Farmers Problem: ರೈತ ವರರಿಗೆ ಸಿಗುತ್ತಿಲ್ಲ ವಧು; ಮದುವೆ ಮಾಡಿಸುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆದ ನೊಂದ ರೈತ ಯುವಕರು!

ಗಾರ್ಮೆಂಟ್ಸ್​​​ಗಳಲ್ಲಿ ಕೆಲಸ ಮಾಡುವ ಯುವಕರಿಗೆ ಹೆಣ್ಣು ಕೊಡ್ತಾರೆ. ರೈತರಾಗಿರುವವರಿಗೆ ಹೆಣ್ಣುಗಳು ಸಿಗುತ್ತಿಲ್ಲ. ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿರುವ ನಮಗೆ ಹೆಣ್ಣು ಕೊಡಲು ಹೆಣ್ಣು ಹೆತ್ತವರು ಮುಂದಾಗುತ್ತಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ತುಮಕೂರು : ತುಮಕೂರು ಜಿಲ್ಲೆಯಲ್ಲಿ (Tumakuru District) ಪ್ರಸ್ತುತ ಯುವಕರಿಗೆ ಮದುವೆಯಾಗಲು ಹೆಣ್ಣುಗಳು ಸಿಗುತ್ತಿಲ್ಲ ಎಂಬ ವಿಷಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಜಿಲ್ಲೆಯ ಪ್ರತಿ ಗ್ರಾಮದಲ್ಲಿ ಮದುವೆಯಾಗಲು ಹೆಣ್ಣು ಸಿಗದೇ ವಯಸ್ಸು ಮೀರಿರುವ 30 ರಿಂದ 40 ಮಂದಿ ಯುವಕರು ಕಂಡು ಬರುತ್ತಾರೆ. ಕೃಷಿಕರಾಗಿರುವ ಕಾರಣ ನಮಗೆ ಹೆಣ್ಣು ಕೊಡ್ತಿಲ್ಲ ಎಂದು ಅವಿವಾಹಿತರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಗ್ರಾಮೀಣ ಭಾಗದಲ್ಲಿ ಸಣ್ಣ ಹಿಡುವಳಿದಾರರಿಗೆ ಮದುವೆ ಭಾಗ್ಯವೇ ಇಲ್ಲದಂತಾಗಿದೆ. ಗಾರ್ಮೆಂಟ್ಸ್​​​ಗಳಲ್ಲಿ ಕೆಲಸ ಮಾಡುವ ಯುವಕರಿಗೆ ಹೆಣ್ಣು ಕೊಡ್ತಾರೆ. ರೈತರಾಗಿರುವವರಿಗೆ ಹೆಣ್ಣುಗಳು ಸಿಗುತ್ತಿಲ್ಲ. ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿರುವ ನಮಗೆ ಹೆಣ್ಣು ಕೊಡಲು ಹೆಣ್ಣು ಹೆತ್ತವರು ಮುಂದಾಗುತ್ತಿಲ್ಲ. ಹೆಣ್ಣು ಸಿಗದೇ ಪರದಾಡುತ್ತಿರುವ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಯುವಕರು ಉತ್ತರ ಕರ್ನಾಟಕದ ದೂರದ ಊರುಗಳ ಹೆಣ್ಣನ್ನು ಮದುವೆ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರ ವಧು ಸಿಗದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಬೇಕಿದೆ. ಅಂತಹವರಿಗೆ ಆರ್ಥಿಕ ಸಹಾಯ ಮಾಡಬೇಕಿದೆ ಅಂತಾರೆ ಸ್ಥಳೀಯರು.

ಈ ನಡುವೆ ಹೆಣ್ಣುಗಳನ್ನ ಹುಡುಕಿ ಹುಡುಕಿ ಸುಸ್ತಾಗಿರುವ ರೈತ ಯುವಕರು ನೇರ ಜಿಲ್ಲಾಧಿಕಾರಿಗಳಿಗೇ ತಮ್ಮ ಕಷ್ಟ, ತಮಗಾಗುತ್ತಿರೋ ಸಮಸ್ಯೆಗಳನ್ನು ತೋಡಿಕೊಳ್ಳುತ್ತಿದ್ದಾರೆ. ನಮಗೆ ಯಾಕೆ ಹೆಣ್ಣು ಕೊಡುತ್ತಿಲ್ಲ.? ಹೆಣ್ಣು ಹೆತ್ತವರು ಏನಂತ ಹೇಳುತ್ತಿದ್ದಾರೆ? ಮದುವೆಯಾಗಲು ಹೆಣ್ಣುಗಳೇ ಏಕೆ ಮುಂದೆ ಬರುತ್ತಿಲ್ಲ? ಎಂದು ತುಮಕೂರು ಜಿಲ್ಲಾಧಿಕಾರಿಗಳಿಗೆ ರೈತ ಯುವಕರು ಪತ್ರ ಬರೆಯುವ ಮೂಲಕ ತಮ್ಮ ಹೆಣ್ಣು ಹುಡುಕಿಕೊಡುವ ಕೆಲಸವನ್ನ ಜಿಲ್ಲಾಧಿಕಾರಿಗಳ ಅಂಗಳಕ್ಕೆ ತಲುಪಿಸಿದ್ದಾರೆ.

ಜಿಲ್ಲಾಧಿಕಾರಿಗೆ ಪತ್ರ ಬರೆದ ಯುವಕರು

ಹೌದು ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿ ಲಕ್ಮಗೊಂಡನಹಳ್ಳಿ ಹಾಗೂ ತಿಪಟೂರು ತಾಲೂಕಿನ ತಿಮ್ಲಾಪುರ ಗ್ರಾಮಗಳ ರೈತ ಯುವಕರು ತುಮಕೂರು ಜಿಲ್ಲಾಧಿಕಾರಿಗಳಾದ ವೈ.ಎಸ್.ಪಾಟೀಲ ಅವರಿಗೆ ತಹಶಿಲ್ದಾರ್ ಮೂಲಕ ಪತ್ರ ರವಾನಿಸಿದ್ದಾರೆ. ಈ ಎರಡೂ ಗ್ರಾಮಗಳಲ್ಲಿ ರೈತರು ಎಂಬ ಕಾರಣಕ್ಕೆ ಯಾರೂ ಹೆಣ್ಣು ಕೊಡದೆ ಮದುವೆಯಾಗದ ಬರೊಬ್ಬರಿ 50 ಮಂದಿ ರೈತ ಯುವಕರು ಇದ್ದಾರೆ. ಅದರಲ್ಲಿ 38 ವರ್ಷ ದಾಟಿದ ರೈತ ಯುವಕರು ಸುಮಾರು 10 ಜನರಿದ್ದರೆ, 30-35 ವರ್ಷ ದಾಟಿದ ಸುಮಾರು 40 ಮಂದಿ ಇದ್ದಾರೆ. ಇವರದ್ದು ಮೂಲ ಕಸುಬೇ ಕೃಷಿ, ಇವರೆಲ್ಲಾ ಭೂ ತಾಯಿಯ ನಂಬಿಯೇ ಜೀವನ ಮಾಡುತ್ತಿರೋದು. ಇವರು ಬೆಳೆದ ಬೆಳೆಗಳಿಗೆ ಬೆಲೆ ಇರಲಿ ಇರದಿರಲಿ ಸಾಲಸೂಲ ಮಾಡಿ ಹೇಗೋ ಜೀವನ ಮಾಡುತ್ತಿದ್ದಾರೆ.

ಕೋಲಾರ ಜಿಲ್ಲಾಧಿಕಾರಿಗೆ ಪತ್ರ ಬರೆದ ಅವಿವಾಹಿತ ರೈತ ಯುವಕರು.


ಹುಟ್ಟೂರನ್ನ ಬಿಟ್ಟು, ಕೃಷಿ ಬಿಟ್ಟು ಹೆತ್ತವರನ್ನ ಬಿಟ್ಟು ಪಟ್ಟಣ ಪ್ರದೇಶಗಳಿಗೆ ಹೋಗೋಕೆ ಇವರಿಗೆ ಇಷ್ಟ ಇಲ್ಲದಿರುವುದರಿಂದ ಇವರೆಲ್ಲಾ ತಮಗಿರೋ ಇಷ್ಟೊ ಅಷ್ಟೋ ಜಮೀನಿನಲ್ಲೇ ಅಡಿಕೆ, ತೆಂಗು, ರಾಗಿ ಹೀಗೆ ಹತ್ತಾರು ಬೆಳೆಗಳನ್ನ ಬೆಳೆಯುತ್ತಿದ್ದಾರೆ. ಯಾರ ಮುಂದೆಯೂ ಕೈ ಚಾಚದೇ‌ ಸ್ವಾವಲಂಬಿ ಬದುಕು ನಡೆಸುತ್ತಿರುವ ಇವರಿಗೆ ರೈತರು ಎಂಬ ಒಂದೇ ಒಂದು ಕಾರಣಕ್ಕೆ ಯಾರೂ ಹೆಣ್ಣು ಕೊಡೋಕೆ ಮುಂದೆ ಬರುತ್ತಿಲ್ಲ.‌ ಇನ್ನು ಯಾಕೆ ನಿಮಗೆ ಮದುವೆಯಾಗಿಲ್ಲ ಎಂದು ಕೇಳಿದ್ರೆ ಸಾಕು ಈ ರೈತ ಯುವಕರು ಸಾಲು ಸಾಲು ಸಮಸ್ಯೆಗಳನ್ನ ಬಿಚ್ಚಿಡುತ್ತಾರೆ.

ಇದನ್ನು ಓದಿ: Mudhol hound: ರಾಣಾನ ಸ್ಥಾನ ತುಂಬಲು ಬಂಡೀಪುರಕ್ಕೆ ಬಂತು ಮುಧೋಳ ತಳಿಯ ಶ್ವಾನ!

ರೈತ ಯುವಕರು ಹೇಳುವುದೇನು?

ಸರ್ ಇವತ್ತಿನ ಕಾಲದ ಹೆಣ್ಣು ಮಕ್ಕಳಿಗೆ ಯಾರಿಗೂ ಕಷ್ಟಪಡೋಕೆ ಇಷ್ಟ ಇಲ್ಲ. ರೈತನನ್ನ ನಾವು ಮದುವೆಯಾದ್ರೆ ನಮಗೆಲ್ಲಿ ಸ್ಟೇಟಸ್ ಕಡಿಮೆಯಾಗುತ್ತೋ, ಬೆಳಗ್ಗೆ ಎದ್ರೆ ತೋಟ, ಮನೆ, ಹೊಲ ಗದ್ದೆಗಳು ಅಂತ ಹೆಣಗಾಡ ಬೇಕೋ ಎಂದು ಯಾವ ಹೆಣ್ಣುಮಕ್ಕಳೂ ಮುಂದೆ ಬರೋದಿಲ್ಲ. ಹೆತ್ತವರು ಅಷ್ಟೇ ಹೆಣ್ಣು ಮಕ್ಕಳಿಗೆ ಚೆನ್ನಾಗಿ ವಿದ್ಯಾಭ್ಯಾಸ ಕೊಡಿಸಿರುತ್ತಾರೆ. ತಮ್ಮ ಮಗಳನ್ನ ದೊಡ್ಡ ಮಟ್ಟದ ಸರ್ಕಾರಿ ಅಧಿಕಾರಿಗೆ ಕೊಟ್ಟು ಮದುವೆ ಮಾಡಬೇಕೆಂಬ ಆಸೆ ಇಟ್ಕೊಂಡಿರ್ತಾರೆ. ಒಂದು ವೇಳೆ ನಾವು ಹೆಣ್ಣು ಕೇಳೋಕೆ ಅಂತ ಅವರ ಮನೆ ಬಾಗಿಲಿಗೆ ಹೋದ್ರೆ‌ ಮಖಕ್ಕೆ ಹೊಡೆದಂಗೆ ಹೇಳ್ತಾರೆ. ಯಾವುದೇ ಕಾರಣಕ್ಕೂ ನಾವು ಮನೆ ಕಡೆ ಇರೋ ಯುವಕರಿಗೆ ಹೆಣ್ಣು ಕೊಡಲ್ಲ ಎಂದು. ಹೀಗಾಗಿ ನಾವು ಹೆಣ್ಣು ಕೇಳೋಕೆ ಹೆಣ್ಣೆತ್ತವರ ಮನೆ ಬಾಗಿಲಿಗೆ ಹೋಗೋಕೆ ಹಿಂಜರಿಕೆಯಾಗುತ್ತೆ ಅಂತಾರೆ ಕೆಲ ರೈತ ಯುವಕರು. ಸದಾ ಇಂತಹ ಅವಮಾನಗಳಿಂದ ಬೇಸತ್ತಿದ್ದ ಈ ಎರಡೂ ಗ್ರಾಮದ ಯುವಕರು ವಧುವನ್ನು ಹುಡುಕಿಕೊಡುವಂತೆ ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದಾರೆ‌.
Published by:HR Ramesh
First published: