ಮೈಸೂರು(ಫೆ. 26): ಯಾರದ್ದೋ ಪ್ರತಿಷ್ಠೆಗೆ ನಾನು ಬಲಿಯಾಗೊಲ್ಲ, ಹಾಗೆಯೇ ಯಾರದ್ದೋ ಪ್ರತಿಷ್ಠೆಗೆ ನನ್ನ ಪಕ್ಷವನ್ನ ಬಲಿಯಾಗಲು ಬಿಡೋಲ್ಲ - ಹೀಗಂತ ಪರೋಕ್ಷವಾಗಿ ಸಿದ್ದರಾಮಯ್ಯ ಪ್ರತಿಷ್ಠೆಗೆ ನಾನು ಮಣೆ ಹಾಕೋಲ್ಲ ಎಂದ ಶಾಸಕ ತನ್ವೀರ್ ಸೇಠ್ ಹೇಳಿದರು. ನಾನು ಕಾಂಗ್ರೆಸ್ ಸಿದ್ದಾಂತಕ್ಕೆ ಬದ್ದನಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳುವ ಮೂಲಕ ಅವರು ಸಿದ್ದು ವಿರುದ್ದ ಪರೋಕ್ಷ ಅಸಮಾಧಾನ ಹೊರಹಾಕಿದ್ದಾರೆ. ಮೈಸೂರು ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಕುರಿತು ಸ್ಪಷ್ಟನೆ ನೀಡಿರುವ ನರಸಿಂಹರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್, ಪಾಲಿಕೆಯಲ್ಲಿ ಜೆಡಿಎಸ್‌ಗೆ ಮೇಯರ್ ಸ್ಥಾನ ಬಿಟ್ಟುಕೊಡುವ ನಿರ್ಧಾರ ನನ್ನದೇ ಆಗಿತ್ತು. ಪಕ್ಷದ ಹಿತಕಾಯುವ ದೃಷ್ಟಿಯಿಂದ ಆ ನಿರ್ಧಾರ ತೆಗೆದುಕೊಂಡಿದ್ದೇನೆ. ಈಗಲೂ ಅದಕ್ಕೆ ಬದ್ದನಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು. ಆ ಮೂಲಕ ಸಿದ್ದರಾಮಯ್ಯ ತವರಿನಲ್ಲಿ ಕಾಂಗ್ರೆಸ್ ಎರಡು ಹೋಳಾಗಲು ಕಾಲ ಸನ್ನಿತವಾಗಿದ್ದಂತಿದೆ.
ಮೈಸೂರು ಪಾಲಿಕೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ವಿಚಾರವಾಗಿ ಇಂದು ಸ್ಪಷ್ಟನೆ ನೀಡಿರುವ ಶಾಸಕ ತನ್ವೀರ್ ಸೇಠ್, ಪಕ್ಷದ ಹಿತ ಕಾಯುವ ನಿಟ್ಟಿನಲ್ಲಿ ನಾನು ಈ ನಿರ್ಧಾರ ಮಾಡಿದ್ದೇನೆ, ನನ್ನ ನಿರ್ಧಾರ ಪ್ರಶ್ನಿಸಿ ನನಗೆ ಈವರೆಗು ಯಾವುದೇ ನೋಟಿಸ್ ಬಂದಿಲ್ಲ, ಬಂದರೆ ಉತ್ತರಿಸುತ್ತೇನೆ ಎಂದು ತಿಳಿಸಿದರು.
ಇದನ್ನೂ ಓದಿ: ತುಳುನಾಡು ಬೇಡಿಕೆಗೆ ರಾಜಕೀಯ ಬಲ; ತುಳುವೆರೆ ಪಕ್ಷಕ್ಕೆ ಚುನಾವಣಾ ಆಯೋಗ ಮನ್ನಣೆ
ಪಾಲಿಕೆ ವಿಚಾರವಾಗಿ ಮೈತ್ರಿ ಬಗ್ಗೆ ಮಾತನಾಡುವಾಗ ಪಕ್ಷದ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಕೂಡ ಚುನಾವಣಾ ವೀಕ್ಷಕರಾಗಿ ಅಲ್ಲಿಗೆ ಬಂದಿದ್ದರು. ಪಕ್ಷದ ವರಿಷ್ಠರು ಮೇಯರ್ ಗಿರಿ ನಮ್ಮದಾಗ ಬೇಕು ಅಂತ ಹೇಳಿದ್ದು ಸತ್ಯ. ಆದ್ರೆ ಕೊನೆ ಗಳಿಗೆಯಲ್ಲಿ ಆದ ಬದಲಾವಣೆಯಿಂದ ಮೇಯರ್ ಸ್ಥಾನ ಬಿಟ್ಟುಕೊಡುವ ಈ ನಿರ್ಧಾರ ಮಾಡಿದೆ. ಇದು ನನ್ನದೆ ನಿರ್ಧಾರವಾಗಿದೆ. ಪಕ್ಷ ನೋಟೀಸ್ನಲ್ಲಿ ಏನು ಕೇಳ್ತಾರೊ ಅದಕ್ಕೆ ನಾನು ಉತ್ತರ ನೀಡಲು ಸಿದ್ದನಿದ್ದೇನೆ. ಯಾವುದೇ ಪಕ್ಷದಲ್ಲಿ ಬಣ ರಾಜಕಾರಣ ಇದ್ದರೆ ಅದು ಪಕ್ಷವೇ ಅಲ್ಲ. ಕೆಲವರು ತಮ್ಮ ವೈಯಕ್ತಿಕ ಹಿತ ಕಾಪಾಡಿಕೊಳ್ಳಲು ಮುಂದಾಗಬಹುದು. ಆದ್ರೆ ಅವರ ಪ್ರತಿಷ್ಠೆಗೆ ನಾನು ಬಲಿಯಾಗೋಲ್ಲ. ನಾನು ಯಾರ ವಿರುದ್ಧವೂ ಮಾತನಾಡಲ್ಲ. ಯಾರು ನನಗೆ ಸಮಾಜಾಯಿಸಿ ಕೇಳ್ತಾರೊ ಅವರಿಗೆ ಉತ್ತರ ನೀಡುತ್ತೇನೆ ಎಂದು ತಮ್ಮ ನಿರ್ಧಾರವನ್ನ ಸಮರ್ಥಿಸಿಕೊಂಡರು.
ಇದು ಮೈಸೂರಿನ ನಾಗರೀಕರ ಹಿತದೃಷ್ಟಿಯಿಂದ ನಾನು ಕೊನೆ ಕ್ಷಣದಲ್ಲಿ ತೆಗೆದುಕೊಂಡ ನಿರ್ಧಾರವಾಗಿದ್ದು, ಈ ಎಲ್ಲಾ ವಿಚಾರವನ್ನು ವರಿಷ್ಠರ ಗಮನಕ್ಕೆ ತರುತ್ತೇನೆ. ಯಾಕೆಂದರೆ ನಾವು ಅಧಿಕಾರದ ಹಿಂದೆ ಹೋಗಿಲ್ಲ, ನಾವು ಅಧಿಕಾರವನ್ನು ತ್ಯಾಗ ಮಾಡಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ತ್ಯಾಗಕ್ಕೂ ಸಿದ್ದ ಎಂದು ತೋರಿಸಿದ್ದೇವೆ. ನನ್ನ ಪಕ್ಷದ ವರ್ಚಸ್ಸು ಬೆಳೆಸಲು ನಾನು ಬದ್ಧ, ಸಂವಿಧಾನದ ಉಳಿಸುವ ಕೆಲಸ ಮಾಡಿದ್ದೇವೆ. ನಗರದ ಬೆಳವಣಿಗೆ ಮಾರಕವಾದ ಶಕ್ತಿಗಳನ್ನು ಅಧಿಕಾರದಿಂದ ದೂರ ಇಟ್ಟಿದ್ದೇವೆ. ಬಿಜೆಪಿಯನ್ನ ಅಧಿಕಾರದಿಂದ ದೂರ ಇಡಬೇಕಿತ್ತು. ಆ ಕೆಲಸವನ್ನು ನಾನು ಮಾಡಿದ್ದೇನೆ ಅಂತ ಶಾಸಕ ತನ್ವೀರ್ ಸೇಠ್ ತಮ್ಮ ನಡೆಗೆ ಸ್ಪಷ್ಟೀಕರಣ ನೀಡಿದರು.
ಇದನ್ನೂ ಓದಿ: ಅವನು ಸಿಎಂ ಆಗಿದ್ದಾಗ ಯಾರಿಗೂ ಅಧಿಕಾರ ಕೊಡಲಿಲ್ಲ; ಕುಮಾರಸ್ವಾಮಿ ವಿರುದ್ಧ ಸಚಿವ ಯೋಗೇಶ್ವರ್ ಏಕವಚನದಲ್ಲಿ ವಾಗ್ದಾಳಿ
1998 ರಲ್ಲಿ ನಾನು ಮೇಯರ್ ಅಭ್ಯರ್ಥಿ ಆಗಿದ್ದೆ. ಚುನಾವಣೆಯಲ್ಲಿ ವ್ಯತ್ಯಾಸ ಆಗಿ ನನ್ನ ಮತವನ್ನೇ ಹ್ಯಾರಿಫ್ ಹುಸೇನ್‌ಗೆ ಹಾಕಿದೆ. ಆಗಲೂ ಪಕ್ಷ ಉಳಿಸುವ ಕೆಲಸ ಮಾಡಿದ್ದೆ. ಹಾಗಾಗಿ ಈ ಬಾರಿ ಆಗಿದಕ್ಕೆ ತಲೆ ಕೆಡಿಸಿಕೊಳ್ಳೋಲ್ಲ. ಜೊತೆಗೆ ಯಾರದ್ದೋ ಪ್ರತಿಷ್ಠೆಗೆ ನಾನು ಬಲಿಯಾಗಲ್ಲ, ಯಾರದ್ದೋ ಪ್ರತಿಷ್ಠೆಗೆ ನನ್ನ ಪಕ್ಷವನ್ನ ಬಲಿಯಾಗಲು ಬಿಡೋಲ್ಲ ಎಂದು ಹೇಳಿದ ಅವರು ಪರೋಕ್ಷವಾಗಿ ಸಿದ್ದರಾಮಯ್ಯ ಪ್ರತಿಷ್ಠೆಗೆ ಮಣೆ ಹಾಕೋಲ್ಲ ಎಂದ ಅಸಮಾಧಾನ ಹೊರಹಾಕಿದರು.
ಇದೇ ವೇಳೆ ಶಾಸಕ ತನ್ವೀರ್ ಸೇಠ್ ಕೆಪಿಸಿಸಿಯಿಂದ ನೋಟಿಸ್ ನೀಡುವ ವಿಚಾರವಾಗಿ ಸಿದ್ದರಾಮಯ್ಯ ವಿರುದ್ಧ ತನ್ವೀರ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿ, ತನ್ವೀರ್ ಮನೆ ಮುಂದೆ ದಿಢೀರ್ ಪ್ರತಿಭಟನೆ ಮಾಡಿದರು. ಸಿದ್ದರಾಮಯ್ಯ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿ, ಶಾಸಕ ರಮೇಶ್ ಕುಮಾರ್ ವಿರುದ್ದವೂ ಸಿಡಿದೆದ್ದರು. ತವರಿನಲ್ಲೆ ಸಿದ್ದರಾಮಯ್ಯ ವಿರುದ್ದ ಪ್ರತಿಭಟನೆ ಮಾಡಿದ್ದು ಸಿದ್ದು ವರ್ಚಸ್ಸನ್ನೆ ಪ್ರಶ್ನೆ ಮಾಡುವಂತಿತ್ತು.
ವರದಿ: ಪುಟ್ಟಪ್ಪ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ