ಹುಬ್ಬಳ್ಳಿ(ಆಗಸ್ಟ್. 18): ಧಾರವಾಡದ ವಿವಿಧ ಕೈಗಾರಿಕಾ ಅಭಿವೃದ್ಧಿ ಪ್ರದೇಶಗಳ ಮೂಲಭೂತ ಸೌಕರ್ಯಗಳ ನಿರ್ವಹಣೆಗೆ ವಿಧಿಸುವ ತೆರಿಗೆ ಆಕರಣೆ ಹಾಗೂ ನಿರ್ವಹಣೆ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಶೀಘ್ರ ಪರಿಹಾರ ಒದಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಹುಬ್ಬಳ್ಳಿ ಗೋಕುಲ ರಸ್ತೆಯ ಎಂ.ತಿಮ್ಮಸಾಗರ, ತಾರಿಹಾಳ, ಗಾಮನಗಟ್ಟಿ, ಇಟ್ಟಿಗಟ್ಟಿ ಹಾಗೂ ಧಾರವಾಡದ ಬೇಲೂರು, ಮುಮ್ಮಿಗಟ್ಟಿ ಕೈಗಾರಿಕಾ ಅಭಿವೃದ್ಧಿ ಪ್ರದೇಶಗಳು ಮತ್ತು ಕೆಎಸ್ಎಸ್ಐಡಿಸಿಯ ಕೈಗಾರಿಕಾ ವಸಾಹತು ಪ್ರದೇಶಗಳಿಗೆ ಭೇಟಿ ನೀಡಿದ ಸಚಿವರು ಪರಿಶೀಲನೆ ಮಾಡಿದರು. ಸ್ಥಳೀಯ ಉದ್ಯಮಿಗಳಿಂದ ಅಹವಾಲುಗಳನ್ನು ಆಲಿಸಿದರು.
ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ವಸತಿ ಗೃಹಗಳ ಹಂಚಿಕೆ, ಗಾಮನಗಟ್ಟಿ ಮಹಿಳಾ ಉದ್ಯಮಿ ಪಾರ್ಕ್ ನಿವೇಶನಗಳ ಕಾಮಗಾರಿ ಪೂರ್ಣಗೊಳಿಸಲು ಶೀಘ್ರ ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ನಂತರ ಹುಬ್ಬಳ್ಳಿಯ ಖಾಸಗಿ ಹೊಟೆಲ್ ನಲ್ಲಿ ಕೈಗಾರಿಕಾ ಉದ್ಯಮಿಗಳ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಕೊರೋನಾ ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿ ಹಾಗೂ ಈಗ ಮಳೆಯ ಕಾರಣದಿಂದ ಎಂ. ತಿಮ್ಮಸಾಗರ ಕೈಗಾರಿಕಾ ಪ್ರದೇಶದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಲ್ಲಿ ಸ್ವಲ್ಪ ವಿಳಂಬವಾಗಿದೆ. ಕಾಮಗಾರಿಗಳು ಪೂರ್ಣಗೊಂಡ ಬಳಿಕ ಇದು ಮಾದರಿ ಕೈಗಾರಿಕಾ ಪ್ರದೇಶವಾಗಿ ಅಭಿವೃದ್ಧಿ ಹೊಂದಲಿದೆ. ಹೊಸ ಕೈಗಾರಿಕಾ ನೀತಿ, ಭೂ ಸುಧಾರಣೆ ಕಾಯ್ದೆಯ ತಿದ್ದುಪಡಿಗಳಿಂದ ಬಹಳಷ್ಟು ಉದ್ಯಮಿಗಳು ಬಂಡವಾಳ ಹೂಡಿಕೆಗೆ ಉತ್ಸುಕರಾಗಿದ್ದಾರೆ. ಹುಬ್ಬಳ್ಳಿ- ಧಾರವಾಡ ಸೇರಿದಂತೆ ರಾಜ್ಯದ ಎರಡನೇ ಹಂತದ ನಗರಗಳಲ್ಲಿ ಉದ್ಯಮಗಳು ತಲೆ ಎತ್ತಲಿವೆ. ಧಾರವಾಡದಲ್ಲಿ ಎಫ್ಎಂಸಿಜಿ ಕ್ಲಸ್ಟರ್ ಸ್ಥಾಪನೆಗೆ ಉಲ್ಲಾಸ್ ಕಾಮತ್ ಅವರ ಅಧ್ಯಕ್ಷತೆಯಲ್ಲಿ ವಿಜನ್ ಗ್ರೂಪ್ ರಚಿಸಲಾಗಿದೆ. ಈ ಸಮಿತಿ ಈಗಾಗಲೇ ಕಾರ್ಯ ಆರಂಭಿಸಿದೆ.
ಕೋವಿಡ್ ಪರಿಸ್ಥಿತಿಯಲ್ಲಿಯೂ ಸುಮಾರು ಸುಮಾರು 30 ಸಾವಿರ ಕೋಟಿ ರೂಪಾಯಿ ಬಂಡವಾಳ ಹೂಡಿಕೆಗೆ ಪ್ರಸ್ತಾವನೆ ಬಂದಿವೆ. ಸರ್ಕಾರ ಅನುಮೋದನೆ ನೀಡಿದೆ.
ಇದನ್ನೂ ಓದಿ :
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಶಾಸಕ ಬಿ ಕೆ ಸಂಗಮೇಶ್ ಕುಟುಂಬದ ನಡುವೆ ಬಾಂಧವ್ಯದ ಬೇಸುಗೆ
ಕೆಐಎಡಿಬಿ ಹಾಗೂ ಕೆಎಸ್ಎಸ್ಐಡಿಸಿ ಸರ್ಕಾರದ ಸ್ವಾಯತ್ತ ಸಂಸ್ಥೆಗಳಾಗಿದ್ದು, ಲಾಭದ ಉದ್ದೇಶವಿಲ್ಲದೇ ಆದಾಯ ಖರ್ಚು ಸರಿದೂಗಿಸಿಕೊಂಡು ಉದ್ಯಮಿಗಳಿಗೆ ಸೌಕರ್ಯ ಕಲ್ಪಿಸುತ್ತಿವೆ. ಜಿಡಿಪಿ. ಉದ್ಯೋಗ ಸೃಷ್ಠಿಯಲ್ಲಿ ಸಣ್ಣ ಕೈಗಾರಿಕೆಗಳ ಪಾತ್ರ ಮಹತ್ವದ್ದಾಗಿದೆ. ಪ್ರತಿ ವರ್ಷ ನಿವೇಶನ ದರ ಪರಿಷ್ಕರಿಸುವ ಪದ್ಧತಿ ಕೈಬಿಡಲು ಮುಖ್ಯಮಂತ್ರಿಗಳನ್ನು ಕೋರಲಾಗುವುದು. ತಾರಿಹಾಳ ಪ್ರದೇಶದಲ್ಲಿ ಟೌನ್ ಶಿಪ್ ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ರೋಣ ಶಾಸಕ ಕಳಕಪ್ಪ ಬಂಡಿ ಮಾತನಾಡಿ, ನಿಗಮವು ಉದ್ಯಮಿಗಳನ್ನು ಪ್ರೋತ್ಸಾಹಿಸುತ್ತದೆ. ನಿವೇಶನ ದರದ ಪರಿಷ್ಕರಣೆಯಲ್ಲಿ ನ್ಯಾಯಯುತವಾದ ದರ ನಿಗದಿ ಪಡಿಸಲಾಗುವುದು ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ