ಕೊಡಗು : ಬಾಲಕರಿಲ್ಲದ ಬಾಳಿದ್ಯಾತರ ಜನ್ಮ, ಬಾಡಿಗಿ ಎತ್ತು ದುಡಿದಂಗ, ಬಾಳೆಲಿ ಹಾಸುಂಡ ಬೀಸಿ ಒಗೆದಂಗ... ಎನ್ನೋದು ಸುಪ್ರಸಿದ್ಧ ಕನ್ನಡ ಜಾನಪದ ಸಾಲುಗಳು. ಆದರೆ ಮಕ್ಕಳ ಮಾತಿರಲಿ, ತನ್ನ ಗಂಡ, ಅಣ್ಣ, ತಮ್ಮ ಅಕ್ಕ ತಂಗಿ ತಂದೆ-ತಾಯಿ ಯಾರು ಇಲ್ಲದಿದ್ದವರ ಬದುಕು ಹೇಗಿರಬಹುದು. ಹೌದು, ಕೊಡಗು ಜಿಲ್ಲೆಯ ಕೂಡಿಗೆ ಸಮೀಪದ ಭುವನಗಿರಿಯ ವೃದ್ಧೆಯೊಬ್ಬರು ತನ್ನ ಪಾಲಿಗೆ ಯಾರು ಇಲ್ಲದಿದ್ದರೂ ಮೇಕೆಗಳನ್ನೇ ತನ್ನ ಮಕ್ಕಳೆಂದು ಪ್ರೀತಿಯಿಂದ ಸಾಕಿ ಸಲಹುತ್ತಾ, ತನ್ನೆಲ್ಲಾ ನೋವು ಮರೆಯುತ್ತಾ ಬದುಕು ದೂಡುತ್ತಿದ್ದಾರೆ.
ಹುಟ್ಟಿನಿಂದಲೇ ಬಲಗೈ ಮತ್ತು ಬಲಗಾಲ ಸ್ವಾಧೀನ ಕಳೆದುಕೊಂಡು ಹುಟ್ಟಿದ ಸಿದ್ದಮ್ಮ ಆರು ತಿಂಗಳ ಮಗುವಾಗಿರುವಾಗಲೇ ತಂದೆ ತಾಯಿ ಇಬ್ಬರು ಮೃತಪಟ್ಟಿದ್ದರಂತೆ. ಮೈಸೂರು- ಕೊಡಗು ಗಡಿಭಾಗವಾದ ದೊಡ್ಡಕಮರಹಳ್ಳಿಯಲ್ಲಿ ಯಾರ್ಯಾರದೋ ಆಶ್ರಯದಲ್ಲೇ ಬೆಳೆದು ದೊಡ್ಡವರಾದ ಸಿದ್ದಮ್ಮನನ್ನು ಭುವನಗಿರಿಯ ಜವರಪ್ಪ 49 ವರ್ಷಗಳ ಹಿಂದೆ ವಿವಾಹವಾದರಂತೆ. ಆದರೆ ಸಿದ್ದಮ್ಮನಿಗೆ ಮಾತ್ರ ಮಕ್ಕಳಾಗಲೇ ಇಲ್ಲ. ಅಂದಿನಿಂದಲೂ ಮೇಕೆಗಳನ್ನೇ ಮೇಯಿಸುತ್ತಾ, ಬದುಕು ನಡೆಸುತ್ತಿರುವ ಸಿದ್ದಮ್ಮ, ಮಕ್ಕಳಾಗದಿದ್ದ ಮೇಲೆ ಮೇಕೆಗಳನ್ನೇ ಮಕ್ಕಳೆಂದು ಭಾವಿಸಿ ಸಾಕಿ ಸಲಹುತ್ತಿದ್ದಾರೆ.
ಇದನ್ನು ಓದಿ: Green Crackers: ಹಸಿರು ಪಟಾಕಿಯನ್ನು ಪತ್ತೆ ಹಚ್ಚುವುದು ಹೇಗೆ?; ಸರ್ಕಾರ ನೀಡಿದ ಮಾಹಿತಿ ಇಲ್ಲಿದೆ
ಬೆಟ್ಟವನ್ನೇರಿ ಎಡಗೈಯಿಂದಲೇ ಸೊಪ್ಪು ಕಡಿದು ಪ್ರೀತಿಯಿಂದ ಮೇಕೆಗಳ ಕರೆಯುತ್ತಿರುವ 65 ವರ್ಷದ ಸಿದ್ದಮ್ಮನಿಗೆ ಇವುಗಳೇ ಮಕ್ಕಳು. ತಾನು ಎಲ್ಲಿ ಹೋದರೂ ಹಿಂದೆ ಹಿಂದೆ ಬರುತ್ತವೆ. ಯಾವ ಆಡುಗಳ ಜೊತೆಗೂ ಇವು ಹೋಗುವುದಿಲ್ಲ, ನನಗೂ ಇವುಗಳನ್ನು ಬಿಟ್ಟು ಇರಲಾಗಲ್ಲ. ಇವುಗಳಿಲ್ಲದೆ ನನ್ನ ಬದುಕಿಲ್ಲ ಎಂದು ನೊಂದು ನುಡಿಯುತ್ತಾರೆ. ಎರಡು ವರ್ಷಗಳ ಹಿಂದಿನವರೆಗೆ ತನ್ನ ಪತಿ ಜವರಪ್ಪ ಬದುಕಿರುವಾಗ ನನ್ನ ಬದುಕು ಚೆನ್ನಾಗಿಯೇ ಇತ್ತು. ಮಕ್ಕಳಿಲ್ಲ ಎನ್ನೋ ನೋವನ್ನು ಮರೆಸುವಂತೆ ನನ್ನ ಗಂಡನಿದ್ದರು. ಆದರೆ ಅವರೇ ನನಗಿಂತ ಮೊದಲೇ ಹೊರಟು ಹೋದರು ಎನ್ನುವಾಗ ಸಿದ್ದಮ್ಮನ ದುಃಖದ ಕಟ್ಟೆಹೊಡೆದಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ