ತುಮಕೂರಿನಲ್ಲಿ ಕೊರೋನಾ ಸೋಂಕಿತರಿಗಿಂತ ಗುಣಮುಖರಾದವರ‌ ಸಂಖ್ಯೆಯೇ ಅತಿ ಹೆಚ್ಚು!

ಸೋಂಕಿತರ ಪ್ರಕರಣಗಳು ಕೂಡ ಕೊಂಚ ಇಳಿಮುಖವಾಗುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ತುಮಕೂರು ಇನ್ನು ಕೆಲವೇ ದಿನಗಳಲ್ಲಿ ಸೋಂಕಿತರಮುಕ್ತ ಜಿಲ್ಲೆಯಾಗಿ ಹೊರಹೊಮ್ಮಿ, ಇತರೆ ಜಿಲ್ಲೆಗಳಿಗೂ ಮಾದರಿಯಾಗಲಿದೆ. ಜೊತೆಗೆ ಜನರಲ್ಲಿ ಬೇರೂರಿರುವ ಕೊರೋನಾ ಭಯವನ್ನು ಕಡಿಮೆ ಮಾಡಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ತುಮಕೂರು: ಕೊರೋನಾ ವೈರಸ್ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚು ವ್ಯಾಪಕವಾಗಿ ಹಬ್ಬುತ್ತಿದೆ. ತುಮಕೂರಿನಲ್ಲೂ ಸಹ 800ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿ ಜಿಲ್ಲೆಯ ಜನರ ನಿದ್ದೆಗೆಡಿಸಿತ್ತು. ಮಾರಕ ಸೋಂಕಿಗೆ ಜಿಲ್ಲೆಯಲ್ಲಿ 28 ಮಂದಿ ಸೋಂಕಿಗೆ ಬಲಿಯಾಗಿದ್ದು, ಸದ್ಯ 11ಕ್ಕೂ ಹೆಚ್ಚು ಜನರು ವೆಂಟಿಲೇಷನ್​ ಸಹಾಯದಿಂದ ಉಸಿರಾಡುತ್ತಿದ್ದಾರೆ. ಈ ನಡುವೆ ಒಂದು ಸಣ್ಣ ಆಶಾದಾಯಕ ಬೆಳವಣಿಗೆ ತುಮಕೂರಿನಲ್ಲಿ ಕಂಡುಬಂದಿದ್ದು, ಕೇವಲ ನಾಲ್ಕು ದಿನದಲ್ಲಿ 400ಕ್ಕೂ ಅಧಿಕ ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಮಾರ್ಚ್ 27ರಂದು ಕೇವಲ ಒಂದೇ ಒಂದು ಸಾವಿನ ಪ್ರಕರಣವಿದ್ದ ತುಮಕೂರು ಮೂರು ತಿಂಗಳಲ್ಲಿ 813 ಕೊರೋನಾ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಕೊರೋನಾ ದಾಂಗುಡಿ ಇಡುತ್ತಿರುವ ನಡುವೆ ತುಮಕೂರಿನಲ್ಲೂ ಕೂಡ ನಿತ್ಯ ಸರಾಸರಿ 40ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿ ಆತಂಕಕ್ಕೆ ಕಾರಣವಾಗಿದೆ. ಸದ್ಯ 28 ಸಾವುಗಳಾಗಿವೆ. ಈ ನಡುವೆ ಮಾರಕ ಸೋಂಕಿನಿಂದ ಗುಣಮುಖರಾಗುವವರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಾಣುವ ಮೂಲಕ ಎಲ್ಲರಲ್ಲೂ ಮನೆಮಾಡಿರುವ ಭಯವನ್ನು ದೂರ ಮಾಡಿದೆ.

ಜಿಲ್ಲೆಯಲ್ಲಿ ಜುಲೈ 15 ರಂದು ಒಂದೇ ದಿನ 49 ಜನ, ಜುಲೈ 16 ರಂದು 15 ಮಂದಿ, ಜುಲೈ 17 ರಂದು 45 ಜನರು, ಜುಲೈ 18 ರಂದು 20 ಜನ, ಜುಲೈ 19 ರಂದು 71 ಜನ, ಜುಲೈ 20ರಂದು 53 ಜನ ಹಾಗೂ ಜುಲೈ 21ರಂದು 25 ಜನರು ಮಾರಕ ಸೋಂಕಿನಿಂದ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಒಟ್ಟು 813 ಪ್ರಕರಣಗಳಲ್ಲಿ 349 ಸಕ್ರಿಯ ಪ್ರಕರಣಗಳಿದ್ದು, ಒಟ್ಟಾರೆ 436 ಜನರು ಗುಣಮುಖರಾದಂತಾಗಿದೆ.

ಪ್ರಕರಣಗಳು ಹೆಚ್ಚಾಗುತ್ತಿರುವ ಭೀತಿಯ ನಡುವೆ ಗುಣಮುಖರಾದ ಸಂಖ್ಯೆ ಹೆಚ್ಚುತ್ತಿರುವುದು ಸಮಾಧಾನದ ಬೆಳವಣಿಗೆಯಾಗಿದೆ. ಇನ್ನು ಸೋಂಕಿತರ ಪ್ರಕರಣಗಳು ಕೂಡ ಕೊಂಚ ಇಳಿಮುಖವಾಗುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ತುಮಕೂರು ಇನ್ನು ಕೆಲವೇ ದಿನಗಳಲ್ಲಿ ಸೋಂಕಿತರಮುಕ್ತ ಜಿಲ್ಲೆಯಾಗಿ ಹೊರಹೊಮ್ಮಿ, ಇತರೆ ಜಿಲ್ಲೆಗಳಿಗೂ ಮಾದರಿಯಾಗಲಿದೆ. ಜೊತೆಗೆ ಜನರಲ್ಲಿ ಬೇರೂರಿರುವ ಕೊರೋನಾ ಭಯವನ್ನು ಕಡಿಮೆ ಮಾಡಲಿದೆ.
ಕರ್ನಾಟಕದಲ್ಲಿ ಮಂಗಳವಾರ 3,649 ಕೊರೋನಾ ಕೇಸುಗಳು ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 71,069ಕ್ಕೆ ಏರಿಕೆಯಾಗಿದೆ. 1,664 ರೋಗಿಗಳು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಇದುವರೆಗೂ 1464 ರೋಗಿಗಳು ಕೊರೋನಾದಿಂದ ಸಾವನ್ನಪ್ಪಿದ್ದಾರೆ. ಮಂಗಳವಾರ ಒಟ್ಟಾರೆ 43,904 ಜನರಿಗೆ ಕೊರೋನಾ ತಪಾಸಣೆ ನಡೆಸಲಾಗಿದೆ. ಇದುವರೆಗೂ ಕರ್ನಾಟಕದಲ್ಲಿ 10.64 ಲಕ್ಷ ಜನರಿಗೆ ಕೊರೋನಾ ಪರೀಕ್ಷೆ ನಡೆಸಲಾಗಿದೆ.
Published by:HR Ramesh
First published: