ಕಲಬುರ್ಗಿ(ನವೆಂಬರ್. 25): ತಳವಾರ, ಪರಿವಾರ ಸಮುದಾಯಕ್ಕೆ ಎಸ್ಟಿ ಪ್ರಮಾಣ ಪತ್ರ ನೀಡಲು ಆಗ್ರಹಿಸಿ ಕಲಬುರ್ಗಿಯಲ್ಲಿ ನಡೆಯುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಎಸ್.ಟಿ. ಪ್ರಮಾಣ ಪತ್ರಕ್ಕಾಗಿ ಇಂದು ಜಿಲ್ಲಾಧಿಕಾರಿ ಕಛೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ವಿಕಲಚೇತನ ವ್ಯಕ್ತಿಯೋರ್ವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ನಡೆದಿದೆ. ಕೋಲಿ-ಕಬ್ಬಲಿಗ ಸಮಾಜದ ತಳವಾರ ಹಾಗೂ ಪರಿವಾರ ಸಮುದಾಯಕ್ಕೆ ಎಸ್.ಟಿ ಪ್ರಮಾಣ ಪತ್ರ ನೀಡುವಂತೆ ಒತ್ತಾಯಿಸಿ ಕಲಬುರ್ಗಿಯಲ್ಲಿ ನಡೆದ ಹೋರಾಟ ಹಲವು ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಯಿತು. ಕೆಲ ಮಠಾಧೀಶರು, ಹೋರಾಟಗಾರರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾಧಿಕಾರಿ ಕಛೇರಿ ಎದುರು ನೂರಾರು ದಿನಗಳಿಂದ ಹೋರಾಟ ಮಾಡುತ್ತಿದ್ದರೂ ರಾಜ್ಯ ಸರ್ಕಾರ ಸ್ಪಂದಿಸಿಲ್ಲವೆಂದು ಪ್ರತಿಭಟನಾಕಾರರು ಕಿಡಿಕಾರಿದರು.
ಎಸ್ಟಿ ಪ್ರಮಾಣ ಪತ್ರ ನೀಡುವುದಾಗಿ ಡಿಸಿ ಭರವಸೆ ನೀಡುವಂತೆ ಪಟ್ಟು ಹಿಡಿದರು. ಆದರೂ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಾರದಿರುವುದಕ್ಕೆ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ವ್ಯಕ್ತಿಯೋರ್ವ ಮರಕ್ಕೆ ನೇಣು ಹಾಕಿಕೊಳ್ಳಲು ಯತ್ನಿಸಿದ ಘಟನೆಯೂ ನಡೆಯಿತು. ಕಲಬುರ್ಗಿಯ ನಾಗಪ್ಪ ತಳವಾರ ಎಂಬ ವಿಕಲಚೇತನ ವ್ಯಕ್ತಿ ಡಿಸಿ ಕಛೇರಿ ಎದುರೇ ಹಗ್ಗ ಹಾಕಿಕೊಂಡು ನೇಣು ಹಾಕಿಕೊಳ್ಳಲು ಯತ್ನಿಸಿದ. ಪೊಲೀಸರು ಹಗ್ಗ ಕಸಿದುಕೊಂಡಾಗ, ಕೇಬಲ್ ವೈರ್ ನಿಂದ ನೇಣು ಹಾಕಿಕೊಳ್ಳುವುದಾಗಿ ಕೇಬಲ್ ಹಿಡಿದುಕೊಂಡ. ಕೊನೆಗೆ ಕೇಬಲ್ ಕಿತ್ತುಕೊಂಡ ಪೊಲೀಸರು, ನಾಗಪ್ಪನ್ನು ಕೆಳಗಿಳಿಸಿದರು.
ಇದರಿಂದ ಆಕ್ರೋಶಗೊಂಡ ಹೋರಾಟಗಾರರು ಮತ್ತೆ ಡಿಸಿ ಕಛೇರಿ ಎದುರಿನಲ್ಲಿ ಮುಖ್ಯ ರಸ್ತೆ ತಡೆ ಮಾಡಿದರು. ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ಮಾಡಿದರು. ಈ ವೇಳೆ ನಾಗಪ್ಪ ಡಿಸಿ ಕಟ್ಟಡದ ಗೋಡೆ ಹತ್ತಿ ಅಲ್ಲಿಂದ ಜಿಗಿಯುವುದಾಗಿ ಬೆದರಿಕೆ ಹಾಕಿದ ಘಟನೆ ನಡೆಯಿತು. ಹೋರಾಟಗಾರರೆ ಆತನನ್ನು ಕೆಳಗಿಳಿಸಿಕೊಂಡು ಬಂದರು. ಕೇಂದ್ರ ಸರ್ಕಾರ ಈಗಾಗಲೇ ತಳವಾರ, ಪರಿವಾರ ಸಮುದಾಯಕ್ಕೆ ಎಸ್.ಟಿ. ಪ್ರಮಾಣ ಪತ್ರ ನೀಡಲು ಒಪ್ಪಿಗೆ ಸೂಚಿಸಿದೆ. ಆದರೆ ರಾಜ್ಯ ಸರ್ಕಾರ ಅದನ್ನು ಜಾರಿಗೆ ತರದೆ ಚೆಲ್ಲಾಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಸ್.ಟಿ. ಮೀಸಲಾತಿಗಾಗಿ ಪ್ರಾಣ ಕೊಡಲೂ ಸಿದ್ಧ ಎಂದು ಆತ್ಮಹತ್ಯೆಗೆ ಯತ್ನಿಸಿದ ನಾಗಪ್ಪ ತಳವಾರ ಹಾಗೂ ತಳವಾರ, ಪರಿವಾರ ಎಸ್.ಟಿ. ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಸರ್ದಾರ್ ರಾಯಪ್ಪ ಎಚ್ಚರಿಸಿದ್ದಾರೆ.
ಪೊಲೀಸರ ಮನವೊಲಿಕೆಯ ನಂತರ ರಸ್ತೆ ತಡೆ ಕೈಬಿಟ್ಟ ಹೋರಾಟಗಾರರು, ಜಿಲ್ಲಾಧಿಕಾರಿ ಕಛೇರಿ ಅವರಣದೊಳಗೆ ಬಂದು ಪ್ರತಿಭಟನೆ ಮುಂದುವರೆಸಿದರು. ರಸ್ತೆ ತಡೆಯಿಂದಾಗಿ ವಾಹನ ಸವಾರರು ಪರದಾಡುವಂತಾಯಿತು. ಆದರೆ, ಡಿಸಿ ಕಛೇರಿ ಎದುರು ಪ್ರತಿಭಟನೆ ಮುಂದುವರಿಸಿರುವ ಮುಖಂಡರು, ಎಸ್.ಟಿ. ಮೀಸಲಾತಿಯ ಭರವಸೆ ಕೊಡುವವರೆಗೂ ಹೋರಾಟ ಕೈಬಿಡುವುದಿಲ್ಲವೆಂದು ಎಚ್ಚರಿಸಿದ್ದಾರೆ.
Published by:G Hareeshkumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ