HOME » NEWS » District » THE FIGHT TO CHANGE THE NAME OF THE KADUGOLLA DEVELOPMENT CORPORATION GM ERANNA ALLEGATION VKTMK HK

ಕಾಡುಗೊಲ್ಲರ ಅಭಿವೃದ್ಧಿ ನಿಗಮದ ಹೆಸರು ಬದಲಾವಣೆಗೆ ಪಟ್ಟಭದ್ರ ಹಿತಾಸಕ್ತಿಗಳ ಯತ್ನ; ಜಿ.ಎಂ.ಈರಣ್ಣ ಆರೋಪ

ಸರಕಾರದ ನಡೆ, ನುಡಿಗಳ ಕುರಿತು ಸಮಾಲೋಚಿಸುವ ಸಂಬಂಧ ಇದೇ ಸೋಮವಾರ ನವೆಂಬರ್​ 30 ರಂದು ಶಿರಾ ನಗರದಲ್ಲಿ ರಾಜ್ಯದ ಎಲ್ಲಾ ತಾಲೂಕುಗಳ ಕಾಡುಗೊಲ್ಲ ಮುಖಂಡರ ಸಭೆಯನ್ನು ಕರೆಯಲಾಗಿದೆ

news18-kannada
Updated:November 27, 2020, 4:24 PM IST
ಕಾಡುಗೊಲ್ಲರ ಅಭಿವೃದ್ಧಿ ನಿಗಮದ ಹೆಸರು ಬದಲಾವಣೆಗೆ ಪಟ್ಟಭದ್ರ ಹಿತಾಸಕ್ತಿಗಳ ಯತ್ನ; ಜಿ.ಎಂ.ಈರಣ್ಣ ಆರೋಪ
ಜಿ.ಎಂ.ಈರಣ್ಣ
  • Share this:
ತುಮಕೂರು(ನವೆಂಬರ್. 27): ಕಾಡುಗೊಲ್ಲರ ಅಭಿವೃದ್ಧಿ ನಿಗಮದ ಹೆಸರನ್ನು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಗೊಲ್ಲರ ಅಭಿವೃದ್ಧಿ ನಿಗಮ ಎಂದು ಬದಲಿಸಲು ಹೊರಟಿದೆ ಎಂದು ಜಿಲ್ಲಾ ಕಾಡುಗೊಲ್ಲರ ಸಂಘದ ಸಂಘಟನಾ ಕಾರ್ಯದರ್ಶಿ ಜಿ.ಎಂ.ಈರಣ್ಣ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಸರಕಾರ ಏನಾದರೂ ಲಾಭಿಗೆ ಮಣಿದು ಹೆಸರು ಬದಲಾಯಿಸಿದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು. ರಾಜ್ಯ ಸರಕಾರ  2020ರ ಸೆಪ್ಟೆಂಬರ್​ 28 ರಂದು ಕಾಡುಗೊಲ್ಲರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಆದೇಶ ಹೊರಡಿಸಿದೆ. ನಂತರ ಸಿ.ಎಂ ನಾಗರಾಜು, ರೇಣುಕಾಚಾರ್ಯ ಹಾಗೂ ಮಾಲೇಶ್, ಜಯರಾಮ ಮಾಗಡಿ ಮತ್ತಿತರರು , ರಾಜ್ಯದ ಕಾಡುಗೊಲ್ಲ ಸಮುದಾಯದ ಮುಖಂಡರನ್ನು ಒಗ್ಗೂಡಿಸಿ, ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡ ಪರಿಣಾಮ 13 ಸಾವಿರ ಮತಗಳ ಅಂತರದಲ್ಲಿ ಉಪಚುನಾವಣೆ ಗೆಲ್ಲಲ್ಲು ಸಾಧ್ಯವಾಯಿತು ಎಂದು ತಿಳಿಸಿದರು.

ಆದರೆ , ಸರಕಾರ ಅಭಿವೃದ್ಧಿ ನಿಗಮ ಮಾಡಿದ್ದು ಬಿಟ್ಟರೆ, ಅಧ್ಯಕ್ಷರ ನೇಮಕ ಮತ್ತು ಅನುದಾನ ನೀಡಿಲ್ಲ. ಕೂಡಲೇ ಅಧ್ಯಕ್ಷರ ನೇಮಕ ಮಾಡಿ, ಕನಿಷ್ಠ 200 ಕೋಟಿ ರೂಪಾಯಿಗಳ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಸುಮಾರು 40 ಲಕ್ಷದಷ್ಟಿರುವ ಕಾಡುಗೊಲ್ಲ ಸಮುದಾಯವನ್ನು, ಗೊಲ್ಲ ಸಮುದಾಯಕ್ಕೆ ಸೇರಿದ ಕೆಲವರು ಗುತ್ತಿಗೆ ಹಿಡಿದಂತೆ ವರ್ತಿಸುತ್ತಿದ್ದಾರೆ ಎಂದು ದೂರಿದರು. ಈ ಹಿಂದೆಯೂ ಸರಕಾರ ಕಾಡು ಗೊಲ್ಲರ ಹೆಸರಿನಲ್ಲಿ ಅಭಿವೃದ್ಧಿ ನಿಗಮ ಮಾಡಿದಾಗಲೂ ಅಪಸ್ವರ ಎತ್ತಿ, ಲಾಭಿ ಮಾಡಿ, ಗೊಲ್ಲ ಅಭಿವೃದ್ಧಿ ನಿಗಮವೆಂದು ಹೆಸರು ಬದಲಾಯಿಸಿದ್ದರು . ಆದರೆ, ಕಾಡುಗೊಲ್ಲರ ತೀವ್ರ ಆಕ್ಷೇಪದ ಹಿನ್ನೆಲೆಯಲ್ಲಿ ಸರಕಾರ ಕಾಡುಗೊಲ್ಲರ ಅಭಿವೃದ್ಧಿ ನಿಗಮವೆಂದು ಮರು ನಾಮಕರಣ ಮಾಡಿದೆ. ಇದನ್ನು ಇಡೀ ರಾಜ್ಯದ ಜನತೆ ಮರೆತಿಲ್ಲ. ಹಾಗಾಗಿ ಸರಕಾರ ಯಾವುದೇ ಲಾಭಿಗೆ ಮಣಿಯದೆ ಕಾಡುಗೊಲ್ಲರ ಅಭಿವೃದ್ಧಿ ನಿಗಮದ ಹೆಸರನ್ನು ಮುಂದುವರೆಸಬೇಕು, ತಕ್ಷಣವೇ ಅಧ್ಯಕ್ಷರನ್ನು ನೇಮಕ ಮಾಡಿ , ಅನುದಾನವನ್ನು ನೀಡಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ : ಗ್ರಾಮ ಗ್ರಾಮದಲ್ಲೂ ಕಮಲ ಅರಳಬೇಕು; ಪಂಚಾಯತ್​ಗಳಲ್ಲಿ ಪಕ್ಷ ಅಧಿಕಾರ ಹಿಡಿಯಬೇಕು: ಡಿಸಿಎಂ ಅಶ್ವತ್ಥನಾರಾಯಣ

ಸರಕಾರ ಕಾಡುಗೊಲ್ಲರನ್ನು ಎಸ್ಟಿ ಜಾತಿ ಪಟ್ಟಿಗೆ ಸೇರಿಸುವ ಕುರಿತಂತೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ , ಅತ್ಯಂತ ಹಿಂದುಳಿದ ಬುಡಕಟ್ಟು ಸಮುದಾಯ ಇದಾಗಿದ್ದು, ರಾಜ್ಯದ ಸುಮಾರು 28 ವಿಧಾನಸಭಾ ಕ್ಷೇತ್ರದಲ್ಲಿ ನಿರ್ಣಾಯಕ ಮತದಾರರಾಗಿದ್ದಾರೆ. ಹಾಗಾಗಿ ಸರಕಾರ ಯಾವುದೇ ಪಟ್ಟಭದ್ರ ಹಿತಾಸಕ್ತಿಗಳ ಲಾಭಿಗೆ ಮಣಿಯಬಾರದು ಎಂದು ಮುಖಂಡರು ಆಗ್ರಹಿಸಿದರು.

ಸರಕಾರದ ನಡೆ, ನುಡಿಗಳ ಕುರಿತು ಸಮಾಲೋಚಿಸುವ ಸಂಬಂಧ ಇದೇ ಸೋಮವಾರ ನವೆಂಬರ್​ 30 ರಂದು ಶಿರಾ ನಗರದಲ್ಲಿ ರಾಜ್ಯದ ಎಲ್ಲಾ ತಾಲೂಕುಗಳ ಕಾಡುಗೊಲ್ಲ ಮುಖಂಡರ ಸಭೆಯನ್ನು ಕರೆಯಲಾಗಿದೆ. ಸಭೆಯಲ್ಲಿ ಒಂದು ವೇಳೆ ಸರಕಾರ ಲಾಭಿಗೆ ಮಣಿದು ಹೆಸರು ಬದಲಾಯಿಸಿದರೆ ಯಾವ ರೀತಿಯ ಹೋರಾಟ ನಡೆಸಬೇಕು ಎಂಬುದರ ಕುರಿತು ಚರ್ಚೆ ನಡೆಸಿ, ನಿರ್ಣಯ ಕೈಗೊಳ್ಳಲಾಗುವುದು ಎಂದು ಸಂಘಟನಾ ಕಾರ್ಯದರ್ಶಿ ಜಿ.ಎಂ.ಈರಣ್ಣ ತಿಳಿಸಿದರು.
Published by: G Hareeshkumar
First published: November 27, 2020, 4:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading