ಕೊಪ್ಪಳ : ಕೊರೊನಾ ಸೋಂಕಿನ ಭೀತಿ ಹಾಗೂ ಲಾಕ್ ಡೌನ್ ನಿಂದ ಕಳೆದ ವರ್ಷದಿಂದ ಶಾಲೆಗಳು ಬಂದ್ ಆಗಿದ್ದವು. ಈಗ ಸರ್ಕಾರ ಒಂದೊಂದೆ ತರಗತಿಯ ಶಾಲೆಗಳು ಪ್ರಾರಂಭಗೊಳ್ಳುತ್ತಿದ್ದು (School Reopen) ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರ್ಥಿಗಳು ಸಾರಿಗೆ ಸಂಪರ್ಕವಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಪ್ರತಿನಿತ್ಯ ನಡೆದುಕೊಂಡು ಶಾಲೆ ತಲುಪುತ್ತಿದ್ದಾರೆ. ಕೊಪ್ಪಳ ತಾಲೂಕಿನ ಮುದ್ದಾಬಳ್ಳಿ ಗ್ರಾಮದ ಶಾಲೆಯ ಮಕ್ಕಳು (Village School Kids) ಹ್ಯಾಟಿ ಗ್ರಾಮದಲ್ಲಿನ ಶಾಲೆಗೆ ತೆರಳಲು ಹರಸಾಹಸ ಮಾಡುತ್ತಿದ್ದಾರೆ. ಸಿಕ್ಕ ಸಿಕ್ಕ ವಾಹನಗಳನ್ನು ಏರಿಕೊಂಡು ಹೋಗಿ ಶಾಲೆ ತಲುಪಬೇಕಾದ ಅನಿವಾರ್ಯತೆ ಎದುರಾಗಿದೆ. ನಿನ್ನೆ ವಿದ್ಯಾರ್ಥಿಗಳು ಜೆಸಿಬಿಯಲ್ಲಿನ ಬಕೇಟ್‍ನಲ್ಲಿ (JCB travel) ನಿಂತುಕೊಂಡು ಪ್ರಯಾಣ ಮಾಡಿ ಶಾಲೆ ತಲುಪಿದ್ದಾರೆ.ಇನ್ನೂ ಹಲವು ಕಡೆ ಶಾಲಾ ಮಕ್ಕಳು ಜೀವದ ಹಂಗು ತೊರೆದು ಬಸ್ ನಲ್ಲಿ ನೇತಾಡಿಕೊಂಡು ಹೋಗುವಂಥ ಸ್ಥಿತಿ ಇದೆ. ಜೆಸಿಬಿಯಲ್ಲಿನ ಬಕೆಟ್‍ನಲ್ಲಿ ನಿಂತು ಪ್ರಯಾಣಿಸುತ್ತಿರುವ ಹಾಗೂ ಕೆಲ ವಿದ್ಯಾರ್ಥಿಗಳು ನಡೆದುಕೊಂಡು ಹೋಗುತ್ತಿರುವ ದೃಶ್ಯ ಕಂಡು ಬರುತ್ತಿರುವುದು ಕೊಪ್ಪಳ ತಾಲೂಕಿನ ಮುದ್ದಾಬಳ್ಳಿ ಗ್ರಾಮದಲ್ಲಿ.
ಮುದ್ದಾಬಳ್ಳಿ ಗ್ರಾಮದಲ್ಲಿ ಪ್ರಾಥಮಿಕ ಶಾಲೆ ಇರುವುದರಿಂದ ಅಲ್ಲಿನ ವಿದ್ಯಾರ್ಥಿಗಳು ಹೈಸ್ಕೂಲ್‍ಗಾಗಿ ಹ್ಯಾಟಿಗೆ ಹೋಗುತ್ತಾರೆ. ಮುದ್ದಾಬಳ್ಳಿಯ ಎಸ್‍ಎಸ್‍ಎಲ್‍ಸಿಯ ಸುಮಾರು 60 ಹಾಗೂ ಒಂಭತ್ತನೆ ತರಗತಿಯ 30 ವಿದ್ಯಾರ್ಥಿಗಳು ಸೇರಿ ಒಟ್ಟು 90 ವಿದ್ಯಾರ್ಥಿಗಳು ಹ್ಯಾಟಿ ಗ್ರಾಮದಲ್ಲಿನ ಹೈಸ್ಕೂಲ್‍ಗೆ ತೆರಳುತ್ತಾರೆ. ಸುಮಾರು 3 ಕಿಲೋ ಮೀಟರ್ ಅಂತರದಲ್ಲಿರುವ ಹ್ಯಾಟಿ ಶಾಲೆಗೆ ವಿದ್ಯಾರ್ಥಿಗಳು ಈಗ ನಡೆದುಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ. ಪ್ರತಿನಿತ್ಯವೂ ಮುದ್ದಾಬಳ್ಳಿ ಗ್ರಾಮದ ಈ ವಿದ್ಯಾರ್ಥಿಗಳು ಹ್ಯಾಟಿ ಗ್ರಾಮದ ಹೈಸ್ಕೂಲ್‍ಗೆ ನಡೆದುಕೊಂಡು ಅಥವಾ ಎತ್ತಿನಬಂಡಿಯೋ ಅಥವಾ ನಡೆದುಕೊಂಡು ಹೋಗುವಾಗ ಯಾವ ವಾಹನ ಸಿಗುತ್ತದೆಯೋ ಆ ವಾಹನಗಳಲ್ಲಿ ಹತ್ತಿಕೊಂಡು ಹೋಗಿ ಶಾಲೆಯನ್ನು ತಲುಪುತ್ತಿದ್ದಾರೆ.
ಕಳೆದ ವರ್ಷದಿಂದ ಕೊರೊನಾ ಸೋಂಕಿನ ಭೀತಿಯಿಂದ ಶಾಲಾ ಕಾಲೇಜುಗಳು ಬಂದ್ ಆಗಿದ್ದವು. ಈ ವರ್ಷ ಈಗ ಸದ್ಯ ಸರ್ಕಾರ ಒಂಭತ್ತು ಮತ್ತು 10 ನೇ ತರಗತಿಯ ಶಾಲೆಗಳನ್ನು ಪ್ರಾರಂಭ ಮಾಡಿದೆ. ಆದರೆ, ಗ್ರಾಮೀಣ ಭಾಗದಲ್ಲಿ ಬಂದ್ ಆಗಿರುವ ಸಾರಿಗೆ ವ್ಯವಸ್ಥೆ ಇನ್ನೂ ಆರಂಭವಾಗದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ನಿತ್ಯ ತೊಂದರೆ ಅನುಭವಿಸುವಂತಾಗಿದೆ.ಮುದ್ದಾಬಳ್ಳಿ ಗ್ರಾಮದಿಂದ ಹ್ಯಾಟಿ ಗ್ರಾಮದಲ್ಲಿನ ಹೈಸ್ಕೂಲ್‍ಗೆ ಪ್ರತಿನಿತ್ಯ ಬೆಳಗ್ಗೆ 8.30 ರ ವೇಳೆಗೆ ಹೊರಡಬೇಕು. ಅಲ್ಲಿ ಶಾಲೆ ಬಿಟ್ಟ ಮೇಲೂ ನಡೆದುಕೊಂಡು ಬರಬೇಕು. ಗಂಡು ಹುಡುಗರು ಹೇಗೋ ನಡೆದುಕೊಂಡು ಹೋಗುತ್ತಾರೆ. ಆದರೆ, ಹೆಣ್ಣು ಮಕ್ಕಳು ಭಯದಿಂದಲೇ ನಡೆದುಕೊಂಡು ಹೋಗಬೇಕಾಗಿದೆ.
ಇದನ್ನೂ ಓದಿ: School Reopen: 6ರಿಂದ 8ನೇ ತರಗತಿಗೆ ಶಾಲಾರಂಭ: ಯಾವ ತರಗತಿಗೆ ಯಾವ ರೂಲ್ಸ್? ಸಮಯ, ನಿಯಮಗಳ ಫುಲ್ ಡೀಟೆಲ್ಸ್
ಮೈಸೂರಿನಲ್ಲಿ ನಡೆದ ಅತ್ಯಾಚಾರ ಘಟನೆಗಳಂತಹ ಘಟನೆಯಿಂದ ಹೆಣ್ಣುಮಕ್ಕಳು ಹೀಗೆ ನಡೆದುಕೊಂಡು ಹೋಗುವದಕ್ಕೆ ತುಂಬಾ ಭಯವಾಗುತ್ತದೆ. ನಿತ್ಯವೂ ನಾವು ಭಯದಿಂದಲೇ ನಡೆದುಕೊಂಡು ಶಾಲೆಗೆ ಹೋಗುತ್ತಿದ್ದೇವೆ. ಹೀಗಾಗಿ ದಯವಿಟ್ಟು ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸುತ್ತಾಳೆ ಮುದ್ದಾಬಳ್ಳಿ ಗ್ರಾಮದ ವಿದ್ಯಾರ್ಥಿನಿ ಕೀರ್ತಿ.ಇದು ಕೇವಲ ಮುದ್ದಾಬಳ್ಳಿ ಗ್ರಾಮದ ವಿದ್ಯಾರ್ಥಿಗಳ ಗೋಳು ಅಲ್ಲ. ಜಿಲ್ಲೆಯ ಅನೇಕ ಗ್ರಾಮಗಳ ವಿದ್ಯಾರ್ಥಿಗಳು ಸಾರಿಗೆ ವ್ಯವಸ್ಥೆಯಿಲ್ಲದೆ ಶಾಲಾ ಕಾಲೇಜುಗಳಿಗೆ ತೆರಳಲು ಪರದಾಡುತ್ತಿದ್ದಾರೆ.
ಹೀಗಾಗಿ ಇನ್ನಾದರೂ ಗ್ರಾಮೀಣ ಪ್ರದೇಶದಲ್ಲಿಯೂ ಸಾರಿಗೆ ಸಂಚಾರ ವ್ಯವಸ್ಥೆಯನ್ನು ಆದಷ್ಟು ಬೇಗ ಆರಂಭಿಸುವ ಮೂಲಕ ವಿದ್ಯಾರ್ಥಿಗಳ ಸಂಕಷ್ಟಕ್ಕೆ ಸ್ಪಂದಿಸಬೇಕಿದೆ.ಇದೇ ರೀತಿ ಗಂಗಾವತಿ ತಾಲೂಕಿನ ಹಣವಾಳದಿಂದ ಶಾಲೆಯ ಮಕ್ಕಳು ಬರುವ ಬಸ್ ಗಾಗಿ ಕಾಯ್ದುಕುಳಿತು ಬಸ್ ಬಂದ ತಕ್ಷಣ ಕುರಿ ತುಂಬಿಕೊಂಡು ನಂತರ ಬಸ್ ನಲ್ಲಿ ನೇತಾಡಿಕೊಂಡು ಹೋಗುತ್ತಿದ್ದಾರೆ, ಬೇಗ ಇದಕ್ಕೆ ಪರಿಹಾರ ಹುಡುಕಬೇಕಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ