CoronaVirus: ಕೊರೋನಾ ಎರಡನೆ ಅಲೆಯ ಭೀತಿ ಮರೆತಿದ್ದಾರಾ ರಾಯಚೂರಿನ ಜನ?

ಕಳೆದ ಒಂದು ವರ್ಷದಿಂದ ತತ್ತರಿಸಿದ್ದ ರಾಯಚೂರು ಜಿಲ್ಲೆಯಲ್ಲಿ ಈಗ ಮತ್ತೆ ಕೊರೋನಾ ಅಬ್ಬರಿಸುವ ಲಕ್ಷಣವಿದೆ. ಇದಕ್ಕೆ ಕಾರಣ ಜಿಲ್ಲೆಯ ಜನತೆ ಕೊರೋನಾ ನಿಯಮ ಪಾಲನೆ ಮಾಡುತ್ತಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಾಯಚೂರು: ನಿಮಗ ಇನ್ನೂ ಜೀವ ಭಯ ಹೋಗಿಲ್ಲರೇನ್ರಿ, ಹೀಗೆಲ್ಲೇತ್ರಿ ಕೊರೋನಾ,  ಸುಮ್ನೆ ಇರಿ, ಎಂದು ಕೆಕ್ಕರಿಸಿ ನೋಡುವವರೆ ಹೆಚ್ಚು. ಇದು ಅಪರಿಚಿತರ ಮಾತು ಆಗಿದ್ದರೆ, ಪರಿಚಿತರಿಗೆ ಈ ಮಾತು ಹೇಳಿದರೆ "ಆಯ್ಯ ಇನ್ನ ಎಷ್ಟ್ ಜೀವ ಭಯ ಐತಿ ನೋಡು ನಿನಗ" ಎನ್ನುತ್ತಾರೆ. ಇದು ಇತ್ತೀಚಿಗೆ ರಾಯಚೂರು ಜಿಲ್ಲೆಯಲ್ಲಿ ಕೇಳಿ ಬರುತ್ತಿರುವ ಮಾತುಗಳು. ರಾಯಚೂರು ಜಿಲ್ಲೆಯ ಜನತೆ ಬಹುತೇಕ ಕೊರೋನಾವನ್ನು ಸಂಪೂರ್ಣವಾಗಿ ಮರೆತಂತೆ ವರ್ತಿಸುತ್ತಿದ್ದಾರೆ. ಇನ್ನೂ ಕೆಲವರಿಗೆ ಏ ಬಿಡ್ರಿ ಸರ್,  ನಮಗಾಗಲೇ ಕೊರೋನಾ ಬಂದು ಹೋಗೈತೇನೊ, ಅಲ್ಲದೆ ನಮ್ಮ ಬಿಸಿಲಿಗೆ, ನಾವು ವಗ್ಗರಣೆ ಮಿರ್ಚಿ ತಿಂತೀವಿ, ನಮಗೆ ಅದೇನೊ ಅಂತಾರಲ್ಲ ಹರ್ಡ್ ಇಮ್ಯಾನಿಟಿ ಬಂದೈತಿ ಎನ್ನುತ್ತಾರೆ. ಈ ಮಾತು ಈಗ ರಾಯಚೂರು ಜಿಲ್ಲೆ ಯಲ್ಲಿ ಅಕ್ಷರಶಃ ಕೇಳಿ ಬರುತ್ತಿವೆ. ಇವುಗಳ ಉದಾಹರಣೆಗಾಗಿ ಉಲ್ಲೇಖಿಸಿದ ಮಾತುಗಳು. ಎಲ್ಲರೂ ಕೊರೋನಾ ಎಂಬ ಮಹಾಮಾರಿ ಬಂದಿತ್ತು ಎಂಬುವದು ಈಗ ಸಂಪೂರ್ಣವಾಗಿ ಮರೆತು ಬಿಟ್ಟಿದ್ದಾರೆ.

ಕಳೆದ ಒಂದು ವರ್ಷದಿಂದ ತತ್ತರಿಸಿದ್ದ ರಾಯಚೂರು ಜಿಲ್ಲೆಯಲ್ಲಿ ಈಗ ಮತ್ತೆ ಕೊರೋನಾ ಅಬ್ಬರಿಸುವ ಲಕ್ಷಣವಿದೆ. ಇದಕ್ಕೆ ಕಾರಣ ಜಿಲ್ಲೆಯ ಜನತೆ ಕೊರೋನಾ ನಿಯಮ ಪಾಲನೆ ಮಾಡುತ್ತಿಲ್ಲ. ರಾಯಚೂರು ನಗರದ ಮಾರುಕಟ್ಟೆಗಳಲ್ಲಿ ಜನವೋ ಜನ, ಯಾರು ಮಾಸ್ಕ್ ಹಾಕಿಕೊಂಡಿರುವುದಿಲ್ಲ, ಇನ್ನೂ ಶಾರೀರಕ ಅಂತರವಂತೂ ಇಲ್ಲವೇ ಇಲ್ಲ, ಸ್ಯಾನಿಟೈಸರ್ ಬಳಕೆಯನ್ನು ಯಾವಾಗಲೋ ಮರೆತು ಬಿಟ್ಟಿದ್ದಾರೆ. ಒಂದೇ ಬೈಕ್ ನಲ್ಲಿ ಮೂರು ಮೂರು ಜನ ತಿರುಗಾಡುತ್ತಾರೆ. ಬಸ್ ಗಳಂತೂ ಫುಲ್, ಶಾಲಾ ಕಾಲೇಜುಗಳಲ್ಲಿಯೂ ಕೊವಿಡ್ ನಿಯಮಾವಳಿ ಪಾಲನೆಯಾಗುತ್ತಿಲ್ಲ.

ಈ ಎಲ್ಲವನ್ನು ನೋಡಿದರೆ ರಾಜ್ಯದಲ್ಲಿ ಅಬ್ಬರಿಸುತ್ತಿರುವ ಕೊರೋನಾ ಎರಡನೆಯ ಅಲೆ ಮತ್ತೆ ಅಪ್ಪಳಿಸುವುದರಲ್ಲಿ ಸಂಶಯವಿಲ್ಲ ಎನ್ನುತ್ತಾರೆ ತಜ್ಞರು. ರಾಜ್ಯದಲ್ಲಿ 2020 ಮಾರ್ಚ್ ತಿಂಗಳಿನಿಂದ ಕೊರೋನಾ ಅಬ್ಬರಿಸಿದ್ದರೆ ರಾಯಚೂರಿಗೆ ಕಾಲಿಟ್ಟಿದ್ದು ಮೇ 16ಕ್ಕೆ, ಮಹಾರಾಷ್ಟ್ರದಿಂದ ವಲಸಿಗರು ಬಂದ ನಂತರ ಆರಂಭವಾದ ಕೊರೋನಾ ಸೋಂಕಿತರ ಸಂಖ್ಯೆಯು ಇಲ್ಲಿಯವರೆಗೂ 14415 ಜನರಲ್ಲಿ ಕಾಣಿಸಿಕೊಂಡಿದೆ. ಇದರಲ್ಲಿ  14178 ಜನರು ಗುಣಮುಖರಾಗಿದ್ದಾರೆ. ನಿನ್ನೆಯವರೆಗೂ 79 ಜನರಲ್ಲಿ ಸಕ್ರಿಯ ಪ್ರಕರಣಗಳಿವೆ. ಅದರಲ್ಲಿ 11 ಜನರು ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: Assembly Election2021: ಚುನಾವಣೆಯಲ್ಲಿ ADMK ಧೂಳೀಪಟವಾಗಲಿದ್ದು, DMK 200ಕ್ಕೂ ಅಧಿಕ ಸ್ಥಾನ ಗೆಲ್ಲಲಿದೆ; ಸ್ಟಾಲಿನ್ ಭರವಸೆ

ಒಟ್ಟು 313321 ಜನರ ಗಂಟಲ ದ್ರವ ಪರೀಕ್ಷೆ ಮಾಡಲಾಗಿದ್ದು, ಅದರಲ್ಲಿ 295734 ನೆಗಟಿವ್ ವರದಿ ಬಂದಿದೆ. 158 ಜನರು ಸಾವನ್ನಪ್ಪಿದ್ದಾರೆ. ಈಗ ನಿತ್ಯ 1000ಕ್ಕಿಂತ ಅಧಿಕ ಪರೀಕ್ಷೆ ಮಾಡಲಾಗುತ್ತಿದೆ. ಈ ಮೊದಲು ಸಾವಿರಕ್ಕೆ ಒಂದು ಪ್ರಕರಣಗಳಿದ್ದರೆ, ಈಗ ನೂರಕ್ಕೊಂದು ಪ್ರಕರಣ ವರದಿಯಾಗುತ್ತಿದೆ. ಇದು ಜಿಲ್ಲೆಯಲ್ಲಿ ಮತ್ತೆ ಕೊರೋನಾ ಎರಡನೆಯ ಅಲೆ ಅಬ್ಬರಿಸುವ ಲಕ್ಷಣ ಕಂಡು ಬರುತ್ತಿದೆ.

ಸರಕಾರ ಸೂಚಿಸಿದ ಕೊವಿಡ್ ನಿಯಮ ಪಾಲನೆ ಮಾಡುವ ರಂತೆ ಕ್ರಮ ಕೈಗೊಳ್ಳಬೇಕಾದ ಜಿಲ್ಲಾಡಳಿತ ಕೇವಕ ಆದೇಶವನ್ನು ಕಾಗದದಲ್ಲಿ ಹೊರಡಿಸಿ ಕೈ ತೊಳೆದುಕೊಂಡಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಕೊರೊನಾ ಪಾಲನೆಗಿಲ್ಲ ಆದೇಶದ ಕಿಮ್ಮತ್ತು ಎನ್ನುದಂತಾಗಿದೆ. ಈ ಮಧ್ಯೆ ಈಗ ಜಾತ್ರೆಗಳಿವೆ, ಮಸ್ಕಿ ಬೈ ಎಲೆಕ್ಷನ್ ಇದೆ, ಈ ಎಲ್ಲಾ ಕಾರಣಕ್ಕೆ ಜಿಲ್ಲೆಯಲ್ಲಿ ಕೊರೊನಾ ಇನ್ನಷ್ಟು ಹೆಚ್ಚಳವಾಗಲಿದೆ, ಈ ಮುನ್ನ ಜನರು ಎಚ್ಚರದಿಂದ ಇರುವುದು ಸೂಕ್ತ.
Published by:MAshok Kumar
First published: