Island: ಕರ್ನಾಟಕ ವ್ಯಾಪ್ತಿಯಲ್ಲಿ ಬರುವ 12 ನಡುದ್ವೀಪಗಳು ದಾಖಲೆಯಲ್ಲಿ ಗೋವಾ ಹೆಸರಲ್ಲಿ!

ಈ ಪೈಕಿ ಕೂರ್ಮಗಡ ದ್ವೀಪದಲ್ಲಿ ನರಸಿಂಹ ದೇವರ ಗುಡಿಯಿದ್ದು, ಅಲ್ಲಿನ ಪೂಜಾ ಕೈಂಕರ್ಯಗಳನ್ನು ಕಾರವಾರದ ಕಡವಾಡದ ಮನೆತನವೇ ನೋಡಿಕೊಳ್ಳುತ್ತಿದೆ. ಇತಿಹಾಸ ನೋಡಿದರೂ ಇವುಗಳೆಲ್ಲವೂ ಕರ್ನಾಟಕಕ್ಕೆ ಸೇರಿದೆಂಬುದು ಸ್ಪಷ್ಟವಾಗುತ್ತದೆಯಾದೆ.

ಕರ್ನಾಟಕದ ಕಾರವಾರದಲ್ಲಿರುವ ನಡುಗಡ್ಡೆಗಳು.

ಕರ್ನಾಟಕದ ಕಾರವಾರದಲ್ಲಿರುವ ನಡುಗಡ್ಡೆಗಳು.

  • Share this:
ಕಾರವಾರ: ಉತ್ತರ ಕನ್ನಡ ಜಿಲ್ಲೆಯ (Uttara Kannada District Arabian Sea) ಅರಬ್ಬಿ ಸಮುದ್ರ ವ್ಯಾಪ್ತಿಯ 12 ನಡುಗಡ್ಡೆಗಳು (Islands) ದಾಖಲೆಗಳ ಪ್ರಕಾರ ಇನ್ನೂ ಕೂಡ ಗೋವಾ ರಾಜ್ಯದ (Goa) ಹೆಸರಿನಲ್ಲೇ ಇದೆ ಎಂಬ ಮಾಹಿತಿ ಕೇಂದ್ರ ಗೃಹ ಇಲಾಖೆ (Union Home Ministry) ಹಾಗೂ ರಾಜ್ಯ ಆಂತರಿಕ ಭದ್ರತಾ ವಿಭಾಗದಿಂದ (State Internal Security Davison) ಹೊರ ಬಿದ್ದಿದೆ. ಕೂರ್ಮಗಡ, ದೇವಘಡ, ಶಿಮ್ಸಿಗುಡ್ಡ, ಕರ್ಕಲ್ ಗುಡ್ಡ, ಅಂಜುದೀವ್, ಸನಸೆಗುಂಜಿ ನಡುಗಡ್ಡೆ, ಕನಿಗುಡ್ಡ, ಮದಲಿಗಡ ಸೇರಿದಂತೆ 12 ನಡುಗಡ್ಡೆಗಳು ಇನ್ನೂ ಕೂಡ ಗೋವಾ ರಾಜ್ಯದ ಹೆಸರಿನಲ್ಲಿದ್ದು, ಈ ಬಗ್ಗೆ ಸ್ಪಷ್ಟ ಮಾಹಿತಿ ಒದಗಿಸುವಂತೆ ರಾಜ್ಯ ಆಂತರಿಕ ಭದ್ರತಾ ಪಡೆ ಉತ್ತರ ಕನ್ನಡ ಜಿಲ್ಲಾಡಳಿತವನ್ನು ಕೇಳಿತ್ತು. ಈ ಬಗ್ಗೆ ಪರಿಶೀಲಿಸಿದ ಜಿಲ್ಲಾಡಳಿತ, ನಡುಗಡ್ಡೆಗಳ ಲಾಂಗಿಟ್ಯೂಡ್ ಹಾಗೂ ಲ್ಯಾಟಿಟ್ಯೂಡ್ ಪರಿಶೀಲಿಸಿ ಇವುಗಳು ಕರ್ನಾಟಕದ್ದೇ ಎಂದು ವರದಿ ಕಳುಹಿಸಿದೆ.

ಗೋವಾದ ಹೆಸರಿನಲ್ಲಿ ಯಾಕೆ?

ಗೋವಾದಲ್ಲಿ ಆಡಳಿತ ನಡೆಸುತ್ತಿದ್ದ ಪೋರ್ಚುಗೀಸರು, ರಾಜ್ಯದ ಹಲವಾರು ದ್ವೀಪಗಳನ್ನೂ ವಶಪಡಿಸಿಕೊಂಡಿದ್ದರು. ಗೋವಾ ರಾಜ್ಯವನ್ನು ಮುಖ್ಯ ವ್ಯಾಪಾರ ಕೇಂದ್ರವನ್ನಾಗಿ ಮಾಡಿಕೊಂಡು, ಉಳಿದ ನಡುಗಡ್ಡೆಗಳನ್ನು ಸಂಪರ್ಕ ವ್ಯಾಪಾರಿ ಸ್ಥಳಗಳನ್ನಾಗಿ ಬಳಕೆ ಮಾಡಿಕೊಳ್ಳುತ್ತಿದ್ದರು. ಈ ಪೈಕಿ ಕಾರವಾರ ಅರಬ್ಬಿ ಸಮುದ್ರ ವ್ಯಾಪ್ತಿಯ ಕೂರ್ಮಗಡ, ದೇವಗಡ, ಅಂಜುದೀವ್, ಶಿಮ್ಸಿಗುಡ್ಡ ಸೇರಿದಂತೆ ಹಲವು ನಡುಗಡ್ಡೆಗಳು ಸೇರಿವೆ. ಹೀಗಾಗಿ ಆ ಸಂದರ್ಭದಲ್ಲಿಯೇ ಗೋವಾ ರಾಜ್ಯದ ಸ್ವಾಧೀನಲ್ಲೇ ಈ ದ್ವೀಪಗಳನ್ನು ಗುರುತಿಸಲಾಗಿತ್ತು. ಆದರೆ, ಈ ನಡುಗಡ್ಡೆಗಳು ಕರ್ನಾಟಕದ ಕಡಲ ತೀರದಿಂದ 12- 15 ನಾಟಿಕಲ್ ವ್ಯಾಪ್ತಿಯಲ್ಲಿ ಇದ್ದು, ಭೌಗೋಳಿಕವಾಗಿ ಕರ್ನಾಟಕ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. 1947 ರಲ್ಲಿ ಭಾರತ ಬ್ರಿಟಿಷರಿಂದ ಸ್ವಾತಂತ್ರ್ಯಗೊಂಡರೂ ಪೋರ್ಚುಗೀಸರು ಗೋವಾದಲ್ಲಿ ಆಡಳಿತ ಕೊನೆಗೊಳಿಸಿರಲಿಲ್ಲ. ಹೀಗಾಗಿ ಈ ನಡುಗಡ್ಡೆಗಳು ಸ್ವಾತಂತ್ರ್ಯದ ಬಳಿಕ ದಶಕಗಳ ಕಾಲ ಪೋರ್ಚುಗೀಸರು ಕೈಯಲ್ಲೇ ಇದ್ದ‌ ಕಾರಣ ಅವು ಗೋವಾ ರಾಜ್ಯದ ಹೆಸರಿನಲ್ಲಿ ದಾಖಲಾಗಿದ್ದವು.

ಪೋರ್ಚುಗೀಸರು ಭಾರತ ಬಿಟ್ಟು ತೆರಳಿದ ಬಳಿಕ ಕರ್ನಾಟಕದ ಕಂದಾಯ ಇಲಾಖೆ ಈ ನಡುಗಡ್ಡೆಗಳನ್ನು ತನ್ನ ಹೆಸರಿಗೆ ಮಾಡಿಕೊಳ್ಳಬೇಕಿತ್ತು. ಆದರೆ ಕಂದಾಯ ಭೂ ದಾಖಲೆ ಪುಟದಲ್ಲಿ ಇವುಗಳ ಸೇರ್ಪಡೆ ಆಗಿಲ್ಲ. ಹೀಗಾಗಿ 500 ವರ್ಷದ ಹಿಂದಿನ ದಾಖಲೆಯ ಪ್ರಕಾರ ಈ ನಡುಗಡ್ಡೆಗಳು ಇನ್ನೂ ಗೋವಾದ ಹೆಸರಿನಲ್ಲೇ ಇದ್ದು, ಹೆಸರಿಗೆ ಮಾತ್ರ ಕಾರವಾರ ಬಳಿಯ ನಡುಗಡ್ಡೆಗಳಾಗಿ ರಾಜ್ಯಕ್ಕೇ ಸೀಮಿತವಾಗಿವೆ.

ಕಾರವಾರದ ಕಡವಾಡದ ಮನೆತನವೇ ಉಸ್ತುವಾರಿ

ಇನ್ನು ಈ ಪೈಕಿ ಕೂರ್ಮಗಡ ದ್ವೀಪದಲ್ಲಿ ನರಸಿಂಹ ದೇವರ ಗುಡಿಯಿದ್ದು, ಅಲ್ಲಿನ ಪೂಜಾ ಕೈಂಕರ್ಯಗಳನ್ನು ಕಾರವಾರದ ಕಡವಾಡದ ಮನೆತನವೇ ನೋಡಿಕೊಳ್ಳುತ್ತಿದೆ. ಇತಿಹಾಸ ನೋಡಿದರೂ ಇವುಗಳೆಲ್ಲವೂ ಕರ್ನಾಟಕಕ್ಕೆ ಸೇರಿದೆಂಬುದು ಸ್ಪಷ್ಟವಾಗುತ್ತದೆಯಾದರೂ ಸರ್ಕಾರದ ಇನ್ನೂ ಇವುಗಳನ್ನು ತನ್ನ ಸುಪರ್ದಿಗೆ ಪಡೆದುಕೊಳ್ಳಲು ಮುಂದಾಗಿಲ್ಲ. ಅಂಜುದೀವ್ ದ್ವೀಪ ನೌಕಾಪಡೆಯ ಸುಪರ್ದಿಗಿದ್ದರೂ ದಾಖಲೆ ಪ್ರಕಾರ ಇದು ಗೋವಾಕ್ಕೆ ಸೇರಿದ್ದಾಗಿದೆ ಎಂಬುದು ಇಲ್ಲಿ‌ ಗಮನಾರ್ಹ ವಿಷಯವಾಗಿದೆ.

ಇದನ್ನು ಓದಿ:  kannada rajyotsava: ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವ ಮೆರವಣಿಗೆಗೆ ಅವಕಾಶ ನೀಡಲು ಹೋರಾಟಗಾರರ ಪಟ್ಟು

ಇನ್ನು ಹಲವಾರು ವರ್ಷಗಳಿಂದ ದ್ವೀಪ ಹಾಗೂ ನಡುಗಡ್ಡೆಗಳನ್ನು ಗೋವಾದ್ದೆ ಎಂದೇ ಗುರುತಿಸಲಾಗಿತ್ತು. ಆದರೆ, ಅದನ್ನು ಸರಿಪಡಿಸಿ ಮತ್ತೆ ಕಳುಹಿಸಲಾಗಿದೆ. ಕರ್ನಾಟಕದ‌ 7- 8 ದ್ವೀಪಗಳನ್ನು ಗೋವಾ ದ್ವೀಪಗಳನ್ನಾಗಿ ಗುರುತಿಸಿಕೊಂಡಿರುವುದಾಗಿ ರಾಜ್ಯ ಆಂತರಿಕ ಭದ್ರತಾ ಪಡೆಯಿಂದ ಮಾಹಿತಿ ಬಂದಿತ್ತು. ಈ ದ್ವೀಪಗಳು ಯಾವುದು, ಅವುಗಳ ಹೆಸರು ಹಾಗೂ ಇದು ಕರ್ನಾಟಕಕ್ಕೆ ಸಂಬಂಧಪಟ್ಟದ್ದೇ ಎಂದು ಮಾಹಿತಿ ನೀಡಲು ತಿಳಿಸಿದ್ದರು. ತಕ್ಷಣ ಈ ದ್ವೀಪಗಳನ್ನು ಗುರುತಿಸಿ ಅವುಗಳ ಸ್ಪಷ್ಟ ವರದಿ ಕಳುಹಿಸಲಾಗಿದೆ ಎಂದು  ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್  ತಿಳಿಸಿದ್ದಾರೆ.

ವರದಿ: ದರ್ಶನ್ ನಾಯ್ಕ್
Published by:HR Ramesh
First published: