೆ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರೋದು. ಆ ದಿಕ್ಕಿನಲ್ಲಿ ಈ ಚುನಾವಣೆ ಮುಗಿದ ಬಳಿಕ ಮತ್ತೆ ಪ್ರವಾಸ ಕೈಗೊಳ್ಳುತ್ತೇನೆ ಎಂದರು.
ಪ್ರಧಾನಿ ಬಗ್ಗೆ ಗೌರವ, ವಿಶ್ವಾಸ ಜಾಸ್ತಿಯಾಗಿದೆ; ಬಿಎಸ್ವೈ
ವಿವಾದಿತ 3 ಕೃಷಿ ಮಸೂದೆ ವಾಪಸ್ ಪಡೆದ ವಿಚಾರ ಮಾತನಾಡಿ, ಮೋದಿ ನಡೆಯನ್ನು ತಡವಾಗಿ ತೆಗೆದುಕೊಂಡ ನಿಧಾ೯ರ ಎಂದು ಸೂಚ್ಯವಾಗಿ ಒಪ್ಪಿಕೊಂಡು, ಯಾವುದೇ ಒಣ ಪ್ರತಿಷ್ಠೆಗೆ ಒಳಗಾಗದೇ ಮೋದಿಯವರು ಕೃಷಿ ಕಾಯ್ದೆ ವಾಪಸ್ ಪಡೆದಿದ್ದಾರೆ. ಸ್ವಲ್ಪ ತಡವಾದ್ರೂ ಸಹ ಈ ದೃಢ ನಿರ್ಧಾರ ರೈತ ಸಮೂಹಕ್ಕೆ ನೀಡ್ತಿರೋ ಒಂದು ಕೊಡುಗೆಯಾಗಿದೆ. ಇದ್ರಿಂದ ರೈತ ಸಮೂಹಕ್ಕೆ ಒಳ್ಳೆಯದಾಗುತ್ತೆ ಎಂಬುದು ಅವರ ಭಾವನೆ, ಪ್ರಧಾನಿ ಮೋದಿಯವರಿಗೆ ಅಭಿನಂದನೆ ಸಲ್ಲಿಸ್ತೇನೆ. ಯಾವುದೇ ಒಬ್ಬ ಪ್ರಧಾನಿ, ಈ ಕಾಯ್ದೆ ವಾಪಸ್ ಪಡೆಯೋದು ಸಾಧ್ಯವೇ ಇಲ್ಲ ಎಂದು ಹಿಂದೆ ಹೇಳಿದ್ರು, ರೈತರ ಹೋರಾಟ ನೋಡಿದ ಮೇಲೆ, ರೈತರ ಹಿತದೃಷ್ಟಿಯಿಂದ ಈ ತೀರ್ಮಾನ ತೆಗೆದುಕೊಂಡಿದ್ದಾರೆ. ದೇಶದಲ್ಲಿ ರೈತರಲ್ಲಿ ಪ್ರಧಾನಿ ಮೋದಿ ಅವರ ಬಗ್ಗೆ ಗೌರವ, ವಿಶ್ವಾಸ ಜಾಸ್ತಿಯಾಗಿದೆ ಎಂದು ಬಿಎಸ್ವೈ ಹೇಳಿದರು.
ಇದನ್ನು ಓದಿ: Drug Peddler: ರಾಜಧಾನಿಯಂತೆ ಡ್ರಗ್ಸ್ ಸೇವನೆಯಲ್ಲಿ ಐಟೆಕ್ ಆಯ್ತಾ ಮಂಡ್ಯ?; ಸಕ್ಕರೆನಾಡಿನಲ್ಲಿ ಇಬ್ಬರು ಡ್ರಗ್ ಪೆಡ್ಲರ್ಸ್ ಬಂಧನ
ಇನ್ನು ಸತ್ಯವನ್ನು ಒಪ್ಪಕೊಳ್ಳಬೇಕಲ್ಲ. ರೈತರು 11 ತಿಂಗಳು ಕಾಲ ಸತ್ಯಾಗ್ರಹ ಮಾಡಿಕೊಂಡು ಬಂದರು. ಈಗ ಪ್ರಧಾನಿ ಮೋದಿ ಅವರು ಈ ತೀರ್ಮಾನ ತಗೊಂಡಿದ್ದಾರೆ. ಸ್ವಲ್ಪ ತಡವಾಗಿದೆ ಎಂಬುದನ್ನ ಒಪ್ಪಿಕೊಂಡರು. ಸತ್ಯಾಂಶ ಒಪ್ಪಿಕೊಳ್ಳುವುದರಲ್ಲಿ ತಪ್ಪೇನಿದೆ. ಈಗ ರೈತರ ಹಿತದೃಷ್ಟಿಯಿಂದ ಮಸೂದೆ ವಾಪಸ್ ಪಡೆದಿರೋದು ಸ್ವಾಗತಾರ್ಹ ಎಂದು ಯಡಿಯೂರಪ್ಪ ಅವರು ಹೇಳಿದರು.
ವರದಿ: ಮಂಜುನಾಥ್ ತಳವಾರ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ