ವಿಜಯಪುರ: ಅಭಿಮಾನವೇ ಹೀಗೆ ಅನಿಸುತ್ತೆ. ಯಾವ್ಯಾವ ಅಭಿಮಾನಿ ತಮ್ಮ ಪ್ರೀತಿ ಪಾತ್ರರ ಬಗ್ಗೆ ಯಾವ್ಯಾವ ರೀತಿಯಲ್ಲಿ ಅಭಿಮಾನ ವ್ಯಕ್ತಪಡಿಸುತ್ತಾರೋ ಗೊತ್ತಿಲ್ಲ. ಹಲವಾರು ಜನ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕರ ದೇವಸ್ಥಾನ ನಿರ್ಮಿಸುವ ಉದಾಹರಣೆಗಳು ಸಾಕಷ್ಟಿವೆ. ಅನೇಕ ಕಡೆ ತಮ್ಮ ನಾಯಕರ ಜನ್ಮದಿನಗಳಂದು ನಾನಾ ಶಿಬಿರಗಳನ್ನು ಆಯೋಜಿಸಿ ಜನಸೇವೆಯಲ್ಲಿ ತೊಡಗುವುದು ಉಂಟು. ಆದರೆ, ಬಸವನಾಡಿನ ಅಭಿಮಾನಿಯೊಬ್ಬ ತನ್ನ ನೆಚ್ಚಿನ ಹಿರೋಗಾಗಿ ಮಹಾರಾಷ್ಟ್ರಕ್ಕೆ ಹೋಗಿ ರೂ. 10 ಸಾವಿರ ಖರ್ಚು ಮಾಡಿ ತನ್ನಲ್ಲಿರುವ ಅಭಿಮಾನ ಮೆರೆದಿದ್ದಾನೆ.
ಈ ಯುವಕನ ಹೆಸರು ಮುದಕಪ್ಪ ಪರೀಟ. 20 ವರ್ಷದ ಯುವಕ. ಆದರೆ, ಈತನ ಅಭಿಮಾನ ನೋಡಿ ಸ್ವತಃ ಆ ನಾಯಕನೇ ದಂಗಾಗಿದ್ದಾರೆ. ಈ ಯುವಕ ಬಸವನಾಡು ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮ. ರಾಜಕೀಯ ಜಿದ್ದಾಜಿದ್ದಿಗೆ ಹೆಸರಾಗಿರುವ ಗ್ರಾಮವಿದು. ಈ ಗ್ರಾಮದ ಯುವಕ ಮುದ್ದಣ್ಣ ಪರೀಟ ತನ್ನ ನೆಚ್ಚಿನ ಯುವ ನಾಯಕ ಮತ್ತು ವಿಧಾನ ಪರಿಷತ ಕಾಂಗ್ರೆಸ್ ಸದಸ್ಯ ಸುನಿಲಗೌಡ ಬಿ. ಪಾಟೀಲ ಅವರೆಂದರೆ ಅಚ್ಚುಮೆಚ್ಚು. ಹೀಗಾಗಿ ಅವರ ಮೇಲಿರುವ ಪ್ರೀತಿ ತನ್ನಲ್ಲಿ ಶಾಶ್ವತವಾಗಿರಲಿ ಎಂದು ಯೋಚಿಸಿ ತನ್ನ ಎದೆಯ ಮೇಲೆ ಸುನೀಲಗೌಡ ಬಿ. ಪಾಟೀಲ ಅವರ ಹಚ್ಚೆ ಹಾಕಿಸಿಕೊಂಡಿದ್ದಾರೆ. ಇದಕ್ಕಾಗಿ ಈತ ಖರ್ಚು ಮಾಡಿದ್ದು ಬರೋಬ್ಬರಿ ರೂ. 10 ಸಾವಿರ. ಅದೂ ಕೂಡ ವಿಜಯಪುರದಲ್ಲಿ ಅಲ್ಲ, ನೆರೆಯ ಮಹಾರಾಷ್ಟ್ರಕ್ಕೆ ಹೋಗಿ ಹಾಕಿಸಿಕೊಂಡಿದ್ದಾನೆ.
ತನ್ನ ನೆಚ್ಚಿನ ನಾಯಕನ ಭಾವಚಿತ್ರದ ಹಚ್ಚೆ ಹಾಕಿಸಿಕೊಳ್ಳಲು ಅಲ್ಲಲ್ಲಿ ವಿಚಾರಿಸಿ ಕೊನೆಗೆ ನೆರೆಯ ಮಹಾರಾಷ್ಟ್ರದ ಸಾಂಗಲಿಯಲ್ಲಿ ಉತ್ತಮವಾಗಿ ಹಚ್ಚೆ ಹಾಕುವವರ ಅಡ್ರೆಸ್ ಪಡೆದಿದ್ದಾನೆ. ನೇರವಾಗಿ ಅಲ್ಲಿಗೆ ಹೋದವನೇ ಅವರು ಹೇಳಿದಷ್ಟು ಹಣ ನೀಡಿ ತನ್ನ ಎದೆಯ ಮೇಲೆ ಸುನಿಲಗೌಡ ಬಿ. ಪಾಟೀಲ ಅವರ ಹಚ್ಚೆ ಹಾಕಿಸಿಕೊಂಡಿದ್ದಾನೆ. ಈ ಹಚ್ಚೆಯ ಚಿತ್ರಗಳು ಈ ಭಾಗದಲ್ಲಿ ಈಗ ವೈರಲ್ ಆಗಿವೆ.
ಇದನ್ನೂ ಓದಿ: ಕಲಬುರ್ಗಿ ಕಾರಾಗೃಹದಲ್ಲಿ ಮಗು ಸಾವು ಪ್ರಕರಣ – ಪಿಎಸ್ಐ ವಜಾಕ್ಕೆ ಒತ್ತಾಯಿಸಿ ಶವ ಇಟ್ಟು ಪ್ರತಿಭಟನೆ
ಹಸಿರು ಬಣ್ಣದ ಹಚ್ಚೆ ಈಗ ಮುದ್ದಣ್ಣ ಪರೀಟ ಎದೆಯ ಮೇಲೆ ರಾರಾಜಿಸುತ್ತಿದ್ದು, ಹಚ್ಚೆ ಹಾಕಿಸಿಕೊಳ್ಳುವಾಗಲು ಎಷ್ಟೇ ನೋವಾದರೂ ಯಾವುದೇ ರೀತಿಯಲ್ಲಿ ಹೊರಗೆಡವದೇ ನಗುನಗುತ್ತಾ ಖುಷಿ ಪಟ್ಟಿದ್ದಾನೆ. ಈ ವಿಷಯ ಗೊತ್ತಾದ ನಂತರ ವಿಧಾನ ಪರಿಷತ ಕಾಂಗ್ರೆಸ್ ಸದಸ್ಯ ಸುನೀಲಗೌಡ ಬಿ. ಪಾಟೀಲ ಖುದ್ದು ಅಚ್ಚರಿಗೊಳಗಾಗಿದ್ದಾರೆ. ನೆಚ್ಚಿನ ಅಭಿಮಾನಿ ತಮ್ಮ ಮೇಲೆ ಇಟ್ಟಿರುವ ಪ್ರೀತಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಅಂದಹಾಗೆ ಸುನೀಲಗೌಡ ಬಿ. ಪಾಟೀಲ, ಮಾಜಿ ಸಚಿವ ಎಂ. ಬಿ. ಪಾಟೀಲ ಅವರ ತಮ್ಮನಾಗಿದ್ದಾರೆ. ಎಂ. ಬಿ. ಪಾಟೀಲ ಪ್ರತಿನಿಧಿಸುವ ಬಬಲೇಶ್ವರ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಕಾಖಂಡಕಿ ಗ್ರಾಮ ಬರುತ್ತದೆ. ಇದೇ ಗ್ರಾಮದ ಮುದ್ದಣ್ಣ ಪರೀಟ ಈಗ ಸುನೀಲಗೌಡ ಬಿ. ಪಾಟೀಲ ಅವರ ಟ್ಯಾಟೂ ಹಾಕಿಸಿಕೊಂಡಿದ್ದಾನೆ. ಈ ಮೂಲಕ ತನ್ನ ಜೀವನದುದ್ದಕ್ಕೂ ತನ್ನ ನೆಚ್ಚಿನ ನಾಯಕನ ಭಾವಚಿತ್ರ ತನ್ನೆದೆಯ ಮೇಲೆ ಶಾಶ್ವತವಾಗಿರಲಿ ಎಂದು ಈ ನಿರ್ಧಾರ ಮಾಡಿದ್ದಾನೆ.
ವರದಿ: ಮಹೇಶ ವಿ. ಶಟಗಾರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ