news18-kannada Updated:January 7, 2021, 4:28 PM IST
ಸಿಎಂ ಬಿಎಸ್ ಯಡಿಯೂರಪ್ಪ.
ಬೀದರ್: ಸರ್ವಾಂಗೀಣ ಅಭಿವೃದ್ಧಿಗೆ ಕಾರ್ಯಕ್ರಮ ಹಾಕಿಕೊಂಡು, ಕರ್ನಾಟಕವನ್ನು ರಾಷ್ಟçದಲ್ಲೇ ಮಾದರಿ ರಾಜ್ಯವಾಗಿ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಬೀದರ್ ನಗರದಲ್ಲಿ 20 ಕೋಟಿ ರೂಪಾಯಿ ವೆಚ್ಚದಲ್ಲಿ 100 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆ ಹಾಗೂ ಇನ್ನಿತರ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. "ಕೋವಿಡ್, ಪ್ರವಾಹ, ಅತಿವೃಷ್ಟಿ, ಹಣಕಾಸಿನ ಸಮಸ್ಯೆಗಳಿಂದ ಈ ವರ್ಷ ನಿರೀಕ್ಷೆಯಂತೆ ಗುರಿಮುಟ್ಟಲಾಗಿಲ್ಲ. ಮುಂದಿನ ದಿನಗಳಲ್ಲಿ ಬೀದರ್ ಜಿಲ್ಲೆ ಸೇರಿದಂತೆ ರಾಜ್ಯದ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಅಲ್ಲದೆ, ರಾಜ್ಯ ಸರ್ಕಾರ ಎಲ್ಲರಿಗೂ ಆರೋಗ್ಯ ಸೇವೆ ನೀಡಲು ಬದ್ಧವಾಗಿದ್ದು, ಮುಂದಿನ 5 ವರ್ಷದಲ್ಲಿ ರಾಜ್ಯ ಸರ್ಕಾರ 125 ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆ ತೆರೆಯುವ ಗುರಿ ಹೊಂದಿದೆ" ಎಂದು ಘೋಷಿಸಿದ್ದಾರೆ.
ಇದೀಗ ಉದ್ಘಾಟನೆಗೊಂಡಿರುವ ನೂರು ಹಾಸಿಗೆಗಳ ಆಸ್ಪತ್ರೆ ಅತ್ಯಾಧುನಿಕ ಆಸ್ಪತ್ರೆಯಾಗಿದ್ದು, 24 ಗಂಟೆಯೂ ತಾಯಿ ಮತ್ತು ಮಕ್ಕಳ ಆರೈಕೆ ಮಾಡುತ್ತದೆ. ಈ ನಿಟ್ಟಿನಲ್ಲಿ ಪರಿಣಿತ ವೈದ್ಯರ ತಂಡ ಈ ಆಸ್ಪತ್ರೆಯಲ್ಲಿದೆ ಎಂದು ಮೆಚ್ಚುಗೆಯ ಮಾತನಾಡಿದರು. ಗರ್ಭಿಣಿ ಮತ್ತು ನವಜಾತ ಶಿಶುಗಳ ಮರಣಗಳ ಅನುಪಾತ ತಗ್ಗಿಸುವುದು ಹಾಗೂ ಗರ್ಭಿಣಿ ಹಾಗೂ ಮಕ್ಕಳಿಗೆ ಉತ್ತಮ ಗುಣಮಟ್ಟದ ಸೇವೆ ನೀಡಬೇಕೆಂಬುದು ಎಲ್ಲರ ಆಶಯವಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ಕರೆ ನೀಡಿದರು.
ಇದನ್ನೂ ಓದಿ: ಧಾರವಾಡ: ಕೊರೋನಾ ಲಸಿಕೆ ಹಾಕಲು ಇಪ್ಪತ್ತು ಸಾವಿರ ಆರೋಗ್ಯ ಕಾರ್ಯಕರ್ತರನ್ನು ಸಜ್ಜುಗೊಳಿಸಿದ ಜಿಲ್ಲಾಡಳಿತ
2018ರ ನೀತಿ ಆಯೋಗದ ಶ್ರೇಯಾಂಕದ ಪ್ರಕಾರ ಕೇರಳ ಮತ್ತು ತಮಿಳುನಾಡು ಬಿಟ್ಟರೆ ಕರ್ನಾಟಕ ಅತ್ಯುತ್ತಮ ಆರೋಗ್ಯ ಸೇವೆ ನೀಡುವ ರಾಜ್ಯ. ದೇಶದ ಆರೋಗ್ಯ ಕ್ಷೇತ್ರದ ಸರಾಸರಿ ಅಂಕಕ್ಕಿಂತ ರಾಜ್ಯದ ಸರಾಸರಿ ಅಂಕ ಹೆಚ್ಚಿದೆ. ಇಲ್ಲಿ ಜನಿಸಿದ ಶರಣ ಸಂಸ್ಕೃತಿಯೂ ಇಡೀ ವಿಶ್ವಕ್ಕೆ ಪಸರಿಸಿ ಈ ನೆಲದ ಮಹತ್ವ ಸಾರಿದೆ ಎಂದು ಬಣ್ಣಿಸುವ ಮೂಲಕ ಶರಣರು-ಸಂತರನ್ನು ಹಾಡಿಹೊಗಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರು ಮಾತನಾಡಿ, ಇಂದು ಖಾಸಗಿ ಆಸ್ಪತ್ರೆಗಳು ಬಡವರಿಗೆ ತುಟ್ಟಿಯಾಗಿ ಪರಿಣಮಿಸಿವೆ. ಪರಿಣಿತವೈದ್ಯರನ್ನೊಳಗೊಂಡಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಬಡವರಿಗೆ ಪೂರಕವಾಗಿದೆ. 2018ರಲ್ಲಿ ಅಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 20 ಕೋಟಿ ರೂಪಾಯಿ ವೆಚ್ಚದಲ್ಲಿ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಿದ್ದು, ಇಂದು ಅವರೇ ಉದ್ಘಾಟಿಸುತಿರುವುದು ಸಂತಸ ತಂದಿದೆ ಎಂದಿದ್ದಾರೆ.
Published by:
MAshok Kumar
First published:
January 7, 2021, 4:28 PM IST