HOME » NEWS » District » SUCCESSFULLY TRIPLETS BABIES DELIVERY IN KALABURGI RHHSN SAKLB

ಅವಧಿ ಪೂರ್ವದಲ್ಲಿಯೇ ತ್ರಿವಳಿ ಮಕ್ಕಳ ಜನನ; ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿದ ಕಲಬುರ್ಗಿ ವೈದ್ಯರು!

ಕಲಬುರ್ಗಿ ವೈದ್ಯರ ತಂಡದ ಪ್ರಯತ್ನದಿಂದಾಗಿ ಪ್ರಸವ ಪೂರ್ವದಲ್ಲಿಯೇ ಯಶಸ್ವಿಯಾಗಿ ಹೆರಿಗೆ ಮಾಡಿಸಲಾಗಿದ್ದು, ಮೂವರು ಮಕ್ಕಳನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ವೈದ್ಯರ ಪ್ರಯತ್ನಕ್ಕೆ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

news18-kannada
Updated:January 23, 2021, 9:05 PM IST
ಅವಧಿ ಪೂರ್ವದಲ್ಲಿಯೇ ತ್ರಿವಳಿ ಮಕ್ಕಳ ಜನನ; ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿದ ಕಲಬುರ್ಗಿ ವೈದ್ಯರು!
ತ್ರಿವಳಿ ಮಕ್ಕಳು.
  • Share this:
ಕಲಬುರ್ಗಿ; ಒಂದು ಅಥವಾ ಎರಡು ಮಕ್ಕಳಾಗೋದು ಸಾಮಾನ್ಯ. ಆದರೆ ಇಲ್ಲೊಬ್ಬ ತಾಯಿ ಮೂವರು ಮಕ್ಕಳಿಗೆ ಜನ್ಮವಿತ್ತಿದ್ದಾಳೆ. ಆದರೆ ಅವಧಿ ಪೂರ್ವದಲ್ಲಿಯೇ ಹೆರಿಗೆಯಾಗಿರುವುದರಿಂದ ಮೂವರೂ ಮಕ್ಕಳನ್ನು ಸುರಕ್ಷಿತವಾಗಿ ಹೊರ ತೆಗೆಯೋದು ದೊಡ್ಡ ಸವಾಲೇ ಆಗಿತ್ತು. ಇಂತಹ ಸವಾಲನ್ನು ಚಾಲೆಂಜಿಂಗ್ ಆಗಿ ಸ್ವೀಕರಿಸಿದ ಕೋಣಿನ್ ಮೆಟರ್ನಿಟಿ ನರ್ಸಿಂಗ್ ಹೋಮ್ ವೈದ್ಯರು, ಮೂವರು ಮಕ್ಕಳನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದು ತಾಯಿ ಮಡಿಲು ಸೇರಿಸಿದ್ದಾರೆ.

ಕಲಬುರ್ಗಿಯ ಕೋಣಿನ್ ನರ್ಸಿಂಗ್ ಹೋಂ ನಲ್ಲಿ ತಾಯಿಯೋರ್ವಳು ತ್ರಿವಳಿಗಳಿಗೆ ಜನ್ಮವಿತ್ತಿದ್ದಾಳೆ. ಬಸವಕಲ್ಯಾಣ ತಾಲೂಕಿನ ಕೊಹಿನೂರು ಗ್ರಾಮದ ಮೀನಾಕ್ಷಿ ಎಂಬ ಮಹಿಳೆ ತ್ರಿವಳಿಗಳಿಗೆ ಜನ್ಮ ನೀಡಿದ ತಾಯಿ. ಕೊಹಿನೂರು ಮೀನಾಕ್ಷಿ ಗಂಡನ ಮನೆಯಾದ್ರೆ, ಕಮಲಾಪುರ ತವರೂರು. ತವರೂರಿಗೆ ಹೆರಿಗೆಗೆಂದು ಬಂದಿದ್ದ ಮೀನಾಕ್ಷಿಗೆ ಅವಧಿ ಪೂರ್ವದಲ್ಲಿಯೇ ಹೆರಿಗೆಯಾಗಿದ್ದು, ವೈದ್ಯರ ಪ್ರಯತ್ನದಿಂದಾಗಿ ಗಂಡಾಂತರ ತಪ್ಪಿ, ಮೂವರು ಮಕ್ಕಳು ಸುರಕ್ಷಿತವಾಗಿ ಹೊರ ಜಗತ್ತಿಗೆ ಕಾಲಿಟ್ಟಿದ್ದಾರೆ.ಮೀನಾಕ್ಷಿ ಅಪ್ಪೆ ಎರಡು ಹೆಣ್ಣು ಹಾಗೂ ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಅವಧಿ ಪೂರ್ವದಲ್ಲಿಯೇ ಡೆಲಿವರಿಯಾಗಿದ್ದು, ಮೂರು ಮಕ್ಕಳ ಸುರಕ್ಷಿತ ಹೆರಿಗೆ ಮಾಡಿಸುವಲ್ಲಿ ಕೋಣಿನ್ ಆಸ್ಪತ್ರೆಯ ವೈದ್ಯೆ ಡಾ.ಸವಿತಾ ತಂಡ ಯಶಸ್ವಿಯಾಗಿದ್ದಾರೆ. ಕೋಣಿನ್ ಆಸ್ಪತ್ರೆಗೆ ಬಂದ ಮೀನಾಕ್ಷಿಗೆ ಏಕಾಏಕಿ ಗರ್ಭ ಕೋಶದಿಂದ ನೀರು ಸ್ರವಿಸುವಿಕೆ ಆರಂಭಗೊಂಡಿದೆ. ಗಾಬರಿಯಾದ ಗರ್ಭಿಣಿಗೆ ಸಮಾಧಾನ ಮಾಡಿದ್ದ ವೈದ್ಯರು, ಶಸ್ತ್ರಚಿಕಿತ್ಸೆಯ ಮೂಲಕ ಹೆರಿಗೆ ಮಾಡಿಸಿದ್ದಾರೆ. ಅರವಳಿಕೆ ತಜ್ಞ ಡಾ.ಗಿರಿಜಾ ಶಂಕರ್, ಮಕ್ಕಳ ತಜ್ಞೆ ಡಾ.ಅಪೂರ್ವ ಅವಂಟಿ ಅವರ ನೆರವಿನೊಂದಿಗೆ ಡಾ.ಸವಿತಾ ಕೋಣಿನ್ ಅವರು ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ.

35 ವಾರಗಳಲ್ಲಿಯೇ ಡೆಲಿವರಿಯಾಗಿರೋದ್ರಿಂದ ಗಂಡು ಮಗುವಿನ ತೂಕ 2 ಕೆ.ಜಿ. ಇದ್ದರೆ, ಓರ್ವ ಹೆಣ್ಣು ಕೂಸಿನ ತೂಕ 1.70 ಕೆ.ಜಿ. ಹಾಗೂ ಮತ್ತೋರ್ವ ಹೆಣ್ಣು ಕೂಸಿನ ತೂಕ 1.90 ಕೆ.ಜಿ. ಇದೆ. ಅಲ್ಲದೆ ಗರ್ಭದಲ್ಲಿದ್ದ ವೇಳೆ ಒಂದು ಮಗು ಕಾಲು ಮುಂದು ಮಾಡಿಕೊಂಡಿದ್ದರೆ, ಮತ್ತೊಂದು ಮಗು ಅಡ್ಡಲಾಗಿ ಮಲಗಿದ ಸ್ಥಿತಿಯಲ್ಲಿತ್ತು. ಹೀಗಾಗಿ ನಾರ್ಮಲ್ ಡೆಲಿವರಿ ಅಸಾಧ್ಯವಾಗಿತ್ತು. ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿಯೂ ಯಾವುದಾದರೂ ಒಂದು ಮಗುವಿಗೆ ತೊಂದರೆಯಾಗೋ ಸಾಧ್ಯತೆಗಳಿದ್ದವು. ಹೀಗಾಗಿ ಸೂಕ್ಷ್ಮ ಪ್ರಕರಣವನ್ನು ನಿಭಾಯಿಸಿದ ವೈದ್ಯರ ತಂಡ ಯಶಸ್ವಿಯಾಗಿ ಮೂವರು ಮಕ್ಕಳನ್ನು ಹೊರ ತೆಗೆದಿದ್ದಾರೆ. ವೈದ್ಯರ ಪ್ರಯತ್ನ ಅಷ್ಟಕ್ಕೆ ನಿಂತಿಲ್ಲ, ಅದರ ನಂತರವೂ ಅಗತ್ಯವಿರೋ ಪ್ರಸವೋತ್ತರ ಆರೈಕೆಯ ಜವಾಬ್ದಾರಿಯನ್ನೂ ತೆಗೆದುಕೊಂಡಿದ್ದಾರೆ. ತಮ್ಮದೇ ಆದ ಐಸಿಯು ಘಟಕದಲ್ಲಿ ಮಕ್ಕಳಿಗೆ ಆರೈಕೆ ಮಾಡಲಾಗುತ್ತಿದೆ. ಇದೊಂದು ಸೂಕ್ಷ್ಮ ಪ್ರಕರಣವಾಗಿತ್ತು. ಕಲಬುರ್ಗಿ ನಗರದಲ್ಲಿ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿರೋದು ಅಪರೂಪದ ಘಟನೆ. ಅಲ್ಲದೆ ಅವಧಿ ಪೂರ್ವವೇ ಹೆರಿಗೆಯಾಗಿದ್ದರಿಂದ ನಮಗೆ ದೊಡ್ಡ ಸವಾಲಾಗಿಯೇ ಪರಿಣಮಿಸಿತ್ತು. ಇದೊಂದು ಕ್ಲಿಷ್ಟಕರ ಸರ್ಜರಿಯಾಗಿತ್ತು. ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿ ಮಕ್ಕಳ ಪ್ರಸವೋತ್ತರ ಕೇರ್ ಸಹ ತೆಗೆದುಕೊಳ್ಳಲಾಗುತ್ತಿದೆ. ಇತರೆ ವೈದ್ಯರ ನೆರವಿನೊಂದಿಗೆ ಯಶಸ್ವಿಯಾಗಿ ನಿಭಾಯಿಸಿದ್ದು, ಮೂವರು ಮದ್ದಾದ ಮಕ್ಕಳನ್ನು ಹೊರ ತೆಗೆದಿದ್ದೇವೆ. ತಾಯಿ ಮತ್ತು ಮಕ್ಕಳು ಸುರಕ್ಷಿತವಾಗಿದ್ದಾರೆ ಎಂದು ಡಾ.ಸವಿತಾ ಭರತ್ ಕೋಣಿನ್ ತಿಳಿಸಿದ್ದಾರೆ.

ತಾಯಿ ಹಾಲು ಅಮೃತ ಅನ್ನೋ ಮಾತಿದೆ. ಆದರೆ ಅವಳಿ - ಜವಳಿ ಅಥವಾ ತ್ರಿವಳಿಗಳಾದ ಸಂದರ್ಭದಲ್ಲಿ ಮಕ್ಕಳಿಗೆ ತಾಯಿ ಹಾಲು ಸಾಕಾಗೋದಿಲ್ಲ. ಇಂತಹ ಸಂದರ್ಭದಲ್ಲಿ ಪರ್ಯಾಯ ವ್ಯವಸ್ಥೆಗೆ ಮೊರೆ ಹೋಗಲಾಗುತ್ತದೆ. ಆದರೆ ಇಲ್ಲಿ ಮಾತ್ರ ಮೂವರು ಮಕ್ಕಳಿಗೆ ತಾಯಿ ಎದೆ ಹಾಲನ್ನೇ ಕೊಡಿಸಲಾಗುತ್ತಿರೋದು ವಿಶೇಷ. ಹಾಲು ಬರಲು ಅಗತ್ಯವಿರೋ ಪೌಷ್ಠಿಕಾಂಶ ಮತ್ತು ಪೋಷಕಾಂಶಗಳನ್ನು ತಾಯಿಗೆ ಒದಗಿಸೋ ಪ್ರಯತ್ನವನ್ನು ವೈದ್ಯರು ಮಾಡಿದ ಫಲವಾಗಿ ಮೂವರೂ ಮಕ್ಕಳಿಗೆ ಸಾಕಾಗುವಷ್ಟು ಎದೆ ಹಾಲು ತಾಯಿಯಿಂದ ಸಿಗಲಾರಂಭಿಸಿದೆ.

ಇದನ್ನು ಓದಿ: Mission Paani: ಶಾಲೆಗಳಲ್ಲಿ ಪರಿಸರ ಬದಲಾವಣೆ ಸಾಕ್ಷರತೆ ಕಡ್ಡಾಯಗೊಳಿಸಲು ಯುವ ಪರಿಸರ ಕಾರ್ಯಕರ್ತೆಯ ಸಲಹೆ

ಮಕ್ಕಳ ತಜ್ಞೆ ಡಾ. ಅಪೂರ್ವ ಅವರು ಮೂವರು ಮಕ್ಕಳ ಆರೈಕೆಯಲ್ಲಿ ನಿರತರಾಗಿದ್ದು, ಸಹಜ ಮಕ್ಕಳನ್ನು ಎಲ್ಲ ಸೂಕ್ಷ್ಮ ಸಮಸ್ಯೆಗಳಿಂದ ಹೊರ ತರುವಲ್ಲಿ ಯಶಸ್ವಿಯಾಗಿದ್ದಾರೆ. ಮೂವರೂ ಮಕ್ಕಳು ಆರೋಗ್ಯದಿಂದಿದ್ದಾರೆ. ಕೆಲವೇ ದಿನಗಳಲ್ಲಿ ಮೂವರು ಮಕ್ಕಳೊಂದಿಗೆ ತಾಯಿ ತಮ್ಮ ಊರಿಗೆ ಹೋಗಬಹುದಾಗಿದೆ ಎಂದು ಮಕ್ಕಳ ತಜ್ಞೆ ಡಾ.ಅಪೂರ್ವ ತಿಳಿಸಿದ್ದಾರೆ.
Youtube Video
ಒಟ್ಟಾರೆ ಕಲಬುರ್ಗಿ ವೈದ್ಯರ ತಂಡದ ಪ್ರಯತ್ನದಿಂದಾಗಿ ಪ್ರಸವ ಪೂರ್ವದಲ್ಲಿಯೇ ಯಶಸ್ವಿಯಾಗಿ ಹೆರಿಗೆ ಮಾಡಿಸಲಾಗಿದ್ದು, ಮೂವರು ಮಕ್ಕಳನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ವೈದ್ಯರ ಪ್ರಯತ್ನಕ್ಕೆ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Published by: HR Ramesh
First published: January 23, 2021, 9:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories