ವಿದ್ಯಾಗಮನ ಹೆಸರಿನಲ್ಲಿ ಶಿಕ್ಷಕರಿಂದ ಮನೆಮನೆಗೆ ತೆರಳಿ ಪಾಠ ; ರಾಮನಗರದ ಶಿಕ್ಷಕರಿಂದ ಗುರುಕುಲ ಪದ್ಧತಿ ಪಾಠ

ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಕೋಡಂಬಳ್ಳಿ, ಜಗದಾಪುರ ಹಾಗೂ ಸುತ್ತಮುತ್ತಲ ಇತರೆ ಹಳ್ಳಿಗಳಲ್ಲಿ ಶಿಕ್ಷಕರೇ ಮನೆ ಮನೆಗೆ ಹೋಗಿ ವಿದ್ಯಾರ್ಥಿಗಳನ್ನ ಸೇರಿಸಿಕೊಂಡು ಪಾಠ ಹೇಳಿಕೊಡುತ್ತಿದ್ದಾರೆ

ಮಕ್ಕಳಿಗೆ ಪಾಠ ಮಾಡುತ್ತಿರುವ ಶಿಕ್ಷಕರು

ಮಕ್ಕಳಿಗೆ ಪಾಠ ಮಾಡುತ್ತಿರುವ ಶಿಕ್ಷಕರು

  • Share this:
ರಾಮನಗರ(ಆಗಸ್ಟ್ .11): ಜಗಲಿಕಟ್ಟೆ,  ದೇವಸ್ಥಾನದ ಆವರಣ, ಹಳ್ಳಿ ಮನೆಗಳ ಪಡಸಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಪ್ರವಚನ. ಶಿಕ್ಷಕರೇ ವಿದ್ಯಾರ್ಥಿಗಳ ಮನೆ ಮನೆ ಬಾಗಿಲಿಗೆ ಹೋಗಿ ಪಾಠ ಹೇಳಿಕೊಡುತ್ತಿದ್ದಾರೆ. ವಿದ್ಯಾಗಮ ಎಂಬ ಹೆಸರಿನಡಿ ಹಳ್ಳಿಗಾಡಿನ ಮಕ್ಕಳಿಗೆ ಶಿಕ್ಷಕರು ಪಾಠ ಹೇಳಿಕೊಡುತ್ತಿದ್ದಾರೆ. ಕೊರೋನಾದಿಂದಾಗಿ ಗುರುಕುಲ ಪದ್ಧತಿ ಮತ್ತೆ ಪ್ರಾರಂಭವಾಗಿದೆ.

ಹೌದು ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಕೋಡಂಬಳ್ಳಿ, ಜಗದಾಪುರ ಹಾಗೂ ಸುತ್ತಮುತ್ತಲ ಇತರೆ ಹಳ್ಳಿಗಳಲ್ಲಿ ಶಿಕ್ಷಕರೇ ಮನೆ ಮನೆಗೆ ಹೋಗಿ ವಿದ್ಯಾರ್ಥಿಗಳನ್ನ ಸೇರಿಸಿಕೊಂಡು ಪಾಠ ಹೇಳಿಕೊಡುತ್ತಿದ್ದಾರೆ. ಎಲ್ಲೆಡೆ ಕೊರೋನಾ ಹಿನ್ನೆಲೆಯಲ್ಲಿ  ಶಾಲೆಗಳು ಮುಚ್ಚಿರುವ ಈ ಸಂದರ್ಭದಲ್ಲಿ ಮಕ್ಕಳಿಗೆ ಕಲಿಕೆಯುಂಟು ಮಾಡುವ ಸಲುವಾಗಿ ಶಿಕ್ಷಣ ಇಲಾಖೆಯು ರೂಪಿಸಿರುವ ವಿದ್ಯಾಗಮ ಎಂಬ ವಿನೂತನ  ಕಾರ್ಯಕ್ರಮದಡಿಯಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡಲಾಗುತ್ತಿದೆ

ಶಿಕ್ಷಕರು ಕೂಡ ಬಹಳ ಉತ್ಸುಕರಾಗಿ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುತ್ತಿದ್ದಾರೆ. ಶಾಲೆಗಳು ಆರಂಭಗೊಳ್ಳದ ಹಿನ್ನೆಲೆಯಲ್ಲಿ ಗ್ರಾಮಗಳಲ್ಲಿನ   ದೊಡ್ಡ ಪಡಸಾಲೆಗಳು, ದೇವಸ್ಥಾನದ ಆವರಣ, ಅರಳಿಕಟ್ಟೆಯಲ್ಲಿ ಮಕ್ಕಳನ್ನ ಕೂರಿಸಿಕೊಂಡು ಮಾಸ್ಕ್ ಹಾಕಿಸಿ, ಸಾಮಾಜಿಕ ಅಂತರ ಕಾಪಾಡುವ ಮೂಲಕ ಮಕ್ಕಳಿಗೆ ಶಿಕ್ಷಕರು ಬೋಧನೆ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ವೈಯಕ್ತಿಕ ಸ್ವಚ್ಛತೆ ಬಗ್ಗೆ ಹಾಗೂ  ಕೊರೋನಾದ ವಿರುದ್ಧ ತೆಗೆದು ಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳಿವಳಿಕೆ ನೀಡುತ್ತಿದ್ದಾರೆ.

ಇನ್ನು ಕೊರೋನಾ ಎಫೆಕ್ಟ್ ನಿಂದ ಸಾಲು ಸಾಲು ರಜೆಯಿಂದ ಮಕ್ಕಳ ಸ್ಥಿತಿಗತಿಯನ್ನು ಸುಧಾರಿಸುವಲ್ಲಿ ಶಿಕ್ಷಣ ಇಲಾಖೆಯು ರೂಪಿಸಿರುವ ವಿದ್ಯಾಗಮ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಮಕ್ಕಳ ಭವಿಷ್ಯ ಹಾಗೂ ಕಲಿಕಾ ಸಾಮರ್ಥ್ಯ ಹೆಚ್ವಿಸಲು ಅನುಕೂಲವಾಗಿದೆ. ಗ್ರಾಮೀಣ ಭಾಗದಿಂದ ಹೋಗುತ್ತಿದ್ದ  ಖಾಸಗಿ ಶಾಲೆಯ ಮಕ್ಕಳು ಕೂಡ ಇಲ್ಲಿ ಬಂದು ಪಾಠ ಕೇಳುತ್ತಿದ್ದಾರೆ ಎನ್ನುತ್ತಾರೆ ಶಿಕ್ಷಕರು.

ಇದನ್ನೂ ಓದಿ : ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 10 ವರ್ಷದಲ್ಲಿ 40 ಸಾವಿರ ಎಕರೆ ಕಾನು ಅರಣ್ಯ ರಕ್ಷಣೆ : ಅನಂತ ಹೆಗಡೆ ಅಶೀಸರ

ಜೊತೆಗೆ ಇನ್ನು ಹಳ್ಳಿಗಾಡಿ‌ನ ಮಕ್ಕಳು ಕೂಡ ಶಿಕ್ಷಕರ ಮನವಿಗೆ ಸ್ಪಂದಿಸಿದ್ದಾರೆ. ವಿದ್ಯಾರ್ಥಿಗಳು ಕೂಡ ಸಾಲು ಸಾಲು ರಜೆಯಿಂದ ಬೇಸತ್ತು ಪಾಠ ಕೇಳಲು ಉತ್ಸುಕರಾಗಿ ಬರುತ್ತಿದ್ದಾರೆಂದು ಪೋಷಕರು ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಾರೆ ಶಿಕ್ಷಣ ಇಲಾಖೆ ಜಾರಿಗೆ ತಂದಿರುವ ವಿದ್ಯಾಗಮ ಯೋಜನೆಗೆ ರೇಷ್ಮೆನಗರಿಯಲ್ಲಿ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಇದೇ ಮಾದರಿಯಲ್ಲಿ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸಿಕೊಂಡು ಮಕ್ಕಳಿಗೆ ಪಾಠ ಮುಂದುವರೆಯಲಿ, ರಾಜ್ಯದ ಬೇರೆ ಜಿಲ್ಲೆಗಳಿಗೂ ವಿಸ್ತರಣೆಯಾಗಲಿ ಎಂಬುದು ನಮ್ಮ ಆಶಯ.
Published by:G Hareeshkumar
First published: