ಚಿಕ್ಕೋಡಿ(ಅಕ್ಟೋಬರ್. 13): ಪ್ರಸಕ್ತ ಸಾಲಿನ ಹಂಗಾಮಿ ಕಬ್ಬು ಬೆಲೆ ನಿಗದಿ ಮಾಡದೆ ಕಾರ್ಖಾನೆಗಳು ಕಬ್ಬು ನುರಿಸಲು ಮುಂದಾಗಿವೆ. ಕಬ್ಬಿನ ಬಿಲ್ ಮೊದಲು ನಿಗದಿ ಮಾಡಿ ಬಳಿಕ ಸಕ್ಕರೆ ಕಾರ್ಖಾನೆ ಪ್ರಾರಭಿಸಬೇಕೆಂದು ಚಿಕ್ಕೋಡಿ ಉಪ ವಿಭಾಗದ ರೈತರು ಆಗ್ರಹಿಸಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳು ಹೆಚ್ಚಾಗಿದ್ದು, ಒಂದೊಂದು ಸಕ್ಕರೆ ಕಾರ್ಖಾನೆಗಳು ಕಳೆದ ಬಾರಿ ಒಂದೊಂದು ಬಿಲ್ ನೀಡಿವೆ. ಹೀಗಾಗಿ ಗಡಿ ಭಾಗದ ರೈತರು ಸಂಕಷ್ಟ ಅನುಭವಿಸುವ ಪರಿಸ್ಥಿತಿ ಎದುರಾಗಿದೆ. ಚಿಕ್ಕೋಡಿ ಉಪ ವಿಭಾಗದಲ್ಲಿ 20ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳಿವೆ. ಆದರೆ, ಇದುವರೆಗೂ ಯಾವುದೇ ಸಕ್ಕರೆ ಕಾರ್ಖಾನೆ ಬಿಲ್ ನಿಗದಿ ಮಾಡದೆ ಇರುವುದರಿಂದ ಪ್ರತಿ ಟನ್ ಕಬ್ಬು ಬೆಲೆ ಎಷ್ಟು ಎಂಬುದು ಕಬ್ಬು ಬೆಳೆಗಾರರಿಗೆ ಚಿಂತೆಗೀಡು ಮಾಡಿದೆ. ಪ್ರತಿ ವರ್ಷ ಕಬ್ಬಿನ ಬಿಲ್ ನಿಗದಿ ಮಾಡಿ ಕಾರ್ಖಾನೆಗಳು ಕಬ್ಬು ಸಾಗಾಣಿಕೆ ಮಾಡಿ ಎಂದು ಹಲವಾರು ರೈತ ಸಂಘಟನೆಗಳು ಪ್ರತಿಭಟನೆಗೆ ಮುಂದಾಗುತ್ತವೆ. ಆದರೆ, ಏನೂ ಪ್ರಯೋಜನವಾಗಿಲ್ಲ.
ಸಕ್ಕರೆ ಕಾರ್ಖಾನೆ ಪ್ರಾರಂಭಕ್ಕೆ ನಾಲ್ಕೈದು ದಿನ ಇರುವಾಗ ರೈತರು ಪ್ರತಿಭಟನೆ ಮಾಡಲು ಮುಂದಾಗುತ್ತಾರೆ. ಹೀಗಾಗಿ ಈ ಪ್ರತಿಭಟನೆ ಯಾವುದಕ್ಕೂ ಪ್ರಯೋಜನಕ್ಕೆ ಬರುವುದಿಲ್ಲ. ರೈತರಿಗೆ ಕಾರ್ಖಾನೆ ಮಾಲೀಕರು ಪಕ್ಕದ ಸಕ್ಕರೆ ಕಾರ್ಖಾನೆ ನೀಡುವ ಬಿಲ್ ನಾವೂ ನೀಡುತ್ತೇವೆ ಎಂದು ಆಶ್ವಾಸನೆ ನೀಡುತ್ತಾ ಬರುತ್ತಿದ್ದಾರೆ. ಅದಕ್ಕಾಗಿ ಸಕ್ಕರೆ ಕಾರ್ಖಾನೆಗಳು ಕಬ್ಬಿನ ಬಿಲ್ ನಿಗದಿ ಮಾಡಿ ಸಕ್ಕರೆ ಕಾರ್ಖಾನೆಗಳನ್ನು ಪ್ರಾರಂಭಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.
ಕಳೆದ ಬಾರಿ ಸಂಭವಿಸಿದ ಪ್ರವಾಹದಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಈ ಬಾರಿ ಪ್ರವಾಹ ಬಂದರೂ ಕಳೆದ ಬಾರಿಯಷ್ಟು ಹಾನಿಯಾಗಿಲ್ಲ. ಬೆಳೆದ ಬೆಳೆಗೆ ಬೆಲೆ ನಿಗದಿ ಮಾಡಿ ಕಬ್ಬು ಕಟಾವು ಮಾಡಿದರೆ ಈ ಬಾರಿ ರೈತನಿಗೆ ಅನುಕೂಲವಾಗುತ್ತದೆ. ಪಕ್ಕದ ಮಹಾರಾಷ್ಟ್ರದಲ್ಲಿ ಕಳೆದ ಬಾರಿ ಪ್ರತಿ ಟನ್‌ಗೆ 3,000 ರೂಪಾಯಿಗೂ ಅಧಿಕ ಬಿಲ್ ನೀಡಿದ್ದಾರೆ. ಆದರೆ, ಚಿಕ್ಕೋಡಿ ಉಪ ವಿಭಾಗದ ಸಕ್ಕರೆ ಕಾರ್ಖಾನೆಗಳು 2,700 ರೂಪಾಯಿ ಮಾತ್ರ ಕಬ್ಬಿನ ಬಿಲ್ ನೀಡಿವೆ. ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳಿಗೆ 3,000 ರೂಪಾಯಿ ಬಿಲ್ ಕೊಟ್ಟು ಸಕ್ಕರೆ ಕಾರ್ಖಾನೆ ನಡೆಸುತ್ತಾರೆ. ಆದರೆ, ಚಿಕ್ಕೋಡಿ ಉಪ ವಿಭಾಗದ ಸಕ್ಕರೆ ಕಾರ್ಖಾನೆಗಳಿಗೆ ಯಾಕೆ ಮಹಾರಾಷ್ಟ್ರದ ಮಾದರಿಯಲ್ಲಿ ಬಿಲ್ ನೀಡಲು ಆಗುವುದಿಲ್ಲ ಎಂಬುದು ರೈತರ ಪ್ರಶ್ನೆಯಾಗಿದೆ.
ಬಾಕಿ ನೀಡದ ಕಾರ್ಖಾನೆಗಳು :
ಕಳೆದ ಎರಡು ವರ್ಷಗಳಿಂದಲೂ ಹಿಲ್ಲೆಯ ಬಹುತೇಕ ಎಲ್ಲಾ ಕಾರ್ಖಾನೆಯಲ್ಲಿ ಪ್ರತಿ ಟನ್ ಕಬ್ಬಿನ 200 ರಿಂದ 350 ರ ವರೆಗಿನ ಬಿಲ್ ಗಳನ್ನ ಇನ್ನು ಪಾವತಿ ಮಾಡಿಲ್ಲ. ಜಿಲ್ಲೆಯಲ್ಲಿ ಕೋಟ್ಯಾಂತರ ರೂಪಾಯಿಗಳನ್ನ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿವೆ. ಇದರಿಂದ ರೈತರಿಗೆ ಬರಬೇಕಾದ ಬಾಕಿ ಇನ್ನು ಹಾಗೆ ಉಳಿದಿದೆ. ಇದೆಲ್ಲದರ ಮಧ್ಯೆ ಮತ್ತೆ ಕಾರ್ಖಾನೆಗಳು ಕಬ್ಬು ನುರಿಸಲು ಮುಂದಾಗಿದ್ದು, ಬಾಕಿ ನೀಡುವ ಕುರಿತು ಯಾವುದೇ ಸ್ಪಷ್ಟನೆ ಕಾರ್ಖಾನೆಗಳು ನೀಡುತ್ತಿಲ್ಲಾ. ಕಾರ್ಖಾನೆಗಳು ಕೂಡಲೆ ಬಾಕಿ ನೀಡುವಂತೆ ಸರ್ಕಾರ ಸೂಚಿಸಬೇಕು ಎಂದು ರೈತರಿ ಒತ್ತಾಯಿಸಿದ್ದಾರೆ.
ಇದನ್ನೂ ಓದಿ : Heavy Rain : ಭಾರೀ ಮಳೆಗೆ ಕೊಚ್ಚಿ ಹೋದ ಬಂಡರಗಲ್- ಹೂಲಗೇರಿ ಸಂಪರ್ಕ ಸೇತುವೆ
ಒಟ್ಟಿನಲ್ಲಿ ಬಹುತೇಕ ಸಕ್ಕರೆ ಕಾರ್ಖಾನೆಗಳು ರಾಜಕೀಯ ಮುಖಂಡರ ಮಾಲಿಕತ್ವದಲ್ಲೆ ಇದ್ದು ದರ ನಿಗದಿ ಮಾಡದೆ ಕಾರ್ಖಾನೆಗಳು ಆರಂಬಿಸಲು ಮುಂದಾಗಿದ್ದು, ರೈತರ ನಿದ್ದೆಗೆಡಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ