ಬಂಗಾರಪೇಟೆ ತಹಸೀಲ್ದಾರ್ ಕೊಲೆ; ಕರ್ತವ್ಯಕ್ಕೆ ಹಾಜರಾಗದೆ ಸರ್ಕಾರಿ ನೌಕರರ ಪ್ರತಿಭಟನೆ

ಹತ್ಯೆ  ಖಂಡಿಸಿ ನಾಳೆ ಬಂಗಾರಪೇಟೆ ತಾಲೂಕಿನಲ್ಲಿ ಶಾಂತಿಯುತ ಬಂದ್ ಆಚರಿಸಲು ಕರೆ ನೀಡಿದ್ದು, ಇದಕ್ಕೆ ಎಲ್ಲಾ ವರ್ತಕರು, ಚಾಲಕರು, ಸೇರಿದಂತೆ ಹಲವು ಸಂಘ-ಸಂಸ್ಥೆ ಸದಸ್ಯರು ಬೆಂಬಲ ನೀಡಿದ್ದಾರೆ.

ಕೋಲಾರದಲ್ಲಿ ಹತ್ಯೆಗೀಡಾಗಿರುವ ತಹಶೀಲ್ದಾರ್‌.

ಕೋಲಾರದಲ್ಲಿ ಹತ್ಯೆಗೀಡಾಗಿರುವ ತಹಶೀಲ್ದಾರ್‌.

  • Share this:
ಕೋಲಾರ; ಜಿಲ್ಲೆಯ ಬಂಗಾರಪೇಟೆ ತಹಸೀಲ್ದಾರ್ ಚಂದ್ರಮೌಳೇಶ್ವರ ಅವರು ನೆನ್ನೆ ದುಷ್ಕರ್ಮಿಯೊಬ್ಬನ ಭೂದಾಹಕ್ಕೆ ಬಲಿಯಾಗಿ, ಇಂದು ಹುಟ್ಟೂರಲ್ಲಿ ಮಣ್ಣಲ್ಲಿ ಮಣ್ಣಾಗಿದ್ದಾರೆ. ಬಂಗಾರಪೇಟೆ ತಾಲೂಕಿನ ಕಳವಂಚಿ ಗ್ರಾಮದಲ್ಲಿ ಎರಡು ಕುಟುಂಬಗಳ ಮಧ್ಯೆಯಿದ್ದ ಜಮೀನು ವಿವಾದವನ್ನು, ಬಗೆಹರಿಸಲು ಹೋದ ಅಧಿಕಾರಿಯನ್ನೇ ಚಾಕುವಿನಿಂದ ಹಿರಿದು ಕೊಲೆ ಮಾಡಲಾಗಿತ್ತು. ಅಧಿಕಾರಿ ಹತ್ಯೆ ಖಂಡಿಸಿ ಶುಕ್ರವಾರ ಜಿಲ್ಲೆಯ ಸರ್ಕಾರಿ ನೌಕಕರು ಕರ್ತವ್ಯಕ್ಕೆ ಗೈರಾಗಿ, ಆಕ್ರೋಶ ಹೊರಹಾಕಿದರು.

ಬಂಗಾರಪೇಟೆ ತಹಸೀಲ್ದಾರ್ ಚಂದ್ರಮೌಳೇಶ್ವರ ಹತ್ಯೆ ಮಾಡಿದ್ದನ್ನ ಖಂಡಿಸಿ, ಕೋಲಾರ ಜಿಲ್ಲೆಯಾದ್ಯಂತ ಶುಕ್ರವಾರ ಸರ್ಕಾರಿ ನೌಕರರು ಕರ್ತವ್ಯಕ್ಕೆ ಹಾಜರಾಗದೆ ಪ್ರತಿಭಟನೆ ನಡೆಸಿದರು. ಕೋಲಾರ ತಾಲೂಕು ಕಚೇರಿ ಎದುರು ಚಂದ್ರಮೌಳೇಶ್ವರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮೌನಾಚರಣೆ ಮಾಡುವ ಮೂಲಕ ಶ್ರದ್ದಾಂಜಲಿ ಸಲ್ಲಿಸಿದರು. ಬಳಿಕ ಆರೋಪಿಯನ್ನ ಗಲ್ಲಿಗೇರಿಸಿ ಅಧಿಕಾರಿಗಳಿಗೆ ಭದ್ರತೆ ನೀಡುವಂತೆ ಘೋಷಣೆಗಳನ್ನು ಕೂಗಿದರು. ಇನ್ನು ತಹಸೀಲ್ದಾರ್ ಹತ್ಯೆ ಖಂಡಿಸಿ ಇಂದು ಜಿಲ್ಲೆಯಾದ್ಯಂತ ಹಲವು ಸಂಘಟನೆಗಳು, ಆರೋಪಿ ವಿರುದ್ದ ಕಠಿಣ ಕ್ರಮ ಜರುಗಿಸುವಂತೆ ಪ್ರತಿಭಟನೆ ನಡೆಸಿ ಆಕ್ರೋಶ‌ ಹೊರಹಾಕಿದವು. ಇನ್ನು ಹತ್ಯೆ  ಖಂಡಿಸಿ ನಾಳೆ ಬಂಗಾರಪೇಟೆ ತಾಲೂಕಿನಲ್ಲಿ ಶಾಂತಿಯುತ ಬಂದ್ ಆಚರಿಸಲು ಕರೆ ನೀಡಿದ್ದು, ಇದಕ್ಕೆ ಎಲ್ಲಾ ವರ್ತಕರು, ಚಾಲಕರು, ಸೇರಿದಂತೆ ಹಲವು ಸಂಘ-ಸಂಸ್ಥೆ ಸದಸ್ಯರು ಬೆಂಬಲ ನೀಡಿದ್ದಾರೆ.

ಘಟನೆ ಸಂಬಂಧ ಮಾತನಾಡಿದ ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ, ಕೆಜಿಎಪ್ ಎಸ್ಪಿ ಮೊಹಮ್ಮದ್ ಸುಜೀತಾ ಅವರ ಕಾರ್ಯವೈಫಲ್ಯವೇ ಇದಕ್ಕೆ ಕಾರಣ ಎಂದು ಟೀಕಿಸಿದ್ದಾರೆ. ಘಟನೆ‌ ಕುರಿತು ಮಾತನಾಡಿರುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಾರೆಡ್ಡಿ ಅವರು ಆರೋಪಿಯನ್ನ ಗುಂಡಿಕ್ಕಿ ಕೊಲ್ಲಿ. ಇಲ್ಲದೆ ಹೋದಲ್ಲಿ ಮುಂದೆ ಸರ್ಕಾರಿ ಅಧಿಕಾರಿಗಳ ಮೇಲೆ ಮತ್ತಷ್ಟು ಕ್ರೂರವಾಗಿ ಹಲ್ಲೆ ಮಾಡಲು ಕಿಡಿಗೇಡಿಗಳು ಹಿಂದು-ಮುಂದು ನೋಡುವುದಿಲ್ಲ ಎಂದು ಆಗ್ರಹಿಸಿದ್ದಾರೆ.

ತಹಸೀಲ್ದಾರ್ ಹತ್ಯೆ ನಡೆದ ಸ್ಥಳಕ್ಕೆ ಎಡಿಜಿಪಿ ಕಾನೂನು ಸುವ್ಯವಸ್ಥೆ ವಿಭಾಗದ ಅಧಿಕಾರಿ ಅಮರ್ ಕುಮಾರ್ ಪಾಂಡೆ ಬೆಳಗ್ಗೆ 7.30ಕ್ಕೆ  ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಕೆಜಿಎಫ್ ಎಸ್ಪಿ ಕಚೇರಿಯಲ್ಲಿ ಐಜಿಪಿ, ಎಸ್ಪಿ ನೇತೃತ್ವದಲ್ಲಿ ಸಭೆ ನಡೆಸಿ ತ್ವರಿತವಾಗಿ ಆರೋಪ ಪಟ್ಟಿ ಸಲ್ಲಿಸಿ, ಘಟನೆ ಕುರಿತ ಸವಿವರವಾದ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕಳವಂಚಿ ಗ್ರಾಮದ ರೈತ ರಾಮಮೂರ್ತಿ ಮತ್ತು ನಿವೃತ್ತ ಶಿಕ್ಷಕ ಆಗಿರುವ ವೆಂಕಟಪತಿ ಕುಟುಂಬಗಳ ಮಧ್ಯೆ, ವೆಂಕಟಪತಿ ನಿವಾಸದ ಬಲಭಾಗದಲ್ಲೇ ಇರುವ 6 ಗುಂಟೆ ಜಮೀನಿಗಾಗಿ ವಿವಾದವಿತ್ತು. ಜಮೀನು ಅಳತೆಯ ಬಗ್ಗೆ ಎರಡೂ ಕುಟುಂಬದವರು ಕೆಲವು ವರ್ಷಗಳಿಂದ ಕೋರ್ಟು-ಕಚೇರಿಗಳನ್ನು ಸುತ್ತುತ್ತಿದ್ದರು. ತಹಸೀಲ್ದಾರ್ ಕಚೇರಿಯಲ್ಲಿಯೂ ಅರ್ಜಿ ಸಲ್ಲಿಕೆಯಾಗಿತ್ತು. ಗುರುವಾರ ಮಧ್ಯಾಹ್ನ ಸುಮಾರು ಮೂರು ಗಂಟೆಯ ವೇಳೆಗೆ ತಹಸೀಲ್ದಾರ್ ಚಂದ್ರಮೌಳೇಶ್ವರ ಕಳವಂಚಿ ಗ್ರಾಮಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಜಮೀನು ಅಳತೆಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿ ವೆಂಕಟಪತಿ ಕೂಗಾಡಿ ರಂಪಾಟ ಮಾಡಿ ಅವಾಚ್ಯ ಶಬ್ದಗಳಿಂದ ಸ್ಥಳದಲ್ಲಿದ್ದ ಅಧಿಕಾರಿಗಳನ್ನು ನಿಂದಿಸಿದ್ದರು. ಈ ವೇಳೆ ಸ್ಥಳದಲ್ಲಿ ಕಾಮಸಮುದ್ರ ಠಾಣೆ ಪಿಎಸ್​ಐ  ದಯಾನಂದ್ ಹಾಗೂ ಸಿಬ್ಬಂದಿ ಸಹ ಇದ್ದರು. ಆಗ ಕೆಲ ದಾಖಲೆ ತೋರಿಸುವ ಸೋಗಿನಲ್ಲಿ ವೆಂಕಟಪತಿ ಎರಡು ಬಾರಿ ತಹಸೀಲ್ದಾರ್ ಎದೆಗೆ ಬಲವಾಗಿ ಇರಿದಿದ್ದಾನೆ.

ಇದನ್ನು ಓದಿ: ಕೋಲಾರದಲ್ಲಿ ತಹಶೀಲ್ದಾರ್‌ ಕೊಲೆ; ಜಮೀನು ವ್ಯಾಜ್ಯಕ್ಕೆ ಬಿತ್ತು ಸರ್ಕಾರಿ ಅಧಿಕಾರಿಯ ಹೆಣ

ತೀವ್ರವಾಗಿ ಗಾಯಗೊಂಡ ತಹಸೀಲ್ದಾರ್ ಚಂದ್ರಮೌಳೇಶ್ವರ ಅವರು ರಕ್ತ ಸುರಿಸಿಕೊಂಡು ನೆಲಕ್ಕೆ ಬಿದ್ದಿದ್ದು,  ತಕ್ಷಣವೇ  ಪೊಲೀಸರು ಜೀಪ್​ನಲ್ಲಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಕಳವಂಚಿ ಗ್ರಾಮದಿಂದ ಬಂಗಾರಪೇಟೆ 25 ಕಿ.ಮೀ.ಗೂ ಹೆಚ್ಚು ದೂರ ಇರುವ ಕಾರಣ ಅಧಿಕಾರಿಯನ್ನು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ದಾಖಲಿಸಲು ಸಾಧ್ಯವಾಗಿಲ್ಲ. ಇದು ಸಹ ತಹಸೀಲ್ದಾರ್ ಅವರ ಸಾವಿಗೆ ಕಾರಣ ಎಂದು ಹೇಳಲಾಗುತ್ತಿದೆ.
Published by:HR Ramesh
First published: