SSLC Exam: ಉತ್ತರ ಕನ್ನಡ ಜಿಲ್ಲೆಯಲ್ಲಿ SSLC ವಿದ್ಯಾರ್ಥಿಗಳು ಕಾಣೆಯಾಗಿದ್ದಾರೆ, ಶಿಕ್ಷಕರು ಹುಡುಕಾಡುತ್ತಿದ್ದಾರೆ !

SSLC Exam: ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಮಕ್ಕಳಿಗೆ ಕೊಟ್ಟು  ಅಭ್ಯಾಸ ಮಾಡಿಸುವಂತೆ ಆಯಾ ಶಾಲೆಗಳಿಗೆ ಸೂಚಿಸಲಾಗಿದೆ. ಹೀಗಾಗಿ ಶಿಕ್ಷಕರು ಮಕ್ಕಳ ಸಂಪರ್ಕಕ್ಕಾಗಿ ಹರಸಾಹಸಪಡಬೇಕಾಗಿದೆ.

ವಿದ್ಯಾರ್ಥಿಗಳ ಮನೆಗೇ ಶಿಕ್ಷಕರ ಭೇಟಿ

ವಿದ್ಯಾರ್ಥಿಗಳ ಮನೆಗೇ ಶಿಕ್ಷಕರ ಭೇಟಿ

  • Share this:
ಕಾರವಾರ: ಸಾಮಾನ್ಯವಾಗಿ ಪೊಲೀಸರು ಪತ್ತೆಕಾರ್ಯವನ್ನ ಮಾಡ್ತಾರೆ. ಆದ್ರೀಗ ಶಿಕ್ಷಕರು  ಪೊಲೀಸರಂತೆ ಪತ್ತೆದಾರಿ ಕಾರ್ಯ ಮಾಡುವ ಸಂದರ್ಭ ಬಂದಿದೆ. ಉತ್ತರ ಕನ್ನಡ ಜಿಲ್ಲೆಯ ಶಿಕ್ಷಕರು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ‌ ಮಾದರಿ  ಪ್ರಶ್ನೆ ಪತ್ರಿಕೆ ನೀಡಲು ಹುಡುಕಾಟಕ್ಕೆ ಮುಂದಾಗಿದ್ದಾರೆ,  ಯಾಕಂದ್ರೆ ಈ ಬಾರೀ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ನೋಂದಣಿ ಮಾಡಿಕೊಂಡಿದ್ದ ವಿದ್ಯಾರ್ಥಿಗಳು ಇದುವರೆಗೆ ಶಾಲೆಗಳ ಮತ್ತು ಶಿಕ್ಷಕರ ಸಂಪರ್ಕಕ್ಕೆ ಸಿಕ್ಕಿಲ್ಲ. ಹೀಗಾಗಿ ವಿದ್ಯಾರ್ಥಿಗಳನ್ನ ಹುಡುಕಿ ತರುವ ಜವಬ್ದಾರಿಯನ್ನ ಶಿಕ್ಷಕರ ಮೇಲಿದೆ.  ವಿಳಾಸ ಹುಡುಕಿ ಮಾದರಿ ಪ್ರಶ್ನೆ ಪತ್ರಿಕೆ ನೀಡುತ್ತಿರುವ ಶಿಕ್ಷಕರು: ಅಂತೂ ಇಂತೂ ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಮುಂದಾಗಿದೆ. ಕೋವಿಡ್  ಮಹಾಮಾರಿಯಿಂದಾಗಿ ಕೆಲ ತಿಂಗಳು ಶಾಲೆಗಳು ಮುಚ್ದಿದ್ದರಿಂದ ವಿದ್ಯಾರ್ಥಿಗಳು ಕೆಲ ತಿಂಗಳಿಂದ ತಮ್ಮ ಶಾಲೆಯಿಂದ ದೂರವಿದ್ದಾರೆ. ಇಂಥ ಸಂಕಷ್ಟದಲ್ಲಿ ವಿದ್ಯಾರ್ಥಿಗಳಿಂದ ಪರೀಕ್ಷೆ ಬರೆಸುವುದು ಕೂಡ ಸವಾಲಿನ ಕೆಲಸವಾಗಿದೆ.

ಆದ್ರೆ, ಉತ್ತರಕನ್ನಡ ಜಿಲ್ಲೆಯ ಕಾರವಾರ ಮತ್ತು ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಕೆಲವು ಮಕ್ಕಳು-ಶಿಕ್ಷಕರ ನಡುವಿನ ಸಂಪರ್ಕ ವಿವಿಧ ಕಾರಣಗಳಿಂದ ಕಡಿತಗೊಂಡಿದೆ.  ಈ ಸಲ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನ ಎರಡೇ ದಿನ ಮಾಡ್ತಿರೋದ್ರಿಂದ  ಪರೀಕ್ಷೆ ಬರೆದ ಪ್ರತಿಯೊಬ್ಬರೂ ಉತ್ತೀರ್ಣರಾಗಲಿದ್ದಾರೆಂದು ಇಲಾಖೆ ತಿಳಿಸಿದೆ. ಆದ್ರೆ   ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಮಕ್ಕಳಿಗೆ ಕೊಟ್ಟು  ಅಭ್ಯಾಸ ಮಾಡಿಸುವಂತೆ ಆಯಾ ಶಾಲೆಗಳಿಗೆ ಸೂಚಿಸಲಾಗಿದೆ. ಹೀಗಾಗಿ ಶಿಕ್ಷಕರು ಮಕ್ಕಳ ಸಂಪರ್ಕಕ್ಕಾಗಿ ಹರಸಾಹಸಪಡಬೇಕಾಗಿದೆ. ಯಾಕಂದ್ರೆ ಗುಡ್ಡಗಾಡು ಪ್ರದೇಶಗಳನ್ನ ಹೊಂದಿರುವ ಉತ್ತರಕನ್ನಡ ಜಿಲ್ಲೆಯಲ್ಲಿ ನೆಟ್ ವರ್ಕ್ ಸಮಸ್ಯೆ.  ಬಸ್ ಸಂಪರ್ಕವೂ ಇಲ್ಲದೇ, ನೆಟ್ ವರ್ಕ್ ಕೂಡ ಇಲ್ಲದ ಕುಗ್ರಾಮಗಳಿಂದ ಮಕ್ಕಳನ್ನ ಹುಡುಕೋದೇ ಶಿಕ್ಷಕರಿಗೆ ಕಷ್ಟಸಾಧ್ಯವಾಗಿದೆ. ಕಳೆದ ವಾರದಿಂದ ಶಿಕ್ಷಕರ ಸಭೆಯಲ್ಲಿ ಅಧಿಕಾರಿಗಳು ಮಕ್ಕಳ ಪತ್ತೆಗಾಗಿ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ  ವಿದ್ಯಾರ್ಥಿಗಳನ್ನ  ಪತ್ತೆ ಮಾಡುವ ಕಾರ್ಯವನ್ನ ಶಿಕ್ಷಕರು ಮಾಡ್ತಿದ್ದಾರೆ.

ಇದನ್ನೂ ಓದಿ: Bird Song: ಕೋಗಿಲೆ ಕೂಗುವ ಸಮಯ ಬದಲಾಗಿದೆ, ಗಮನಿಸಿದ್ದೀರಾ ?

ಶಿಕ್ಷಣ ಇಲಾಖೆಯಿಂದ ಸೂಚನೆ: ಕೆಲ ದಿನಗಳ ಹಿಂದೆ ಆಯಾ ಶಿಕ್ಷಣಾಧಿಕಾರಿಗಳು ಹೈಸ್ಕೂಲ್ ಮುಖ್ಯ ಶಿಕ್ಷಕರ ಸಭೆ ನಡೆಸಿದ್ದರು. ಆಗ ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ನೂರಾರು ವಿದ್ಯಾರ್ಥಿಗಳ ಸುಳಿವು ಸಿಕ್ಕಿರಲಿಲ್ಲ. ಇದೀಗ  ಕಾರವಾರ ಶೈಕ್ಷಣಿಕ ಜಿಲ್ಲೆಯ 83 ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆಯ ಸುಮಾರು 2 ಸಾವಿರದಷ್ಟು ವಿದ್ಯಾರ್ಥಿಗಳು ಇದುವರೆಗೂ ಶಾಲೆಗಳ ಅಥವಾ ಶಿಕ್ಷಕರ ಸಂಪರ್ಕಕ್ಕೆ ಸಿಕ್ಕಿಲ್ಲ ಎನ್ನಲಾಗಿದೆ. ಇದರಿಂದ ಅಧಿಕಾರಿಗಳು ಕೂಡ ತಲೆಕೆಡಿಸಿಕೊಂಡಿದ್ದಾರೆ.  ವಿದ್ಯಾರ್ಥಿಗಳನ್ನು ಹುಡುಕಿ ತರುವ ಜವಾಬ್ದಾರಿಯನ್ನು ಹೈಸ್ಕೂಲ್ ಶಿಕ್ಷಕರಿಗೆ ನೀಡಲಾಗಿದೆ. ತಮ್ಮ ಶಾಲೆಯ ಎಲ್ಲ ಮಕ್ಕಳನ್ನು ಹೇಗಾದರೂ ಸಂಪರ್ಕಿಸಿ ಅವರಿಗೆ ಪಾಠ ಮಾಡುವ ಜವಾಬ್ದಾರಿಯನ್ನ ಶಿಕ್ಷಕರು ಹೊತ್ತುಕೊಂಡಿದ್ದಾರ. ಹೀಗಾಗಿ ಬೈಕ್ ಗಳ ಮೂಲಕ ವಿಳಾಸ ಹಿಡಿದು ವಿದ್ಯಾರ್ಥಿಗಳ ಮನೆಯನ್ನ ಹುಡುಕುತ್ತಿದ್ದಾರೆ.

ನಗರ ಪ್ರದೇಶದ ಮಕ್ಕಳು ಈಗಾಗಲೇ ಶಿಕ್ಷಕರ ಸಂಪರ್ಕದಲ್ಲಿದ್ದು,  ವಾಟ್ಸ್ ಆ್ಯಪ್ ಗ್ರೂಪ್ ಮಾಡಿಕೊಂಡು ಆನ್‌ಲೈನ್ ತರಗತಿ ಪಡೆಯುತ್ತಿದ್ದಾರೆ. ಪ್ರತಿ ದಿನ ಬೆಳಗ್ಗೆ ಕರೆ ಮಾಡಿ ಓದಲು ಪ್ರೆರೇಪಿಸುತ್ತಿದ್ದಾರೆ. ಆದ್ರೆ, ಗ್ರಾಮೀಣ ಭಾಗದ ಮೊಬೈಲ್ ನೆಟ್ವರ್ಕ್ ಇಲ್ಲದ ಪ್ರದೇಶದಲ್ಲಿರುವ ಹಾಗೂ ಮೊಬೈಲ್ ಇಲ್ಲದ ಮಕ್ಕಳು ಸಂಪರ್ಕಕ್ಕೆ ಸಿಗುತ್ತಿಲ್ಲ. ಅವರ ವಿಳಾಸ ಹುಡುಕಿ ಮನೆಗಳಿಗೆ ತೆರಳಿ ಅವರನ್ನು ಪತ್ತೆ ಮಾಡೋದೇ ದೊಡ್ಡ ಕೆಲಸವಾಗಿದೆ. ಹೇಗಾದ್ರೂ ಮಾಡಿ   ಪರೀಕ್ಷೆ ಬರೆಯುವ ಎಲ್ಲಾ  ವಿದ್ಯಾರ್ಥಿಗಳು  ಎಕ್ಸಾಂ ಬರೆಯುವಂತೆ ಮಾಡಲು ಶಿಕ್ಷಕರು ಮತ್ತು ಅಧಿಕಾರಿಗಳು  ಶ್ರಮಿಸುತ್ತಿದ್ದಾರೆ.

ನೆಟ್ವರ್ಕ್ ಮತ್ತು ಲಾಕ್ ಡೌನ್ ಸಮಸ್ಯೆ: ಕೇವಲ ನೆಟ್‌ವರ್ಕ್ ಸಮಸ್ಯೆದಿಂದ ಮಾತ್ರ ಮಕ್ಕಳು ಸಂಪರ್ಕಕ್ಕೆ ಸಿಗದಿರಲು  ಕಾರಣ ಅಲ್ಲ.  ಉತ್ತರ ಕರ್ನಾಟಕ ಭಾಗದಿಂದ ನೆಲೆಸಿದ್ದ ಸಾಕಷ್ಟು ಕುಟುಂಬಗಳು  ಕೋವಿಡ್ ಲಾಕ್‌ಡೌನ್ ಹಾಗೂ ಆರ್ಥಿಕ ಸಂಕಷ್ಟದಿಂದ ತಮ್ಮ ಸ್ವಂತ ಊರು ತಲುಪಿವೆ. ಅಂಥ ಹಲವು ಪಾಲಕರ ಬಳಿ ಮೊಬೈಲ್ ಸಹ ಇಲ್ಲ. ಇನ್ನೂ ಕೆಲವು ಮಕ್ಕಳು ಕೂಲಿ ಕೆಲಸಕ್ಕೆ ತೆರಳುತ್ತಿರುವ ವಿಷಯವನ್ನ ಶಿಕ್ಷಕರ ತಿಳಿದುಕೊಂಡಿದ್ದಾರೆ. ಒಟ್ಟಿನಲ್ಲಿ ಕೋವಿಡ್ ಮಹಾಮಾರಿಯಿಂದಾಗಿ  ವಿದ್ಯಾರ್ಥಿಗಳು ತಮ್ಮತಮ್ಮ ಮನೆಯಲ್ಲಿ ಉಳಿದುಕೊಳ್ಳುವಂತಾಗಿದ್ದರೇ, ಶಿಕ್ಷಕರು ಮಾತ್ರ ಮಕ್ಕಳ ಪತ್ತೆ ಕಾರ್ಯದಲ್ಲಿ  ತೊಡಗಿರುವುದು  ದುರಂತವಾಗಿದೆ.
Published by:Soumya KN
First published: