ಕೊರೋನಾ ಸೋಂಕಿತರು ಪರದಾಡಬಾರದೆಂದು ಆಂಬ್ಯುಲೆನ್ಸ್ ನೀಡಿ ಆದರ್ಶ ಮೆರೆದ ಅರ್ಚಕರು..!

ಆಂಬ್ಯುಲೆನ್ಸ್​ ನೀಡಿದ ಅರ್ಚಕರು

ಆಂಬ್ಯುಲೆನ್ಸ್​ ನೀಡಿದ ಅರ್ಚಕರು

 • Share this:
  ಹಾವೇರಿ‌: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ‌ ಹೆಚ್ಚಾಗುತ್ತಿದೆ. ಅದರಲ್ಲೂ ರಾಣೆಬೆನ್ನೂರು ತಾಲೂಕಿನಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿವೆ. ಹೀಗಾಗಿ ಸೋಂಕಿತರನ್ನ ಆಸ್ಪತ್ರೆಗೆ ದಾಖಲಿಸೋಕೆ ಅಂಬ್ಯುಲೆನ್ಸ್ ಸಮಸ್ಯೆ ಎದುರಾಗಬಹುದು ಎಂದು ಮನಗಂಡ ದೇವಸ್ಥಾನದ ಅರ್ಚಕರೊಬ್ಬರು ಸೋಂಕಿತರಿಗಾಗಿ ಅಂಬ್ಯುಲೆನ್ಸ್ ನೀಡುವ ಮೂಲಕ ಜನರಿಗೆ ನೆರವಾಗಿದ್ದಾರೆ. ರಾಣೆಬೆನ್ನೂರಿನಲ್ಲಿ ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯಲು ಸಮಸ್ಯೆ ಆಗಬಾರದೆಂದು ಅರ್ಚಕರರು ಆಂಬ್ಯುಲೆನ್ಸ್ ವಾಹನವನ್ನು ಕೊಡುಗೆಯಾಗಿ ನೀಡಿದ್ದಾರೆ. ಐತಿಹಾಸಿಕ ಮಾಲತೇಶ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ ಭಟ್ ತಮ್ಮ ವೈಯಕ್ತಿಕ ಹಣದಿಂದ ಅಂಬ್ಯುಲೆನ್ಸ್ ಸೇವೆ ಒದಗಿಸಿದ್ದಾರೆ.

  ಏಳೂವರೆ ಲಕ್ಷ ರುಪಾಯಿ ವೆಚ್ಚದಲ್ಲಿ ಖರೀದಿಸಿರೋ ವೆಂಟಿಲೇಟರ್ ಸಹಿತ‌ ಅಂಬ್ಯುಲೆನ್ಸ್ ನ್ನ ಕೊರೊನಾ ಸೋಂಕಿತರನ್ನ ಆಸ್ಪತ್ರೆಗೆ ಸಾಗಿಸೋಕೆ ನೀಡಿದ್ದಾರೆ. ಶಾಸಕ ಅರುಣಕುಮಾರ ಪೂಜಾರ ಸಮ್ಮುಖದಲ್ಲಿ ಅಂಬ್ಯುಲೆನ್ಸ್ ನ್ನ ಕೊರೊನಾ ಸೋಂಕಿತರನ್ನ ಆಸ್ಪತ್ರೆಗೆ ದಾಖಲಿಸೋಕೆ‌ ನೀಡಿದ್ದಾರೆ. ಸಹಾಯವಾಣಿ ಆರಂಭಿಸಿ, ಅದಕ್ಕೆ ಡ್ರೈವರ್ ನೇಮಿಸಿ ಅಂಬ್ಯುಲೆನ್ಸ್ ನಿರ್ವಹಣೆ‌ ಮಾಡೋ ಜವಾಬ್ದಾರಿಯನ್ನ ಶಾಸಕ ಅರುಣಕುಮಾರ ಪೂಜಾರಗೆ ನೀಡಿದ್ದಾರೆ. ಅರ್ಚಕ ಸಂತೋಷ ಭಟ್ಟರು ಒದಗಿಸಿರೋ ಅಂಬ್ಯುಲೆನ್ಸ್ ಗೆ ಚಾಲಕನನ್ನ ನೇಮಿಸಿ ಸೋಂಕಿತರನ್ನ ಆಸ್ಪತ್ರೆಗೆ ಶಿಫ್ಟ್ ಮಾಡೋ‌ ಕೆಲಸಕ್ಕೆ ಶಾಸಕ‌ ಪೂಜಾರ ಮುಂದಾಗಿದ್ದಾರೆ.

  ತಾಲೂಕಿನಲ್ಲಿ ಸೋಂಕಿತರು ಆಸ್ಪತ್ರೆಗೆ ದಾಖಲಾಗಲು ನೇರವಾಗಿ ತಾಲೂಕು ಪಂಚಾಯ್ತಿ ಆವರಣದಲ್ಲಿರೋ ಶಾಸಕರ ಕಚೇರಿಯಲ್ಲಿನ ಸಹಾಯವಾಣಿ ನಂಬರ್ 08373-261313 ಗೆ ಕರೆ ಮಾಡಿದ್ರೆ ಸಾಕು ಅಂಬ್ಯುಲೆನ್ಸ್ ಸೋಂಕಿತರಿದ್ದಲ್ಲಿಗೆ ತೆರಳಿ ಆಸ್ಪತ್ರೆಗೆ ದಾಖಲಿಸೋ ಕೆಲಸ ಮಾಡುತ್ತದೆ. ಶಾಸಕರ ಕಚೇರಿಯಲ್ಲಿನ ಸಿಬ್ಬಂದಿ ದಿನದ ಇಪ್ಪತ್ತು ನಾಲ್ಕು ಗಂಟೆಗಳ ಕಾಲ ಅಂಬ್ಯುಲೆನ್ಸ್ ಸೋಂಕಿತರಿಗೆ ಸೇವೆ ಒದಗಿಸುವಂತೆ ಕೆಲಸ ನಿರ್ವಹಿಸ್ತಾರೆ. ಸಂತೋಷ ಭಟ್ ರು ಉಚಿತವಾಗಿ ಅಂಬ್ಯುಲೆನ್ಸ್ ಒದಗಿಸಿದ್ರೆ, ಶಾಸಕ ಪೂಜಾರ ಅದರ ನಿರ್ವಹಣೆ ಜವಾಬ್ದಾರಿ ಹೊತ್ತುಕೊಂಡಿದ್ದಾರೆ‌. ಇದ್ರಿಂದ ಸೋಂಕಿತರು ಆಸ್ಪತ್ರೆಗೆ ದಾಖಲಾಗೋಕೆ ಅಂಬ್ಯುಲೆನ್ಸ್ ಅನುಕೂಲ ಆಗಲಿದೆ.

  ಐತಿಹಾಸಿಕವಾಗಿ ಸಾಕಷ್ಟು ಪ್ರಸಿದ್ಧಿ ಪಡೆದಿರೋ ದೇವರಗುಡ್ಡದ ಮಾಲತೇಶ ದೇವಸ್ಥಾನದ ಪ್ರಧಾನ ಅರ್ಚಕರು ತಾಲೂಕಿನಲ್ಲಿ ಕೊರೊನಾ ಸೋಂಕಿತರಾಗೋ ಜನರಿಗಾಗಿ ಉಚಿತ ಅಂಬ್ಯುಲೆನ್ಸ್ ಸೇವೆ ಒದಗಿಸಿದ್ದಲ್ಲೆ ಗ್ರಾಮದಲ್ಲಿ ಕೊರೊನಾ ಸೋಂಕು ಹರಡದಂತೆ ಜನರಲ್ಲಿ ಜಾಗೃತಿ ಮೂಡಿಸ್ತಿದ್ದಾರೆ.ಕಳೆದ ಬಾರಿ ಕೊರೊನಾ ಮೊದಲು ಅಲೆಯಲ್ಲೂ ಸಮಾಜಮುಖಿ ಕಾರ್ಯವನ್ನು ಮಾಡಿದ್ದಾರೆ. ಸುಮಾರು 6500 ಆಹಾರ ಕಿಟ್ ವಿತರಿಸಿದ್ದಾರೆ. ಅಲ್ಲದೇ 45 ಸಾವಿರ ಮಾಸ್ಕ್, ಸ್ಯಾನಿಟೈಸರ್, ನೀರಿನ ಬಾಟಲ್ ವಿತರಿಸಿದ್ದಾರೆ. ಈ ಬಾರಿ ಸಂತೋಷ ಭಟ್ ರು ಸೋಂಕಿತರಿಗೆ ಅಂಬ್ಯುಲೆನ್ಸ್ ಸೇವೆ ಒದಗಿಸಿದ ನಂತರ ಸ್ಥಳೀಯ ಶಾಸಕ ಪೂಜಾರ ಸಹ ಜನರಿಗಾಗಿ ತಾವೊಂದು ಅಂಬ್ಯುಲೆನ್ಸ್ ನೀಡೋ ನಿರ್ಧಾರಕ್ಕೆ ಬಂದಿದ್ದಾರೆ. ಒಟ್ನಲ್ಲಿ ಅಂಬ್ಯುಲೆನ್ಸ್ ಸೇವೆ ಆಸ್ಪತ್ರೆಗೆ ದಾಖಲಾಗಲು ಪರದಾಡೋ ಕೊರೊನಾ ಸೋಂಕಿತರಿಗೆ ಅನುಕೂಲ ಆಗಲಿದೆ.

  ವರದಿ: ಮಂಜುನಾಥ ತಳವಾರ
  Published by:Kavya V
  First published: