ಹೆಂಡತಿಗೆ ಅವಿರೋಧವಾಗಿ ಗ್ರಾಪಂ ಅಧ್ಯಕ್ಷಗಿರಿ ಕೊಡಿಸಲು 25 ಲಕ್ಷ ಆಫರ್ ನೀಡಿದ ವಿರಾಜಪೇಟೆ ತಹಸೀಲ್ದಾರ್?

ಸಕ್ಕರೆನಾಡು ಮಂಡ್ಯದಲ್ಲಿ ನಡೆದಿರುವ ಈ ಪ್ರಕರಣ ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಗ್ರಾ.ಪಂ. ಚುನಾವಣೆಯಲ್ಲಿ ಅಧಿಕಾರ, ಪ್ರಭಾವ ಮತ್ತು ಹಣ ಬಲದವರು ಹಣದ ಆಮಿಷದ ಮೂಲಕ ಅಧಿಕಾರ ಪಡೆಯಲು ಹೊರಟಿರುವ ಕ್ರಮಕ್ಕೆ ಟೀಕೆ ವ್ಯಕ್ತವಾಗಿದೆ.

ಕೆರಗೋಡು ಗ್ರಾಮ ಪಂಚಾಯಿತಿ.

ಕೆರಗೋಡು ಗ್ರಾಮ ಪಂಚಾಯಿತಿ.

  • Share this:
ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲಿ ಗ್ರಾ.ಪಂ.ಚುನಾವಣೆಗೂ ಮುನ್ನವೇ ರಾಜಕೀಯ ರಂಗೇರಿದ. ಸ್ಥಳೀಯ ಗ್ರಾಪಂ ಅಧ್ಯಕ್ಷಗಿರಿಗೆ ರಾಜಕೀಯ ಪಕ್ಷದವರು ಪೈಪೋಟಿ ನಡೆಸೋದು ಸಹಜ. ಆದರೆ ಸಕ್ಕರೆನಾಡು ಮಂಡ್ಯದಲ್ಲಿ ಗೆಜೆಟೆಡ್ ಮಟ್ಟದ ಸರ್ಕಾರಿ ಅಧಿಕಾರಿಯೊಬ್ಬರು ತಮ್ಮ ಪತ್ನಿಗೆ ಗ್ರಾ.ಪಂ.ಅಧಿಕಾರ ಕೊಡಿಸಲು ಊರಿನ ಜನರಿಗೆ 25 ಲಕ್ಷದ ಆಮಿಷ ಒಡ್ಡಿ ಒಪ್ಪಿಸಲು ಹೋಗಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಅಲ್ಲದೇ ಜಿಲ್ಲೆಯಲ್ಲಿ ನಡೆದಿರುವ ಈ ಪ್ರಕರಣ ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. 

ಹೌದು ! ಸಕ್ಕರೆನಾಡು ಮಂಡ್ಯದಲ್ಲಿ ಗ್ರಾ.ಪಂ. ಚುನಾವಣೆ ಅಖಾಡ ರಂಗೇರುತ್ತಿದೆ. ಚುನಾವಣೆಗೂ‌ ಮುನ್ನವೇ  ಜಿಲ್ಲೆಯ ಗ್ರಾಮದಲ್ಲಿ ರಾಜಕೀಯ ಅಖಾಡ ರಂಗೇರಿದ್ದು, ಗೆದ್ದು ಅಧಿಕಾರ ಹಿಡಿಯಲು ರಾಜಕೀಯ ಪಕ್ಷಗಳು ತಮ್ಮ ಬೆಂಬಲಿಗರ ಮೂಲಕ ಶತಾಯಗತಾಯ ಪ್ರಯತ್ನ ಮಾಡ್ತಿವೆ. ಇದರ ಮಧ್ಯೆ ಮಂಡ್ಯ ತಾಲೂಕಿನ ಕೆರಗೋಡು ಗ್ರಾ.ಪಂ.ವ್ಯಾಪ್ತಿಯ ಪಂಚೇಗೌಡನದೊಡ್ಡಿ ಗ್ರಾಮದಲ್ಲಿ ಮಡಿಕೇರಿ ಜಿಲ್ಲೆಯಲ್ಲಿ ತಹಸೀಲ್ದಾರ್ ಆಗಿರುವ  KAS ಅಧಿಕಾರಿಯೊಬ್ಬರು ತನ್ನ ಹೆಂಡತಿಯನ್ನು ಆ ಗ್ರಾಮದಿಂದ ಅವಿರೋಧವಾಗಿ ಗೆಲ್ಲಿಸಿದರೆ ಆ ಗ್ರಾಮದ ಜನರಿಗೆ 25 ಲಕ್ಷ  ರೂ. ವಿವಿಧ ಅಭಿವೃದ್ಧಿ ಕಾಮಗಾರಿಗೆ ಹಣ ನೀಡುವ ಆಮಿಷವೊಡ್ಡಿರುವ ಆರೋಪ  ಕೇಳಿ ಬಂದಿದೆ. ಇದು ಮಾಧ್ಯಮಗಳಲ್ಲಿ ಸಾಕಷ್ಟು ವೈರ ಲ್ ಕೂಡ ಆಗಿತ್ತು. ಆದರೆ ಈ ಆರೋಪವನ್ನು  ಪಂಚೇಗೌಡನ ದೊಡ್ಡಿ  ಗ್ರಾಮದ ಜನರು ತಳ್ಳಿ ಹಾಕಿದ್ದು, ಇದು ಮಾಧ್ಯಮಗಳ ಸೃಷ್ಟಿ ಅಂದಿದ್ದಾರೆ. ಗುರುವಾರ ಗ್ರಾಮದಿಂದ ಹಲವಾರು ಆಕಾಂಕ್ಷಿಗಳು ನಾಮಪತ್ರ ಸಲ್ಲಿಸಲಿದ್ದಾರೆಂದು ಪ್ರಕರಣಕ್ಕೆ ಊರಿನವರು ತೆರೆ ಎಳೆದಿದ್ದಾರೆ.

ವಿರಾಜಪೇಟೆಯಲ್ಲಿ ತಹಸೀಲ್ದಾರ್ ಆಗಿರುವ ಯೋಗಾನಂದ್  ಈ ಊರಿನ‌ ಮಗನಾಗಿದ್ದು ಸದ್ಯ‌ ವಿರಾಜಪೇಟೆಯಲ್ಲಿ‌ ತಹಸೀಲ್ದಾರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇನ್ನು ಇವರು ಹಾಗೂ ಇವರ ಕುಟುಂಬ ಮೈಸೂರಿನಲ್ಲಿದ್ದು ಇದೀಗ ಗ್ರಾ.ಪಂ.ಗೆ ಚುನಾವಣೆಗೆ ತಮ್ಮ ಹೆಂಡತಿಯನ್ನು ನಿಲ್ಲಿಸಲು ಮುಂದಾಗಿದ್ದು, ಸ್ವತಃ ಫೀಲ್ಡಿಗೆ ಇಳಿದು ಇಡೀ ಊರಿನ‌ ಜನರನ್ನು ಸೇರಿಸಿ ಸಭೆ ಮಾಡಿದ್ದಾರೆ. ತನ್ನ ಹೆಂಡತಿಯನ್ನು ಅವಿರೋಧವಾಗಿ ಆಯ್ಕೆ ಮಾಡಿ ಗ್ರಾ.ಪಂ. ಅಧ್ಯಕ್ಷೆಯನ್ನಾಗಿ ಮಾಡಿದರೆ ಗ್ರಾಮಕ್ಕೆ 25 ಲಕ್ಷ ರೂ.ಗಳ ಅಭಿವೃದ್ದಿ ಕಾಮಗಾರಿ ನಡೆಸುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ‌. ಇದಕ್ಕೆ ಬಹುತೇಕರು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಇದನ್ನು ಓದಿ: ಯೋಗೇಶಗೌಡ ಕೊಲೆ ಪ್ರಕರಣ; ಮಾಜಿ ಸಚಿವ ವಿನಯ ಕುಲಕರ್ಣಿ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ಯಾವಾಗ ಈ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಗ್ರಾಮಸ್ಥರು ಎಚ್ಚೆತ್ತುಕೊಂಡಿದ್ದಾರೆ. ಅಲ್ಲದೇ ಪೊಲೀಸರು ಕೂಡ ಈ ಸಂಬಂಧ  ಗ್ರಾಮಕ್ಕೆ ತೆರಳಿ ವಿಚಾಸಿದ್ದು ಗ್ರಾಮಸ್ಥರು ಉಲ್ಟಾ ಹೊಡೆದಿದ್ದಾರೆ. ನಾವು ಗ್ರಾಮದ ಅಭಿವೃದ್ದಿ ದೃಷ್ಟಿಯಿಂದ  ಈ ಸಂಬಂಧ ಒಂದು ಸಭೆ ನಡೆಸಿ ಗ್ರಾಮದ ಅಭಿವೃದ್ದಿ ದೃಷ್ಟಿಯಿಂದ ಯಾವುದೇ ಚುನಾವಣೆ ನಡೆಸದೆ ಗ್ರಾಮದಿಂದ ಅವಿರೋಧ  ಆಯ್ಕೆ ಮಾಡುವ ಈ ಹಿಂದಿನ ಪರಿಪಾಠದಂತೆ ಈ ಬಾರಿ‌ ಅವರ ಕುಟುಂಬದವರನ್ನು‌ ನೇಮಿಸಿದ್ದು ನಿಜ. ಅಲ್ಲದೇ ನಾವೇ ಅವರ ಮನೆಯವರನ್ನು ನಿಲ್ಲುವಂತೆ ಕೇಳಿದ್ವಿ. ಹಾಗಾಗಿ‌ ಅವರು ಕೂಡ ಒಲ್ಲದ ಮನಸ್ಸಿನಿಂದ ಒಪ್ಪಿದರು. ಆದರೆ ಕಿಡಿಗೇಡಿಗಳು ಇದೀಗ ಈ ರೀತಿ ಮಾಡಿದ್ದಾರೆ. ಇದರಲ್ಲಿ ಅವರದ್ದೇನು ತಪ್ಪಿಲ್ಲ. ಅವರು ಅಧಿಕಾರಿಯಾಗಿ ನಮ್ಮೂರಿಗೆ ಸಾಕಷ್ಟು ಹೆಸರು ತಂದಿದ್ದಾರೆ. ಇದು ಅವರ ಹೆಸರು ಕೆಡಿಸಲು ಮಾಡಿುವ ಹುನ್ನಾರ ಎಂದು ತಹಸೀಲ್ದಾರ್ ಸಂಬಂಧಿಕರು ಅಸಮಾಧಾನ ಹೊರಹಾಕಿದ್ದಾರೆ.

ಒಟ್ಟಾರೆ ಸಕ್ಕರೆನಾಡು ಮಂಡ್ಯದಲ್ಲಿ ನಡೆದಿರುವ ಈ ಪ್ರಕರಣ ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಗ್ರಾ.ಪಂ. ಚುನಾವಣೆಯಲ್ಲಿ ಅಧಿಕಾರ, ಪ್ರಭಾವ ಮತ್ತು ಹಣ ಬಲದವರು ಹಣದ ಆಮಿಷದ ಮೂಲಕ ಅಧಿಕಾರ ಪಡೆಯಲು ಹೊರಟಿರುವ ಕ್ರಮಕ್ಕೆ ಟೀಕೆ ವ್ಯಕ್ತವಾಗಿದೆ. ಚುನಾವಣೆಯಲ್ಲಿ ತನ್ನ ಪತ್ನಿಯನ್ನು ಗೆಲ್ಲಿಸಲು ಸ್ವತಃ  ತಹಸೀಲ್ದಾರ್  ಅಖಾಡಕ್ಕಿಳಿದು ಊರಿನ‌ ಜನರಿಗೆ ಆಮಿಷ ಒಡ್ಡಿರೋದು ಎಷ್ಟು ಸರಿ ಎನ್ನೋ ಮಾತು ಕೇಳಿ ಬರುತ್ತಿರುವುದು ಸುಳ್ಳಲ್ಲ.
Published by:HR Ramesh
First published: