HOME » NEWS » District » THE FIRST STEP WAS TAKEN FOR START FILM CITY CONSTRUCTION IN MYSURU RHHSN PMTV

ಸಾಂಸ್ಕೃತಿಕ ನಗರಿಯಲ್ಲಿ ಚಿತ್ರನಗರಿ ನಿರ್ಮಾಣಕ್ಕೆ ಮೊದಲ ಹೆಜ್ಜೆ; ಮೈಸೂರಿನಲ್ಲಿ ನಿಗದಿತ ಜಾಗದ ಪರಿಶೀಲನೆ

1972ರಲ್ಲೇ ರಾಜ್ಯದಲ್ಲಿ ಚಿತ್ರನಗರಿ ಸ್ಥಾಪನೆಯ ಪ್ರಯತ್ನ ಪ್ರಾರಂಭವಾಗಿತ್ತು. ವಿವಿಧೆಡೆ ಸ್ಥಳಗಳ ಗುರುತಿಸಲಾಗಿತ್ತು. ಅಂತಿಮವಾಗಿ‌ 2015-16 ರಲ್ಲಿ ಸಿದ್ದರಾಮಯ್ಯ ಅವರ ಸರ್ಕಾರವಿದ್ದಾಗ ಮೈಸೂರು ಬಳಿ ಇಮ್ಮಾವು ಬಳಿ‌ ಜಾಗ ಗುರುತಿಸಲಾಗಿತ್ತು. ಹಾಲಿ‌ ಮುಖ್ಯಮಂತ್ರಿಯವರು 2021-22ರ ಬಜೆಟ್ ಭಾಷಣದಲ್ಲಿ ರೂ.500 ಕೋಟಿ ವೆಚ್ಚದಲ್ಲಿ ಚಿತ್ರ ನಗರಿ ನಿರ್ಮಾಣ ಯೋಜನೆಯನ್ನು ಘೋಷಿಸಲಾಗಿದೆ.

news18-kannada
Updated:April 7, 2021, 2:20 PM IST
ಸಾಂಸ್ಕೃತಿಕ ನಗರಿಯಲ್ಲಿ ಚಿತ್ರನಗರಿ ನಿರ್ಮಾಣಕ್ಕೆ ಮೊದಲ ಹೆಜ್ಜೆ; ಮೈಸೂರಿನಲ್ಲಿ ನಿಗದಿತ ಜಾಗದ ಪರಿಶೀಲನೆ
ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣದ ಸ್ಥಳ ಹಾಗೂ ದಾಖಲಾತಿ ಪರಿಶೀಲಿಸಿದ ಅಧಿಕಾರಿಗಳು.
  • Share this:
ಮೈಸೂರು: ಬಹುನಿರೀಕ್ಷಿತ ಅಂತಾರಾಷ್ಟ್ರೀಯ ಗುಣಮಟ್ಟದ ಚಿತ್ರನಗರಿಯನ್ನು ಮೈಸೂರಿನಲ್ಲಿ ನಿರ್ಮಿಸಲು ಸರ್ಕಾರ ಆದೇಶಿಸಿರುವ ಹಿನ್ನೆಲೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾದ ಡಾ.ಪಿ.ಎಸ್. ಹರ್ಷ ಅವರು ಇಮ್ಮಾವು ಸಮೀಪ ಗುರುತಿಸಲಾಗಿರುವ ಉದ್ದೇಶಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಿತ್ರನಗರಿ ನಿರ್ಮಾಣಕ್ಕೆ ಸದ್ಯ ಗುರುತಿಸಿರುವ ಇಮ್ಮಾವು ಸಮೀಪದ ಜಾಗ ಅತ್ಯಂತ ಸೂಕ್ತವಾಗಿದೆ. ನೀರು ಹಾಗೂ ಇತರ ಮೂಲ ಸೌಕರ್ಯ ಒದಗಿಸಲು  ಕ್ರಿಯಾ ಯೋಜನೆ ಸಿದ್ದಪಡಿಸಿಕೊಳ್ಳುವಂತೆ ಕೆ.ಐ.ಎ.ಡಿ.ಬಿ. ಅಧಿಕಾರಿಗಳಿಗೆ ವಾರ್ತಾ ಇಲಾಖೆ‌ ಆಯುಕ್ತರು ಮನವಿ ಮಾಡಿದ್ದಾರೆ. ಈ ಬೆಳವಣಿಗೆಯಿಂದ ಅರಮನೆ ನಗರಿಯಲ್ಲಿ ಚಿತ್ರನಗರಿಯ ಕಾಮಗಾರಿ ಶೀಘ್ರದಲ್ಲೇ ಆರಂಭವಾಗುವ ಸಾಧ್ಯತೆ ಇದೆ.

ಉದ್ದೇಶಿತ ಯೋಜನೆಗೆ ಗುರುತಿಸಿ, ಮೀಸಲಿರಿಸಲಾಗಿರುವ 110 ಎಕರೆ ಸರ್ಕಾರಿ ಜಾಗವನ್ನು ಚಿತ್ರನಗರಿ ನಿರ್ಮಾಣ ಉದ್ದೇಶಕ್ಕಾಗಿ ಕೆ.ಐ.ಎ.ಡಿ.ಬಿ. ಮೂಲಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಅಧಿಕೃತ ವಾಗಿ ಹಸ್ತಾಂತರ ಮಾಡಿಕೊಳ್ಳಬೇಕಿದ. ಇದಕ್ಕಾಗಿ ನಂಜನಗೂಡು ತಹಸೀಲ್ದಾರ್ ಮೋಹನ್‌ ಕುಮಾರಿ ದಾಖಲೆ ಪರಿಶೀಲನೆ ನಡೆಸುತ್ತಿದ್ದು, ಶೀಘ್ರದಲ್ಲೇ ಅದು ಸಹ ಮುಕ್ತಾಯವಾಗಲಿದೆ. ಜಾಗದ ದಾಖಲೆ ಹಾಗೂ ಇತರ ವಿಷಯಗಳ ಕುರಿತು ವಾರ್ತಾ ಇಲಾಖೆ ಆಯುಕ್ತರಿಗೆ ವಿವರ ಒದಗಿಸಿರುವ ತಾಲ್ಲೂಕು ಆಡಳಿತ, ಅಗತ್ಯ ದಾಖಲೆಗಳನ್ನು ನೀಡುವುದಾಗಿ ಭರವಸೆ ನೀಡಿದೆ. ಚಿತ್ರನಗರಿ ನಿರ್ಮಾಣದ ಸಂಬಂಧ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರು ಈ ವಾರಂತ್ಯದೊಳಗೆ ಬೆಂಗಳೂರಿನಲ್ಲಿ ಸಭೆ ನಡೆಸುವರು. ಸದರಿ ಸಭೆಯಲ್ಲಿ ಪಾಲ್ಗೊಂಡು ಸ್ಥಳ ಹಸ್ತಾಂತರ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ಒದಗಿಸುವಂತೆ  ಆಯುಕ್ತರು ತಹಸೀಲ್ದಾರ್ ಅವರಿಗೆ ತಿಳಿಸಿದರು.

ಇದೊಂದು ಬೃಹತ್ ಯೋಜನೆಯಾಗಿದ್ದು, ಚಿತ್ರನಗರಿ ಸ್ಥಾಪನೆಯಾದರೆ ಪ್ರತಿದಿನ ಕಲಾವಿದರು, ತಂತ್ರಜ್ಞರು, ಕಾರ್ಮಿಕರು ಸೇರಿದಂತೆ ಸುಮಾರು 5000 ಮಂದಿ ಕೆಲಸ ಮಾಡಬಹುದು. ಇದೊಂದು ಆಕರ್ಷಕ ಪ್ರವಾಸಿ ತಾಣವಾಗಲಿದೆ. ಈ ನಿಟ್ಟಿನಲ್ಲಿ ಎಲ್ಲಾ ಅಂಶಗಳನ್ನು ಗಮನದಲ್ಲಿರಿಸಿಕೊಂಡು ವಿಸ್ತೃತ ಯೋಜನೆ ರೂಪಿಸಿ ವಿವಿಧ ಇಲಾಖೆಗಳ ಸಹಕಾರವನ್ನು ಪಡೆದು  ಕಾಮಗಾರಿ‌ ಹಾಗೂ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಬೇಕಾಗುತ್ತದೆ ಎಂದು ಡಾ.ಪಿ.ಎಸ್ ಹರ್ಷ ಅವರು ತಿಳಿಸಿದರು.

ಚಿತ್ರನಗರಿ ನಿರ್ಮಾಣದ ಹಾಗೂ ನಿರ್ವಹಣೆಗೆ ಸಂಬಂಧಿಸಿದಂತೆ ಮುಂದಿನ ಹಂತದಲ್ಲಿ ಜಿಲ್ಲಾ ಮಟ್ಟದಲ್ಲಿ ಅನುಷ್ಠಾನ ಸಮಿತಿ ರಚಿಸಬೇಕಾಗಿದ್ದು, ಸಮಿತಿಯಲ್ಲಿರಬೇಕಾದ ಜನ ಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಗಣ್ಯರ ಬಗ್ಗೆ ಜಿಲ್ಲಾಧಿಕಾರಿಯವರೊಂದಿಗೆ ಚರ್ಚಿಸಿ ಮಾಹಿತಿ ಒದಗಿಸುವಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾದ ಡಾ.ಪಿ.ಎಸ್. ಹರ್ಷ ಅವರು ಇಲಾಖಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಇದನ್ನು ಓದಿ: ಮುಷ್ಕರನಿರತ ಸಾರಿಗೆ ನೌಕರರಿಗೆ ವೇತನ ಕಡಿತ; ಮಾರ್ಚ್ ತಿಂಗಳ ಸಂಬಳಕ್ಕೂ ತಡೆ ಸಾಧ್ಯತೆ

1972ರಲ್ಲೇ ರಾಜ್ಯದಲ್ಲಿ ಚಿತ್ರನಗರಿ ಸ್ಥಾಪನೆಯ ಪ್ರಯತ್ನ ಪ್ರಾರಂಭವಾಗಿತ್ತು. ವಿವಿಧೆಡೆ ಸ್ಥಳಗಳ ಗುರುತಿಸಲಾಗಿತ್ತು. ಅಂತಿಮವಾಗಿ‌ 2015-16 ರಲ್ಲಿ ಸಿದ್ದರಾಮಯ್ಯ ಅವರ ಸರ್ಕಾರವಿದ್ದಾಗ ಮೈಸೂರು ಬಳಿ ಇಮ್ಮಾವು ಬಳಿ‌ ಜಾಗ ಗುರುತಿಸಲಾಗಿತ್ತು. ಹಾಲಿ‌ ಮುಖ್ಯಮಂತ್ರಿಯವರು 2021-22ರ ಬಜೆಟ್ ಭಾಷಣದಲ್ಲಿ ರೂ.500 ಕೋಟಿ ವೆಚ್ಚದಲ್ಲಿ ಚಿತ್ರ ನಗರಿ ನಿರ್ಮಾಣ ಯೋಜನೆಯನ್ನು ಘೋಷಿಸಿದ್ದು, ಹಾಲಿ ಈ ಯೋಜನೆಯು ಸಾರ್ವಜನಿಕ ಸಹಭಾಗಿತ್ವದಲ್ಲಿ ನಡೆಯಲಿದೆ. ಇದರ ಅನುಷ್ಠಾನವನ್ನು ಚುರುಕಾಗಿ ಹಾಗೂ ಪರಿಣಾಮಕಾರಿಯಾಗಿ ಮಾಡುವ ಉದ್ದೇಶದೊಂದಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾದ ಡಾ.ಪಿ. ಎಸ್. ಹರ್ಷ ಅವರು ಉದ್ದೇಶಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೂಡ ಮಾಡಿದ್ದಾರೆ.
ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಭಾರಿ ಉಪ ನಿರ್ದೇಶಕರಾದ ವಿನೋದ್‌ ಚಂದ್ರ, ಸಹಾಯಕ ನಿರ್ದೇಶಕರಾದ ರಾಜು ಆರ್, ಕೆ.ಎಸ್.ವಿಜಯಾನಂದ, ಕೆ.ಐ.ಎ.ಡಿ.ಬಿ. ಸರ್ವೇ ಸೂಪರ್‌ವೈಸರ್ ರಮೇಶ್, ಹಾಗೂ  ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದು ಮಾಹಿತಿ ನೀಡಿದರು.
Published by: HR Ramesh
First published: April 7, 2021, 2:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories