Corona Effect: ಬದುಕಿದ್ರೆ ಬಂದು ಪರೀಕ್ಷೆ ಬರೆಯುತ್ತೇವೆ ಎಂದು ಹಾಸ್ಟೆಲ್ ಬಿಟ್ಟು ಮನೆಗೆ ಮರಳಿದ ವಿದ್ಯಾರ್ಥಿಗಳು

ಹಾಸ್ಟೆಲ್ ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತಿದೆ. ಧಾರವಾಡದ ಸಪ್ತಾಪೂರದಲ್ಲಿರುವ ಗೌರಿ ಶಂಕರ ಹಾಸ್ಟೆಲಿನ 25, ಕೆಸಿಡಿ ಕಾಲೇಜಿನಲ್ಲಿರುವ ಕಾವೇರಿ ಹಾಸ್ಟೆಲ್ ನಲ್ಲಿ 7 ಹಾಗೂ ಹುಬ್ಬಳ್ಳಿ ಬಿವಿಬಿ ಕಾಲೇಜಿನಲ್ಲಿ 13 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಹಾಸ್ಟೆಲ್ ಖಾಲಿ ಮಾಡಿ ಮನೆ ಕಡೆ ಹೊರಟ ವಿದ್ಯಾರ್ಥಿಗಳು

ಹಾಸ್ಟೆಲ್ ಖಾಲಿ ಮಾಡಿ ಮನೆ ಕಡೆ ಹೊರಟ ವಿದ್ಯಾರ್ಥಿಗಳು

  • Share this:
ಧಾರವಾಡ: ವಿದ್ಯಾಕಾಶಿ ಧಾರವಾಡದಲ್ಲಿ ಎಗ್ಗಿಲ್ಲದೇ ಕೊರೊನಾ ಸೊಂಕು ಬೆಂಬಿಡದೇ ಬೆನ್ನತ್ತಿದೆ. ಅದರಲ್ಲೂ ವಿದ್ಯಾರ್ಥಿಗಳಲ್ಲೇ ಈ ಸೊಂಕು ಹೆಚ್ಚು ಕಂಡು ಬರುತ್ತಿರುವುದರಿಂದ ಆತಂಕಕ್ಕೆ ಎಡೆ ಮಾಡಿದೆ.  ಧಾರವಾಡದ ಗೌರಿಶಂಕರ ಹಾಗೂ ಕಾವೇರಿ ಹಾಸ್ಟೆಲ್ ಗಲ್ಲಿನ ವಿದ್ಯಾರ್ಥಿಗಳಲ್ಲಿ ಸೋಂಕು ದೃಢವಾದ ಕಾರಣ ಉಳಿದ ವಿದ್ಯಾರ್ಥಿಗಳು ಭಯದಿಂದ ತಮ್ಮೂರಿನತ್ತ ಮುಖ‌ಮಾಡುತ್ತಿದ್ದಾರೆ.

ದಿನದಿಂದ ದಿನಕ್ಕೆ‌ ಕೊರೊನಾ ಸೋಂಕಿನ ಆರ್ಭಟ ಜೋರಾಗಿದೆ. ಸೋಂಕಿತರ ಸಂಖ್ಯೆ ಸಹ ರಾಜ್ಯದಲ್ಲಿ ಹೆಚ್ಚಾಗುತ್ತಿದ್ರೆ, ಇತ್ತ ವಿದ್ಯಾಕಾಶಿ ಧಾರವಾಡ ಜಿಲ್ಲೆಯಲ್ಲಿ ಸಹ ಮಹಾಮಾರಿ ಕೊರೊನಾ ವೈರಸ್ ವಿದ್ಯಾರ್ಥಿಗಳಲ್ಲಿ ಅತೀ ಹೆಚ್ಚು ಕಂಡು ಬರುತ್ತಿದೆ. ಕಳೆದ ವಾರವಷ್ಟೇ ಧಾರವಾಡದ ಎಸ್‍ಡಿಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ 15 ಹಾಗೂ ಹುಬ್ಬಳ್ಳಿಯ ವಿದ್ಯಾನಿಕೇತನ ಕಾಲೇಜಿನಲ್ಲಿ 15 ವಿದ್ಯಾರ್ಥಿಗಳಲ್ಲಿ ಕೊವಿಡ್ ಸೊಂಕು ಕಂಡು ಬಂದಿತ್ತು. ಸೋಂಕು ಪತ್ತೆಯಾಗುತ್ತಿದಂತೆ ಸಂಸ್ಥೆಯ ಆಡಳಿತ ಮಂಡಳಿ ಒಂದು ವಾರ ಸ್ವಯಂ ಬಂದ್ ಘೋಷಣೆ ಮಾಡಿತ್ತು. ಅಲ್ಲದೆ ಕಾಲೇಜ್ ಸಹ ಸ್ಯಾನಿಟೈಸ್ ಮಾಡಿಸಲಾಗಿತ್ತು.

ಈಗ ಹಾಸ್ಟೆಲ್ ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತಿದೆ. ಧಾರವಾಡದ ಸಪ್ತಾಪೂರದಲ್ಲಿರುವ ಗೌರಿ ಶಂಕರ ಹಾಸ್ಟೆಲಿನ 25, ಕೆಸಿಡಿ ಕಾಲೇಜಿನಲ್ಲಿರುವ ಕಾವೇರಿ ಹಾಸ್ಟೆಲ್ ನಲ್ಲಿ 7 ಹಾಗೂ ಹುಬ್ಬಳ್ಳಿ ಬಿವಿಬಿ ಕಾಲೇಜಿನಲ್ಲಿ 13 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆ ಧಾರವಾಡ ಜಿಲ್ಲಾಡಳಿತ ಎಲ್ಲ ವಿದ್ಯಾರ್ಥಿಗಳಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದೆ. ಯಾಕಂದ್ರೆ ಪರೀಕ್ಷೆ ಸಮಯದಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ಈ ಸೊಂಕು ಹರಡದಂತೆ ನೋಡಿಕೊಳ್ಳಲು ಎಲ್ಲ ವಿದ್ಯಾರ್ಥಿಗಳಿಗೆ ಕೊವಿಡ್ ಪರೀಕ್ಷೆ ಕಡ್ಡಾಯ ಮಾಡಿದೆ. ಮತ್ತೊಂದು ಕಡೆ ಬಿವಿಬಿ ಕಾಲೇಜಿನಲ್ಲಿ ಪರೀಕ್ಷೆ ನಡೆದಿದ್ದರಿಂದ ಸೋಂಕಿತರಿಗೆ ಪ್ರತ್ಯೇಕೆ ಪರೀಕ್ಷಾ ಕೊಠಡಿ ವ್ಯವಸ್ಥೆ ಮಾಡಲಾಗಿದೆ.

ಹಾಸ್ಟೆಲ್ ನಲ್ಲಿನ ವಿದ್ಯಾರ್ಥಿಗಳಿಗೆ ಸೋಂಕು ದೃಢವಾಗುತ್ತಿದಂತೆ ಉಳಿದ ವಿದ್ಯಾರ್ಥಿಗಳು ಮನೆಯತ್ತ ಮುಖ ಮಾಡುತ್ತಿದ್ದಾರೆ. ಕೊರೊನಾ ವೈರಸ್ ಗೆ ಭಯಪಟ್ಟ ವಿದ್ಯಾರ್ಥಿಗಳು ತಮ್ಮ ಗ್ರಾಮಗಳಿಗೆ ಹೋಗುತ್ತಿದ್ದಾರೆ.

ಹಾಸ್ಟೇಲ್‍ಗಳಲ್ಲಿ ಇರುವ ಕೊರೊನಾ ಸೋಂಕಿತ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಹಾಸ್ಟೆಲ್ ನಲ್ಲಿ ಐಸೋಲೇಷನ್ ಮಾಡಲಾಗುತ್ತಿದೆ. ರೋಗಲಕ್ಷಣ ಕಂಡು ಬಂದರೆ ಮಾತ್ರ ಅವರಿಗೆ ಆಸ್ಪತ್ರೆಗೆ ಕಳಿಸುವ ಕೆಲಸ ನಡೆದಿದೆ. ಕರ್ನಾಟಕ ವಿವಿ ವ್ಯಾಪ್ತಿಗೆ ಬರುವ ಕಾವೇರಿ ಹಾಸ್ಟೇಲ್ನಲ್ಲಿ ವಿದ್ಯಾರ್ಥಿನಿಯರೇ ಇದ್ದು, ಕೆಲವು ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳನ್ನ ವಾಪಸ್ ಕೂಡಾ ಕರೆದುಕೊಂಡು ಹೋಗಿದ್ದಾರೆ.

ಹಾಸ್ಟೆಲ್ ನಲ್ಲಿನ ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ಬರುತ್ತಿದಂತೆ ಗೌರಿಶಂಕರ ಹಾಸ್ಟೆಲ್ ಗೆ ಓರ್ವ್ ವಿದ್ಯಾರ್ಥಿಯ ಪೋಷಕರು ಬಂದು ಹಾಸ್ಟೆಲ್ ನಿಂದ ತಮ್ಮ ತಮ್ಮನನ್ನು ‌ಕರೆದುಕೊಂಡು ಹೋಗಲು ಮುಂದಾದರು, ಆಗ ಹಾಸ್ಟೆಲ್ ವಾರ್ಡನ್ ಹಾಗೂ ಪೋಷಕರ ನಡುವೆ ಮಾತಿನ ಚಕಮಕಿ‌ ನಡೆಯಿತು. ಕೊರೊನಾ ನಿಯಮ ಪಾಲನೆ‌ಯೊಂದಿಗೆ ವಿದ್ಯಾರ್ಥಿಗಳ ಆರೊಗ್ಯದ ಕಡೆ ಗಮನ ಹರಿಸುವುದಾಗಿ ಹಾಸ್ಟೆಲ್ ವಾರ್ಡನ್ ಹೇಳಿದ್ರು, ಆದ್ರೆ ಯಾವ ಮಾತಿಗೂ ಕ್ಯಾರೆ ಎನ್ನದೇ ಪೋಷಕರು ತಮ್ಮ ಯುವಕನನ್ನು ಲಗೇಜ್ ಸಮೇತ ಕರೆದೊಯ್ದರು.

ನಮ್ಮ ತಮ್ಮ ಈ ಹಾಸ್ಟೆಲ್ ನಲ್ಲಿ ಇದ್ದ, ಆದ್ರೆ ಇದೇ ಹಾಸ್ಟೆಲ್ ನ ವಿದ್ಯಾರ್ಥಿಗಳಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಕಂಡು ಬಂದಿರೊ‌ ಹಿನ್ನೆಲೆ ನನ್ನ ತಮ್ಮನನ್ನು ಕರೆದುಕೊಂಡು ಹೋಗುತ್ತಿದ್ದೆನೆ, ಜೀವ ಇದ್ರೆ ಪರೀಕ್ಷೆ ಬರೆಯಬಹುದು ಎಂದು ವಿದ್ಯಾರ್ಥಿಯ ಪೋಷಕ ಲಕ್ಷ್ಮಣ ಹೇಳಿದ್ರು.

ನನಗೆ ಭಯವಾಗುತ್ತಿದೆ. ಇಲ್ಲಿನ 25 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ಬಂದಿದೆ. ಅವರಲ್ಲ ನಮ್ಮೊಂದಿಗೆ ಇದ್ದವರು. ನನ್ನ ವರದಿ ನೆಗೆಟಿವ್ ಬಂದಿದೆ. ಮುಂದೆ ಮತ್ತೆ ಆರೋಗ್ಯದಲ್ಲಿ ಹೆಚ್ಚುಕಡಿಮೆ‌ ಆದ್ರೆ ಯಾರು ಹೊಣೆ, ಅದಕ್ಕಾಗಿ ನಾನು ನಮ್ಮ ಮನೆಗೆ ಹೋಗುತ್ತಿದ್ದೆನೆ ಎಂದು ವಿದ್ಯಾರ್ಥಿ ಅಮೃತ ಹೇಳಿದರು.

ಒಟ್ಟಾರೆಯಾಗಿ ಪರೀಕ್ಷೆ ಸಮಯದಲ್ಲೇ ಕೊರೊನಾ ಹೆಚ್ಚಳ ಆಗಿದ್ದರಿಂದ ವಿದ್ಯಾರ್ಥಿಗಳಿಗೆ ಇದು ದೊಡ್ಡ ತಲೆ ನೋವು ಆಗಿದೆ. ಒಂದು ಕಡೆ ಪರೀಕ್ಷೆಯ ಒತ್ತಡ ಮತ್ತೊಂದು ಕಡೆ ಕೊರೊನಾ ಕಂಟಕದ ಮಧ್ಯದಲ್ಲಿ ವಿದ್ಯಾರ್ಥಿಗಳು ಸಿಲುಕಿದಂತೆ ಆಗಿದ್ದಂತೂ ಸತ್ಯ.
Published by:Soumya KN
First published: