ಕಸದೂರು ಬಿಂಗೀಪುರಕ್ಕೆ ಕೈಕೊಟ್ಟ ಬಿಬಿಎಂಪಿ; ಭರವಸೆಯಾಗಿಯೇ ಉಳಿದ ಕಸಪೀಡಿತ ಹಳ್ಳಿಗಳು

ಎಲೆಕ್ಟ್ರಾನಿಕ್ ಸಿಟಿ ಸಮೀಪ ನೆಮ್ಮದಿಯಾಗಿದ್ದ ಬಿಂಗೀಪುರ ಮೂರ್ನಾಲ್ಕು ವರ್ಷದ ಹಿಂದೆ ಬೆಂಗಳೂರಿಗರ ಕಸದ ಡಂಪಿಂಗ್ ಯಾರ್ಡ್ ಆಗಿ ಹೋಗಿತ್ತು. ಜನರು ಪ್ರತಿಭಟಿಸಿದ ಬಳಿಕ ಡಂಪಿಂಗ್ ನಿಂತಿದಾದರೂ ಕಸದ ವಿಷಗಾಳಿ ಈಗಲೂ ಸುತ್ತಲಿನ ಗ್ರಾಮಗಳನ್ನ ಬಾಧಿಸುತ್ತಿದೆ.

ಬೆಂಗಳೂರು ಹೊರವಲಯದ ಬಿಂಗೀಪುರದಲ್ಲಿ ಗುಡ್ಡೆಯಾಗಿರುವ ಕಸದ ರಾಶಿ

ಬೆಂಗಳೂರು ಹೊರವಲಯದ ಬಿಂಗೀಪುರದಲ್ಲಿ ಗುಡ್ಡೆಯಾಗಿರುವ ಕಸದ ರಾಶಿ

  • Share this:
ಆನೇಕಲ್: ಬೆಟ್ಟದಂತೆ ಕಾಣುವ ಕಸದ ರಾಶಿ, ಕಸದ ರಾಶಿಯಿಂದ ಜಿನುಗುತ್ತಿರುವ ವಿಷಕಾರಕ ರಾಸಾಯನಿಕ. ಕಸದ ವಿಷದ ಕೂಪವಾಗಿರುವ ಕೆರೆ ಮತ್ತು ಸುತ್ತಮುತ್ತಲಿನ ವಾತವರಣ. ಈ ಎಲ್ಲಾ ದೃಶ್ಯಗಳು ಕಂಡುಬರುವುದು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಎಲೆಕ್ಟ್ರಾನಿಕ್ ಸಿಟಿ ಬಳಿಯಿರುವ ಬಿಂಗಿಪುರದಲ್ಲಿ.  ಅಭಿವೃದ್ಧಿ ಅಷ್ಟಾಗಿ ಇಲ್ಲದಿದ್ದರೂ ಅಲ್ಲಿನ ಹಳ್ಳಿಗಾಡಿನ ಜನ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಅದ್ಯಾವ ಗಳಿಗೆಯಲ್ಲಿ ಹಳ್ಳಿಗಾಡಿನ ಪ್ರದೇಶದ ಮೇಲೆ ಬಿಬಿಎಂಪಿ ಕಣ್ಣು ಬಿತ್ತೋ ಅಂದಿನಿಂದ ಕಾನನದಂತಿದ್ದ ಸುತ್ತಮುತ್ತಲಿನ ವಾತವರಣ ನಗರದ ಕಸದಿಂದ ತುಂಬಿ ಹೋಯ್ತು. ಹತ್ತಾರು ಹೋರಾಟಗಳು ನಡೆದ ಬಳಿಕ ಬಿಬಿಎಂಪಿಯ ಅಭಿವೃದ್ಧಿ ಮಾತುಗಳು ಇಂದಿಗೂ ಭರವಸೆಯಾಗಿಯೇ ಉಳಿದಿದ್ದು, ಜನ ಜಾನುವಾರುಗಳು ಕಸದ ಕಾಟಕ್ಕೆ ಇಂದಿಗೂ ನಲುಗುತ್ತಿದ್ದಾರೆ.

ಮೂರ್ನಾಲ್ಕು ವರ್ಷಗಳ ಹಿಂದೆ ಬಿಬಿಎಂಪಿ ಬೆಂಗಳೂರಿನ ಕಸಗಳನ್ನು ತಂದು ಬಿಂಗೀಪುರ ಊರಿನ ಡಂಪ್ಪಿಂಗ್ ಯಾರ್ಡ್ ನಲ್ಲಿ ಡಂಪ್ ಮಾಡ್ತಾಯಿದ್ರು.‌ ಸುತ್ತಮುತ್ತಲಿನ ಹಳ್ಳಿ ಜನರ ಹೋರಾಟದ ಫಲವಾಗಿ ಇತ್ತೀಚೆಗೆ ಅದು ನಿಂತಂತಿದೆ. ಆದ್ರೆ ಕಸದಿಂದ ಹೊರ ಬರುತ್ತಿರುವ ವಿಷಕಾರಕ ರಾಸಾಯನಿಕ ಮಾತ್ರ ಹರಿದು ಜಲಮೂಲಗಳನ್ನು ಸೇರುತ್ತಿದೆ. ಇದರಿಂದ ಇಡೀ ವಾತಾವರಣ ಕಲುಷಿತಗೊಂಡಿದೆ. ಹಳ್ಳಿಗೆ ಕುಡಿಯುವ ನೀರು ಪೂರೈಸುವ ಕೊಳವೆ ಬಾವಿ ಸಹ ಕಲುಷಿತ ನೀರನ್ನೇ ಕಾರುತ್ತಿದ್ದು, ಜನ ಜಾನುವಾರುಗಳಿಗೆ ಏನಾದರೂ ಆನಾಹುತವಾದರೆ ಬಿಬಿಎಂಪಿ ಅಧಿಕಾರಿಗಳೇ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸಾರಿಗೆ ಸಿಬ್ಬಂದಿ ವೇತನ ಕಡಿತ ಇಲ್ಲ – ಇಲಾಖೆಗೆ ವಿಜಯಪುರದಿಂದ ಹೆಚ್ಚು ಆದಾಯ: ಡಿಸಿಎಂ ಲಕ್ಷ್ಮಣ ಸವದಿ

ನಗರದ ಕಸ ಸುರಿಯುವುದರ ಜೊತೆಗೆ ಹತ್ತಾರು ಕನಸುಗಳನ್ನು ಸುರಿದು ಹೋದ ಬಿಬಿಎಂಪಿ ಇಂದಿಗೂ ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ. ಇಂದಿಗೂ ಕಸದ ರಾಶಿಯಿಂದ ವಿಷ ಗಾಳಿ ಬುಸುಗುಟ್ಟುತ್ತಿದೆ ಹತ್ತಾರು ವರ್ಷಗಳಿಂದ ಸುತ್ತಮುತ್ತಲಿನ ಜನರಿಗೆ ಕಲರ್ ಕಲರ್ ಕಾಗೆ ಹಾರಿಸಿದ್ದ ಬಿಬಿಎಂಪಿ ಇಲ್ಲಿನ ಡಂಪಿಂಗ್ ಯಾರ್ಡ್ಗೆ ಲಕ್ಷಾಂತರ ಟನ್ ನಗರದ ಕಸವನ್ನು ತುಂಬಿ ಕೈ ತೊಳೆದುಕೊಂಡಿತ್ತು. ಬಳಿಕ ಸ್ಥಳೀಯರ ವಿರೋಧ ಹೆಚ್ಚಾಗುತ್ತಿದ್ದಂತೆ ಡಂಪಿಗ್ ಯಾರ್ಡ್ ಸುತ್ತಮುತ್ತಲಿನ ಹಳ್ಳಿಗಳ ಅಭಿವೃದ್ಧಿ, ಕಸದ ಮೇಲೆ ಸುಸಜ್ಜಿತ ಉದ್ಯಾನವನ ನಿರ್ಮಾಣದ ಭರವಸೆ ನೀಡಿದ್ದ ಬಿಬಿಎಂಪಿ ಇಂದಿಗೂ ಈಡೆರಿಸಿಲ್ಲ ಎನ್ನುವ ಸ್ಥಳೀಯರು ನೆಪ ಮಾತ್ರಕ್ಕೆ ಉದ್ಯಾನವನ ನಿರ್ಮಿಸಿದ್ದಾರೆ.‌ ಅದೂ ಸಹ ಕಳಪೆಯಾಗಿದ್ದು, ಪಾದಚಾರಿ ರಸ್ತೆಗಳು ಇನ್ನೂ ಪೂರ್ಣಗೊಳಿಸಿಲ್ಲ ಅದಾಗಲೇ ಕಿತ್ತು ಬರುತ್ತಿವೆ. ಮಕ್ಕಳು ಆಟವಾಡುವ ಕೆಲ ಸಾಮಗ್ರಿಗಳನ್ನು ಅಳವಡಿಸಿದ್ದಾರೆ. ಸುತ್ತಲೂ ಲೈಟ್ ಕಂಬಗಳನ್ನು ನಿರ್ಮಿಸಿ ಕೈ ತೊಳೆದುಕೊಂಡಿದ್ದಾರೆ ಎಂದು ಸ್ಥಳೀಯರು ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು, ಡಂಪಿಂಗ್ ಯಾರ್ಡ್​ನಿಂದ ಹೊರ ಬರುತ್ತಿರುವ ಹಾನಿಕಾರಕ ಕಲ್ಮಶ ಕೆರೆ ಸೇರುತ್ತಿದೆ. ಕೆರೆಯ ನೀರನ್ನು ಕುಡಿದ ಜಾನುವಾರುಗಳು ಮಾರಕ ರೋಗಗಳಿಗೆ ತುತ್ತಾಗುತ್ತಿವೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಜಾನುವಾರುಗಳು ಆನಾರೋಗ್ಯಕ್ಕೆ ತುತ್ತಾಗಿ ಸಾವನ್ನಪ್ಪುತ್ತಿವೆ. ಈ ಬಗ್ಗೆ ಆನೇಕ ಬಾರಿ ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲ. ಜಾನುವಾರುಗಳನ್ನೇ ನಂಬಿ ಬದುಕುವ ರೈತರಿಗೆ ದಿಕ್ಕು ಯಾರು ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Teachers Recruitment - ಖಾಲಿ ಇರುವ 430 ಶಿಕ್ಷಕ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಒಪ್ಪಿಗೆ

ಒಟ್ಟಿನಲ್ಲಿ ನಗರದ ಕಸದ ಸಮಸ್ಯೆ ನೀಗಿಸುವ ಸಲುವಾಗಿ ಟನ್ ಗಟ್ಟಲೆ ಕಸವನ್ನು ಬಿಂಗೀಪುರದ ಕ್ವಾರಿಗೆ ತುಂಬಿದ ಬಿಬಿಎಂಪಿ ಅಧಿಕಾರಿಗಳು ಸ್ಥಳೀಯರ ವಿರೋಧ ವ್ಯಕ್ತವಾದಾಗ ಜನರ ಮನಸಲ್ಲಿ ಭರವಸೆಯ ಮಾತುಗಳ್ನು ತುಂಬಿ ಕೈತೊಳೆದುಕೊಂಡಿದ್ದಾರೆ. ಆದ್ರೆ ಇಂದಿಗೂ ಬಿಂಗೀಪುರದ ಜನ ಕಸದ ಕಮರಿನಲ್ಲಿ ಕಾಲ ಕಳೆಯುತ್ತಿರುವುದು ಮಾತ್ರ ವಿಪರ್ಯಾಸವೇ ಸರಿ.

ವರದಿ: ಆದೂರು ಚಂದ್ರು
Published by:Vijayasarthy SN
First published: