ದಾವಣಗೆರೆ; ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಬಸವಾಪುರ ಗ್ರಾಮದ ಸಮೀಪ ಸ್ವತಂತ್ರ ಪೂರ್ವದಲ್ಲಿ ಭದ್ರಾ ಬಲದಂಡೆ ಕಾಲುವೆಗೆ ಸುರಂಗ ಮಾರ್ಗ ನಿರ್ಮಿಸಲಾಗಿದೆ. 70 ವರ್ಷಗಳ ಹಿಂದೆ ಸರ್. ಎಂ. ವಿಶ್ವೇಶ್ವರಯ್ಯ ಅವರಿಂದ ಸ್ಥಾಪಿತವಾದ ಸುಮಾರು 5 ಕಿ.ಮೀ. ಉದ್ಧದ ಈ ಸುರಂಗ ಈಗಲೂ ಸದೃಢವಾಗಿದ್ದು, ಇದನ್ನು ಪ್ರೇಕ್ಷಣೀಯ ಸ್ಥಳವಾಗಿ ಅಭಿವೃದ್ಧಿಗೊಳಿಸಬೇಕು ಎಂಬುದು ಇಲ್ಲಿನ ಸ್ಥಳೀಯರ ಆಗ್ರಹವಾಗಿದೆ.
ದಾವಣಗೆರೆ ಜಿಲ್ಲೆ ಭಾಗಕ್ಕೆ ಕುಡಿಯುವ ನೀರು ಹಾಗೂ ಕೃಷಿಗಾಗಿ (BRP tunel) ಭದ್ರಾ ಜಲಾಶಯದಿಂದ ನೀರು ಹರಿಸಲು ಬಸವಾಪುರ ಸಮೀಪ ದುರ್ಗಮ ಬೆಟ್ಟ ಗುಡ್ಡಗಳು ಅಡ್ಡಲಾಗಿದ್ದ ಕಾರಣ ಸುಮಾರು 250 ರಿಂದ 300 ಅಡಿ ಹಾಳದ ಬೆಟ್ಟ ಗುಡ್ಡಗಳ ಅಡಿಯಲ್ಲಿ ಸುಮಾರು 5 ಕೀ.ಮಿ. ಸುರಂಗ ಮಾರ್ಗ ಸ್ಥಾಪಿಸಲಾಗಿದೆ. 1942 ರಿಂದ 1958 ರ ವರೆಗೆ ಸುಮಾರು 15 ವರ್ಷಗಳ ಕಾಲ ಈ ಸುರಂಗ ಮಾರ್ಗದ ಕಾಮಗಾರಿ ನಡೆದಿದೆ. ಯಂತ್ರೋಪಕರಣಗಳ ಸಹಾಯವಿಲ್ಲದೆ ಕೇವಲ ಮಾನವ ಶಕ್ತಿ ಬಳಸಿಕೊಂಡು ಹಾರೆ, ಸಲಕೆ ಗುದ್ದಲಿಗಳ ಸಹಾಯದಿಂದ ಸುಮಾರು 15 ಅಡಿ ಅಗಲ 20 ಅಡಿ ಎತ್ತರದ 5 ಕೀ.ಮಿ ಸುರಂಗ ನಿರ್ಮಿಸಲಾಗಿದೆ.
ಸುರಂಗದಿಂದ ಮಣ್ಣು ಹೊರ ತೆಗೆಯಲು ಒಂದು ಕೀ.ಮೀ ಗೆ ಒಂದರಂತೆ ಮೇಲಿನಿಂದ ಬಾವಿ ತೆಗೆಯಲಾಗಿದೆ. ಬಾವಿಯ ಒಳಗೆ ತೊಟ್ಟಿಲು ಆಕಾರದ ಪೆಟ್ಟಿಗೆ ಕಟ್ಟಿ ಹಗ್ಗದ (ಸರಪಳಿ) ಸಹಾಯದಿಂದ ತೊಟ್ಟಿಲನ್ನು ಕೆಳಗಿಳಿಸಿ ಅದರಲ್ಲಿ ಮಣ್ಣು ತುಂಬಿಸಿ 300 ರಿಂದ 400 ಅಡಿ ಹಾಳದಿಂದ ಮೇಲಕ್ಕೆ ಎತ್ತಲಾಗಿತ್ತು. ಸುರಂಗದ ಕಾಮಗಾರಿಯಲ್ಲಿ ಮಣ್ಣು ತುಂಬಲು ದಿನಕ್ಕೆ ಎಂಟಾಣಿ. ಹಾರೆ ಕೆಲಸಕ್ಕೆ ಒಂದಾಣಿ. ಮಣ್ಣು ಮೆಲೆತ್ತಲು ಎರಡು ಮೂರಾಣಿಯಂತೆ ಕೊಲಿ ಕಾರ್ಮಿಕರಾಗಿ ಕೆಲಸ ಮಾಡಿರುವ ತಮ್ಮ ಪೂರ್ವಿಕರು ಹಾಗೂ ಗ್ರಾಮದ ಸುತ್ತಮುತ್ತಲಿನ ಹಿರಿಯರು ತಿಳಿಸುತ್ತಾರೆ. ಈ ಸಂಧರ್ಭದಲ್ಲಿ ಭೂಮಿ ಕುಸಿತದಿಂದ ಹಲವು ಸಾವು ನೋವುಗಳು ಆಗಿದ್ದವೆಂದು ಮತ್ತು ಹಾಗೆ ಸತ್ತವರನ್ನು ಅದೇ ಮಣ್ಣಿನಲ್ಲಿ ಮುಚ್ಚಲಾಗುತಿತ್ತೆಂದು ಆ ಗ್ರಾಮದ ಹಿರಿಯರಾದ ತೊಳಚಮ್ಮ ನವರು ಸೇರಿದಂತೆ ಹಲವು ಹಿರಿಯರು ತಾವು ಕಣ್ಣಾರೆ ಕಂಡ ಆ ದೃಶ್ಯಗಳನ್ನ ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾರೆ.
ಸುರಂಗದ ಪ್ರಾರಂಭ ಹಾಗೂ ಅಂತಿಮ ಸ್ಥಳಗಳು ನೋಡಲು ಮೇಲಿನಿಂದ ಕೆಳಗೆ ಒಂದೇ ತೆರನಾಗಿದ್ದು ಮೇಲಿನಿಂದ ಕೆಳಗೆ ಇಳಿಯಲು ಎರಡು ಬದಿ ಸುಮಾರು 235 ಮೆಟ್ಟಿಲುಗಳನ್ನು ಹೊಂದಿದೆ. ಈ ಸುರಂಗದ ಕಾಮಗಾರಿಗೆಂದು ಆಂಧ್ರಪ್ರದೇಶ ಹಾಗೂ ತಮಿಳುನಾಡಿನಿಂದ ವಲಸೆ ಬಂದ ಹಲವು ಕುಟುಂಬಗಳು ಇಲ್ಲಿಯೇ ಸುತ್ತಮುತ್ತಲಿನ ಗುರುರಾಜಪುರ, ಲಕ್ಷ್ಮಯ್ಯನ ಕ್ಯಾಂಪ್ ಸೇರಿದಂತೆ ನಾಲೆಯ ಅಂಚಿನ ಗ್ರಾಮಗಳಲ್ಲಿ ನೆಲಿಸಿದ್ದಾರೆ. ಸಮೀಪದಲ್ಲಿ ಬಿ.ಆರ್.ಟಿ ಕಾಲೋನಿ ಎಂಬ ಗ್ರಾಮವಿದ್ದು ಸುರಂಗದ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಸರ್ ಎಂ ವಿಶ್ವೇಶ್ವರಯ್ಯ ನವರು ಹಾಗೂ ಕಾಮಗಾರಿ ವೀಕ್ಷಣೆಯ ಅಧಿಕಾರಿಗಳು ಉಳಿದುಕೊಳ್ಳಲು ಇಲ್ಲಿ ಕ್ವಾರ್ಟರ್ಸ್ ನಿರ್ಮಿಸಲಾಗಿತ್ತು.
ಬ್ರಿಟಿಷರ ಆಡಳಿತ ಕಾಲದಲ್ಲಿ ಇದು ಆಡಳಿತ ಕೇಂದ್ರವಾಗಿತ್ತೆಂದು ಇಲ್ಲಿ ಪೋಲಿಸ್ ಠಾಣೆ, ಆಸ್ಪತ್ರೆ, ಫೋಸ್ಟ್ ಆಫೀಸ್. ಹೈಸ್ಕೂಲ್ ಸೇರಿದಂತೆ ಆಡಳಿತ ಕಚೇರಿಗಳು ಇದ್ದವು. ವಾರಕ್ಕೊಮ್ಮೆ ಸಂತೆ ನಡೆಯುತ್ತಿತ್ತು. ಕೆಂಪು ಮುಖದ (ಬ್ರಿಟಿಷ್) ಅಧಿಕಾರಿಗಳು ಇಲ್ಲಿ ವಾಸವಾಗಿದ್ದರೆಂದು 85 ವರ್ಷ ವಯಸ್ಸಿನ ಮಾವಿನಕಟ್ಟೆ ಕೆಂಚಜ್ಜಿಯವರು ಆ ಸಂದರ್ಭದ ತಮ್ಮ ಅನುಭವದ ಜೊತೆ ಹಳೆಯ ನೆನಪುಗಳ ಮೆಲುಕು ಹಾಕುತ್ತಾರೆ. ಈಗ ಈ ಗ್ರಾಮದಲ್ಲಿ ಹಿಂದಿನ ಯಾವುದೇ ಕಚೇರಿಗಳು ಇಲ್ಲದಿದ್ದರು ಸಹ ಈ ಗ್ರಾಮದಲ್ಲಿ ನಿರ್ಮಿಸಿರುವ ಅಗಲವಾದ ರಸ್ತೆಗಳು ಹಾಗೂ ಹಿಂದೆ ವ್ಯವಸ್ಥಿತವಾಗಿ ಕಟ್ಟಲಾಗಿರುವ ಮನೆಗಳು ಇದಕ್ಕೆ ಪುಷ್ಟಿ ನೀಡುತ್ತವೆ.
ಸುರಂಗದೊಳಗೆ ನೀರು ರಭಸವಾಗಿ ಹರಿಯುವ ಕಾರಣ ಸುರಂಗದ ಮುಂಭಾಗದ ಕಾಲುವೆಯ ಎರಡು ಬದಿಯಲ್ಲಿ ಭೂ ಕುಸಿತ ಉಂಟಾಗುತ್ತಿದ್ದು, ದೊಡ್ಡ ದೊಡ್ಡ ಕಲ್ಲು ಬಂಡೆಗಳು ಸಹಿತ ಅಪಾರ ಪ್ರಾಮಾಣದ ಮಣ್ಣು ಭದ್ರಾ ಕಾಲುವೆಗೆ ಬಿದ್ದಿದೆ. ಅದನ್ನು ಶೀಘ್ರವೇ ತೆರವುಗೊಳಿಸಿ ದುರಸ್ತಿ ಮಾಡಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಇದನ್ನು ಓದಿ: Sree Padmanabhaswamy Temple - ಪದ್ಮನಾಭಸ್ವಾಮಿ ದೇವಸ್ಥಾನದ ಮೇಲೆ ರಾಜಮನೆತನದವರಿಗೆ ಈಗಲೂ ಹಕ್ಕಿದೆ: ಸುಪ್ರೀಂ ಕೋರ್ಟ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ