ಮನೆ ಆರೈಕೆಯಲ್ಲಿರುವವರ ಮೇಲೆ ನಿಗಾ ವಹಿಸಬೇಕು, ಬೂತ್ ಮಟ್ಟದಲ್ಲೇ ಮನೆ ಮನೆ ಸರ್ವೆಗೆ ಸಚಿವ ಸುಧಾಕರ್ ಸೂಚನೆ

ರೆಮ್ ಡಿಸಿವಿರ್ ಔಷಧಿ ಪೂರೈಕೆ, ಆಕ್ಸಿಜನ್ ಪೂರೈಕೆ, ಆರೋಗ್ಯ ಸಿಬ್ಬಂದಿ ಕೊರತೆ ಬಗ್ಗೆ ಸಂಸದರು, ಶಾಸಕರು ಬೇಡಿಕೆ ಇಟ್ಟಿದ್ದಾರೆ. ವಾರದಲ್ಲಿ ಮೂರು ದಿನ ಬಿಟ್ಟು, ಉಳಿದ ನಾಲ್ಕು ದಿನ ಕಡ್ಡಾಯವಾಗಿ ಲಾಕ್ ಡೌನ್ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತಿಳಿಸುವುದಾಗಿ ಹೇಳಿದ್ದಾರೆ ಎಂದರು.

ಡಾ.ಕೆ. ಸುಧಾಕರ್.

ಡಾ.ಕೆ. ಸುಧಾಕರ್.

 • Share this:
  ಹಾಸನ (ಮೇ 10): ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೊಳಗಾಗಿ ಮನೆ ಆರೈಕೆಯಲ್ಲಿರುವವರ ಸ್ಥಿತಿಗತಿಯನ್ನು ತಿಳಿದು ಅಗತ್ಯವಿದ್ದರೆ ಅವರನ್ನು ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸೂಚಿಸಿದರು. ಜಿಲ್ಲೆಯ ಕೋವಿಡ್ ಸ್ಥಿತಿಗತಿ ಕುರಿತು ಜಿಲ್ಲಾಡಳಿತದೊಂದಿಗೆ ಸಚಿವರು ಸಭೆ ನಡೆಸಿದರು. ಕಳೆದ ಮಾರ್ಚ್ ನಲ್ಲಿ ಕೊರೋನಾ ಮೊದಲ ಅಲೆ ಕಾಣಿಸಿಕೊಂಡಿದ್ದು, ಈ ವರ್ಷ ಎರಡನೇ ಅಲೆ ಬಂದಿದೆ. ಇದನ್ನು ತಡೆಗಟ್ಟಲು ಸಾರಿ, ಐಎಲ್ ಐ ಇರುವವರಿಗೆ ಮೊದಲು ಪರೀಕ್ಷೆ ಮಾಡಿ 24 ಗಂಟೆಯೊಳಗೆ ವರದಿ ನೀಡಬೇಕು. ಇದರಿಂದಾಗಿ ನಿರ್ದಿಷ್ಟ ಪರೀಕ್ಷೆ ಮಾಡಿದಂತಾಗುತ್ತದೆ. ಪಾಸಿಟಿವ್ ವರದಿ ಬಂದ 5-6 ಗಂಟೆಯೊಳಗೆ ಮಾಹಿತಿ ಪಡೆಯಬೇಕು. ಇದಕ್ಕಾಗಿ ಉತ್ತಮವಾದ ವಾರ್ ರೂಮ್ ನಿರ್ಮಿಸಬೇಕು. 15 ಸಾವಿರ ಸಕ್ರಿಯ ಪ್ರಕರಣಗಳಲ್ಲಿ 2 ಸಾವಿರ ಮಂದಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದವರಿಗೆ ಮನೆ ಆರೈಕೆ ವ್ಯವಸ್ಥೆ ಇದೆ. ಮನೆ ಆರೈಕೆಯಲ್ಲಿರುವವರ ಸ್ಥಿತಿಗತಿ ತಿಳಿಯಬೇಕು ಎಂದು ಸೂಚಿಸಿದರು.

  ಬೂತ್ ಮಟ್ಟದಲ್ಲಿ 10 ಮಂದಿಯ ತಂಡ ಮನೆ ಮನೆಗೆ ಹೋಗಿ ಸರ್ವೆ ಮಾಡಬೇಕು. ಮನೆ ಆರೈಕೆಯಲ್ಲಿರುವವರು ಸ್ಥಿತಿಗತಿ ನೋಟ್ ಮಾಡಿಕೊಳ್ಳಬೇಕು. ಅವರ ದೇಹದ ಆಕ್ಸಿಜನ್ ಪ್ರಮಾಣ ತಿಳಿಯಬೇಕು. ಮನೆಯಲ್ಲಿ ಸೂಕ್ತ ವ್ಯವಸ್ಥೆ ಇಲ್ಲದಿದ್ದರೆ ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಬೇಕು. ವೈದ್ಯ ವಿದ್ಯಾರ್ಥಿಗಳನ್ನು ಕೋವಿಡ್ ನಿಯಂತ್ರಣ ಕಾರ್ಯಕ್ಕೆ ನಿಯೋಜಿಸಬೇಕು. ಪ್ರತಿ ಹೋಬಳಿಯಲ್ಲಿ ವಸತಿ ಶಾಲೆ ಇದೆ. ಇಲ್ಲಿ ವೈದ್ಯರನ್ನು ಬಳಸಿಕೊಂಡು ಕೋವಿಡ್ ಕೇರ್ ಸೆಂಟರ್ ಆರಂಭಿಸಬಹುದು. ಇಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನು ಇಡಬಹುದು ಎಂದು ಸೂಚಿಸಿದರು.

  ಆಸ್ಪತ್ರೆಗಳಲ್ಲಿ ನಿಗದಿತ ದರ ಮೀರಿ ಶುಲ್ಕ ಪಡೆದರೆ ಲೈಸೆನ್ಸ್ ರದ್ದಾಗುತ್ತದೆ. ಅಧಿಕಾರಿಗಳು ಪ್ರತಿ ಆಸ್ಪತ್ರೆಗೆ ಭೇಟಿ ನೀಡಿ ವರದಿ ನೀಡಬೇಕು. ರೆಮ್ಡಿಸಿವರ್ ಬಗ್ಗೆಯೂ ದೂರು ಬರುತ್ತಿದ್ದು, ಈ ಬಗ್ಗೆಯೂ ಪರಿಶೀಲನೆ ನಡೆಸಬೇಕು. ಇನ್ನೊಂದು ವಾರದಲ್ಲಿ ಇಂತಹ ತಪ್ಪುಗಳನ್ನು ಪತ್ತೆ ಮಾಡಿ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಸೂಚನೆ ನೀಡಿದರು.

  ಇದನ್ನು ಓದಿ: ಕೋವಿಡ್ ನಿಯಂತ್ರಣ ಸಂಬಂಧ ಅಧಿಕಾರಿ, ಸಚಿವರಿಗೆ ಸಿಎಂ ಬಿಎಸ್​ವೈ ನೀಡಿದ ಸೂಚನೆಗಳೇನು?

  ಜಿಲ್ಲೆಯಲ್ಲಿ ಸ್ಟೆಪ್ ಡೌನ್ ಆಸ್ಪತ್ರೆ ನಿರ್ಮಿಸಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ಜಿಲ್ಲೆಯಲ್ಲಿರುವ ಹೋಟೆಲ್ ಗಳನ್ನು ಬಳಸಿಕೊಂಡು ವ್ಯವಸ್ಥೆ ಮಾಡಬೇಕು. ಇದಕ್ಕಾಗಿ ನಿವೃತ್ತಿಯಾದ ವೈದ್ಯರನ್ನು ಸಂಪರ್ಕಿಸಿ ಟೆಲಿ ಮೆಡಿಸಿನ್ ಸೇವೆ ನೀಡಬಹುದು. ಎನ್‍ಜಿಒಗಳನ್ನು ಕೂಡ ಬಳಸಿಕೊಳ್ಳಬಹುದು. ಆಕ್ಸಿಜನ್ ಕಾನ್ಸಂಟ್ರೇಟರ್ ಗಳು ದೊರೆತ ಕೂಡಲೇ ಜಿಲ್ಲೆಗೆ ನೀಡಲಾಗುವುದು. ನರ್ಸಿಂಗ್, ಪ್ಯಾರಾಮೆಡಿಕಲ್ ಸಿಬ್ಬಂದಿಯನ್ನು ಹೆಚ್ಚುವರಿಯಾಗಿ ನಿಯೋಜಿಸಿ ಕೋವಿಡ್ ನಿಯಂತ್ರಣ ಕಾರ್ಯ ಕೈಗೊಳ್ಳಬೇಕು ಎಂದು ಸೂಚಿಸಿದರು.

  ಹಾಸನ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಸಂಬಂಧ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಆಕ್ಸಿಜನ್ ಪೂರೈಕೆ ಹೆಚ್ಚಿಸಲು ಹೊಸ ಘಟಕ ಅಳವಡಿಸುವ ಬಗ್ಗೆ ಚರ್ಚೆಯಾಗಿದೆ. ಈಗಾಗಲೇ 13 ಕೆಎಲ್ ನ ಘಟಕ ಮೆಡಿಕಲ್ ಕಾಲೇಜಿನಲ್ಲಿದೆ. ಜೊತೆಗೆ 20 ಕೆಎಲ್ ಘಟಕ ಮೂರ್ನಾಲ್ಕು ವಾರದಲ್ಲಿ ಆರಂಭವಾಗಲಿದೆ. ಆಕ್ಸಿಜನ್ ಜನರೇಟರ್ ಗಳನ್ನು ಸಕಲೇಶಪುರ ಹಾಗೂ ಚನ್ನರಾಯಪಟ್ಟಣಕ್ಕೆ ನೀಡಲು ಆದೇಶಿಸಲಾಗಿದೆ. ರೆಮ್ ಡಿಸಿವಿರ್ ಔಷಧಿ ಪೂರೈಕೆ, ಆಕ್ಸಿಜನ್ ಪೂರೈಕೆ, ಆರೋಗ್ಯ ಸಿಬ್ಬಂದಿ ಕೊರತೆ ಬಗ್ಗೆ ಸಂಸದರು, ಶಾಸಕರು ಬೇಡಿಕೆ ಇಟ್ಟಿದ್ದಾರೆ. ವಾರದಲ್ಲಿ ಮೂರು ದಿನ ಬಿಟ್ಟು, ಉಳಿದ ನಾಲ್ಕು ದಿನ ಕಡ್ಡಾಯವಾಗಿ ಲಾಕ್ ಡೌನ್ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತಿಳಿಸುವುದಾಗಿ ಹೇಳಿದ್ದಾರೆ ಎಂದರು.
  Published by:HR Ramesh
  First published: