ಅಲ್ಪ ಸಂಖ್ಯಾತರ ಓಲೈಕೆ ಕಾಂಗ್ರೆಸ್ ಪಕ್ಷಕ್ಕೆ ಮುಳುವಾಗಲಿದೆ; ಶಾಸಕ ಎಸ್.ಆರ್. ವಿಶ್ವನಾಥ್ ಎಚ್ಚರಿಕೆ
ಜಮೀರ್ ತಾನು ಅಲ್ಪ ಸಂಖ್ಯಾತ ನಾಯಕ ಎಂದು ಬಿಂಬಿಸಲು ಹೋಗುತ್ತಿದ್ದರೆ. ಮುಸಲ್ಮಾನ ಮುಖಂಡರಾದವರು ಅವರನ್ನು ನಿಯಂತ್ರಣ ಮಾಡಲು ನೋಡಬೇಕೆ ಹೊರತು ಪ್ರಚೋದನೆ ನೀಡಬಾರದು. ಜನತೆಯ ಸಹನೆ ಮೀರಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಶಾಸಕ ಎಸ್.ಆರ್. ವಿಶ್ವನಾಥ್ ಎಚ್ಚರಿಕೆ ನೀಡಿದರು.
ಬೆಂಗಳೂರು: ಕಾಂಗ್ರೆಸ್ ನಾಯಕರು ಅಲ್ಪಸಂಖ್ಯಾರ ಮತಗಳ ಓಲೈಕೆಗಾಗಿ ಬಾಲಿಶ ಹೇಳಿಕೆ ನೀಡುವ ಮೂಲಕ ಕುತಂತ್ರ ರಾಜಕಾರಣ ಮಾಡುತ್ತಿದ್ದಾರೆ. ಈ ಕುತಂತ್ರ ರಾಜಕಾರಣ ಕಾಂಗ್ರೆಸ್ ಪಕ್ಷಕ್ಕೆ ಮಾರಕವಾಗಲಿದೆ ಎಂದು ಸಿ.ಎಂ.ರಾಜಕೀಯ ಕಾರ್ಯದರ್ಶಿ, ಶಾಸಕ ಎಸ್.ಆರ್.ವಿಶ್ವನಾಥ್ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಯಲಹಂಕ ಉಪನಗರದ ಹೊಯ್ಸಳ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದವತಿಯಿಂದ ಆಯೋಜಿಸಿದ್ದ 74 ಸ್ವಾತಂತ್ರ್ಯ ದಿನಾಚರಣೆ ಪೂರ್ವಭಾವಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಕಾವಲ್ ಭೈರಸಂದ್ರ, ಡಿಜೆ ಹಳ್ಳಿಯಲ್ಲಿ ಪಿ.ಎಫ್.ಐ ಮತ್ತು ಎಸ್.ಡಿ.ಪಿ.ಐ ಸಂಘಟನೆಗಳ ಕುಮ್ಮಕ್ಕಿನಿಂದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಯನ್ನ ಕೊಲೆ ಮಾಡುವ ಉದ್ದೇಶದಿಂದ ಅವರ ಮನೆ ಮೇಲೆ ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ನಾಯಕರು ಅವರಿಗೆ ಆತ್ಮಸ್ಥೈರ್ಯ ಹೇಳುವ ಬದಲು ಅಲ್ಪ ಸಂಖ್ಯಾತರ ಮತಕ್ಕಾಗಿ ಓಲೈಕೆ ಮಾಡುತ್ತಿದ್ದಾರೆ. ಇದು ಕಾಂಗ್ರೆಸ್ ಪಕ್ಷಕ್ಕೆ ಮಾರಕವಾಗಲಿದೆ" ಎಂದು ವಾಗ್ದಾಳಿ ನಡೆಸಿದ್ದಾರೆ.
"ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನವೀನ್ ಬಿಜೆಪಿ ಕಾರ್ಯಕರ್ತ ಎಂಬ ಬಾಲಿಶ ಹೇಳಿಕೆ ನೀಡುವ ಮೂಲಕ ಬಿಜೆಪಿ ತಲೆಗೆ ಕಟ್ಟುವ ಸಣ್ಣ ಕೆಲಸಮಾಡುತ್ತಿದ್ದಾರೆ.ಮತ್ತೊಂದೆಡೆ ಸಿದ್ದರಾಮಯ್ಯ ಅಮಾಯಕರ ಬಲಿಯಾಗುತ್ತಿದೆ ಎಂಬ ಹೇಳಿಕೆ ನೀಡುತ್ತಾರೆ. ಇದು ಇವರ ಓಲೈಕೆ ರಾಜಕಾರಣ ತೋರಿಸುತ್ತದೆ" ಎಂದು ಕಿಡಿಕಾರಿದ್ದಾರೆ.
"ಜಮೀರ್ ತಾನು ಅಲ್ಪ ಸಂಖ್ಯಾತ ನಾಯಕ ಎಂದು ಬಿಂಬಿಸಲು ಹೋಗುತ್ತಿದ್ದರೆ. ಮುಸಲ್ಮಾನ ಮುಖಂಡರಾದವರು ಅವರನ್ನು ನಿಯಂತ್ರಣ ಮಾಡಲು ನೋಡಬೇಕೆ ಹೊರತು ಪ್ರಚೋದನೆ ನೀಡಬಾರದು. ಜನತೆಯ ಸಹನೆ ಮೀರಿದರೆ ಪರಿಣಾಮ ಎದುರಿಸಬೇಕಾಗುತ್ತದೆ" ಎಂದು ಎಚ್ಚರಿಕೆ ನೀಡಿದರು.
ಕಾನೂನು ವಿರೋಧಿ ಸಂಘಟನೆಗಳ ನಿಷೇಧ:
ಪಿಎಫ್ ಐ, ಎಸ್.ಡಿ.ಪಿ.ಐ ನವರು ಪೂರ್ವ ನಿಯೋಜಿತ ಗಲಭೆ. ಈ ದೇಶದ ಕಾನೂನು ಮೀರಿ ವರ್ತನೆ ಮಾಡುತ್ತಿದ್ದಾರೆ. ನಿಷೇಧ ಮಾಡಬೇಕೆಂಬ ಆಗ್ರಹ ಕೆಲ ಮುಸಲ್ಮಾನ ಮುಖಂಡರಿಗೂ ಇದೆ. ಈ ಸಂಘಟನೆಗಳನ್ನು ನಿಷೇಧಿಸಲು ಗಂಭೀರ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ