ಕೋಲಾರ: ಜಿಲ್ಲೆಯ ಕೆಜಿಎಪ್ ನಗರದಲ್ಲಿ 20 ವರ್ಷಗಳಿಂದ ಮುಚ್ಚಿದ್ದ, ಭಾರತ್ ಗೋಲ್ಡ್ ಸಂಸ್ಥೆಯ ಸರ್ಕಾರಿ ಆಸ್ಪತ್ರೆಯಲ್ಲಿ ನಿರ್ಮಿಸಿರೊ ಕೋವಿಡ್ ಕೇರ್ ಸೆಂಟರ್ ಗೆ ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಇಲಾಖೆ ಸಚಿವ ಪ್ರಹ್ಲಾದ್ ಜೋಶಿ ಅವರು ಚಾಲನೆ ನೀಡಿದ್ದಾರೆ. ಆಸ್ಪತ್ರೆಯಲ್ಲಿ ಆಯೋಜಿಸಿದ್ದ ವರ್ಚುವಲ್ ಸಭೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಡಿಸಿಎಂ ಡಾ ಅಶ್ವಥ್ ನಾರಾಯಣ್, ಆರೋಗ್ಯ ಸಚಿವ ಡಾ ಸುಧಾಕರ್ ಭಾಗಿಯಾಗಿ ಕೋವಿಡ್ ಕೇರ್ ಸೆಂಟರ್ ಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಕೋಲಾರ ಸಂಸದ ಎಸ್ ಮುನಿಸ್ವಾಮಿ, ಡಿಸಿ ಆರ್ಸೆಲ್ವಮಣಿ , ಸಿಇಒ ನಾಗರಾಜ್, ಕೆಜಿಎಪ್ ನಗರಸಭೆ ಅಧ್ಯಕ್ಷ್ಯ ವಲ್ಲಾಲ್ ಮುನಿಸ್ವಾಮಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಮಹೇಶ್, ಶಾಹಿದ್ ಹಾಗು ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗು ವೈದ್ಯಕೀಯ ಇಲಾಖೆಯ ಸಿಬ್ಬಂದಿ ಭಾಗಿಯಾಗಿದ್ದರು.
ಬಿಜಿಎಮ್ಎಲ್ ಕೋವಿಡ್ ಕೇರ್ ಸೆಂಟರ್ನಲ್ಲಿ ಸದ್ಯ 125 ಬೆಡ್ ವ್ಯವಸ್ತೆ ಮಾಡಲಾಗಿದ್ದು, ಮುಂದೆ ಬೆಡ್ ಸಂಖ್ಯೆಯನ್ನ 250 ಕ್ಕೆ ಏರಿಸುವ ಗುರಿಯನ್ನು ಹೊಂದಲಾಗಿದೆ. ಆಸ್ಪತ್ರೆಯಲ್ಲಿ 5 ಮಂದಿ ವೈದ್ಯರು, 25 ಮಂದಿ ಸಹಾಯಕ ಸಿಬ್ಬಂದಿ, ಮತ್ತು 15 ಜನ ಡಿ ಗ್ರೂಪ್ ಸಿಬ್ಬಂದಿಯನ್ನ ಸೋಂಕಿತರ ಆರೈಕೆಗೆಂದು ನಿಯೋಜನೆ ಮಾಡಲಾಗಿದೆ, ಇನ್ನು ಆಸ್ಪತ್ರೆಯಲ್ಲಿ 30 ಆಕ್ಸಿಜನ್ ಕಾನ್ಸಸ್ಟ್ರೇಟರ್ ಗಳ ವ್ಯವಸ್ತೆ ಮಾಡಲಾಗಿದ್ದು, ಮುಂದೆ ಆಸ್ಪತ್ರೆಯಲ್ಲಿ 20 ಆಕ್ಸಿಜನ್ ಸಹಿತ ಬೆಡ್ ವ್ಯವಸ್ತೆ ಮಾಡುವ ಉದ್ದೇಶವನ್ನ ಹೊಂದಿರುವಾಗಿ ಸಭೆಯಲ್ಲಿ ಸಂಸದ ಎಸ್ ಮುನಿಸ್ವಾಮಿ ತಿಳಿಸಿದರು.
ಪಾಳು ಬಿದ್ದಿದ್ದ ಕಟ್ಟಡದಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲು ಮುಂದಾದ ಕಾರ್ಯಕ್ಕೆ ಸಂಸದ ಮುನಿಸ್ವಾಮಿ ರಿಗೆ ರಾಜ್ಯ ಸರ್ಕಾರದಿಂದ ಅಭಿನಂದನೆ ಎಂದು ಡಿಸಿಎಂ ಡಾ ಅಶ್ವಥ್ ನಾರಾಯಣ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಅಪಪ್ರಚಾರ ಮಾಡುವುದರಲ್ಲಿ ಕಾಂಗ್ರೆಸ್ಸಿಗರು ನಿಸ್ಸೀಮರು; ಪ್ರಹ್ಲಾದ್ ಜೋಶಿ ಆರೋಪ
ವರ್ಚವಲ್ ಕಾರ್ಯಕ್ರಮದಲ್ಲಿ ಎಲ್ಲರನ್ನ ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ ಪಕ್ಷದ ವಿರುದ್ದ ವಾಗ್ದಾಳಿ ನಡೆಸಿದರು, ಆರಂಭದಲ್ಲಿ ಕೋವಿಡ್ 19 ಲಸಿಕೆ ಕುರಿತು ಕಾಂಗ್ರೆಸ್ ತಪ್ಪು ಪ್ರಚಾರ ಮಾಡಿತ್ತು. ಇದೀಗ ಕೋವಿಡ್ ಟೂಲ್ ಕಿಟ್ ವಿಚಾರದಲ್ಲು ದೇಶದಲ್ಲಿ ರಾಜಕೀಯ ಮಾಡಲು ಹೊರಟಿದೆ ಇದೊಂದು ದುರಂತ ಎಂದು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು. ಇನ್ನು ಕೆಜಿಎಪ್ ಬಿಜಿಎಮ್ಎಲ್ ಕೋವಿಡ್ ಕೇರ್ ಸೆಂಟರ್ಗೆ 20 ಲಕ್ಷ ಅನುದಾನವನ್ನ ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಇಲಾಖೆಯಿಂದ ನೀಡುವುದಾಗಿ ಪ್ರಹ್ಲಾದ್ ಜೋಶಿ ತಿಳಿಸಿದರು.
ಕಾರ್ಯಕ್ರಮ ನಂತರ ಮಾತನಾಡಿದ ಸಂಸದ ಎಸ್ ಮುನಿಸ್ವಾಮಿ, ಕೋವಿಡ್ ಸೋಂಕಿತರು ದಯಮಾಡಿ ಮನೆಯಲ್ಲೆ ಚಿಕಿತ್ಸೆ ಪಡೆಯದೆ ಆಯಾ ಭಾಗದ ಕೋವಿಡ್ ಕೇರ್ ಸೆಂಟರ್ ಗಳಿಗೆ ದಾಖಲಾಗಿ ಸೂಕ್ತ ಚಿಕಿತ್ಸೆ ಪಡೆದು, ಗ್ರಾಮಗಳನ್ನ ಸೋಂಕಿನಿಂದ ಮುಕ್ತ ಮಾಡಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಪಾಳು ಬಿದ್ದಿದ್ದ ಅಸ್ಪತ್ರೆಗೆ 21 ದಿನದಲ್ಲೆ ಕಾಯಕಲ್ಪ ನೀಡಿದ ಕೆಜಿಎಪ್ ನಗರದ ಯುವಕರು ಹಾಗೂ ಸ್ವಯಂ ಸೇವಕರು.
ಭಾರತ್ ಗೋಲ್ಡ್ ಸಂಸ್ತೆ 2001 ರಲ್ಲಿ ಮುಚ್ಚಿದ ಕಾರಣ, ಈ ಆಸ್ಪತ್ರೆಯನ್ನು ಮುಚ್ಚಲಾಗಿದ್ದು, ಬರೋಬ್ಬರಿ 20 ವರ್ಷಗಳಿಂದ ಮುಚ್ಚಿದ್ದರಿಂದ ಆಸ್ಪತ್ರೆ ಪಾಳುಬಿದ್ದ ಕೊಂಪೆಯಾಗಿತ್ತು, ಗಿಡಗಂಟೆಗಳು ಬೆಳೆದಿದ್ದರಿಂದ ಮರಗಳು ಆಸ್ಪತ್ರೆಯ ಹೊರನೋಟವನ್ನೆ ಮುಚ್ಚಿದ್ದವು. ಕೋಲಾರ ಸಂಸದ ಎಸ್ ಮುನಿಸ್ವಾಮಿ ಅವರು ಒಮ್ಮೆ ಅಧಿಕಾರಿಗಳ ಸಮೇತ ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಈ ಕಟ್ಟಡದಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯುವ ಪ್ರಸ್ತಾಪವನ್ನು ಇರಿಸಿದ್ದರು.
ಆದರೆ ಆರಂಭದಲ್ಲಿ ಇದನ್ನು ಎಲ್ಲರು ತಳ್ಳಿಹಾಕಿದ್ದು, ಪಾಳುಬಿದ್ದಿರುವ ಕಟ್ಟಡದಲ್ಲಿ ರೋಗಿಗಳನ್ನ ಆರೈಕೆ ಮಾಡುವುದು ಸವಾಲಿನ ಕೆಲಸ ಎಂದು ತಿಳಿಸಿದ್ದರು. ಆದರೆ ಪಟ್ಟು ಬಿಡದ ಸಂಸದ ಮುನಿಸ್ವಾಮಿ, ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಖಾತೆ ಸಚಿವ ಪ್ರಹ್ಲಾದ್ ಜೋಶಿ ಅವರ ಗಮನಕ್ಕೆ ತಂದು, ಆಸ್ಪತ್ರೆಯಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲು ಅನುಮತಿ ಪಡೆದುಕೊಂಡರು.
ಬಳಿಕ ಇಲ್ಲಿ ಸ್ವಚ್ಚತಾ ಕಾರ್ಯ ಆರಂಭಿಸಿದ ಬಿಜೆಪಿ ನಾಯಕರಿಗೆ ಸ್ತಳೀಯ ಯುವಕರು, ಆರ್ ಎಸ್ ಎಸ್ ಸ್ವಯಂ ಸೇವಕ ಸಂಘ, ಇತರೆ ಪಕ್ಷದ ನಾಯಕರು ಸಾಥ್ ನೀಡಿದ್ದಾರೆ. ಸತತ 21 ದಿನ 250 ಕ್ಕು ಹೆಚ್ಚು ಜನರು ಶ್ರಮ ವಹಿಸಿ ಆಸ್ಪತ್ರೆಯ ನೋಟವನ್ನೆ ಬದಲಿಸಿದ್ದಾರೆ. ಪಾಳು ಬಿದ್ದಿದ್ದ ಕಟ್ಟಡದಲ್ಲಿಯೇ ಇದ್ದ ಕಾಟ್ ಗಳಿಗೆ ಪೇಂಟ್ ಮಾಡಿ ಮರುಬಳಕೆ ಮಾಡಿದ್ದು, ಮೇಲ್ಚಾವಣಿ ಕಿಟಕಿ ಸರಿಪಡಿಸಲಾಗಿದೆ, ಇನ್ನು ಹಾಳಾಗಿದ್ದ ವಿದ್ಯುತ್ ಪೂರೈಕೆ, ಶೌಚಾಲಯ ವ್ಯವಸ್ತೆ, ನೀರಿನ ಪೈಪ್, ಹಾಳಾಗಿದ್ದ ನೆಲವನ್ನ ಸಿಮೆಂಟ್ ಕಾಮಗಾರಿ ನಡೆಸಿ ಸರಿಪಡಿಸಲಾಗಿದೆ.
ಇದನ್ನೂ ಓದಿ: Rahul Gandhi: ಸೋಂಕಿನಿಂದ ಸಾವಿನ ಸಂಖ್ಯೆ ಏರುತ್ತಿದೆ, ಕೇಂದ್ರ ಜನರ ಗಮನವನ್ನು ಬೇರೆಡೆ ಸೆಳೆಯುತ್ತಿದೆ; ರಾಹುಲ್ ಗಾಂಧಿ ಕಿಡಿ
ಆಸ್ಪತ್ರೆಯಲ್ಲಿನ ಕಾಟ್ ಗಳಿಗೆ ಬೆಡ್ ಗಳನ್ನ ದಾನಿಗಳು ನೀಡಿದ್ದಾರೆ. ಆಸ್ಪತ್ರೆಯಲ್ಲಿ ಹಲವು ಸೌಲಭ್ಯ ಕಲ್ಪಿಸಲು ದಾನಿಗಳ ಎಲ್ಲಾ ರೀತಿಯ ಸಹಕಾರವನ್ನ ನೀಡಿದ್ದರಿಂದ ಇದೀಗ ಆಸ್ಪತ್ರೆಯ ಒಳನೋಟ ಹೊರನೋಟವು ಬದಲಾಗಿದ್ದು, ಸುಣ್ಣ ಬಣ್ಣ ಬಳಿದು ಕಟ್ಟಡಕ್ಕೆ ನೂತನ ರೂಪುರೇಷೆ ನೀಡಲಾಗಿದೆ. ಸಂಸದ ಎಸ್ ಮುನಿಸ್ವಾಮಿ ಅವರ ಮುತುವರ್ಜಿಯ ಜೊತೆಗೆ ಕೆಜಿಎಪ್ ನಗರದ ಯುವಕರು, ಸ್ವಯಂ ಸೇವಕರ ಸಂಘ, ಇತರೆ ರಾಜಕೀಯ ಪಕ್ಷಗಳ ನಾಯಕರ ಬೆಂಬಲ. ಜೊತೆಗೆ ಜಿಲ್ಲಾಡಳಿತ, ತಾಲೂಕು ಆಡಳಿತ, ಕೆಜಿಎಪ್ ನಗರಸಭೆ ಮತ್ತು ಬೆಸ್ಕಾಂ ಇಲಾಖೆಯ ಸಹಕಾರದಿಂದ ಇದೀಗ ಕೋವಿಡ್ ಕೇರ್ ಸೆಂಟರ್ ತೆರೆಯಲು ಸಾಧ್ಯವಾಗಿದೆ ಎಂದು ಸಂಸದ ಎಸ್ ಮುನಿಸ್ವಾಮಿ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ.
ಒಟ್ಟಿನಲ್ಲಿ 20 ವರ್ಷದಿಂದ ಮುಚ್ಚಿದ್ದ ಆಸ್ಪತ್ರೆಗೆ ಪುನಃ ಕಾಯಕಲ್ಪ ನೀಡಿ ಮರುಬಳಕೆ ಮಾಡುವ ಕಾರ್ಯಕ್ಕೆ ಚಾಲನೆ ಸಿಕ್ಕಿದ್ದು, ಬಿಜಿಎಮ್ಎಲ್ ಕೋವಿಡ್ ಕೇರ್ ಸೆಂಟರ್ ಕೊರೊನಾ ಸೋಂಕಿತರ ಪಾಲಿಗೆ ಸಂಜೀವಿನಿ ಆಗಲಿ ಎಂಬುದು ಎಲ್ಲರ ಆಶಯವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ