ಬೆಣ್ಣೆಹಳ್ಳ: ಚಾಲಕನ ದುಸ್ಸಾಹಸಕ್ಕೆ ಹಳ್ಳದಲ್ಲಿ ಪಲ್ಟಿಯಾದ ಲಾರಿ; ಕೊಚ್ಚಿಹೋದ ಶ್ವಾನಗಳು..!

ನರಗುಂದ ತಾಲೂಕಿನ ಲಖಮಾಪುರ ಗ್ರಾಮದ ಬಳಿಯಿರುವ ಸೇತುವೆ ಹತ್ತಿರ ಶ್ವಾನವೊಂದು ಪ್ರವಾಹದ ರಭಸಕ್ಕೆ ಸಿಲುಕಿ ಕೊಚ್ಚಿ ಹೋಗುತ್ತಿತ್ತು. ಆದರೆ ಅದೃಷ್ಟವಶಾತ್ ಈಜಿ ದಡ ಸೇರುವ ಮೂಲಕ ತನ್ನ ಪ್ರಾಣ ಉಳಿಸಿಕೊಂಡಿದೆ‌. ಮಲಪ್ರಭ ಹಾಗೂ ಬೆಣ್ಣೆಹಳ್ಳದ ಪ್ರವಾಹಕ್ಕೆ ಸಿಲುಕಿ ನರಗುಂದ ತಾಲೂಕಿನ‌ ಲಖಮಾಪುರ ಗ್ರಾಮ ಅಕ್ಷರಶಃ ನಡುಗಡ್ಡೆಯಾಗಿ ಮಾರ್ಪಾಡಾಗಿದೆ.

ಬೆಣ್ಣೆಹಳ್ಳದಲ್ಲಿ ಮುಳುಗಿರುವ ಲಾರಿ

ಬೆಣ್ಣೆಹಳ್ಳದಲ್ಲಿ ಮುಳುಗಿರುವ ಲಾರಿ

  • Share this:
ಗದಗ: ಗದಗ ಜಿಲ್ಲೆಯಾದ್ಯಂತ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆರಾಯ ಹಲವಾರು ಅವಾಂತರಗಳನ್ನು ಸೃಷ್ಟಿ ಮಾಡಿದ್ದಾನೆ. ಒಂದೆಡೆ ಮಳೆಯ ಸಮಸ್ಯೆಯಾದರೆ, ಮತ್ತೊಂದೆಡೆ ನವಿಲುತೀರ್ಥ ಜಲಾಶಯದಿಂದ ಬಿಟ್ಟಿರುವ ನೀರು, ಜಿಲ್ಲೆಯ ಹಲವಾರು ಗ್ರಾಮಗಳ ಜನರ ಜೀವನವನ್ನೇ ಬೀದಿಗೆ ತಂದಿದೆ.‌

ಭಾನುವಾರ ಬೆಳ್ಳಂಬೆಳ್ಳಗ್ಗೆ ಲಾರಿ ಚಾಲಕನೋರ್ವ ಬೆಣ್ಣೆಹಳ್ಳದ ಸೇತುವೆ ಜಲಾವೃತವಾಗಿದ್ದರೂ ಅದರಲ್ಲಿ ಲಾರಿ ದಾಟಿಸುವ ದುಸ್ಸಾಹಸಕ್ಕೆ ಕೈ ಹಾಕಲು ಹೋಗಿ ಹಳ್ಳದಲ್ಲಿ ಲಾರಿ ಪಲ್ಟಿಯಾಗಿರುವ ಘಟನೆ ನಡೆದಿದೆ. ಯಾವಗಲ್ ಗ್ರಾಮದ ಮಾರ್ಗವಾಗಿ ಸೇತುವೆ ದಾಟಿ ರೋಣ ಪಟ್ಟಣಕ್ಕೆ ಹೊರಟ್ಟಿದ ಲಾರಿ ಇದಾಗಿತ್ತು.  ಲಾರಿಯಲ್ಲಿದ್ದ ಸಾಮಗ್ರಿಗಳು ನೀರು ಪಾಲಾಗಿವೆ. ಚಾಲಕ ಮಾತ್ರ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಒಟ್ಟಾರೆಯಾಗಿ ಮಲಪ್ರಭಾ ನದಿ ಹಾಗೂ ಬೆಣ್ಣೆಹಳ್ಳದ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಏಳು ಸಾವಿರಗೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಸಹ ಹಾನಿ ಸಂಭವಿಸಿದೆ. ಹೆಸರು, ಹತ್ತಿ, ಸೂರ್ಯಕಾಂತಿ, ಗೋವಿನ ಜೋಳ, ಸೇರಿದಂತೆ ಅನೇಕ ಬೆಳೆಗಳು ಪ್ರವಾಹದ ಆರ್ಭಟಕ್ಕೆ ಕೊಚ್ಚಿ ಹೋಗಿವೆ.

ಸತತವಾಗಿ ಸುರಿದ ಮಳೆಯ ಪರಿಣಾಮದಿಂದ ಗದಗ ಜಿಲ್ಲೆ ನರಗುಂದ ತಾಲೂಕಿನ ವಾಸನ ಗ್ರಾಮದ ಸುಶೀಲವ್ವ ತಾಯನವರ ಎಂಬುವರ ಮನೆಯ ಮೇಲ್ಛಾವಣಿ ಕುಸಿದಿದೆ. ಮನೆಯಲ್ಲಿ ತಾಯಿ ಮಗಳು ನಿದ್ರೆ ಮಾಡುವ ವೇಳೆ ಮೇಲ್ಚಾವಣಿ ಕುಸಿದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.ಇನ್ನು ಬೆಣ್ಣೆಹಳ್ಳದ ಪ್ರವಾಹದ ರಭಸಕ್ಕೆ ಶ್ವಾನಗಳೆರಡು ಕೊಚ್ಚಿ ಹೋಗಿರುವ ಘಟನೆಯೂ ನಡೆದಿದೆ. ಜಿಲ್ಲೆಯ ರೋಣ ತಾಲೂಕಿನ ಯಾವಗಲ್ ಗ್ರಾಮದ ಬಳಿರುವ ಬೆಣ್ಣೆಹಳ್ಳದಲ್ಲಿ ಈ ಘಟನೆ ನಡೆದಿದ್ದು, ಜನರು ನೋಡು ನೋಡುತ್ತಿದ್ದಂತೆ ಜೋಡಿ ಶ್ವಾನಗಳು ನೀರು ಪಾಲಾಗಿವೆ. ಈಜಿ ದಡಸೇರಲು ಶ್ವಾನಗಳು ಪರದಾಟ ನಡೆಸುತ್ತಿದ್ದ ದೃಶ್ಯ ಮನಕಲಕುವಂತಿತ್ತು.

ತುಂಬಿ ಹರಿಯುತ್ತಿರುವ ಬೆಣ್ಣೆಹಳ್ಳ


ಇನ್ನು ನರಗುಂದ ತಾಲೂಕಿನ ಲಖಮಾಪುರ ಗ್ರಾಮದ ಬಳಿಯಿರುವ ಸೇತುವೆ ಹತ್ತಿರ ಶ್ವಾನವೊಂದು ಪ್ರವಾಹದ ರಭಸಕ್ಕೆ ಸಿಲುಕಿ ಕೊಚ್ಚಿ ಹೋಗುತ್ತಿತ್ತು. ಆದರೆ ಅದೃಷ್ಟವಶಾತ್ ಈಜಿ ದಡ ಸೇರುವ ಮೂಲಕ ತನ್ನ ಪ್ರಾಣ ಉಳಿಸಿಕೊಂಡಿದೆ‌. ಮಲಪ್ರಭ ಹಾಗೂ ಬೆಣ್ಣೆಹಳ್ಳದ ಪ್ರವಾಹಕ್ಕೆ ಸಿಲುಕಿ ನರಗುಂದ ತಾಲೂಕಿನ‌ ಲಖಮಾಪುರ ಗ್ರಾಮ ಅಕ್ಷರಶಃ ನಡುಗಡ್ಡೆಯಾಗಿ ಮಾರ್ಪಾಡಾಗಿದೆ. ಅಲ್ಲದೇ ಗ್ರಾಮದ ಕೆಲವು ಮನೆಗಳಿಗೂ ಸಹ ಮಲಪ್ರಭಾ ನದಿಯ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಇನ್ನು ಗ್ರಾಮವನ್ನು ಸಂಪರ್ಕಿಸುವ ಸೇತುವೆ ಜಲಾವೃತವಾಗಿದ್ದು, ಸೇತುವೆ ಮೇಲೆ ಮಲಪ್ರಭಾ ನೀರು ಹರಿಯುತ್ತಿದೆ.

ಮುಂಜಾಗ್ರತಾ ಕ್ರಮವಾಗಿ  ಗ್ರಾಮಸ್ಥರನ್ನು ಶನಿವಾರದಂದು ಬೇರೆಡೆಗೆ ಸ್ಥಳಾಂತರ ಮಾಡಿದ್ದರಿಂದ ಪ್ರಾಣಹಾನಿ ಸಂಭವಿಸಿಲ್ಲ. ನೆರೆ ಸಂತ್ರಸ್ತರಿಗಾಗಿ ಗದಗ ಜಿಲ್ಲೆಯಲ್ಲಿ 56 ಕಾಳಜಿ ಕೇಂದ್ರಗಳನ್ನು ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು ಅದರಲ್ಲಿ ಒಂದು ಕಾಳಜಿ ಕೇಂದ್ರವನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ನವೀಲು ತೀರ್ಥ ಅಣೆಕಟ್ಟಿನಿಂದ ಹೆಚ್ಚಿನ ನೀರು ಬಿಡುಗಡೆಯಾದ ಕಾರಣ ನರಗುಂದ ತಾಲೂಕಿನ ಲಕಮಾಪುರ ಗ್ರಾಮದ ಸುತ್ತ ನೀರು ಆವರಿಸಿದ್ದು ಗ್ರಾಮದ 156 ಜನರು, 76 ಜಾನುವಾರುಗಳನ್ನು ಈಗಾಗಲೇ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ಕಾಳಜಿ ಕೇಂದ್ರದಲ್ಲಿ ಕೋವಿಡ್-19 ಮಾರ್ಗಸೂಚಿಗಳನ್ನು ಪಾಲಿಸಲು ಸೂಚನೆ ನೀಡಲಾಗಿದ್ದು. ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಂತ ಎಲ್ಲರಿಗೂ ಗುಣಮಟ್ಟದ ಊಟ ಉಪಹಾರ ನೀಡುವದರ ಜೊತೆಗೆ ಕುಡಿಯಲು ಬಿಸಿ ನೀರು ಒದಗಿಸುವಂತೆ ಸೂಚಿಸಲಾಗಿದೆ. ಇದಕ್ಕಾಗಿಯೇ ಒಬ್ಬ ನೋಡೆಲ್ ಅಧಿಕಾರಿಯನ್ನು ಸಹ ನೇಮಿಸಲಾಗಿದೆ.

ಇದನ್ನೂ ಓದಿ: ಮೂರು ತಿಂಗಳಲ್ಲಿ 6 ಕೋಟಿ ಜನರಿಗೆ ಕೋವಿಡ್ ಲಸಿಕೆ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾಹಿತಿ

ಜಾನುವಾರುಗಳಿಗೆ ಎರಡು ಮೆಟ್ರಿಕ ಟನ್ ಮೇವು ದಾಸ್ತಾನು ಮಾಡಲಾಗಿದ್ದು. ಕಾಳಜಿ ಕೇಂದ್ರಕ್ಕೆ ಗರ್ಭಿಣಿಯರು ಆಗಮಿಸಿದರೆ ಅವರಿಗೆ ಪೌಷ್ಠಿಕ ಆಹಾರ ಹಾಗೂ ಚಿಕಿತ್ಸೆಗಾಗಿ ತಾಲೂಕು ಆಸ್ಪತ್ರೆಗೆ ಸ್ಥಳಾಂತರಿಸಲು ಅಗತ್ಯದ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ. ಕಾಳಜಿ ಕೇಂದ್ರಗಳಲ್ಲಿ ಅಗತ್ಯ ಔಷಧಗಳನ್ನು ದಾಸ್ತಾನು ಮಾಡಲಾಗಿದ್ದು ಜೊತೆಗೆ ವೈದ್ಯಕೀಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:HR Ramesh
First published: