ಜೂನ್ 8 ರಿಂದ ದೇವಾಲಯ ಪ್ರವೇಶಕ್ಕೆ ಗ್ರೀನ್ ಸಿಗ್ನಲ್ ; ಉತ್ತರ ಕನ್ನಡದಲ್ಲಿ ಭಕ್ತರಿಗೆ ಷರತ್ತುಬದ್ಧ ಅನುಮತಿ

ಶಿರಸಿ ಮಾರಿಕಾಂಬಾ ದೇವಾಲಯ ಜೂನ್ 8 ರಂದು ತೆರೆದುಕೊಳ್ಳಲಿದ್ದು, ಮುಂಜಾನೆ 8 ಘಂಟೆಗೆ ಮೊದಲ ಪೂಜಾ ಕಾರ್ಯ ನೆರವೇರಲಿದೆ.

ಶಿರಸಿಯ ಮಾರಿಕಾಂಬಾ ದೇವಾಲಯ

ಶಿರಸಿಯ ಮಾರಿಕಾಂಬಾ ದೇವಾಲಯ

  • Share this:
ಕಾರವಾರ(ಜೂ.06): ಜೂನ್ 8 ರಿಂದ ರಾಜ್ಯದಲ್ಲಿ ದೇವಾಲಯ ತೆರೆಯಲು ಸರ್ಕಾರ ಅವಕಾಶ ಕಲ್ಪಿಸಿದ್ದು, ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ದ ದೇವಾಲಯಗಳಲ್ಲಿ ಭಕ್ತರಿಗೆ ಷರತ್ತು ಬದ್ಧ ದರ್ಶನಕ್ಕೆ ಅವಕಾಶ ಸಿಗಲಿದೆ. ಜಿಲ್ಲೆಯ ಪ್ರಸಿದ್ದ ದೇವಾಲಯಗಳಾದ ಶಿರಸಿಯ ಮಾರಿಕಾಂಬೆ, ಕರಾವಳಿಯಲ್ಲಿ ಗೋಕರ್ಣ ಮಹಾಬಲೇಶ್ವರ ದೇವಾಲಯ, ಮುರುಡೇಶ್ವರ ದೇವಾಲಯ ಜೂನ್ 8ರಿಂದ ಭಕ್ತರ ದರ್ಶನಕ್ಕೆ ಮಾತ್ರ ತೆರೆದು ಕೊಳ್ಳಲಿದೆ.

ಇತಿಹಾಸದಲ್ಲೆ ಮೊದಲು ದೀರ್ಘಾವಧಿಯವರೆಗೆ ದೇವಾಲಯದ ಬಾಗಿಲು ಮುಚ್ಚಿದ್ದು ಎರಡು ತಿಂಗಳ ಬಳಿಕ ಈಗ ದೇವಾಲಯದ ಬಾಗಿಲು ತೆರೆಯಲಿದೆ. ಗೋಕರ್ಣ ಮಹಾಬಲೇಶ್ವರ ದೇವಾಲಯಕ್ಕೆ ದೇವಾಲಯದ ತೆರೆದ ಆರಂಭದ ಹದಿನೈದು ದಿನಗಳು ಸ್ಥಳಿಯ ಭಕ್ತರಿಗೆ ಮಾತ್ರ ಅವಕಾಶ ನೀಡಲಾಗಿತ್ತು, ಬಳಿಕ ವಾಸ್ತವ ಪರಿಸ್ಥಿತಿ ಅವಲೋಕಿಸಿ ಹೊರ ರಾಜ್ಯ ಮತ್ತು ಜಿಲ್ಲೆಯ ಭಕ್ತರಿಗೆ ಅವಕಾಶ ಸಿಗಲಿದೆ. ಜತೆಗೆ ಶಿರಸಿ ಮಾರಿಕಾಂಬೆ ದೇವಾಲಯದಲ್ಲಿಯೂ ಕೂಡಾ ದರ್ಶನದ ಮೊದಲ ಹಂತದಲ್ಲಿ ಸಾಮಾಜಿಕ ಅಂತರದೊಂದಿಗೆ ತಲಾ ಹದಿನೈದು ಭಕ್ತರಂತೆ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.

ಗೋಕರ್ಣ ಮಹಾಬಲೇಶ್ವರ ದೇವಾಲಯ

ದಕ್ಷಿಣ ಕಾಶಿ ಎಂದೆ ಪ್ರಸಿದ್ದಿ ಪಡೆದ ಜಿಲ್ಲೆಯ ಗೋಕರ್ಣ ಮಹಾಬಲೇಶ್ವರ ದೇವಾಲಯಕ್ಕೆ  ಮೊದಲು ಸ್ಥಳೀಯ ಭಕ್ತರಿಗೆ ಅವಕಾಶ ಕಲ್ಪಿಸಿಕೊಡಲಾಗುವುದು. ತದನಂತರ ಮುಂದಿನ ‌ನಿರ್ಧಾರಕ್ಕೆ ಬರಲು ಆಡಳಿತ ಮಂಡಳಿ ನಿರ್ಧರಿಸಿದೆ, ಇನ್ನು ಇಲ್ಲಿ ಆತ್ಮಲಿಂಗ ಸ್ಪರ್ಷ ಪೂಜೆಗೆ ಅವಕಾಶ ಇರುವುದಿಲ್ಲ. ಜತಗೆ ದಾಸೋಹ ಕಾರ್ಯಕ್ರಮ ಕೂಡಾ ನಡೆಸಲು ನಿರ್ಧಾರ ಕೈಗೊಂಡಿಲ್ಲ, ಕೇವಲ ಬಂದ ಭಕ್ತರು ಆತ್ಮಲಿಂಗದ ದರ್ಶನ ಪಡೆದು ವಾಪಾಸ್ಸಾಗಬಹುದು. ಬರುವ ಭಕ್ತಾಧಿಗಳಿಗೆ ಸರಕಾರದ ಮಾರ್ಗ ಸೂಚಿಯಂತೆ ಸ್ಯಾನಿಟೈಸರ್ ಬಳಕೆ, ಮಾಸ್ಕ್ ಬಳಕೆ, ಮತ್ತು ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಲು ಆಡಳಿತ ಮಂಡಳಿ‌ ನಿರ್ಧರಿಸಿದೆ.

ಶಿರಸಿ ಮಾರಿಕಾಂಬಾ ದೇವಾಲಯ

ಮಲೆನಾಡಿನ ಆದಿ ದೇವತೆ ಶಿರಸಿ ಮಾರಿಕಾಂಬಾ ದೇವಾಲಯ ಜೂನ್ 8 ರಂದು ತೆರೆದುಕೊಳ್ಳಲಿದ್ದು, ಮುಂಜಾನೆ 8 ಘಂಟೆಗೆ ಮೊದಲ ಪೂಜಾ ಕಾರ್ಯ ನೆರವೇರಲಿದೆ. ಭಕ್ತಾಧಿಕಾಗಳಿಗೆ ಇಲ್ಲಿ ಹಂತಹಂತವಾಗಿ ಪ್ರತಿ ಹಂತದಲ್ಲಿ ಹದಿನೈದು ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲು‌ ಇಲ್ಲಿ ತಯಾರಿ ನಡೆಸಿಕೊಳ್ಳಲಾಗಿದೆ. ಭಕ್ತರ ಸಂಖ್ಯೆ ಹೆಚ್ಚಾದಲ್ಲಿ ದೇವಾಲಯದ ಪ್ರಾಂಗಣದಲ್ಲಿ ಸಾಮಾಜಿಕ ಅಂತರದೊಂದಿಗೆ ಭಕ್ತರಿಗೆ ನಿಲ್ಲಲು ಕೂರಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇಲ್ಲಿ ನಡೆಯುತ್ತಿದ್ದ ಅನ್ನ ಪ್ರಸಾದ ಕಾರ್ಯಕ್ರಮ ನಡೆಯಲ್ಲ, ಮುಂದಿನ ಸರಕಾರದ ಆದೇಶ ಬರುವವರೆಗೂ ಅನ್ನ ಪ್ರಸಾದ ವಿತರಣೆ ನಿಷೇಧಿಸಲಾಗಿದೆ.

ಇದನ್ನೂ ಓದಿ : ಜೂನ್ 8 ರಿಂದ ಬಂಡೀಪುರ ಸಫಾರಿ ಆರಂಭ : ಪ್ರವಾಸಿಗರಿಗೆ ಸಿಗಲಿದೆ ವನ್ಯಜೀವಿಗಳ ದರ್ಶನ ಭಾಗ್ಯ

ಹೆಸರಾಂತ ಮುರುಡೇಶ್ವರ ದೇವಾಲಯದಲ್ಲಿ ಕೂಡಾ ಸಾಮಾಜಿಕ ಅಂತರದೊಂದಿಗೆ  ಷರತ್ತು ಬದ್ಧ ನಿಯಮದೊಂದಿಗೆ ದೇವರ ದರ್ಶನಕ್ಕೆ ಅನುವು ಮಾಡಿಕೊಡಲು ನಿರ್ಧರಿಸಲಾಗಿದೆ. ಹೀಗೆ ಜಿಲ್ಲೆಯ ಬಹುತೇಕ ಎಲ್ಲ ದೇವಾಲಯದಲ್ಲಿ ಸರಕಾರದ ಮಾರ್ಗ ಸೂಚಿ ಅನುಸರಿಸಿ ಜೂನ್ 8 ರಿಂದ ದೇವಾಲಯದ ತೆರೆದುಕೊಳ್ಳುತ್ತವೆ. ಜತೆಗೆ ಭಕ್ತರಿಗೆ  ದರ್ಶನ‌ ಕೂಡಾ ಅಷ್ಟೆ ಷರತ್ತು ಬದ್ಧವಾಗಿ ಚಾಚು ತಪ್ಪದೆ ನಡೆಯಲಿದೆ.
First published: