ಕಾರವಾರ; ಮಳೆಗಾಲ ಬಂತಂದ್ರೆ ಸಾಕು, ಕರಾವಳಿ ಭಾಗದ ನಾಗರಿಕರು ತೀವ್ರ ತೊಂದರೆ ಅನುಭವಿಸ್ತಾರೆ. ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ಗಂಗಾವಳಿ ನದಿ ತೀರದ ಜನರಿಗೆ ಕಷ್ಟ ತಪ್ಪಿದ್ದಲ್ಲ. ಹೀಗಾಗಿ ಸರ್ಕಾರ ಇಲ್ಲಿ ಸೇತುವೆ ಮಂಜೂರು ಮಾಡಿದೆ. ಕಳೆದೆರಡು ವರ್ಷಗಳಿಂದ ಇಲ್ಲಿ ಸೇತುವೆ ಕಾಮಗಾರಿ ನಡೆಯುತ್ತಿದೆಯಾದರೂ ನಿಧಾನಗತಿಯ ಕಾಮಗಾರಿಯಿಂದಾಗಿ ಜನತೆ ಇನ್ನೂ ಕೂಡ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವರ್ಷದ ಮಳೆಗಾಲ ಕೂಡ ದೋಣಿಯ ಸಂಚಾರದಲ್ಲೆ ದೂಡಬೇಕಾಗಿದೆ.
ಇದು ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ಮಂಜುಗುಣಿ ಮತ್ತು ಗಂಗಾವಳಿ ನದಿಯ ಮಧ್ಯೆ ಇರುವ ಸೇತುವೆ ಕಾಮಗಾರಿ. ಅಂಕೋಲಾ ತಾಲೂಕು ಮತ್ತು ಕುಮಟಾ ತಾಲೂಕಿನ ಗೋಕರ್ಣ ಭಾಗದ ಹತ್ತಾರು ಗ್ರಾಮದ ನಾಗರಿಕರಿಗೆ ನದಿ ದಾಟುವುದೇ ನಿತ್ಯದ ಸಾಹಸವಾಗಿದೆ. ಗಂಗಾವಳಿ ನದಿ ವರ್ಷದ ಎಲ್ಲಾ ದಿನಗಳಲ್ಲೂ ರಭಸದಿಂದ ಹರಿಯುತ್ತಿರುತ್ತದೆ. ಮಳೆಗಾಲದಲ್ಲಿ ಗಂಗಾವಳಿಯ ರೂಪ ಊಹಿಸಲು ಸಾಧ್ಯವಿಲ್ಲ. ಅಂಕೋಲಾದ ಮಂಜುಗುಣಿ, ಕೂರ್ವೆ, ಹಿಚ್ಕಡ, ಬಿಳಿಹೊಂಯ್ಗಿ, ಕುಮಟಾ ತಾಲೂಕಿನ ಗಂಗಾವಳಿ, ಗೋಕರ್ಣ, ಬೆಲೆಕಾನ್, ನಾಡುಮಾಸ್ಕೇರಿ ಸೇರಿದಂತೆ ಇತರೆ ಗ್ರಾಮಗಳ ನಾಗರಿಕರು ತುಂಬಾ ತೊಂದರೆ ಅನುಭವಿಸ್ತಾರೆ. ಗೋಕರ್ಣ ಭಾಗದ ಜನರು ಅಂಕೋಲಾಕ್ಕೆ ಬರಬೇಕೆಂದ್ರೆ ನದಿ ದಾಟಿದರೇ ಹತ್ತಿರವಾಗುತ್ತೆ. ಹೀಗಾಗಿ ಸರ್ಕಾರದಿಂದ ಎರಡು ವರ್ಷಗಳ ಹಿಂದೆ 30 ಕೋಟಿ ರೂಪಾಯಿ ವೆಚ್ಚದಲ್ಲಿ ಸೇತುವೆ ಕಾಮಗಾರಿ ನಡೆಯುತ್ತಿದೆ. ಆದ್ರೆ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿರೋದ್ರಿಂದ ಈ ಬಾರಿಯು ಮಳೆಗಾಲದಲ್ಲಿ ಜನರು ಕಷ್ಟಪಡುವುದು ಮುಂದುವರಿದಿದೆ.
ಇದನ್ನು ಓದಿ: ಲಾಕ್ಡೌನ್ ಭೀತಿ: ಊರುಗಳಿಗೆ ತೆರಳಲು ರೈಲ್ವೆ ನಿಲ್ದಾಣಗಳಲ್ಲಿ ಕಿಕ್ಕಿರಿದು ಜಮಾಯಿಸಿದ ವಲಸಿಗರು..!
ಎರಡು ವರ್ಷಗಳ ಹಿಂದೆ ಸೇತುವೆ ಕಾಮಗಾರಿ ಪಡೆದ ಡಿ.ಆರ್.ಎನ್ ಇನ್ಪ್ರಾ ಕಂಪನಿ ಕಾಮಗಾರಿ ಚುರುಕಿನಿಂದ ಮಾಡಿತ್ತು. ಈಗಾಗಲೇ ಐದು ಫಿಲ್ಲರ್ ನಿರ್ಮಿಸಲಾಗಿದೆ. ಇನ್ನೂ ಕೂಡ ಮೂರು ಫಿಲ್ಲರ್ ಮಾಡುವುದು ಬಾಕಿ ಇದೆ. ಸೇತುವೆ ಕಾಮಗಾರಿಗೆಂದು ನದಿಗೆ ಸಾಕಷ್ಟು ಮಣ್ಣು ಕಲ್ಲು ಸುರಿಯಲಾಗಿದೆ. ಆದ್ರೆ ಸ್ಥಳೀಯ ಮೀನುಗಾರರು ಕೂಡ ಕಾಮಗಾರಿಯಿಂದ ತೊಂದರೆ ಅನುಭವಿಸುವಂತಾಗಿದೆ. ಕೆಲ ವರ್ಷಗಳ ಹಿಂದೆ ಇಲ್ಲಿ ನದಿ ದಾಟಲು ಬಾರ್ಜ್ ವ್ಯವಸ್ಥೆ ಇತ್ತು. ಇದೀಗ ದೋಣಿಯ ಮೂಲಕ ಜನರು ಸಂಚಾರ ಮಾಡಬೇಕಾಗಿದೆ. ಪ್ರತಿನಿತ್ಯ ಬೈಕ್ ಸವಾರರು ತಮ್ಮ ಬೈಕ್ ಗಳನ್ನ ಹೊತ್ತು ದೋಣಿಯಲ್ಲಿ ನದಿ ದಾಟ್ತಾರೆ. ಗೋಕರ್ಣ ಭಾಗದ ಜನರಿಗೆ ಅಂಕೋಲಾ ಈ ಮಾರ್ಗದಿಂದ ಹೋದರೆ 8 ಕಿಲೋಮೀಟರ್ ಹತ್ತಿರವಾಗುತ್ತದೆ. ಗೋಕರ್ಣದಿಂದ ರಸ್ತೆ ಮೂಲಕ ಹೋಗೋದಾದ್ರೆ 30 ಕಿಲೋಮೀಟರ್ ಸುತ್ತುವರಿದು ಹೋಗಬೇಕಾಗಿದೆ. ಎರಡು ವರ್ಷಗಳಿಂದ ಸೇತುವೆ ಕಾಮಗಾರಿ ನಡೆಯುತ್ತಿದ್ದರೂ ಸೇತುವೆ ಕೆಲಸ ಪೂರ್ಣವಾಗಿಲ್ಲ. ಹೀಗಾಗಿ ಸಂಬಂಧಪಟ್ಟವರು ವೇಗವಾಗಿ ಕೆಲಸ ಮಾಡಿದರೇ, ಸೇತುವೆ ಮೂಲಕ ನದಿ ದಾಟಬಹುದು ಅಂತಾರೆ ಸ್ಥಳೀಯರು.
ಒಟ್ಟಿನಲ್ಲಿ ಗಂಗಾವಳಿ ನದಿಯ ಮೂಲಕ ತಮ್ಮ ಜೀವವನ್ನು ಕೈಯಲ್ಲಿ ಹಿಡಿದು ಓಡಾಡುವ ನಾಗರಿಕರ ಯಾತನೆ ಮುಂದುವರಿದಿದ್ದು, ಸಂಬಂಧಪಟ್ಟವರು ಕಾಮಗಾರಿ ಪೂರ್ಣಗೊಳಿಸಬೇಕಾಗಿದೆ. ಇಲ್ಲದಿದ್ದಲ್ಲಿ ಈ ಬಾರಿಯ ಮಳೆಗಾಲದಲ್ಲೂ ಜನತೆ ಮತ್ತೆ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ