HOME » NEWS » District » THE GOVERNMENT SHOULD SUBMIT A JUDICIAL INQUIRY INTO THE TRAGIC CASE OF CHAMARAJANAGAR DK SHIVAKUMAR DEMAND MAK

ಚಾಮರಾಜನಗರದಲ್ಲಿ ಸೋಂಕಿತರನ್ನು ಸರ್ಕಾರವೇ ಕೊಲೆ ಮಾಡಿದ್ದು, ನ್ಯಾಯಾಂಗ ತನಿಖೆ ಆಗಬೇಕು: ಡಿ.ಕೆ. ಶಿವಕುಮಾರ್ ಆಗ್ರಹ

ಈ ಸಾವಿನ ಬಗ್ಗೆ ಒಂದು ವಾರದ ಕಾಲಮಿತಿಯಲ್ಲಿ ನ್ಯಾಯಾಂಗ ತನಿಖೆ ಮಾಡಿಸಬೇಕು. ಈ ಸಾವಿಗೆ ಯಾರಾದರೂ ಹೊಣೆ ಹೊರಬೇಕಲ್ಲ. ಸರ್ಕಾರವೇ ಜನರನ್ನು ಕೊಂದಿದ್ದು, ಸಂಬಂಧಪಟ್ಟವರ ವಿರುದ್ಧ ಸುಮೋಟೋ ಪ್ರಕರಣ ದಾಖಲಾಗಬೇಕು ಎಂದು ಡಿ.ಕೆ. ಶಿವಕುಮಾರ್ ಒತ್ತಾಯಿಸಿದ್ದಾರೆ.

news18-kannada
Updated:May 4, 2021, 9:34 PM IST
ಚಾಮರಾಜನಗರದಲ್ಲಿ ಸೋಂಕಿತರನ್ನು ಸರ್ಕಾರವೇ ಕೊಲೆ ಮಾಡಿದ್ದು, ನ್ಯಾಯಾಂಗ ತನಿಖೆ ಆಗಬೇಕು: ಡಿ.ಕೆ. ಶಿವಕುಮಾರ್ ಆಗ್ರಹ
ಡಿ.ಕೆ. ಶಿವಕುಮಾರ್​.
  • Share this:
ಚಾಮರಾಜನಗರ (ಮೇ 04); ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸಜನ್ ಇಲ್ಲದ ಕಾರಣ ಚಾಮರಾಜನಗರದಲ್ಲಿ ನಿನ್ನೆ 24 ಜನ ಮೃತಪಟ್ಟಿದ್ದರು. ಈ ಸುದ್ದಿ ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು. ಅಲ್ಲದೆ, ಎಲ್ಲಾ ರಾಷ್ಟ್ರೀಯ ನಾಯಕರು ಈ ಘಟನೆಯನ್ನು ಖಂಡಿಸಿದ್ದು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಇದೀಗ ಈ ಕುರಿತು ರಾಜ್ಯ ಸರ್ಕಾರದ ವಿರುದ್ಧ ಇಂದು ಕಿಡಿಕಾರಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, "ಆಕ್ಸಿಜನ್ ನೀಡದೆ ಕೊರೋನಾ ಸೋಂಕಿತರನ್ನು ಸರ್ಕಾರವೇ ಹತ್ಯೆ ಮಾಡಿದ್ದು, ಈ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು" ಎಂದು ಒತ್ತಾಯಿಸಿದ್ದಾರೆ.

ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಮಂಗಳವಾರ ಅಧಿಕಾರಿಗಳ ಜತೆ ಚರ್ಚೆ ನಡೆಸಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್ ಅವರು, "ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದವರ ಸಂಖ್ಯೆ ಬಗ್ಗೆ ಮಂತ್ರಿಗಳು ಮಾಧ್ಯಮಗಳಿಗೆ ಕೊಟ್ಟ ಹೇಳಿಕೆಗೂ ವಾಸ್ತವಕ್ಕೂ ಭಾರೀ ವ್ಯತ್ಯಾಸ ಇದೆ. ನಮ್ಮ ಶಾಸಕರ ಮಾತು ಕೇಳಿ ನಾವು ಈ ತೀರ್ಮಾನಕ್ಕೆ ಬಂದಿಲ್ಲ. ನಾವು ಖುದ್ದಾಗಿ ಇಲ್ಲಿಗೆ ಬಂದು ಅಧಿಕಾರಿಗಳ ಬಳಿ ಮಾಹಿತಿ ಪಡೆದ ನಂತರ 24+4 - ಹೀಗೆ ಒಟ್ಟು 28 ಜನ ಸತ್ತಿದ್ದಾರೆ ಎಂದು ತಿಳಿದು ಬಂದಿದೆ. ನಮ್ಮ ಬಳಿ ಸತ್ತವರ ಹೆಸರು, ಊರು, ಸಮಯ ಎಲ್ಲದರ ದಾಖಲೆಯೂ ಇದೆ.

ನಮಗೆ ನಿನ್ನೆ ಮಾಧ್ಯಮಗಳ ವರದಿ ಮತ್ತು ಮಂತ್ರಿಗಳ ಹೇಳಿಕೆ ನೋಡಿ ಯಾರು ಸುಳ್ಳು ಹೇಳುತ್ತಿದ್ದಾರೆ ಎಂಬ ಬಗ್ಗೆ ಗೊಂದಲ ಇತ್ತು. ಹೀಗಾಗಿ ನಾವು ಇಲ್ಲಿಗೆ ಬಂದು ಖುದ್ದು ಪರಿಶೀಲಿಸಿದ್ದೇವೆ.

ಇಲ್ಲಿ ಸತ್ತವರೆಲ್ಲರೂ ಏಕಕಾಲಕ್ಕೆ ಕೊನೆಯುಸಿರು ಎಳೆದಿದ್ದಾರೆ ಎಂದು ತಿಳಿದು ಬಂದಿದೆ. ನಮ್ಮ ಶಾಸಕರು ಹಾಗೂ ಮಾಜಿ ಸಂಸದರಾದ ಧೃವನಾರಾಯಣ್ ಅವರು ಆಕ್ಸಿಜನ್ ಕೊರತೆ ಬಗ್ಗೆ ಮುಖ್ಯ ಕಾರ್ಯದರ್ಶಿಗಳಿಗೇ ಕರೆ ಮಾಡಿ ತಿಳಿಸಿ, ಎಚ್ಚರಿಕೆ ನೀಡಿದ್ದರು. ಅವರು ಕೂಡ ನಾವು ನಿಭಾಯಿಸುತ್ತೇವೆ ಎಂದಿದ್ದರು. ಆದರೆ ಅವರಿಂದ ಇದು ಸಾಧ್ಯವಾಗಿಲ್ಲ.

ಹೀಗಾಗಿ ಈ ಸಾವಿನ ಬಗ್ಗೆ ಒಂದು ವಾರದ ಕಾಲಮಿತಿಯಲ್ಲಿ ನ್ಯಾಯಾಂಗ ತನಿಖೆ ಮಾಡಿಸಬೇಕು. ಈ ಸಾವಿಗೆ ಯಾರಾದರೂ ಹೊಣೆ ಹೊರಬೇಕಲ್ಲ. ಸರ್ಕಾರವೇ ಜನರನ್ನು ಕೊಂದಿದ್ದು, ಸಂಬಂಧಪಟ್ಟವರ ವಿರುದ್ಧ ಸುಮೋಟೋ ಪ್ರಕರಣ ದಾಖಲಾಗಬೇಕು.

ರಾಜ್ಯ ಸರ್ಕಾರವೇ ಐಸಿಯುನಲ್ಲಿದ್ದು, ಅದಕ್ಕೇ ಆಕ್ಸಿಜನ್ ಇಲ್ಲದಂತಾಗಿದೆ. ನಮ್ಮ ಕ್ಷೇತ್ರದಲ್ಲಿಯೂ ಆಕ್ಸಿಜನ್ ಕೊರತೆ ಇದ್ದು, ನಿನ್ನೆ ರಾತ್ರಿ ನಾವು ಮುನ್ನೆಚ್ಚರಿಕೆ ಕೊಟ್ಟ ಮೇಲೆ ಅದನ್ನು ಪೂರೈಸಲಾಗಿದೆ" ಎಂದಿದ್ದಾರೆ.

ದೇಶದಲ್ಲಿ ಕೈಮೀರಿದ ಕೊರೋನಾ:ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ‌ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಆತಂಕವನ್ನು ಸೃಷ್ಟಿಸುತ್ತಿದೆ. ಕೊರೋನಾ ಸೋಂಕು ಹರಡುವಿಕೆ ಶರವೇಗವನ್ನು ಪಡೆದುಕೊಂಡಿದೆ.‌ ಹಲವು ನಿರ್ಬಂಧಗಳ ನಡುವೆಯೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೊರೋನಾ ಸೋಂಕಿತರು ಪತ್ತೆ ಆಗುತ್ತಿದ್ದಾರೆ‌.‌ ಏಪ್ರಿಲ್ 4ರಿಂದ ದಿನ ಒಂದರಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು, ಏಪ್ರಿಲ್ 14ರಿಂದ ದಿನ ಒಂದರಲ್ಲಿ ಎರಡು ಲಕ್ಷಕ್ಕೂ ‌ಹೆಚ್ಚು‌ ಜನರು ಹಾಗೂ ಏಪ್ರಿಲ್ 17ರಿಂದ ದಿನ‌ ಒಂದರಲ್ಲಿ ಎರಡೂವರೆ ಲಕ್ಷಕ್ಕೂ ಹೆಚ್ಚು ಜನರು ಕೊರೊನಾ ಸೋಂಕು ಪೀಡಿತರಾಗುತ್ತಿದ್ದರು. ಈಗ ಮೂರೂವರೆ ಲಕ್ಷಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಗೋಚರಿಸಲು ಆರಂಭಿಸಿವೆ. ಅಲ್ಲದೆ ದೇಶದ ಕೊರೊನಾ ಪೀಡಿತರ ಸಂಖ್ಯೆ ಎರಡು ಕೋಟಿ ದಾಟಿದೆ.

ಇದನ್ನೂ ಓದಿ: ಸುಧಾಕರ್ ಬಿಟ್ಟು ಉಳಿದ ಸಚಿವರಿಗೆ ಕೋವಿಡ್​​ ನಿರ್ವಹಣೆ ಉಸ್ತುವಾರಿ; ನಾಳೆಯಿಂದಲೇ ಫೀಲ್ಡ್​ಗೆ ಇಳಿಯುವಂತೆ ಸಿಎಂ ಸೂಚನೆ

ಸೋಮವಾರ 3,57,229 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಈ ಪೈಕಿ ಗುಣ ಆಗಿರುವವರು 3,20,289 ಜನ ಮಾತ್ರ. ಇದರಿಂದ ದೇಶದಲ್ಲಿ ಈವರೆಗೆ ಕೊರೋನಾ ಸೋಂಕು ಪೀಡಿತರಾದವರ ಸಂಖ್ಯೆ ಎರಡು ಕೋಟಿ ದಾಟಿದ್ದು 2,02,82,833ಕ್ಕೆ ಏರಿಕೆ ಆಗಿದೆ.‌ ಇದಲ್ಲದೆ ದಿನದಿಂದ ದಿನಕ್ಕೆ ಕೊರೋನಾ ರೋಗಕ್ಕೆ ಬಲಿ ಆಗುತ್ತಿರುವವರ ಸಂಖ್ಯೆ ಕೂಡ‌ ಹೆಚ್ಚಾಗಿದ್ದು ದೇಶದಲ್ಲಿ ಇದೀಗ ದಿನ ಒಂದರಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನ‌ ಸಾವನ್ನಪ್ಪುತ್ತಿದ್ದಾರೆ. ಸೋಮವಾರ 3,449 ಜನರು ಬಲಿ ಆಗಿದ್ದು ಈವರೆಗೆ ಮಹಾಮಾರಿ ಕೊರೋನಾಗೆ ಬಲಿ ಆದವರ ಸಂಖ್ಯೆ 2,22,408ಕ್ಕೆ ಏರಿಕೆ ಆಗಿದೆ.

ದೇಶದಲ್ಲಿ ಮೊತ್ತ ಮೊದಲ ಬಾರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು 2020ರ ಜನವರಿ 30ರಂದು; ಕೇರಳದಲ್ಲಿ. ಅದಾದ ಬಳಿಕ ಅದು ಲಕ್ಷದ ಗಡಿ ಬಳಿ ಬರಲು ಹೆಚ್ಚು ಕಡಿಮೆ ಎಂಟು ತಿಂಗಳು ಹಿಡಿದವು. ಆಗಲೂ ದಿನ ಒಂದರಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಒಂದು ಲಕ್ಷ ದಾಟಿರಲಿಲ್ಲ. 2020ರ ಸೆಪ್ಟೆಂಬರ್ 17ರಂದು 98,795 ಕೇಸ್ ಕಂಡುಬಂದಿದ್ದೇ ಈವರೆಗಿನ ದಾಖಲೆ ಆಗಿತ್ತು.
Published by: MAshok Kumar
First published: May 4, 2021, 9:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories