ಬೆಳಗಾವಿ: ಕಳಸಾ, ಬಂಡೂರಿ ನಾಲೆ ನೀರನ್ನು ಮಲಪ್ರಭೆಗೆ ಹರಿಸಬೇಕು ಎಂಬುದು ಉತ್ತರ ಕರ್ನಾಟಕ ಜನರ ಅನೇಕ ವರ್ಷಗಳ ನಿರಂತರ ಪ್ರಯತ್ನವಾಗಿದೆ. ಇದಕ್ಕಾಗಿ ಅನೇಕ ಹೋರಾಟ, ಚಳುವಳಿಗಳು ನಡೆದಿದ್ದು, ನ್ಯಾಯಾಧೀಕರಣದಲ್ಲಿ ಸಹ ನೀರಿನ ಹಂಚಿಕೆಯಾಗಿದೆ. ಆದರೆ ಮೂರು ವರ್ಷ ಕಳೆದರೂ ಇನ್ನೂ ಯಾವುದೇ ಕಾಮಗಾರಿ ಆರಂಭವಾಗಿಲ್ಲ. ಇದಕ್ಕೆ ಪ್ರಮುಖ ಕಾರಣ ಗೋವಾ ಸರ್ಕಾರ ಪದೇ ಪದೇ ಆಕ್ಷೇಪ ತೆಗೆಯುತ್ತಿರುವುದು. ಕಳಸಾ ನಾಲೆ ನೀರನ್ನು ಕರ್ನಾಟಕ ಸರ್ಕಾರ ಯಾವುದೇ ಅನುಮತಿ ಇಲ್ಲದೇ ತಿರುವು ಯೋಜನೆ ಮೂಲಕ ಬಳಸಿಕೊಂಡಿದೆ ಎಂದು ಗೋವಾ ಕ್ಯಾತೆ ತೆಗೆದಿದೆ. ಈ ಹಿನ್ನೆಲೆಯಲ್ಲಿ ಇದರ ಸತ್ಯಾಸತ್ಯೆಯ ಪರಿಶೀಲನೆಗೆ ಸುಪ್ರೀಂ ಕೋರ್ಟ್ ಮೂರು ರಾಜ್ಯಗಳ ಜಂಟಿ ಪರಿಶೀಲನಾ ಸಮಿತಿ ರಚನೆ ಮಾಡಿದ್ದು, ಸ್ಥಳ ಪರಿಶೀಲನೆ ನಡೆಸಬೇಕು. ಇದರ ವರದಿಯನ್ನು ನಾಲ್ಕು ವಾರದಲ್ಲಿ ನೀಡುವಂತೆ ಸೂಚನೆ ನೀಡಿದೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಮಲಪ್ರಭಾ ಎಡದಂಡೆ ಅಧೀಕ್ಷಕ ಇಂಜಿನಿಯರ್ ಕೃಷ್ಟೋಜಿ ರಾವ್ ಅವರನ್ನು ನೇಮಕ ಮಾಡಿದೆ. ಇದೀಗ ಗೋವಾ ಸರ್ಕಾರ ಸಹ ಅಧೀಕ್ಷಕ ಅಭಿಯಂತರ ಎಂ ಕೆ ಪ್ರಸಾದ್ ನೇಮಕ ಮಾಡಿ ಆದೇಶ ಹೊರಡಿಸಿದೆ. ಆದರೇ ಮಹಾರಾಷ್ಟ್ರ ಸರ್ಕಾರ ತಮ್ಮ ಪ್ರತಿನಿಧಿಯ ಹೆಸರನ್ನು ಇನ್ನೂ ಫೈನಲ್ ಮಾಡಿಲ್ಲ.
ಮಹದಾಯಿ ನ್ಯಾಯಾಧೀಕರಣದಲ್ಲಿ ರಾಜ್ಯಕ್ಕೆ 13.42 ಟಿಎಂಸಿ ನೀರು ಹಂಚಿಕೆಯಾಗಿದೆ. ಕಳಸಾ ನಾಲೆಯಿಂದ 1.72 ಟಿಎಂಸಿ, ಬಂಡೂರಿ ನಾಲೆಯಿಂದ 2.18 ಟಿಎಂಸಿ, ವಿದ್ಯುತ್ ಗೆ 8 ಟಿಎಂಸಿ, ಮಹದಾಯಿ ಕಣಿವೆಯೊಳಗಿನ ವಿವಿಧ ಯೋಜನೆಗೆ 1.5 ಟಿಎಂಸಿ ನೀರು ಹಂಚಿಕೆಯಾಗಿದೆ. ಕೇಂದ್ರ ಸರ್ಕಾರದ ಇದರ ಗೆಜೆಟ್ ನೋಟಿಫಿಕೇಷನ್ ಸಹ ಹೊರಡಿಸಿದೆ. ರಾಜ್ಯ ಸರ್ಕಾರಕ್ಕೆ ಕಾಮಗಾರಿ ನಡೆಸಲು ಅರಣ್ಯ, ವನ್ಯಜೀವಿ ಹಾಗೂ ಪರಿಸರ ಇಲಾಖೆಯ ಅನುಮತಿ ಬೇಕಿದೆ. ಇದನ್ನು ಕೇಂದ್ರ ಸರ್ಕಾರ ಈವರೆಗೆ ನೀಡಿಲ್ಲ. ಗೋವಾ ಸರ್ಕಾರ ಪದೇ ಪದೇ ಕ್ಯಾತೆ ತೆಗೆಯುತ್ತಿದ್ದು ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಸಿ.ಡಿ ಸ್ಫೋಟ; ಮಾನಹಾನಿ ಸುದ್ದಿ ಪ್ರಸಾರ ಮಾಡದಂತೆ ಆರು ಸಚಿವರಿಂದ ಕೋರ್ಟ್ಗೆ ಅರ್ಜಿ
ಕಳಸಾ ನಾಲಾ ಕಾಮಗಾರಿ ಸ್ಥಗಿತಗೊಂಡು ವರ್ಷಗಳೇ ಕಳೆದಿವೆ. ಈ ಸ್ಥಳದಲ್ಲಿ 5.15KM ಉದ್ದದ ದೊಡ್ಡ ಟನಲ್ ನಿರ್ಮಾಣ ಮಾಡಲಾಗಿದೆ. ಸುಪ್ರೀಂ ಕೋರ್ಟ್ ಸೂಚನೆಯಂತೆ ಟನಲ್ನಲ್ಲಿ ತಡೆಗೋಡೆ ಸಹ ಇದೆ. 4 ಮೀಟರ್ ಅಗಲ, 5.8 ಮೀಟರ್ ಉದ್ದದ ಬೃಹತ್ ತಡೆಗೋಡೆ ಇದ್ದು, ಒಂದು ಭಾಗದಲ್ಲಿ 240 ಮೀಟರ್, ಮತ್ತೊಂದು ಭಾಗದಲ್ಲಿ 720ಮೀಟರ್ ಒಳಗೆ ಗೋಡೆ. ಇಷ್ಟು ದೊಡ್ಡ ತಡೆಗೋಡೆ ಇದ್ದ ಸಂದರ್ಭದಲ್ಲಿ ಕರ್ನಾಟಕ ಕಡೆಗೆ ನೀರು ಹರಿದು ಬರಲು ಸಾಧ್ಯವಿಲ್ಲ. ಆದರೂ ಗೋವಾ ತನ್ನ ಮೊಂಡುವಾದನ್ನು ಮುಂದಿಟ್ಟಿದೆ.
ಕಳಸಾ, ಬಂಡೂರಿ ನಾಲೆಯ ನೀರನ್ನು ಮಲಪ್ರಭೆಗೆ ಜೋಡಿಸುವ ವಿಚಾರದಲ್ಲಿ ಗೋವಾ ಕ್ಯಾತೆ ತೆಗೆಯುತ್ತಿದ್ದು. ಈ ಹಿನ್ನೆಲೆಯಲ್ಲಿ ಸಿಎಂ ಸರ್ವ ಪಕ್ಷ ನಿಯೋಗವನ್ನು ಪ್ರಧಾನಿ ಬಳಿಗೆ ತೆಗೆದುಕೊಂಡು ಹೋಗಬೇಕು. ಪ್ರಧಾನಿ ಮೇಲೆ ಒತ್ತಡ ತಂದು ಶೀಘ್ರದಲ್ಲಿಯೇ ಕಾಮಗಾರಿ ಆರಂಭಿಸಬೇಕು. ಕೇಂದ್ರ ಸಚಿವರು ಕರ್ನಾಟಕದಲ್ಲಿ ಕನ್ನಡಿಗರ ಪರ ಮಾತನಾಡುತ್ತಾರೆ, ಗೋವಾದಲ್ಲಿ ಅವರ ಪರ ಮಾತನಾಡುತ್ತಾರೆ. ಈ ದ್ವಂದ್ವ ನಿಲುವು ಬಿಟ್ಟು ಶೀಘ್ರದಲ್ಲಿ ಕಾಮಗಾರಿ ಆರಂಭಿಸಲು ಅನುಮತಿಯನ್ನು ಕೇಂದ್ರ ನೀಡಬೇಕು ಎಂದು ಹೋರಾಟಗಾರ ಅಶೋಕ ಚಂದರಗಿ ಆಗ್ರಹಿಸಿದ್ದಾರೆ.
ವರದಿ: ಚಂದ್ರಕಾಂತ ಸುಗಂಧಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ