• Home
  • »
  • News
  • »
  • district
  • »
  • ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೇವೆ ಹೆಚ್ಚಿಸಲು ಭಕ್ತಾಧಿಗಳ ಆಗ್ರಹ ; ಸೌಕರ್ಯವಿದ್ದರೂ ಸೇವೆಗಿಲ್ಲ ಅವಕಾಶ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೇವೆ ಹೆಚ್ಚಿಸಲು ಭಕ್ತಾಧಿಗಳ ಆಗ್ರಹ ; ಸೌಕರ್ಯವಿದ್ದರೂ ಸೇವೆಗಿಲ್ಲ ಅವಕಾಶ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ

ಕ್ಷೇತ್ರದ ಅಭಿವೃದ್ಧಿಯ ನಿಟ್ಟಿನಲ್ಲಿ ಮಾಸ್ಟರ್ ಪ್ಲಾನ್ ಕಾಮಗಾರಿಗಳು ವೇಗ ಪಡೆದುಕೊಂಡಿದೆ. ಈ ಹಿನ್ನಲೆಯಲ್ಲಿ ಕ್ಷೇತ್ರದ ಮುಖ್ಯದ್ವಾರದ ಅಕ್ಕಪಕ್ಕದ ಬಹುತೇಕ ಎಲ್ಲಾ ಕಟ್ಟಡಗಳನ್ನು ಹಾಗೂ ಅಂಗಡಿಗಳನ್ನು ತೆರವುಗೊಳಿಸಲಾಗಿದೆ

  • Share this:

ಮಂಗಳೂರು(ಸೆಪ್ಟೆಂಬರ್​.18): ರಾಜ್ಯದ ಅತೀ ಶ್ರೀಮಂತ ಕ್ಷೇತ್ರ ಹಾಗೂ ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರವಾಗಿರುವ ಕುಕ್ಕೆ ಸುಬ್ರಹ್ಮಣ್ಯದಲ್ಲಿ ದೇವರ ಸೇವೆಗೆ ಅವಕಾಶವನ್ನು ಕಲ್ಪಿಸಲಾಗಿದೆ. ಸರ್ಪ ಸಂಸ್ಕಾರ ಸೇವೆ ಹಾಗೂ ಆಶ್ಲೇಷ ಬಲಿ ಪೂಜೆಗೆ ಕ್ಷೇತ್ರದಲ್ಲಿ ಭಾರೀ ಮಹತ್ವವಿದ್ದು, ಇನ್ನಷ್ಟು ಸೇವೆಗಳಿಗೆ ಅವಕಾಶ ಕಲ್ಪಿಸಬೇಕು ಎನ್ನುವ ಒತ್ತಾಯ ಇದೀಗ ಭಕ್ತಾಧಿಗಳಿಂದ ಕೇಳಿ ಬರಲಾರಂಭಿಸಿದೆ. ಸೆಪ್ಟಂಬರ್ 14 ರಿಂದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತಾಧಿಗಳಿಗೆ ದೇವರ ಸೇವೆಯನ್ನು ನೆರವೇರಿಸಲು ಅವಕಾಶ ನೀಡಲಾಗಿದ್ದು, ಸಾಮಾಜಿಕ ಅಂತರ, ಮಾಸ್ಕ್ ಧಾರಣೆ ಸೇರಿದಂತೆ ಕೊರೋನಾ ತಡೆ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆಯೂ ಸೂಚಿಸಲಾಗಿದೆ. ಈ ಹಿನ್ನಲೆಯಲ್ಲಿ ಕ್ಷೇತ್ರದ ಆಡಳಿತಾಧಿಕಾರಿ ದಿನಕ್ಕೆ 30 ಸರ್ಪ ಸಂಸ್ಕಾರ ಪೂಜೆ ಹಾಗೂ 60 ಆಶ್ಲೇಷ ಬಲಿ ಪೂಜೆಯನ್ನು ಅವಕಾಶವನ್ನು ಮಾಡಿಕೊಡಲಾಗಿದೆ. ಆದರೆ ಕ್ಷೇತ್ರದಲ್ಲಿ ಈ ಸೇವೆಗಳನ್ನು ಕೈಗೊಳ್ಳಲು ಸಾಕಷ್ಟು ಸ್ಥಳಾವಕಾಶಗಳಿದ್ದು, ದಿನವೊಂದಕ್ಕೆ 100 ಸರ್ಪ ಸಂಸ್ಕಾರ ಸೇವೆಗಳನ್ನು ಸಾಮಾಜಿಕ ಅಂತರವನ್ನು ಪಾಲಿಸಿಕೊಂಡು ಮಾಡಲು ಸಾಧ್ಯವಿದ್ದು, ಕೇವಲ 30 ಸೇವೆಗಳಿಗೆ ಅವಕಾಶ ನೀಡಿರುವುದು ಭಕ್ತಾಧಿಗಳ ಆಕ್ರೋಶಕ್ಕೆ ಕಾರಣವಾಗಿದೆ.


ಅದೇ ರೀತಿ 100 ಆಶ್ಲೇಷ ಬಲಿ ಸೇವೆಯನ್ನು ಮಾಡಲೂ ಕ್ಷೇತ್ರದಲ್ಲಿ ಸ್ಥಳಾವಕಾಶವಿದ್ದರೂ, ಈ ಸೇವೆಯನ್ನು ಕೇವಲ 60 ಕ್ಕೆ ಸೀಮಿತಗೊಳಿಸಿರುವುದು ಗೊಂದಲಕ್ಕೆ ಕಾರಣವಾಗಿದೆ. ದೇಶದ ವಿವಿಧ ಭಾಗಗಳಿಂದ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಪ್ರತಿದಿನ ಬರುತ್ತಿದ್ದು, ಹೆಚ್ಚಿನ ಭಕ್ತಾಧಿಗಳು ಆಶ್ಲೇಷ ಬಲಿ ಸೇವೆಯನ್ನೇ ನೀಡುತ್ತಾರೆ. ಆದರೆ, ಕೇವಲ 60 ಸೇವೆಗಳಿಗೆ ಅವಕಾಶ ನೀಡಿರುವುದರಿಂದ ಬಂದ ಭಕ್ತಾಧಿಗಳು ಇದೀಗ ದೇವಸ್ಥಾನದ ಸಿಬ್ಬಂದಿಗಳ ಬಳಿ ವಾಗ್ವಾದಕ್ಕೆ ಇಳಿಯುವ ಪ್ರಸಂಗಗಳು ನಿರಂತರವಾಗಿ ನಡೆಯುತ್ತಿವೆ.


ಈಗಾಗಲೇ 1,500 ಸರ್ಪ ಸಂಸ್ಕಾರ ಸೇವೆಗಳು ಮುಂಗಡವಾಗಿ ಬುಕ್ಕಿಂಗ್ ಆಗಿದ್ದು, ದಿನಕ್ಕೆ 30 ರಂತೆ ಸೇವೆಗೆ ಅವಕಾಶ ನೀಡಿದಲ್ಲಿ ಮುಂಗಡ ಸೇವೆ ಮುಗಿಯಲು ತಿಂಗಳು ಬೇಕಾಗಿದ್ದು, ಹೊಸದಾಗಿ ಸೇವೆಗೆ ಅವಕಾಶವನ್ನು ನೀಡದಿರುವುದೂ ಭಕ್ತಾಧಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಕ್ಷೇತ್ರದಲ್ಲಿ ಸರ್ಪ ಸಂಸ್ಕಾರ ಸೇವೆಗೆಂದೇ ಹೊಸ ಯಾಗ ಶಾಲೆಯನ್ನು ನಿರ್ಮಿಸಲಾಗಿದ್ದು, ಒಂದು ಸೇವೆಗೆ ಇಬ್ಬರಂತೆ 100 ಸೇವೆಗಳನ್ನು ಇಲ್ಲಿ ಆರಾಮವಾಗಿ ಮುಗಿಸಬಹುದು ಎನ್ನುವುದು ಸ್ಥಳೀಯರ ಅಭಿಪ್ರಾಯವೂ ಆಗಿದೆ.


ಕ್ಷೇತ್ರದಲ್ಲಿ ಈ ಸೇವೆಗಳಿಗೆ ಈ ರೀತಿಯ ನಿರ್ಬಂಧಗಳಿದ್ದರೆ, ದೇವಸ್ಥಾನದ ಪಕ್ಕದಲ್ಲೇ ಕೆಲವು ಕಡೆಗಳಲ್ಲಿ ದಿನಕ್ಕೆ 50 ಕ್ಕಿಂತ 60 ಸರ್ಪ ಸಂಸ್ಕಾರ ಸೇವೆಗಳು ನಡೆಯುತ್ತಿವೆ. ಈ ಎಲ್ಲಾ ಸೇವೆಗಳು ಕುಕ್ಕೆ ಸುಬ್ರಹ್ಮಣ್ಯದಲ್ಲೇ ನಡೆಸಲೆಂದು ಭಕ್ತಾಧಿಗಳು ಕ್ಷೇತ್ರಕ್ಕೆ ಬರುತ್ತಿದ್ದರೂ, ಕ್ಷೇತ್ರದಲ್ಲಿ ಈ ಸೇವೆಗೆ ಸೀಮಿತ ಅವಕಾಶವಿರುವ ಕಾರಣ ಖಾಸಗಿಯಾಗಿ ಈ ಸೇವೆಗಳನ್ನು ನಿರ್ವಹಿಸಲಾಗುತ್ತಿದೆ.


ಇದನ್ನೂ ಓದಿ : Sira By Election: ಶಿರಾ ಉಪಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಖಾತೆ ತೆರೆಯಲಿದೆ : ವಿಧಾನ ಪರಿಷತ್​ ಸದಸ್ಯ ಎನ್​​​ ರವಿಕುಮಾರ್


ಸೇವೆಗಳ ಸಮಸ್ಯೆ ಒಂದು ಕಡೆಯಾದರೆ, ಇನ್ನೊಂದೆಡೆ ಕ್ಷೇತ್ರದ ಅಭಿವೃದ್ಧಿಯ ನಿಟ್ಟಿನಲ್ಲಿ ಮಾಸ್ಟರ್ ಪ್ಲಾನ್ ಕಾಮಗಾರಿಗಳು ವೇಗ ಪಡೆದುಕೊಂಡಿದೆ. ಈ ಹಿನ್ನಲೆಯಲ್ಲಿ ಕ್ಷೇತ್ರದ ಮುಖ್ಯದ್ವಾರದ ಅಕ್ಕಪಕ್ಕದ ಬಹುತೇಕ ಎಲ್ಲಾ ಕಟ್ಟಡಗಳನ್ನು ಹಾಗೂ ಅಂಗಡಿಗಳನ್ನು ತೆರವುಗೊಳಿಸಲಾಗಿದೆ. ಇದರಿಂದಾಗಿ ಕ್ಷೇತ್ರಕ್ಕೆ ಬರುವ ಭಕ್ತಾಧಿಗಳಿಗೆ ತಿಂಡಿ-ತಿನಿಸುಗಳಿಗಾಗಿ ಕಿಲೋಮೀಟರ್ ತೆರಳಬೇಕಾದ ಸ್ಥಿತಿಯೂ ನಿರ್ಮಾಣಗೊಂಡಿದೆ. ಅಲ್ಲದೆ ರಾಜ್ಯದ ಶ್ರೀಮಂತ ಕ್ಷೇತ್ರಕ್ಕೆ ಇದೀಗ ಸರಿಯಾದ ಆಡಳಿತಾಧಿಕಾರಿಯೂ ಇಲ್ಲದ ಕಾರಣ ಮಂಗಳೂರಿನಿಂದಲೇ ಕ್ಷೇತ್ರದ ಮೇಲ್ವಿಚಾರಣೆಯನ್ನು ಮಾಡಲಾಗುತ್ತಿದೆ. ಇದರಿಂದಾಗಿ ಕ್ಷೇತ್ರದಲ್ಲಿ ತೆಗೆದುಕೊಳ್ಳುವ ಪ್ರತೀ ನಿರ್ಧಾರಗಳೂ ಗೊಂದಲದ ಗೂಡಾಗಿ ಪರಿಣಮಿಸಲಾರಂಭಿಸಿದೆ.


ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಭಕ್ತಾಧಿಗಳಿಗೆ ಮಾತ್ರ ಊಟದ ವ್ಯವಸ್ಥೆಯನ್ನು ಮಾಡಲು ಆಡಳಿತಾಧಿಕಾರಿ ಸೂಚಿಸಿದ್ದರೂ, ದೂರ ದೂರುಗಳಿಂದ ಬರುವ ಭಕ್ತಾಧಿಗಳಿಗೆ ಊಟ ನೀಡದಿರುವ ಕಾರಣ ಭಕ್ತಾಧಿಗಳು ಆಕ್ರೋಶಕ್ಕೆ ಕ್ಷೇತ್ರದ ಸಿಬ್ಬಂದಿಗಳೇ ಗುರಿಯಾಗುತ್ತಿದ್ದಾರೆ.

Published by:G Hareeshkumar
First published: