HOME » NEWS » District » TAKING A BATH IN THE FIRE THIS DIVINE IN THE WORSHIP OF TULU NADU HAS A SPECIAL SIGNIFICANCE RHHSN AKP

ಬೆಂಕಿಯಲ್ಲಿ ಸ್ನಾನ ಮಾಡುತ್ತೆ ಈ ದೈವ, ತುಳುನಾಡಿನ ಭೂತಾರಾಧನೆಯಲ್ಲಿ ಈ ದೈವಕ್ಕಿದೆ ವಿಶೇಷ ಮಹತ್ವ!

ಊರಲ್ಲಿ ಈ ಆರಾಧನೆಯು ನಡೆಯಲಿದೆ ಎನ್ನುವ ಸುದ್ಧಿ ತಿಳಿಯುತ್ತಲೇ, ಎಲ್ಲೇ ಇದ್ದರೂ ಊರಿನತ್ತ ಧಾವಿಸುವ ಜನ ಇಂದಿಗೂ ಇಲ್ಲಿದ್ದಾರೆ. ನಂಬಿಕೆಯ ಆಧಾರದಲ್ಲೇ ಬದುಕುತ್ತಿರುವ ಇಲ್ಲಿನ ಜನಕ್ಕೆ, ಭೂತಾರಾಧನೆ ಈ ನಂಬಿಕೆಗೆ ಭರವಸೆಯ ಅಶಾಕಿರಣವನ್ನು ನೀಡುತ್ತಾ ಬರುತ್ತಿದೆ.

news18-kannada
Updated:March 20, 2021, 5:16 PM IST
ಬೆಂಕಿಯಲ್ಲಿ ಸ್ನಾನ ಮಾಡುತ್ತೆ ಈ ದೈವ, ತುಳುನಾಡಿನ ಭೂತಾರಾಧನೆಯಲ್ಲಿ ಈ ದೈವಕ್ಕಿದೆ ವಿಶೇಷ ಮಹತ್ವ!
ಬೆಂಕಿಯಲ್ಲಿ ಸ್ನಾನ ಮಾಡಲು ಮುನ್ನುಗ್ಗುತ್ತಿರುವ ದೈವ.
  • Share this:
ದಕ್ಷಿಣಕನ್ನಡ: ಭೂತಾರಾಧನೆಗೆ ಹೆಚ್ಚಿನ ಮಹತ್ವ ನೀಡುವ ತುಳುನಾಡಿನಲ್ಲಿ 400 ಕ್ಕೂ ಮಿಕ್ಕಿದ ದೈವಗಳ ಆರಾಧನೆ ನಡೆಯುತ್ತದೆ. ಹೆಚ್ಚಾಗಿ ಉತ್ತರ ಕೇರಳ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈ ಆರಾಧನೆಗೆ ಪ್ರಾಮುಖ್ಯತೆಯಿದ್ದು, ಶೈವಾಂಶ, ವೈಷ್ಣವಾಂಶ ಹಾಗೂ ಭಗವತೀ ಅಂಶಗಳ ದೈವಗಳು ಇಲ್ಲಿ ಪೂಜಿಸಲ್ಪಡುತ್ತದೆ. ಒಂದೊಂದು ದೈವಗಳಿಗೂ ಒಂದೊಂದು ವಿಶೇಷತೆಯೂ ಇದೆ. ಅವುಗಳಲ್ಲಿ ವಿಷ್ಣುಮೂರ್ತಿ ದೈವವೂ ಒಂದಾಗಿದ್ದು, ದುಷ್ಟರ ಸಂಹರಿಸಿದ ಬಳಿಕ ತನ್ನ ಮೈ ಶುದ್ಧಿಗಾಗಿ ಅಗ್ನಿ ಸ್ನಾನ ಮಾಡುವ ಈ ಭೂತಾರಾಧನೆ ಎನ್ನುವುದನ್ನು ನೋಡಬೇಕಾದಲ್ಲಿ ನೀವು ಉತ್ತರ ಕೇರಳ ಮತ್ತು  ಉಡುಪಿ-ದಕ್ಷಿಣಕನ್ನಡ ಜಿಲ್ಲೆಗಳನ್ನೊಳಗೊಂಡ ತುಳುನಾಡನ್ನೊಮ್ಮೆ ಸುತ್ತಿ ಬರಬೇಕು. ಹಾಗೆಂದು ಇದು ಈ ಭಾಗದ ಜನತೆಯ ಮೂಡನಂಭಿಕೆ ಎಂದರೆ ಖಂಡಿತಾ ತಪ್ಪಾಗಬಹುದು. ಇಲ್ಲಿಯ ಜನ ದೇವರನ್ನಾದರೂ ಬಿಟ್ಟಾರು ಆದರೆ ದೈವಗಳನ್ನು ಬಿಟ್ಟಿರಲಾರರು. ದೈವ ಹಾಗೂ ತುಳುನಾಡಿನ  ಜನರ ನಂಟು ಅಂಥಹುದಾಗಿದ್ದು, ಇಲ್ಲಿರುವ ಪ್ರತಿಯೊಂದು ಜಾತಿಯೂ, ಸಮಾಜವೂ ಒಂದಲ್ಲ ಒಂದು ಭೂತದ ಆರಾಧಕರೇ ಆಗಿರುವುದು ಇಲ್ಲಿನ ವಿಶೇಷತೆಯಾಗಿದೆ.

ಹಾಗೆಂದ ಮಾತ್ರಕ್ಕೆ ಯಾವ ದೈವವೂ ಇಲ್ಲಿ ಕೆಲವರಿಗೆ ಮಾತ್ರ ಮೀಸಲು ಎನ್ನುವ ನಿಷೇಧವೂ ಇಲ್ಲಿಲ್ಲ. ಅವರವರ ಭಾವಕ್ಕೆ ಅವರವರ ಭಕುತಿ ಎನ್ನುವಂತೆ ತಾವು ನಂಬಿಕೊಂಡು ಬಂದ ದೈವ ಅವರ ಕುಲದೈವವಾಗಿ ನಂಬಿಕೊಂಡು ಬರುವುದು ಇಲ್ಲಿನ ಜನರ ಸಂಪ್ರದಾಯವಾಗಿದೆ. ಈ ಕಾರಣದಿಂದಲೇ ಇಲ್ಲಿ 400 ಕ್ಕೂ ಮಿಕ್ಕಿ ದೈವಗಳ ಆರಾಧನೆಯಿದ್ದು, ಇವುಗಳನ್ನು ಶೈವಾಂಶ , ವೈಷ್ಣವಾಂಶ ಹಾಗೂ ದೇವೀ ಅಂಶಗಳನ್ನು ಹೊಂದಿರುವ ದೈವಗಳಾಗಿಯೂ ಗುರುತಿಸಲಾಗುತ್ತಿದೆ. ಈ ದೈವಗಳಲ್ಲಿ ವಿಷ್ಣುಮೂರ್ತಿ ದೈವವೂ ಒಂದಾಗಿದ್ದು, ಇದು ಮಹಾ ವಿಷ್ಣುವಿನ ನಾಲ್ಕನೇ ಅವತಾರವಾದ ನರಸಿಂಹನ ಅವತಾರದ ಕಥೆಯನ್ನೊಳಗೊಂಡ ದೈವಾರಾಧನೆಯಾಗಿದೆ. ದೇವರ ಅಸ್ತಿತ್ವವನ್ನೇ ಅಲ್ಲಗಳೆಯುತ್ತಾ ಬಂದ ಹಿರಿಣ್ಯಕಶಿಪುವಿಗೆ ಶ್ರೀಮನ್ನಾರಾಯಣ ತನ್ನ ಅಸ್ತಿತ್ವವನ್ನು ತೋರ್ಪಡಿಸುವುದು ಮಾತ್ರವಲ್ಲದೇ, ಶತ್ರು ಸಂಹಾರಕ್ಕಾಗಿ ತಾನು ಉಘ್ರರೂಪಿಯಾಗಿಯೂ ಅವತರಿಸಬಲ್ಲೆ ಎನ್ನುವುದರ ಜೊತೆಗೆ ತನ್ನ ಭಕ್ತರಿಗೆ ಅಭಯ ಹಸ್ತನೂ ಆಗಿದ್ದೇನೆ ಎನ್ನುವುದನ್ನು ತೋರಿಸುವುದೇ ಈ ಅವತಾರದ ಮೂಲೋದ್ಧೇಶವಾಗಿತ್ತು.

ಇದು ವಿಷ್ಣುಮೂರ್ತಿ ಅವತಾರದ ಕಥೆಯಾದರೆ, ಇದೇ ವಿಷ್ಣುಮಾರ್ತಿ ದೈವಕ್ಕೆ ನೀಡುವ ಸೇವೆಗೆ ಒತ್ತೆಕೋಲವೆಂದು ಕರೆಯುತ್ತಾರೆ. ಈ ಸೇವೆಯನ್ನು ನೀಡುವಲ್ಲಿಯೂ ಹಲವು ವಿಧಿ ವಿಧಾನಗಳನ್ನು ಪಾಲಿಸಬೇಕಾಗಿದ್ದು, ಸೇವೆಯ ದಿನಾಂಕ ನಿಗದಿಯಾಗುವ ಮೊದಲು ವಿಷ್ಣುಮೂರ್ತಿ ದೈವಕ್ಕೆ ಬೇಕಾದ ಕೆಂಡದ ರಾಶಿ ತಯಾರಿಸಲು ಬೇಕಾದಂತಹ ಮರದ ಮುಹೂರ್ತ ನಡೆಯುತ್ತದೆ. ಇದಾದ ಬಳಿಕವೇ ಸೇವೆಯ ದಿನಾಂಕವನ್ನು ನಿಶ್ಚಯ ಮಾಡಲಾಗುತ್ತಿದ್ದು, ಸೇವೆಯ ದಿನಾಂಕದವರೆಗೆ ಊರ ಹಾಗೂ ಪರವೂರ ಜನರು ನೀಡಿದ ಮರಗಳನ್ನು ಒತ್ತೆಕೋಲ ನಡೆಯುವ ಸ್ಥಳದಲ್ಲಿ ಸಂಗ್ರಹಿಸಿಡಲಾಗುತ್ತದೆ. ಸಂಗ್ರಹಿಸಿದ ಮರಗಳನ್ನು ಕ್ರಮಬದ್ಧವಾಗಿ ಜೋಡಿಸುವ ಕಾರ್ಯ ಒತ್ತೆಕೋಲ ನಿಗದಿಯಾದ ದಿನದ ಬೆಳಿಗ್ಗಿನ ಸಮಯದಲ್ಲಾಗುತ್ತಿದ್ದು, ಬಳಿಕ ರಾತ್ರಿ ದೈವದ ಪಾತ್ರಿ, ಊರಿಗೆ ಸಂಬಂಧಪಟ್ಟ ಹಿರಿಯರ ಸಮ್ಮುಖದಲ್ಲಿ ಈ ಮರದ ದೊಡ್ಡ ರಾಶಿಗೆ ಬೆಂಕಿ ಹಚ್ಚಲಾಗುತ್ತದೆ. ಬೆಂಕಿ ಹಚ್ಚಿದ ಮರದ ರಾಶಿಯು ಸಂಪೂರ್ಣವಾಗಿ ಕೆಂಡವಾಗುವ ತನಕ ಕಾಯಲಾಗುತ್ತಿದ್ದು, ಇದೇ ಕೆಂಡದಲ್ಲಿ ಹಿರಣ್ಯಕಶಿಪುವನ್ನು ಕೊಂದಂತಹ ಉಗ್ರ ನರಸಿಂಹನ ನರ್ತನವು ನಡೆಯುತ್ತದೆ.

ಲೋಕಕ್ಕೆ ವಿನಾಶಕಾರಿಯಾಗಿ ಬದಲಾಗುತ್ತಿದ್ದ ದುಷ್ಟ ಹಿರಣ್ಯಕಶಿಪುವನ್ನು ಸಂಹರಿಸಿದ ಬಳಿಕ ವಿಷ್ಣು ವಿಷ್ಣುಮೂರ್ತಿಯ ಅವತಾರದಲ್ಲಿ ತನ್ನ ಮೈಯಲ್ಲಾಗಿರುವ ದುಷ್ಟನ ರಕ್ತವನ್ನು ತೊಳೆಯುದಕ್ಕೋಸ್ಕರ ಬೆಂಕಿಯಲ್ಲಿ ಸ್ನಾನವನ್ನು ಮಾಡುತ್ತಾನೆ. ಇದೇ ಕಾರಣಕ್ಕಾಗಿ ಒತ್ತೆಕೋಲದಲ್ಲಿ ವಿಷ್ಣುಮೂರ್ತಿ ದೈವದ ಬೆಂಕಿ ಸ್ನಾನಕ್ಕೆ ಹೆಚ್ಚಿನ ಮಹತ್ವವಿದೆ. ದೈವವು ಬೆಂಕಿಯನ್ನು ಸ್ಪರ್ಶಿಸುವ ಮೊದಲು ಊರಿನ ಹಾಗೂ ಸುತ್ತಮುತ್ತಲಿನಿಂದ ಬಂದಂತಹ ವಿವಿಧ ದೈವಸ್ಥಾನಗಳ ದೈವಪಾತ್ರಿಗಳು ಕೆಂಡಸೇವೆಯನ್ನು ಮಾಡುತ್ತಾರೆ. ಆ ಬಳಿಕ ವಿಷ್ಣುಮೂರ್ತಿ ದೈವವು ತನ್ನ ಬೆಂಕಿ ಸರಸವನ್ನು ಆರಂಭಿಸುತ್ತದೆ.

ಇದನ್ನು ಓದಿ: ಜಾತಿ ಪ್ರಮಾಣಪತ್ರಕ್ಕಾಗಿ ಉಪವಾಸ ಸತ್ಯಾಗ್ರಹಕ್ಕೆ ಕುಳಿತ ಗ್ರಾಮ ಪಂಚಾಯತಿ ಮಾಜಿ ಸದಸ್ಯೆ!

ಈ ರೀತಿಯಾಗಿ ವಿಷ್ಣುಮೂರ್ತಿ ದೇವರ ಒತ್ತೆಕೋಲ ಸೇವೆಯನ್ನು ನಡೆಸಲೂ ಒಂದು ಬಲವಾದ ನಂಬಿಕೆ ತಲತಲಾಂತರದಿಂದ ಬೆಳೆದುಕೊಂಡು ಬಂದಿದೆ. ಈ ಸೇವೆಯನ್ನು ನಡೆಸಿದಲ್ಲಿ ಊರಿಗೆ ಅಂಟಿದ ಮಾರಿ ಹೋಗುವುದಲ್ಲದ, ಮನುಷ್ಯನನ್ನು ಕಾಡುವ ಎಲ್ಲಾ ರೀತಿಯ ರೋಗ -ರುಜಿನಗಳನ್ನು ಹೋಗಲಾಡಿಸುವ ಶಕ್ತಿ ಈ ದೈವಕ್ಕಿದೆ ಎನ್ನುವ ಬಲವಾದ ವಿಶ್ವಾಸ ಜನರದ್ದಾಗಿದೆ. ದಿನಪೂರ್ತಿಯಾಗಿ ನಡೆಯುವ ಒತ್ತೆಕೋಲದಲ್ಲಿ  ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಸೇರುತ್ತಾರೆ.
Youtube Video
ವಿಷ್ಣುಮೂರ್ತಿ ದೈವದ ಒತ್ತೆಕೋಲವು ಸಾಮಾನ್ಯವಾಗಿ ಉತ್ತರ ಕೇರಳ ಹಾಗೂ ದಕ್ಷಿಣಕನ್ನಡದ ಕೇರಳ ಗಡಿಭಾಗದ ಪ್ರದೇಶಗಳಲ್ಲಿ ಮಾತ್ರ ನಡೆಯುವಂತಹ ಆಚರಣೆಯಾಗಿದೆ. ಊರಲ್ಲಿ ಈ ಆರಾಧನೆಯು ನಡೆಯಲಿದೆ ಎನ್ನುವ ಸುದ್ಧಿ ತಿಳಿಯುತ್ತಲೇ, ಎಲ್ಲೇ ಇದ್ದರೂ ಊರಿನತ್ತ ಧಾವಿಸುವ ಜನ ಇಂದಿಗೂ ಇಲ್ಲಿದ್ದಾರೆ. ನಂಬಿಕೆಯ ಆಧಾರದಲ್ಲೇ ಬದುಕುತ್ತಿರುವ ಇಲ್ಲಿನ ಜನಕ್ಕೆ, ಭೂತಾರಾಧನೆ ಈ ನಂಬಿಕೆಗೆ ಭರವಸೆಯ ಅಶಾಕಿರಣವನ್ನು ನೀಡುತ್ತಾ ಬರುತ್ತಿದೆ.
Published by: HR Ramesh
First published: March 20, 2021, 5:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories