• Home
  • »
  • News
  • »
  • district
  • »
  • ಇಲಾಖೆಯ ದೂರದೃಷ್ಠಿ ಕೊರತೆ; ಬಿಳಿಯಾನೆಯಾದ ಚಾಮರಾಜನಗರ-ತಿರುಪತಿ ರೈಲು!

ಇಲಾಖೆಯ ದೂರದೃಷ್ಠಿ ಕೊರತೆ; ಬಿಳಿಯಾನೆಯಾದ ಚಾಮರಾಜನಗರ-ತಿರುಪತಿ ರೈಲು!

ಚಾಮರಾಜನಗರ ತಿರುಪತಿ ರೈಲು.

ಚಾಮರಾಜನಗರ ತಿರುಪತಿ ರೈಲು.

ಯಾವುದೇ ರೈಲು  ಒಂದು ಕಿಲೋ ಮೀಟರ್ ಸಂಚರಿಬೇಕಾದರೆ ಕನಿಷ್ಠ ಆರು ಲೀಟರ್ ಡೀಸೆಲ್ ಬೇಕು. ಮೈಸೂರಿನಿಂದ ಚಾಮರಾಜನಗರಕ್ಕೆ 60 ಕಿಲೋ ಮೀಟರ್ ಅಂತರವಿದ್ದು 360 ಲೀಟರ್ ಡೀಸೆಲ್ ಖರ್ಚಾಗುತ್ತಿದೆ. ಪ್ರಸ್ತುತ ಡೀಸೆಲ್ ಬೆಲೆ ಲೆಕ್ಕಾಚಾರ ಹಾಕಿದರೆ ಸುಮಾರು ಮೂವತ್ತು ಸಾವಿರ ರೂಪಾಯಿ ವೆಚ್ಚವಾಗುತ್ತಿದೆ.

ಮುಂದೆ ಓದಿ ...
  • Share this:

ಚಾಮರಾಜನಗರ ( ಫೆಬ್ರುವರಿ 04); ಲಾಕ್​ಡೌನ್ ಸಡಿಲಿಕೆ ನಂತರ ಕಳೆದ ಎರಡು ತಿಂಗಳಿಂದ ಚಾಮರಾಜನಗರ ತಿರುಪತಿ ರೈಲು ಪುನರಾರಂಭಗೊಂಡಿದೆ. ಆದರೆ ರೈಲ್ವೆ ಇಲಾಖೆಯ ದೂರದೃಷ್ಟಿ ಕೊರತೆಯಿಂದಾಗಿ ಜನಸಾಮಾನ್ಯರು ಈ ರೈಲಿನಿಂದ ದೂರವೇ ಉಳಿಯುವಂತಾಗಿದೆ. ಈ ಹಿಂದೆ ಮೈಸೂರಿನಿಂದ ಚಾಮರಾಜನಗರದ ನಡುವೆ ಓಡಾಡಬೇಕದರೆ ನೇರವಾಗಿ ಟಿಕೇಟ್ ಕೌಂಟರ್ ನಲ್ಲಿ ಟಿಕೇಟ್ ಖರೀದಿಸಿ ಈ ರೈಲಿನಲ್ಲಿ ಪ್ರಯಣಿಸಬಹುದಿತ್ತು. ಆದರೆ,  ರೈಲು ಸಂಚಾರ ಪುನರಾರಂಭಗೊಂಡ ನಂತರ ಈ ರೈಲಿನಲ್ಲಿ ಮೈಸೂರಿನಿಂದ ಚಾಮರಾಜನಗರಕ್ಕೆ ಪಯಣಿಸಲು ಮೈಸೂರು ರೈಲ್ವೆ ನಿಲ್ದಾಣದ  ಕೌಂಟರ್ ನಲ್ಲಿ  ಟಿಕೇಟ್ ನೀಡುತ್ತಿಲ್ಲ. ಹಾಗಾಗಿ  ಹಿಂದಿನ ದಿನವೇ ಆನ್ ಲೈನ್ ನಲ್ಲಿ ಟಿಕೆಟ್ ಬುಕ್ ಮಾಡಬೇಕು ಇಲ್ಲವೆ ರೈಲು ಹೊರಡುವ ಎರಡು ಗಂಟೆಗು ಮುಂಚೆ   ರೈಲು ನಿಲ್ದಾಣಕ್ಕೆ ಬಂದು ಕೌಂಟರ್ ನಲ್ಲಿ ನಿಗಧಿತ ಫಾರಂ ಭರ್ತಿ ಮಾಡಿ  ಟಿಕೆಟ್ ಕಾಯ್ದಿರಿಸಬೇಕು.  ಕೇವಲ 60 ಕಿಲೋ ಮೀಟರ್ ದೂರ ಸಂಚಾರಕ್ಕೆ ಇಷ್ಟೆಲ್ಲಾ ಸರ್ಕಸ್ ಮಾಡಬೇಕು. ಹಾಗಾಗಿ ಜನಸಾಮಾನ್ಯರು ಈ ರೈಲಿನಿಂದ ದೂರವೇ ಉಳಿದಿದ್ದು, ಪ್ರತಿದಿನ ಮೈಸೂರಿನಿಂದ ಚಾಮರಾಜನಗರಕ್ಕೆ ಇಬ್ಬರು ಪ್ರಯಾಣಿಕರು ಮಾತ್ರ ಬರುತ್ತಿದ್ದಾರೆ.


ಇನ್ನು ತಿರುಪತಿಯಿಂದ ನೇರವಾಗಿ ಚಾಮರಾಜನಗರಕ್ಕೆ ಸರಾಸರಿ 8 ರಿಂದ 10  ಮಂದಿ ಬರುತ್ತಿದ್ದು, ಈ ಬೆರಳೆಣಿಕೆಯಷ್ಟು ಮಂದಿ ಪ್ರಯಾಣಿಕರನ್ನು ಹೊರತುಪಡಿಸಿದರೆ 24 ಬೋಗಿಗಳನ್ನು ಒಳಗೊಂಡ ತಿರುಪತಿ ರೈಲು ಮೈಸೂರಿನಿಂದ ಚಾಮರಾಜನಗರಕ್ಕೆ ಖಾಲಿಖಾಲಿಯಾಗಿ ಸಂಚರಿಸುತ್ತಿದೆ. ಇದರಿಂದ ರೈಲ್ವೆ ಇಲಾಖೆ ಭಾರಿ ನಷ್ಟ ಅನುಭವಿಸುತ್ತಿದೆ.


ಯಾವುದೇ ರೈಲು  ಒಂದು ಕಿಲೋ ಮೀಟರ್ ಸಂಚರಿಬೇಕಾದರೆ ಕನಿಷ್ಠ ಆರು ಲೀಟರ್ ಡೀಸೆಲ್ ಬೇಕು. ಮೈಸೂರಿನಿಂದ ಚಾಮರಾಜನಗರಕ್ಕೆ 60 ಕಿಲೋ ಮೀಟರ್ ಅಂತರವಿದ್ದು 360 ಲೀಟರ್ ಡೀಸೆಲ್ ಖರ್ಚಾಗುತ್ತಿದೆ. ಪ್ರಸ್ತುತ ಡೀಸೆಲ್ ಬೆಲೆ ಲೆಕ್ಕಾಚಾರ ಹಾಕಿದರೆ ಸುಮಾರು ಮೂವತ್ತು ಸಾವಿರ ರೂಪಾಯಿ ವೆಚ್ಚವಾಗುತ್ತಿದೆ.


ಮೈಸೂರು ಚಾಮರಾಜನಗರ ನಡುವಿನ ಪ್ರಯಾಣಕ್ಕೆ ಪ್ಯಾಸೆಂಜರ್ ರೈಲಿನಲ್ಲಿ ಕೇವಲ 20 ರೂಪಾಯಿ ದರ ಇದೆ. ಎಕ್ಸ್ ಪ್ರೆಸ್ ರೈಲಿನಲ್ಲಿ 45 ರೂಪಾಯಿ ಇದೆ. ಆದರೆ, ಚಾಮರಾಜನಗರ-ತಿರುಪತಿ ರೈಲಿನಲ್ಲಿ ಬರಲು ಆನ್ ಲೈನ್ ನಲ್ಲಿ ಬುಕ್ ಮಾಡುವ ರೈಲ್ವೇ ಟಿಕೇಟ್ ದರ ಜಿಎಸ್​ಟಿ ಸೇರಿ 92 ರೂಪಾಯಿ ಆಗುತ್ತದೆ.  ಪ್ಯಾಸೆಂಜರ್ ರೈಲಿನ ದರಕ್ಕಿಂತ  ನಾಲ್ಕು ಪಟ್ಟು ಹೆಚ್ಚಾಗಿರುವುದರಿಂದ  ಜನಸಾಮಾನ್ಯರು ಈ ರೈಲಿನತ್ತ ತಲೆ ಹಾಕುತ್ತಿಲ್ಲ.


ಇನ್ನು ಈ ರೈಲು ಸಂಚಾರದ ಸಮಯವೂ ಸಹ ಪ್ರಯಾಣಿಕರಿಗೆ ಅನುಕೂಲಕರವಾಗಿಲ್ಲ. ಬೆಳಿಗ್ಗೆ 7.20 ಕ್ಕೆ ಮೈಸೂರಿನಿಂದ ಹೊರಡುವ ಈ ರೈಲು ಬೆಳಿಗ್ಗೆ 8.30ಕ್ಕೆ ಚಾಮರಾಜನಗರ ತಲುಪುತ್ತದೆ. ಇದರಿಂದ ದೈನಂದಿನ ಕೆಲಸ ಕಾರ್ಯಗಳಿಗೆ, ಕೋರ್ಟು ಕಚೇರಿಗಳಿಗೆ ಬರುವ ಜನರಿಗೆ ಇದರಿಂದ ಯಾವುದೇ ರೀತಿಯ ಅನುಕೂಲವೂ ಆಗುತ್ತಿಲ್ಲ. ಒಟ್ಟಾರೆ ಅತ್ತ ರೈಲ್ವೆ ಇಲಾಖೆಗೆ ಆದಾಯವೂ ಇಲ್ಲ, ಇತ್ತ ಪ್ರಯಾಣಿಕರಿಗೆ ಪ್ರಯೋಜನವೂ ಇಲ್ಲದಂತಾಗಿದೆ ಈ ತಿರುಪತಿ ರೈಲು.


ಇದನ್ನೂ ಓದಿ: Farmers Protest: ರೈತರ ಹೋರಾಟವನ್ನು ಬೆಂಬಲಿಸಿ​ ಟ್ವೀಟ್​; ಗ್ರೇಟಾ ಥನ್ಬರ್ಗ್ ವಿರುದ್ಧ ದೆಹಲಿಯಲ್ಲಿ ದಾಖಲಾಯ್ತು ಪ್ರಕರಣ


ಇನ್ನೂ ಚಾಮರಾಜನಗರದಿಂದ ಸಂಜೆ 5 ಗಂಟೆಗೆ ಹೊರಡುವ ಪ್ಯಾಸೆಂಜರ್ ರೈಲು ಹೊರತು ಪಡಿಸಿದರೆ ಉಳಿದ ರೈಲುಗಳ ಸಂಚಾರ ಆರಂಭವಾಗಿಲ್ಲ. ಇದರಿಂದ ಪ್ರತಿದಿನ ಮೈಸೂರಿಗೆ ಕೂಲಿ ಕೆಲಸಕ್ಕೆ ಹೋಗಿ ಬರುತ್ತಿದ್ದ ನೂರಾರು ಕಾರ್ಮಿಕರಿಗೆ ದೊಡ್ಡ ಹೊಡೆತ ಬಿದ್ದಿದೆ.  ಕೆಎಸ್​ಆರ್​ಟಿಸಿ ಬಸ್ ಗಳಲ್ಲಿ ಮೈಸೂರಿಗೆ  ಹೋಗಿ ಬರಲು 140 ರೂಪಾಯಿ  ಪ್ರಯಾಣ ದರ  ತಗಲುತ್ತದೆ. ಆದರೆ ಇಷ್ಟೊಂದು ಹಣ  ತೆರಲಾಗದೆ ಕಾರ್ಮಿಕರು ಕೂಲಿ ಕೆಲಸಕ್ಕೆ ಹೋಗುವುದನ್ನೆ ಬಿಟ್ಟು ಸಂಕಷ್ಟಕ್ಕ ಒಳಗಾಗಿದ್ದಾರೆ.


ರೈಲ್ವೆ ಇಲಾಖೆಯ ಆಧಿಕಾರಿಗಳ ದೂರದೃಷ್ಟಿಯ ಕೊರತೆಯೆ ಇಷ್ಟೆಲ್ಲಾ ಸಮಸ್ಯೆಗಳಿಗೆ ಕಾರಣವಾಗಿದೆ. ಈ  ಸಮಸ್ಯೆಗಳ ಬಗ್ಗೆ ಈ ಭಾಗದ ಸಂಸದರು ಗಮನಹರಿಸಬೇಕು, ಜನಸಾಮಾನ್ಯರಿಗೆ ಅನುಕೂಲವಾಗುವಂತೆ ರೈಲುಗಳನ್ನು ಓಡಿಸಲು ಕ್ರಮವಹಿಸಬೇಕು ಎಂದು ಪ್ರಯಾಣಿಕ ವೈ.ಎಂ. ರವಿಚಂದ್ರ ಆಗ್ರಹಿಸಿದ್ದಾರೆ.

Published by:MAshok Kumar
First published: