ಮಂಗಳೂರು: ಕೊರೊನಾ ಸಂಕಷ್ಟದ ನಡುವೆಯೇ ಈ ಬಾರಿಯೂ ಗಣೇಶನ ಹಬ್ಬ(Ganesha Festival), ತೆನೆ ಹಬ್ಬ ಬಂದಿದೆ. ಈ ಎರಡೂ ಹಬ್ಬಕ್ಕೂ ಅಗತ್ಯವಿರುವ ಕಬ್ಬು ಉತ್ತಮ ಬೆಲೆಯಲ್ಲಿ ಖರೀದಿಯಾಗುತ್ತಿದೆ. ಇದರಿಂದ ಕಬ್ಬು ಬೆಳೆಗಾರರು ಸಂತಸದ ನಗೆ ಬೀರಿದ್ದಾರೆ. ಕಳೆದ ಬಾರಿಯೂ ಕೊರೊನಾ ಸೋಂಕಿನ ಮಧ್ಯೆಯೇ ಎರಡೂ ಹಬ್ಬಗಳು ಬಂದಿತ್ತು. ಪರಿಣಾಮ ಕಬ್ಬು (Sugarcane) ಸರಿಯಾದ ಬೆಲೆಗೆ ಬಿಕರಿಯಾಗದೆ ಬೆಳೆಗಾರರು ನಷ್ಟ ಅನುಭವಿಸಿದ್ದರು. ಕೆಲ ಬೆಳೆಗಾರರು ಕನಿಷ್ಠ ಬೆಳೆಗೆ ಕಬ್ಬನ್ನೂ ಮಾರಿದ್ದೂ ಇದೆ. ಮಂಗಳೂರಿನ (Mangaluru Farmers) ಹೊರವಲಯದ ಕಿನ್ನಿಗೋಳಿ ಸಮೀಪದ ಬಳ್ಕುಂಜೆ, ಉಳೆಪಾಡಿ, ಕರ್ನಿರೆ ಗ್ರಾಮದ ಜನತೆ ಸಾಕಷ್ಟು ಮಂದಿ ಕೃಷಿಯನ್ನೇ ಅವಲಂಬಿಸಿದ್ದಾರೆ. ಅದರಲ್ಲೂ ಹೆಚ್ಚಿನವರು ಕಬ್ಬನ್ನೇ ಬೆಳೆಯುತ್ತಿದ್ದಾರೆ. ಸುಮಾರು 54 ಕುಟುಂಬವು ಕಬ್ಬು ಬೆಳೆಯನ್ನು ಆಶ್ರಯಿಸಿದ್ದು, ವರ್ಷಂಪ್ರತಿ ಸುಮಾರು 2 ರಿಂದ 2.50 ಲಕ್ಷದಷ್ಟು ಕಬ್ಬು ಬರೀ ಈ ಗ್ರಾಮದಲ್ಲಿಯೇ ಬೆಳೆಸಲಾಗುತ್ತಿದೆಯಂತೆ.
ಕಳೆದ ಬಾರಿ ಕಬ್ಬು ಬೆಳೆದ ಬೆಳೆಗಾರರು ಕೊರೊನಾ ಪರಿಣಾಮ ಸರಿಯಾದ ಬೆಲೆಯಿಲ್ಲದೆ ನಷ್ಟ ಅನುಭವಿಸಿದ್ದರು. ಆದರೆ ಈ ಬಾರಿ ಕಬ್ಬಿಗೆ ವಿಶೇಷ ಪ್ರಾಧಾನ್ಯತೆ ಇರುವ ಹಿಂದೂಗಳ ಗಣೇಶನ ಹಬ್ಬ ಹಾಗೂ ಕ್ರಿಶ್ಚಿಯನ್ನರ ತೆನೆಹಬ್ಬವು ಎರಡು ದಿನಗಳ ಅಂತರದಲ್ಲಿ ಬಂದಿದೆ. ಮತ್ತೆ ಈ ಬಾರಿಯೂ ತಾವು ಬೆಳೆದ ಬೆಳೆಯಿಂದ ನಷ್ಟ ಅನುಭವಿಸಬಾರದೆಂದು ಬೆಳೆಗಾರರು ಒಂದು ಕಬ್ಬಿಗೆ 25 ರೂ.ಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡಬಾರದೆಂಬ ತೀರ್ಮಾನದಿಂದ ಕಬ್ಬು ಉತ್ತಮ ಬೆಲೆಗೆ ಮಾರಾಟವಾಗಿದೆ ಎಂದು ಕಬ್ಬು ಬೆಳೆಗಾರ ಮಹಿಳೆ ಅನಿತಾ ಸಂತಸ ವ್ಯಕ್ತಪಡಿಸುತ್ತಾರೆ.
ಎಲ್ಲಾ ಕಡೆಗಳಲ್ಲಿ ಈ ಕಬ್ಬಿಗೆ ಭಾರೀ ಬೇಡಿಕೆ
ಇಲ್ಲಿನ ಕಬ್ಬು ನೆಲ್ಯಾಡಿ, ಉಪ್ಪಿನಂಗಡಿ ಹಾಗೂ ದೂರದ ಮೂಡಿಗೆರೆವರೆಗೂ ಮಾರಾಟವಾಗಿದೆಯಂತೆ. ಈಗಲೂ ಬೇಡಿಕೆ ಇದ್ದರೂ ಕಬ್ಬು ಪೂರ್ತಿ ಖಾಲಿಯಾಗಿದೆ. ಯಾವತ್ತೂ ಇಳುವರಿ ಇದ್ದರೂ ಬೇಡಿಕೆಯಿಲ್ಲದೆಯೋ, ದಳ್ಳಾಳಿಗಳ ತೊಂದರೆಗಳಿಂದ ಸರಿಯಾದ ಲಾಭ ಕೈಗೆ ಸಿಗುತ್ತಿರಲಿಲ್ಲ. ಆದರೆ ಈ ಬಾರಿ ಆ ರೀತಿ ಆಗಲಿಲ್ಲ, ಸರಿಯಾದ ಬೆಲೆಗೆ ಕಬ್ಬು ಮಾರಾಟವಾಗಿದೆ ಎಂದು ಅನಿತಾ ಹೇಳುತ್ತಾರೆ.
ಕೊರೊನಾ ಆತಂಕದಿಂದ ಕೆಲ ನಿರ್ಭಂದಕ್ಕೊಳಪಟ್ಟು ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಬೇಕಾಗಿದೆ. ಆದ್ರೆ ಈ ಕೊರೊನಾ ಅತಂಕದ ನಡುವೆಯೂ ಗಣೇಶ ಚತುರ್ಥಿ ಹಬ್ಬಕ್ಕೆಂದೆ ಕರಾವಳಿಯಲ್ಲಿ ಬೆಳೆದ ಎಲ್ಲಾ ಕಬ್ಬು ಉತ್ತಮ ಬೆಲೆಗೆ ಮಾರಾಟವಾಗಿದೆ. ಇದರಿಂದ ಈ ಬಾರಿ ಕಬ್ಬು ಬೆಳೆಗಾರರು ಪುಲ್ ಖಷ್ ಆಗಿದ್ದಾರೆ. ಗೌರಿ ಗಣೇಶ ಹಬ್ಬ ಬಂತೆಂದರೆ ಎಲ್ಲೆಲ್ಲಿಯೂ ಸಡಗರ ಸಂಭ್ರಮ. ಈ ಚೌತಿ ಹಬ್ಬದಲ್ಲಿ ಕಬ್ಬು ಪ್ರಮುಖ ಸ್ಥಾನವನ್ನು ಪಡೆಯುತ್ತೆ. ಹಬ್ಬಕ್ಕೆ ಕಬ್ಬು ಅಗತ್ಯವಾದ ಕಾರಣ ಪ್ರತಿಯೊಂದು ಮನೆಯಲ್ಲಿ ಕಬ್ಬನ್ನು ಖರೀದಿ ಮಾಡಲಾಗುತ್ತದೆ. ಇನ್ನು ಕಡಲನಗರಿ ಮಂಗಳೂರಿನಲ್ಲಿ ಗಣೇಶ ಚತುರ್ಥಿಗೆಂದೇ ಒಂದು ಊರಿನಲ್ಲಿ ಇಡೀ ಊರವರು ಕಬ್ಬು ಬೆಳೆಯುತ್ತಾರೆ. ಆ ಊರೇ ಕಿನ್ನಿಗೋಳಿ ಸಮೀಪದ ಬಳ್ಕುಂಜೆ.
ಹಬ್ಬಕ್ಕೆ ಮುಂಚೆ ಎಲ್ಲಾ ಕಬ್ಬು ಮಾರಾಟ
ಚೌತಿ ಹಬ್ಬಕ್ಕೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗೆ ಶೇಕಡ 90ರಷ್ಟು ಕಬ್ಬು ಇಲ್ಲಿಂದಲೇ ಸರಬರಾಜಾಗುತ್ತದೆ. ಈ ಬಾರಿ ಕ್ರೈಸ್ತರ ತೆನೆ ಹಬ್ಬ ಮತ್ತು ಚೌತಿ ಹಬ್ಬ ಎರಡು ದಿನಗಳ ಅಂತರದಲ್ಲಿ ಬಂದಿರುವುದರಿಂದ ಕಬ್ಬಿಗೆ ಸಾಕಷ್ಟು ಬೇಡಿಕೆ ಬಂದಿದೆ. ಸುಮಾರು 55 ಕ್ಕಿಂತ ಹೆಚ್ಚಿನ ರೈತರು ಸುಮಾರು ಎರಡು ಲಕ್ಷದಷ್ಟು ಕಬ್ಬು ಬೆಳೆದಿದ್ದು ಎಲ್ಲವು ಮುಂಗಡವಾಗಿಯೇ ಸೇಲ್ ಆಗಿದೆ. ಕಳೆದ ಹಲವಾರು ವರ್ಷಗಳಿಂದ ಇಲ್ಲಿ ಚೌತಿ ಮತ್ತು ಕ್ರೈಸ್ತ ಬಾಂಧವರ ತೆನೆ ಹಬ್ಬಕ್ಕಾಗಿಯೇ ರೈತರು ಕಬ್ಬು ಬೆಳೆಯುತ್ತಿದ್ದಾರೆ. ಈ ಭಾಗದ ಜಮೀನಿನಲ್ಲಿ ಕಪ್ಪು ಹೊಯಿಗೆ ಮಣ್ಣು ಇರುವುದರಿಂದ ಇದು ಕಬ್ಬು ಬೆಳೆಗೆ ಉತ್ತಮವಾಗಿದ್ದು ಹೇರಳವಾಗಿ ಕಬ್ಬನ್ನು ಬೆಳೆಯಬಹುದಾಗಿದೆ.
ಇನ್ನು ಈ ಬಾರಿ ಬಳ್ಕುಂಜೆಯ ಎಲ್ಲಾ ಕಬ್ಬು ಬೆಳೆಗಾರರು ಒಟ್ಟಾಗಿ ಕಬ್ಬು ಬೆಳೆಗಾರರ ಸಂಘವನ್ನು ರಚಿಸಿದ್ದಾರೆ. ಒಂದು ಕಬ್ಬಿನ ಬೆಲೆ 25 ರೂಪಾಯಿಗಿಂದ ಕಡಿಮೆಗೆ ಮಾರಾಟವಾಗದಂತೆ ನಿರ್ಣಯಿಸಿದ್ದಾರೆ. ಈ ಮೂಲಕ ಕಬ್ಬು ಬೆಳೆಗಾರರಿಗೆ ನಷ್ಟ ಆಗುವುದನ್ನು ತಡೆಹಿಡಿಯಲಾಗಿದೆ. ಕಬ್ಬನ್ನು ಖರೀದಿಗಾಗಿ ಮಾರಾಟಗಾರರು ಚೌತಿ ಹಬ್ಬಕ್ಕಿಂತ ಸುಮಾರು ಆರು ತಿಂಗಳ ಹಿಂದೆಯೇ ಬಂದು ಮಾತುಕತೆ ನಡೆಸುತ್ತಾರೆ.
ಕಳೆದ ಬಾರಿ ಕೊರೊನಾ ಕಾರಣದಿಂದ ಯಾವೊಬ್ಬ ಮಾರಾಟಗಾರನು ಕಬ್ಬು ಖರೀದಿಗೆ ಆಸಕ್ತಿ ವಹಿಸಿರಲಿಲ್ಲ. ಹೀಗಾಗಿ ಕೊನೆಯ ಹಂತಕ್ಕೆ 15 ರೂಪಾಯಿಗೆ ಮಾರಾಟ ಮಾಡಿ ನಷ್ಟ ಅನುಭವಿಸುವಂತಾಗಿತ್ತು. ಆದ್ರೆ ಈ ಬಾರಿ ಒಂದಿಷ್ಟು ಗೊಂದಲದ ನಡುವೆಯು ಕಬ್ಬಿಗೆ ಡಿಮ್ಯಾಂಡ್ ಬಂದು ಎಲ್ಲವು ಮಾರಾಟವಾಗಿರುವುದು ರೈತರಿಗೆ ಖುಷಿ ಕೊಟ್ಟಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ